Homeಮುಖಪುಟಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

- Advertisement -
- Advertisement -

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ ತೀವ್ರತೆ ಪಡೆಯುತ್ತದೆ. ಹೀಗಾಗಿ ನಾವೇ ಬರೆದ ಹಳೆಯ ಕವಿತೆಯನ್ನು ಓದಿದಾಗ, ನಮಗೆಯೇ ನಗು ಬರಬಹುದು. ಆದರೆ ಯೋಗರಾಜ ಭಟ್ ಅವರ ಸಿನಿಮಾಗಳಿಗೆ ಇದು ಅನ್ವಯವಾದಂತೆ ಕಾಣುತ್ತಿಲ್ಲ. ಅಷ್ಟೋ ಇಷ್ಟೋ ಚೆನ್ನಾಗಿರುವ ಹಳೆಯ ಕವಿತೆಯನ್ನು ಮತ್ತೆ ತಿದ್ದುವ ಪ್ರಯತ್ನ ಮಾಡುವುದು ಸರಿಯಲ್ಲವಾದರೂ, ತಿದ್ದಿದರೆ ಒಂದಿಷ್ಟು ಉತ್ಕೃಷ್ಟವಾಗುವಂತಾದರೂ ಇರಬೇಕು. ಈ ಮೊದಲೇ ಬರೆದಿದ್ದ ಕವಿತೆಯ ಸ್ವಾರಸ್ಯವನ್ನೂ ಹಾಳು ಮಾಡುವಂತಿರಬಾರದು ಅಲ್ಲವೇ?- ‘ಗಾಳಿಪಟ-2’ ಕುರಿತು ಚರ್ಚಿಸುವಾಗ ಈ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕಾಗುತ್ತದೆ.

ಮಲಯಾಳಂ ಚಿತ್ರರಂಗದ ‘ಮಾರ್ಟಿನ್ ಪ್ರಕಟ್‌’ ಹೆಸರು ನೀವು ಕೇಳಿರಬಹುದು. ಆತ 2015ರಲ್ಲಿ ಒಂದು ಸಿನಿಮಾ ನಿರ್ದೇಶಿಸಿದ. ದುಲ್ಖರ್‌ ಸಲ್ಮಾನ್‌ ಹಾಗೂ ಪಾರ್ವತಿ ತಿರುವೊತು ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದ ‘ಚಾರ್ಲಿ’ ಎಂಬ ಸೂಪರ್‌ ಹಿಟ್‌ ಸಿನಿಮಾ ನೀಡಿದ್ದ ಮಾರ್ಟಿನ್‌, 2021ರಲ್ಲಿ ‘ನಾಯಟ್ಟು’ ಎಂಬ ಸಿನಿಮಾವನ್ನು ನಿರ್ದೇಶಿಸಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದನು. ಈ ಸಿನಿಮಾದಲ್ಲಿನ ದಲಿತ ಆಯಾಮದ ಬಗ್ಗೆ ಹಲವು ಟೀಕೆ, ಮೆಚ್ಚುಗೆಗಳು ಬಂದಿರುವುದು ಬೇರೆ ವಿಷಯ. ಆದರೆ ಒಬ್ಬ ನಿರ್ದೇಶಕ ತನ್ನನ್ನು ವಿಸ್ತರಿಸುವ ಬಗೆಯನ್ನು ನಾವಿಲ್ಲಿ ಗಮನಿಸಬಹುದು. ‘ಚಾರ್ಲಿ’ ಸಿನಿಮಾದ ಜಾನರ್‌ನಲ್ಲೇ ಅಂಟಿ ಕೂರದೆ ‘ನಾಯಟ್ಟು’ ಥರದ ವಿಭಿನ್ನ ಕಥೆಯತ್ತ ಒಬ್ಬ ನಿರ್ದೇಶಕ ಹೊರಳುವುದಿದೆಯಲ್ಲ ಅದು ಮುಖ್ಯವಾದ ಸಂಗತಿ. ಈ ಉತ್ಕಟ ಅಭಿಲಾಷೆಯನ್ನೇ ಕನ್ನಡದ ವಿಮರ್ಶಕ ಡಿ.ಆರ್‌.ನಾಗರಾಜ್‌, ‘ಹಳೆಯ ವಿಕಲ್ಪಗಳಿಂದ ಬಿಡುಗಡೆಯ ಆಸೆ’ ಎಂದು ಬರೆದುಕೊಂಡಿದ್ದರು. ‘ಅಮೃತ ಮತ್ತು ಗರುಡ’ ಹಾಗೂ ‘ಸಾಹಿತ್ಯ ಕಥನ’ ಕೃತಿಗಳ ಪ್ರಕಟಣೆಯ ನಡುವಿನ ಹನ್ನೆರಡು ವರ್ಷಗಳ ಸುದೀರ್ಘ ಬದಲಾವಣೆಯನ್ನು ಅವಲೋಕನ ಮಾಡುತ್ತಾ ಈ ಮಾತು ಹೇಳಿದ್ದರು ಡಿ.ಆರ್‌.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಳೆಯ ದಾರಿಯನ್ನು ಬಿಟ್ಟು ಹೊಸ ದಾರಿಯತ್ತ ಹೊರಳದ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರೆನಿಸಿಕೊಂಡ ಯೋಗರಾಜ್ ಭಟ್‌ ಥರದವರು ಪ್ರೇಕ್ಷಕರನ್ನು ಹಿಮ್ಮುಖವಾಗಿ ಕೊಂಡೊಯ್ಯುತ್ತಿದ್ದಾರೆ ಅನಿಸುತ್ತಿದೆ. ಹಳೆಯ ಜಾಡನ್ನಾದರೂ ವಿಸ್ತರಿಸುತ್ತಾರಾ ಎಂದು ನೋಡಿದರೆ ಅದು ಕೂಡ ಆಗುತ್ತಿಲ್ಲ. ತಾನು ಏನೇ ನೀಡಿದರೂ ಪ್ರೇಕ್ಷಕ ನೋಡುತ್ತಾನೆಂಬ ಧೋರಣೆ ಯೋಗರಾಜ್ ಭಟ್‌ ಅವರಿಗೆ ಬಂದಿದೆಯೇನೋ ಅನಿಸತೊಡಗಿದೆ.

ನಮ್ಮಲ್ಲಿ ಏನಾಗುತ್ತಿದೆ ನೋಡಿ- ಕೋಟಿಗೊಬ್ಬ, ಕೋಟಿಗೊಬ್ಬ-2, ಕೋಟಿಗೊಬ್ಬ-3, ಕೆ.ಜಿ.ಎಫ್‌., ಕೆ.ಜಿ.ಎಫ್‌-2, ಮುಂಗಾರು ಮಳೆ, ಮುಂಗಾರು ಮಳೆ-2, ಗಾಳಿಪಟ, ಗಾಳಿಪಟ-2  ಹೀಗೆ ಹಳೆಯ ಜಾಡನ್ನೇ ಮುಂದುವರಿಸುವ ಸವಕಲು ಮಾದರಿಗಳನ್ನು ನೋಡುತ್ತಿದ್ದೇವೆ. ಒಂದು ಯಶಸ್ಸಿನ ಹಾದಿಯನ್ನು ಹಿಡಿದು ಹೊರಡುವುದು ತಪ್ಪಲ್ಲ. ಆದರೆ ಆ ಜಾಡು ವಿಸ್ತರಣೆಯಾಗದೆ ಮೊದಲಿಗಿಂತಲೂ ಅಧ್ವಾನವೆದ್ದರೆ ಖಂಡಿತ ಬೇಸರವಾಗುತ್ತದೆ. ಅನೂಪ್‌ ಬಂಡಾರಿಯವರು ‘ರಂಗಿತರಂಗ’ದ ಜಾಡಿನಲ್ಲಿಯೇ ‘ವಿಕ್ರಾಂತ್‌ ರೋಣ’ವನ್ನು ನಿರ್ದೇಶಿಸಿದರು. ತಾಂತ್ರಿಕವಾಗಿಯಾದರೂ ವಿಕ್ರಾಂತ್‌ ರೋಣ ಉತ್ಕೃಷ್ಟವಾಗಿ ಇತ್ತು. ಆದರೆ ಎಳಸು ಕಥೆಯ ಕಾರಣಕ್ಕೆ ಟೀಕೆಗೆ ಒಳಗಾಯಿತು. ಇರಲಿ.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಸಿನಿಮಾಗಳಲ್ಲಿ ‘ಲಾಜಿಕ್‌’ ಹುಡುಕಬಾರದು ಎಂಬ ಮಾತಿದೆ. ಆದರೆ ಕಾಮನ್‌ಸೆನ್ಸ್‌ ಇರಬೇಕೆಂಬುದು ಪ್ರೇಕ್ಷಕನ ಕನಿಷ್ಠ ಅಪೇಕ್ಷೆ. ಕತ್ತಲ ಕೋಣೆಯೊಳಗೆ ಕುಳಿತ ಪ್ರೇಕ್ಷಕ ನೋಡುತ್ತಿರುವುದು ಒಂದು ಕಾಲ್ಪನಿಕ ಲೋಕವಾದರೂ ಅದು ನಿಜಜೀವನಕ್ಕೆ ಕನೆಕ್ಟ್ ಆಗದಿದ್ದರೆ ಯಾವುದೇ ಕಲಾಕೃತಿ ಮೆಚ್ಚುಗೆಯಾಗುವುದಿಲ್ಲ. ಕಾಲ್ಪನಿಕವಾದರೂ ಕನಿಷ್ಠ ಮನರಂಜನೆಯನ್ನು ಒಂದು ಕಲಾಕೃತಿ ನೀಡಬೇಕಾಗುತ್ತದೆ. ಈ ನೆಲೆಯಲ್ಲಿ ನೋಡಿದರೆ ‘ಗಾಳಿಪಟ-2’ ಸೂತ್ರವಿರದ ಪಟವಾಗಿ ದಿಕ್ಕಾಪಾಲಾಗಿದೆ. ಯೋಗರಾಜ್‌ ಭಟ್ಟರ ಕಥೆಯೊಳಗೆ ಲಾಜಿಕ್ಕುಗಳು ಇಲ್ಲ; ಮ್ಯಾಜಿಕ್ಕುಗಳೂ ಇಲ್ಲ. ಬರೀ ಭಾಷಣ ಹಾಗೂ ಬೋಧನೆಯಷ್ಟೇ. ಕಣ್ತುಂಬಿಕೊಳ್ಳಲು ಒಂದಿಷ್ಟು ಹಸಿರು, ಮಳೆ, ಮಂಜು. ಇದು ಕೂಡ ಭಟ್ಟರ ಹಳೆಯ ಜಾಡು.

ಮೊದಲ ‘ಗಾಳಿಪಟ’ಕ್ಕೂ ಎರಡನೇ ಗಾಳಿಪಟಕ್ಕೂ ಸಂಬಂಧವಿಲ್ಲವಾದರೂ ಹಳೆಯ ಕಥೆಯ ಕೆಲವೊಂದು ಫಾರ್ಮುಲಾಗಳು ಇಲ್ಲಿಯೂ ಇವೆ. ಅಲ್ಲಿನ ಕೆಲವು ಹೆಸರುಗಳನ್ನು, ಪಾತ್ರಗಳನ್ನು ಇಲ್ಲಿಯೂ ಮುಂದುವರಿಸಲಾಗಿದೆ. ಮೊದಲ ಭಾಗದಲ್ಲೂ ಮೂವರು ಗೆಳೆಯರಿಗೂ ಒಂದೊಂದು ಪ್ರೇಮಕತೆ, ಇಲ್ಲಿಯೂ ಅದೇ ವ್ಯಥೆ, ಹುಡುಗಾಟಿಕೆ, ತರ್‍ಲೆ ಜೋಕ್‌, ನಗುಬಂದರೆ ನೀವು ನಗಬಹುದು. ಇತ್ಯಾದಿ

ಭಟ್ರ ಕಥೆಯಲ್ಲಿ ಏನಾದರೂ ಲಾಜಿಕ್ ಇದೆಯೇ?

1. ಕನ್ನಡ ಖ್ಯಾತ ಕಾದಂಬರಿಕಾರ್ತಿ ‘ಕುಮುದಾ’ (ಸುಧಾ ಬೆಳವಾಡಿ) ಹಾಗೂ ಮಾಜಿ ಎಂಎಲ್‌ಎ ‘ಬೈರೇಗೌಡ’ (ರಂಗಾಯಣ ರಘು) ಅವರ ಮಗನಾದ ಗಣಿಗೆ (ಗಣೇಶ್‌) ಕನ್ನಡ ಓದಲು, ಬರೆಯಲು ಬರುವುದಿಲ್ಲ. ಆತನಿಗೆ ಕನ್ನಡ ಬಾರದ ಕಾರಣ ಹಾಗೂ ಮಗನ ಅಪಪ್ರಚಾರದಿಂದಾಗಿ ತಂದೆ ಚುನಾವಣೆಯಲ್ಲಿ ಸೋತಿದ್ದಾನೆ. ಈತ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮಾಡಿದರೆ ಜರ್ಮನಿಯಲ್ಲಿ ಕಿಟೆಲ್ ಡಿಕ್ಷನರಿ ಸಂಬಂಧ ಕೆಲಸ ಮಾಡುವ ಉದ್ಯೋಗ ದೊರಕುತ್ತದೆ. ಆದರೆ ಕನ್ನಡವನ್ನೇ ಓದಲು ಬಾರದವನಿಗೆ ಜರ್ಮನಿಯಲ್ಲಿ ಕೆಲಸ ಮೀಸಲಾಗಿದೆ! ತಾನು ಇಷ್ಟಪಟ್ಟ ಹುಡುಗಿಯನ್ನು ಪಡೆಯಬೇಕಾದರೆ ಗಣಿ ಪರೀಕ್ಷೆಯಲ್ಲಿ ಪಾಸಾಗಲೇಬೇಕು. ಹೋಗಲಿ ಬಿಡಿ. ಮುಂದೆ ಓದಿ.

2. ಗಣಿ  ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ನೀರುಕೋಟೆಯ ಕಾಲೇಜಿಗೆ ಸೇರುತ್ತಾನೆ. ಇಲ್ಲಿಗೆ ಈತನ ಗೆಳೆಯರಾದ ‘ದಿಗಿ’ (ದಿಗಂತ್‌) ಮತ್ತು ‘ಭೂಷಣ್‌’ (ಪವನ್‌ ಕುಮಾರ್‌) ಕೂಡ ಸೇರಿಕೊಳ್ಳುತ್ತಾರೆ. (ಡಿಗ್ರಿಯಲ್ಲಿ ಬೇರೆ ಕೋರ್ಸ್ ಓದಿದಾತ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗೆ ಸೇರುತ್ತಿರುವುದರ ಬಗ್ಗೆ ಕೇಳಬೇಡಿ.) ಆರ್ಥಿಕವಾಗಿ ಸಬಲರಾದ ಇವರು ಸೇರಿರುವುದು ಮಳೆ ಬಂದರೆ ಮುರಿದು ಬೀಳುವಂತಹ ಕಾಲೇಜಿಗೆ! ಅಲ್ಲಿಗೆ ಬರುವ ದಿಗಿಯ ಹಳೆಯ ಪ್ರೇಯಸಿ ‘ಅನುಪಮಾ’ (ಸಂಯುಕ್ತಾ ಮೆನನ್‌), ಚಾವಣಿಯ ರಿಪೇರಿ ಮಾಡಲು ಗುತ್ತಿಗೆ ಪಡೆಯುತ್ತಾಳೆ. ಅದು ಕೂಡ ಬಿದ್ದು ಹೋಗುತ್ತದೆ. ಇತ್ತ ಭೂಷಣ್‌ಗೆ ಕನ್ನಡ ಪ್ರಾಧ್ಯಾಪಕಿ ‘ಶರ್ಮಿಳಾ’ (ಶರ್ಮಿಳಾ ಮಾಂಡ್ರೆ) ಮೇಲೆ ಲವ್‌ ಆಗಿದೆ. ಆದರೆ ಶರ್ಮಿಳಾ ಬೇರೊಂದು ಮದುವೆಯಾಗುತ್ತಿದ್ದಾಳೆ ಎಂದು ತಿಳಿದಾಗ ಭೂಷಣ್‌ಗೆ ಆಘಾತ. ಕಾದಂಬರಿಕಾರ್ತಿ ಕುಮುದಾ ಅವರ ಅಭಿಮಾನಿಯಾಗಿರುವ ‘ಶ್ವೇತಾ’ (ವೈಭವಿ ಶಾಂಡಿಲ್ಯ) ಅವರಿಗೆ ಮೊದಲ ನೋಟದಲ್ಲೇ ಮಾರುಹೋಗುವ ಗಣಿ, ಆಕೆಯ ಹಿಂದೆ ಓಡಾಡುವುದು. ಕುಮುದಾ ಕಾರಣಕ್ಕೆ ಶ್ವೇತಾಳಿಗೆ ಗಣಿ ಮೆಚ್ಚುಗೆಯಾಗುವುದು. ಗಣಿಯ ಕೆಲಸ ಶ್ವೇತಾಳಿಗೆ ಸಿಗುವುದು…!

3. ಕನ್ನಡ ವಿಭಾಗದ ಮುಖ್ಯಸ್ಥ ಕಿಶೋರ್‌ (ಅನಂತನಾಗ್‌) ಮೇಲೆ ಚಾವಣಿ ಕುಸಿದು ಗಾಯಗೊಳ್ಳುತ್ತಾರೆ. ಅದಕ್ಕೆ ದಿಗಿ ಕಾರಣವೆಂದು ಸುದ್ದಿ ಹರಡುತ್ತದೆ. ಆದರೆ ಇದಕ್ಕೆ ಅನುಪಮಾ ಕಾರಣ ಎಂಬುದು ಬೇರೆ ಕಥೆ. ಚಿಕ್ಕವನಿದ್ದಾಗಲೇ ಕಳೆದು ಹೋಗಿರುವ ತನ್ನ ಮಗನಿಗಾಗಿ ಸದಾ ಕನವರಿಸುವ ಕಿಶೋರ್‌ ಮೇಲೆ ಈಗ ಚಾವಣಿ ಕುಸಿದಿದೆ. ಈಗ ಆತನಿಗೆ ಮತಿ ಭ್ರಮಣೆಯಾಗಿರುವಂತೆ ಭಾಸವಾಗುತ್ತದೆ. ಗಾಳಿ ಪಟ ಉತ್ಸವದ ಫ್ಲಾಶ್‌ಬ್ಯಾಕ್‌. ಮಗನ ನೆನಪು. ಟಿ.ವಿ.ಯಲ್ಲಿ ಮಗುವೊಂದನ್ನು ನೋಡಿ, ತನ್ನ ಮಗನೆಂದೇ ಭಾವಿಸುವ ಕಿಶೋರ್‌, ಮಗನಿಗಾಗಿ ಕನವರಿಸುವುದು. ಕಾಲೇಜು ದಿನಗಳು ಮುಗಿದು, ಮತ್ತೆ ಮೇಷ್ಟ್ರನ್ನು ನೋಡಲು ಬರುವ ಗಣಿ ಹಾಗೂ ಸ್ನೇಹಿತರು ಟರ್ಕಿಗೆ ಮೇಷ್ಟ್ರನ್ನು ಕರೆದುಕೊಂಡು ಹೋಗಿ ಮಗನನ್ನು ಹುಡುಕಬೇಕೆಂದು ಬಯಸುವುದು. ಆ ವೇಳೆಗೆ ಶರ್ಮಿಳಾನ ಗಂಡ ತೀರಿಹೋಗಿದ್ದಾನೆಂದು ತಿಳಿದ ಭೂಷಣ್‌, ತಾನೂ ಟರ್ಕಿಗೆ ಹೊರಡುವುದು. ಜೀವನದ ಏರುಪೇರುಗಳನ್ನು ಕಂಡು ಜಿಗುಪ್ಸೆಯಾಗಿದ್ದ ದಿಗಿ ಕೆಲವು ಕಾಲ ಅಘೋರಿಯಾಗಿ, ಅಲ್ಲಿ ಸಲಿಂಗ ಕಾಮದ ಕಾಟಕ್ಕೆ ಹೆದರಿ ಹಿಂತಿರುಗಿದ್ದರೂ ಜುಟ್ಟಿನ ಗುರುತು ಹಾಗೆಯೇ ಇದೆ. ಆತನೂ ಕೂಡ ವಿದೇಶಕ್ಕೆ ಬರುತ್ತಾನೆ. ದಿಗಿ ಪ್ರೇಯಸಿ ಅನುಪಮಾ ಕೂಡ ಅಲ್ಲಿಗೆ ಬರುತ್ತಾಳೆ. ಹೀಗೆ ಬ್ರೇಕ್ ಆಗಿದ್ದ ಲವ್‌ಗೆ ಮತ್ತೆ ಸಂಪರ್ಕ ಕಲ್ಪಿಸುವ ಪ್ರಯತ್ನ. ತಲೆಕಟ್ಟವರಂತೆ ತಿರುಗುವ ಕಿಶೋರ್‌ ಮೇಷ್ಟ್ರು. ಗಾಳಿಪಟದ ಉತ್ಸವದಲ್ಲಿ ಮೇಷ್ಟ್ರಿಗೆ ಸಿಗುವ ಕಳೆದುಹೋದ ಪುತ್ರ!

ಇದನ್ನೂ ಓದಿರಿ: ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

4. ಶರ್ಮಿಳಾ ಮೇಡಂ ಗಂಡ ತೀರಿಹೋಗಿಲ್ಲ ಎಂದು ಹತಾಶನಾಗುವ ಭೂಷಣ್‌. ಆದರೆ ಕೆಲವೇ ದಿನಗಳಲ್ಲಿ ಶರ್ಮಿಳಾ ಗಂಡ ಸಾಯಲಿರುವ ಸುದ್ದಿ ಕೇಳಿದ ಮೂವರು ಗೆಳೆಯರು ಪುಳಕಿತರಾಗುತ್ತಾರೆ. ಆಸ್ಪತ್ರೆಯಲ್ಲಿ ಮಲಗಿರುವ ಶರ್ಮಿಳಾ ಗಂಡನಲ್ಲಿ ಗಣಿ, “ನೀವು ಸತ್ತ ಬಳಿಕ ಭೂಷಣ್‌ ಶರ್ಮಿಳಾರನ್ನು ಮದುವೆಯಾಗುತ್ತಾನೆ” ಎಂದು ಹೇಳುತ್ತಾನೆ. ಇದೆಲ್ಲವನ್ನೂ ಆಂತರ್ಯದಲ್ಲಿ ಸುಖಿಸುತ್ತಿರುವ ಭೂಷಣ್‌ ಮೇಲೆ ಶರ್ಮಿಳಾ ಗಂಡ ಗರಂ ಆದಾಗ, ಭೂಷಣ್ ಮನಃಪರಿವರ್ತನೆಯಾಗುತ್ತಾನೆ. ಸಿಲ್ಲಿ ಸಿಲ್ಲಿ ಕಾರಣಗಳಿಗೆ ಗೆಳೆಯರು ಕಿತ್ತಾಡುತ್ತಾರೆ.

5 . ಗಣಿ ಯಾವಾಗಲೂ ಖುಷಿಯಾಗಿರಬೇಕೆಂದು ಬಯಸುವ ಆತನ ತಾಯಿ, ಸಾವಿಗೂ ಮುನ್ನ ಮಗನ ಜೊತೆ ಮಾತನಾಡುತ್ತಿರುವ ವಿಡಿಯೊ ಕಥೆ ಬೇರೆ ಇದೆ. ಆದರೆ ತನ್ನ ಹೆಂಡತಿ ಸಾಯುವುದಕ್ಕೆ ಮಗನೇ ಕಾರಣವೆಂದು ಮನೆಯಿಂದ ಗಣಿಯನ್ನು ಬೈರೇಗೌಡ ಹೊರಹಾಕುತ್ತಾನೆ. ಸದಾ ತರಲೆಯಲ್ಲೇ ಕಾಲ ಕಳೆಯುವ ಗಣಿಯ ಆಂತರ್ಯದಲ್ಲಿ ಹೇಳಿಕೊಳ್ಳಲಾಗದ ದುಃಖವಿದೆ ಎಂದು ಚಿತ್ರಿಸುವ ವ್ಯರ್ಥ ಪ್ರಯತ್ನ ಬೇರೆ ನಡೆದಿದೆ. ಆದರೆ ನೋಡುಗನಿಗೆ ಗಣಿಯ ದುಃಖ ಮರುಕವನ್ನೇನೂ ಹುಟ್ಟಿಸುವುದಿಲ್ಲ.

5. ಆಗಾಗ್ಗೆ ಬರುವ ಮಧುರ ಹಾಡುಗಳ ಕಿರಿಕಿರಿ. ಪರೀಕ್ಷೆ ಹೇಗೆ ನಡೆಯುತ್ತವೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದ ನಿರ್ದೇಶಕ. ಬರೀ ವಟಗುಟ್ಟುವ ಪಾತ್ರಗಳು. ಸಿಲ್ಲಿಸಿಲ್ಲಿಯಾಗಿ ಆಡುವ ಜಗಳಗಳು. ಅರ್ಥವಿಲ್ಲದ ಸಂಭಾಷಣೆಗಳು. ಇದೇ ತಮ್ಮ ಪ್ರತಿಭೆಯೆಂದು ಭಟ್ರು ಭಾವಿಸಿದಂತಿದೆಯೇನೋ!

‘ಗಾಳಿಪಟ-2’ ಬಗ್ಗೆ ಬರೆಯುತ್ತಾ ಹೋದರೆ ಬರೆಯುವವನ ತಲೆಯೂ ಬಿಸಿಯಾಗುತ್ತದೆ, ಓದುವವರ ತಲೆಯೂ ಬಿಸಿಯಾಗುತ್ತದೆ.

ಹಿಂದಿ ಹೇರಿಕೆಯ ಕುರಿತು ಹಿಂದೊಮ್ಮೆ ಪ್ರಶ್ನಿಸಿದ್ದಾಗ ಯೋಗರಾಜ್ ಭಟ್ ಉಡಾಫೆಯಾಗಿ ಪ್ರತಿಕ್ರಿಯೆ ನೀಡಿದ್ದರು. ಸಾರ್ವಜನಿಕ ಬದುಕಿನ ಬಗ್ಗೆ ಸಿನಿಮಾ ನಿರ್ದೇಶಕನಿಗಿರುವ ಧೋರಣೆ, ತಾನು ಮಾಡುವ ಸಿನಿಮಾದಲ್ಲೂ ವ್ಯಕ್ತವಾದಂತೆ ಕಾಣುತ್ತಿದೆ. ಪ್ರೇಕ್ಷಕ ಮಹಾಶಯನನ್ನು ಬಹಳ ಹಗುರವಾಗಿ ಭಟ್ರು ತೆಗೆದುಕೊಂಡಂತೆ ಕಾಣುತ್ತಿದೆ.

ಇದನ್ನೂ ಓದಿರಿ: ಸಾವಧಾನವಾಗಿ ಆವರಿಸಿಕೊಳ್ಳುವ ‘19(1)(a)’

ನಿರ್ಮಾಪಕರೇನೋ ಅಪಾರವಾಗಿ ಹಣ ಚೆಲ್ಲಿದ್ದಾರೆ. ಕರ್ನಾಟಕದಿಂದ ಟರ್ಕಿಯವರೆಗೆ ಕಥೆ ಸಾಗುತ್ತದೆ. ಮೇಷ್ಟ್ರ ಮಗನನ್ನು ಈ ಹುಡುಗರು ಟರ್ಕಿಗೆ ಹೊರಡುತ್ತಾರೋ, ಪ್ರೇಯಸಿಯರ ಜೊತೆ ಹುಡುಗಾಟವಾಡಲು ಹೊರಡುತ್ತಾರೋ- ಯಾವುದಕ್ಕೂ ಸರಿಯಾದ ದಿಕ್ಕುಗಳಿಲ್ಲ. ಈ ಗೊತ್ತು ಗುರಿ ಇಲ್ಲದ ಸ್ನೇಹಿತರ ಮಾತು ಕೇಳುತ್ತಿರುವ ಹುಡುಗಿಯರ ಪಾತ್ರಕ್ಕೂ ಗಂಭೀರತೆ ಇಲ್ಲ…. ‘ಅಯ್ಯೋ… ತಲೆ ಗಿರ್‌ ಅನ್ನುತ್ತಿದೆ… ಕಥೆ ಯಾವಾಗ ಮುಗಿಯುತ್ತದೆಯೋ’ ಎಂದು ಪ್ರೇಕ್ಷಕ ಕಾಯುತ್ತಾ ಕೂತರೆ, ಕೆಲವರು ಮಧ್ಯಂತರದಲ್ಲೇ ಎದ್ದು ಮನೆಗೆ ಹೋದರೂ ಆಶ್ಚರ್ಯವಿಲ್ಲ. ಭಟ್ರು ಮತ್ತೆ ತೌಡನ್ನೇ ಕುಟ್ಟಿದ್ದಾರೆ ಹೊರತು, ಭತ್ತವನ್ನೇನೂ ಅಲ್ಲ ಎಂದು ಮನವರಿಕೆಯಾಗುತ್ತದೆ.

ಕೊನೆಯ ಮಾತು: ಮದ್ಯಪಾನ ಮಾಡಿರುವ ಗಣಿ ‘ರ’ಕಾರವನ್ನು ‘ಲ’ಕಾರವಾಗಿ ಉಚ್ಚರಿಸುತ್ತಾನೆ. ‘ದೇವ್ರು’, ಎಂಬುದನ್ನು ‘ದೇವ್ಲು’ ಅಂತಾನೆ. ‘ರ’ಕಾರದ ಬದಲು ‘ಲ’ಕಾರ ಪ್ರದರ್ಶನ ಮಾಡುವುದಕ್ಕೆ ಒಂದು ಹಾಡು. ಅಂತೂ ಇಂತೂ ಭಟ್ಟರ ಲಾಜಿಕ್ಕನ್ನು ‘ಆ ದೇವ್ಲೆ’ ಬಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Very nice summary about the movie sir, Yograj bhat sir please take it seriously, don’t make the people’s foolish. Content should be like it has to take the viewers inside not to outside the theatre. This is what I felt. l hope it will not repeat in your next movies.

  2. To all the sweet kannada movie lovers please don’t watch galipata 2 movie. one of the worst movie directed by yograj bhat. whole movie is no were related to any of the scenes. It’s absolutely waste of time and money.

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ ಉದ್ಯೋಗಿಗಳ...