ಕೃಪೆ: ದಿ ಕ್ವಿಂಟ್
ನಿರೂಪಣೆ: ನಿಖಿಲ್ ಕೋಲ್ಪೆ
ಕೇವಲ ನಾಲ್ಕು ಸೆಕೆಂಡುಗಳ ಸಿಸಿಟಿವಿ ಫೂಟೇಜ್ ಹಿಡಿದುಕೊಂಡು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ದಳ (ಎಸ್‌ಐಟಿ), ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಸಂಪೂರ್ಣ ವಿವರಗಳು ಇಲ್ಲಿವೆ. ಇದು ಮುಂದೆ ಬುದ್ಧಿಜೀವಿಗಳಾದ ದಾಬೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿಯವರ ಹತ್ಯೆ ಆರೋಪಿಗಳನ್ನು ಬಂಧಿಸುವುದಕ್ಕೆ ಕಾರಣವಾಯಿತು. ಗೌರಿ ಹಂತಕರ ಬಂಧನವಾಗುವ ತನಕ ಈ ಮೂರೂ ಪ್ರಕರಣಗಳು ಅಭೇದ್ಯ ಎನಿಸಿದ್ದವು.
ಗೌರಿ ಲಂಕೇಶ್ ಅವರನ್ನು ನಿರ್ದಯವಾಗಿ ಕೊಲ್ಲುವ ಸೆಕೆಂಡುಗಳಿಗೆ ಮೊದಲು ಹಂತಕ ತನ್ನ ಶೂಟಿಂಗ್ ಪೊಸಿಷನ್ ತೆಗೆದುಕೊಂಡಿದ್ದ. ಆತನ ಎಡಕಾಲು ಮುಂದಿದ್ದು, ಸಮತೋಲನಕ್ಕಾಗಿ ಸ್ವಲ್ಪ ಬಾಗಿತ್ತು. ಅವನು ಎರಡೂ ಕೈಗಳಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದ. ಪಿಸ್ತೂಲನ್ನು ಆಧರಿಸಲು ಎಡಗೈಯನ್ನು ಬಳಸಿದ್ದ ಆತ ಗುರಿಯಿಟ್ಟು ನಾಲ್ಕು ಬಾರಿ ಗುಂಡು ಹಾರಿಸಿದ್ದ.
ಸಿಸಿಟಿವಿ ಕ್ಯಾಮೆರಾ ಫೂಟೇಜ್‌ನಲ್ಲಿ ಹಂತಕ ಕೇವಲ ನಾಲ್ಕು ಸೆಕೆಂಡುಗಳ ಕಾಲ ಕಾಣುತ್ತಾನೆ. ಅತ ಗುಂಡು ಹಾರಿಸಲು ಬಳಸಿದ ಭಂಗಿ ಒಬ್ಬ ತರಬೇತಿ ಪಡೆದ ಶೂಟರ್‌ನದ್ದಾಗಿತ್ತು. ಇದು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ತನಿಖೆಯ ಮೊದಲ ಮೂರು ತಿಂಗಳುಗಳಲ್ಲಿ ಸಿಕ್ಕಿದ್ದ ಏಕೈಕ ಚಿಕ್ಕ ಸುಳಿವಾಗಿತ್ತು. ಯಾವುದಾದರೂ ಪವಾಡ ಸಂಭವಿಸುತ್ತದೆ ಎಂದು ಕಾದುಕುಳಿತುಕೊಳ್ಳುವ ಬದಲು ಎಸ್‌ಐಟಿ ಭಾರೀ ಪ್ರಮಾಣದ ಕಣ್ಗಾವಲು ಕಾರ್ಯಕ್ರಮ ಆರಂಭಿಸಿತು. ಇದು ಹುಲ್ಲು ಬಣವೆಯಲ್ಲಿ ಸೂಜಿ ಹುಡುಕುವ ಕೆಲಸವಾಗಿತ್ತು.
ಎಸ್‌ಐಟಿಯು ಗೌರಿಯವರ ಸಾವಿನ ಹದಿನೈದು ದಿನಗಳ ಮೊದಲಿನಿಂದ ಕಾಲ್ ಡಿಟೈಲ್‌ಗಳನ್ನು ಸಂಗ್ರಹಿಸಿತು. ಈ ಮಾಹಿತಿಯನ್ನು ತನಿಖೆಯ ಉದ್ದೇಶಕ್ಕಾಗಿಯೇ ನಿರ್ಮಿಸಲಾದ ವಿಶೇಷ ಸರ್ವರ್‌ನಲ್ಲಿ ಶೇಖರಿಸಲಾಯಿತು. ತಂಡವು ನೂರಕ್ಕೂ ಹೆಚ್ಚು ನಂಬರ್‌ಗಳಿಂದ ಮಾಡಲಾದ ಕರೆಗಳನ್ನು ನಿರಂತರ ಆಲಿಸಲಾರಂಭಿಸಿತು. ಅವರ ತಾಳ್ಮೆ ಕೊನೆಗೂ ಫಲ ನೀಡಿತು. ಅವರು ಇಂಟರ್ಸೆಪ್ಟ್ ಮಾಡಿದ ಒಂದು ಕರೆ, ಸ್ವಲ್ಪ ಕೊಚ್ಚಿಕೊಳ್ಳುವ ಅಭ್ಯಾಸವಿದ್ದ ಒಬ್ಬ ವ್ಯಕ್ತಿಯದ್ದಾಗಿತ್ತು. ಮುಂದಿನ ಒಂಭತ್ತು ತಿಂಗಳುಗಳಲ್ಲಿ ತಂಡವು ಈ ಹತ್ಯೆಯನ್ನು ನಡೆಸಿದ್ದ ಇಡೀ ದುಷ್ಟಕೂಟವನ್ನು ಮಟ್ಟಹಾಕಿತು. ಈ ಕುರಿತ ಎಲ್ಲಾ ವಿವರಗಳು ಹಂತ ಹಂತಗಳಲ್ಲಿ ಇಲ್ಲಿವೆ.
1. ನವೀನ್ ಕುಮಾರ್- ಶಸ್ತ್ರ ಪೂರೈಕೆ
ತನಿಖೆಯ ಮೊದಲ ಮೂರು ತಿಂಗಳುಗಳಲ್ಲಿ ಎಸ್ಐಟಿಯ ಒಂದು ತಂಡ ಕ್ರಿಮಿನಲ್ ಹಿನ್ನೆಲೆ ಇರುವ ಬಲಪಂಥೀಯ ಕಾರ್ಯಕರ್ತರ ನೂರಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳ ಮೇಲೆ ನಿಗಾ ಇರಿಸಿತು. ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್ (ಸಿಐಡಿ)ನಲ್ಲಿದ್ದ ಕಣ್ಗಾವಲು ಕೊಠಡಿ ಒಂದು ಕಾಲ್ ಸೆಂಟರ್‌ನಂತೆ ಕಾಣುತ್ತಿತ್ತು. ಅಲ್ಲಿ ಹಲವಾರು ಪೊಲೀಸರು ನೂರಾರು ಕರೆಗಳನ್ನು ಆಲಿಸುತ್ತಿದ್ದರು. ನವಂಬರ್ ತಿಂಗಳ ಮೊದಲ ವಾರದಲ್ಲಿ ಬಲಪಂಥೀಯ ಹಿಂದೂ ಯುವಸೇನೆಯ ಸ್ಥಾಪಕರಲ್ಲಿ ಒಬ್ಬನಾದ ನವೀನ್ ಕುಮಾರ್ ಮಾಡಿದ ಒಂದು ಕರೆ ಪೊಲೀಸರ ಗಮನಸೆಳೆಯಿತು. ಎಸ್‌ಐಟಿಗೆ ಮೊದಲ ನಿಜವಾದ ಸುಳಿವು ಸಿಕ್ಕಿತ್ತು.

ಆ ಬಳಿಕ ಎಸ್‌ಐಟಿ ಆತನ ಫೋನಿಗೆ ಬಂದ ಪ್ರತಿಯೊಂದು ಕರೆಯನ್ನೂ ಸೂಕ್ಷ್ಮವಾಗಿ ಆಲಿಸಲಾರಂಭಿಸಿತು. ಆದರೆ, ಏನೂ ಪ್ರಯೋಜನವಾಗಲಿಲ್ಲ. ನವೀನ್ ಕುಮಾರ್ ಬೇರೊಂದು ಫೋನನ್ನು ಉಪಯೋಗಿಸುತ್ತಿದ್ದಾನೆ ಎಂದು ತನಿಖಾಧಿಕಾರಿಗಳು ಬೇಗನೇ ಲೆಕ್ಕಹಾಕಿದರು. ಅದನ್ನೀಗ ಪತ್ತೆಹಚ್ಚುವುದು ಮುಂದಿನ ಸವಾಲಾಗಿತ್ತು. ಇದಕ್ಕೆ ಪರಿಹಾರ ಅವರು ಸಂಗ್ರಹಿಸಿಟ್ಟಿದ್ದ ಡಾಟಾಬೇಸ್‌ನಿಂದ ಬಂತು. ಅವರು ನವೀನನ ಫೋನ್ ಲೊಕೇಷನ್‌ಗಳ ಮ್ಯಾಪಿಂಗ್ ಶುರುಮಾಡಿದರು. ಅದೇ ದಾರಿಯಲ್ಲಿ ಕ್ರಮಿಸಿದ ಇತರ ಫೋನ್‌ಗಳ ಜೊತೆ ತಾಳೆಹಾಕಿದಾಗ, ಆತನ ಫೋನ್ ಜೊತೆಗೆಯೇ ಚಲಿಸುವ ಇನ್ನೊಂದು ಫೋನ್ ಸಿಕ್ಕಿತು. ನವೀನನ ಇನ್ನೊಂದು ನಂಬರನ್ನು ಪೊಲೀಸರು ಪತ್ತೆಹಚ್ಚಿದ್ದು ಹೀಗೆ.
ಆದರೆ, ಈ ಬದಲಿ ನಂಬರಿಗೆ ಇನ್‌ಕಮ್ಮಿಂಗ್ ಕಾಲ್‌ಗಳು ಮಾತ್ರ ಬರುತ್ತಿದ್ದವು. ಅದರಿಂದ ಯಾವುದೇ ಕರೆಗಳನ್ನು ಮಾಡಲಾಗುತ್ತಿರಲಿಲ್ಲ. ಅದಕ್ಕೆ ಬರುವ ಎಲ್ಲಾ ಕರೆಗಳು ಸಾರ್ವಜನಿಕ ಟೆಲಿಫೋನ್ ಬೂತುಗಳಿಂದ ಮತ್ತು ಒಬ್ಬನೇ ವ್ಯಕ್ತಿಯಿಂದ ಬರುತ್ತಿದ್ದವು. ಈ ಹೊತ್ತಿಗೆ ಆ ವ್ಯಕ್ತಿಯ ಸ್ವರ ತಂಡಕ್ಕೆ ಪರಿಚಿತವಾಗಿತ್ತು. ಆತ ನವೀನನಿಗೆ ಸೂಚನೆಗಳನ್ನು ಕೊಡುತ್ತಿದ್ದ; ಆದರೆ, ಸಂಕೇತಗಳಲ್ಲಿ. ಇಂತಹಾ ಒಂದು ಕರೆಗಳ ವೇಳೆ ನವೀನ ಆ ವ್ಯಕ್ತಿಯನ್ನು ಪ್ರವೀಣಣ್ಣ ಎಂದು ಕರೆದ. ಈಗ ಎಸ್‌ಐಟಿಗೆ ಒಗಟಿನ ಎರಡನೇ ಸುಳಿವು ಸಿಕ್ಕಿತ್ತು- ಅದು ಪ್ರವೀಣ.
ಪ್ರವೀಣನನ್ನು ಹಿಡಿಯಲು ಎಸ್‌ಐಟಿ ನವೀನನ ಮೇಲೆ ನೇರ ಕಣ್ಗಾವಲು ಇರಿಸಲು ನಿರ್ಧರಿಸಿತು. ಮೂರು ಪಾಳಿಗಳಲ್ಲಿ ದಿನ ರಾತ್ರಿ ಮಫ್ತಿ ಪೊಲೀಸರು ಅವನನ್ನು ಹಿಂಬಾಲಿಸಿದರು. ಇದು ಅವನ ಬಂಧನವಾಗುವ ವರೆಗೆ ಅಂದರೆ, ನವೆಂಬರ್‌ನಿಂದ ಫೆಬ್ರವರಿಯ ತನಕ ನಡೆಯಿತು.
2. ಪ್ರವೀಣ- ಗಾಳ
ಪ್ರವೀಣ ಫೋನಿನಲ್ಲಿ ನವೀನನಿಗೆ ಸೂಚನೆಗಳನ್ನು ನೀಡುತ್ತಿದ್ದುದರಿಂದ ಆತ ಈ ಜಾಲದ ಸರಪಳಿಯಲ್ಲಿ ಮೇಲಿನ ಕೊಂಡಿ ಎಂದು ಎಸ್‌ಐಟಿ ಕಂಡುಕೊಂಡಿತು. ನವೀನನ್ನು ಹಿಂಬಾಲಿಸಿದರೆ ಪ್ರವೀಣನನ್ನು ತಲಪಬಹುದು ಎಂದು ಲೆಕ್ಕ ಹಾಕಿದರೆ, ಮುಂದಿನ ಮೂರು ತಿಂಗಳಲ್ಲಿ ಅವರು ಕೇವಲ ಫೋನಿನಲ್ಲಿ ಮಾತನಾಡುತ್ತಿದ್ದರು. ಪ್ರತೀ ಸಲವೂ ಪ್ರವೀಣ ಬೇರೆ ಬೇರೆ ಬೂತ್‌ಗಳಿಂದ ಮಾತನಾಡುತ್ತಿದ್ದ. ಕೆಲವೊಮ್ಮೆ ಅವು ಪರಸ್ಪರ ನೂರು ಕಿ.ಮೀ.ಗಿಂತಲೂ ದೂರದಲ್ಲಿರುತ್ತಿದ್ದವು. ಇದರಿಂದ ಆತ ನಿರಂತರವಾಗಿ ಸಂಚರಿಸುತ್ತಿರುತ್ತಾನೆ ಎಂದು ಎಸ್‌ಐಟಿಗೆ ಗೊತ್ತಾಯಿತು.
ತನಿಖೆಯ ನಂತರದ ಹಂತದಲ್ಲಿ ಪ್ರವೀಣನ ನಿಜವಾದ ಹೆಸರು ಸುಚಿತ್ ಕುಮಾರ್ ಮತ್ತು ಆತ ಯಾರನ್ನಾದರೂ ಕೊಲ್ಲಲು ಸಿದ್ಧವಿರುವ ಹುಡುಗರಿಗಾಗಿ ಗಾಳ ಹಾಕುವವನೆಂದು ಗೊತ್ತಾಯಿತು. ಆತ ವಿಚಾರವಾದಿ ಕೆ.ಎಸ್. ಭಗವಾನ್ ಅವರನ್ನು ಹತ್ಯೆ ಮಾಡಲು ಪಿಸ್ತೂಲು ಪಡೆದುಕೊಳ್ಳಲಿಕ್ಕಾಗಿ ನವೀನ್ ಕುಮಾರನ ಸಂಪರ್ಕದಲ್ಲಿದ್ದ. ನಂತರ ತಿಳಿದಂತೆ ಗೌರಿಯವರ ಮೇಲೆ ಗುಂಡು ಹಾರಿಸಿದ್ದ ಹಂತಕನನ್ನು ನೇಮಕ ಮಾಡಿದ್ದೂ ಈತನೇ ಆಗಿದ್ದ.

ಇವರ ಇಂತಹಾ ಒಂದು ಫೋನ್ ಕರೆಯಲ್ಲಿ ನವೀನ ಪಿಸ್ತೂಲು ಪಡೆಯಲು ಬೆಂಗಳೂರಿಗೆ ಹೋಗುತ್ತಿದ್ದಾನೆ ಎಂದು ಗೊತ್ತಾಯಿತು. ನವೀನನನ್ನು ಹಿಂಬಾಲಿಸಿ ಪ್ರವೀಣನನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಮನವರಿಕೆಯಾದ ಎಸ್‌ಐಟಿ ನವೀನನನ್ನು ಬಂಧಿಸಲು ನಿರ್ಧರಿಸಿತು. ಆತ ಪಿಸ್ತೂಲನ್ನು ಪಡೆದುಕೊಂಡ ಬಳಿಕ ಎಸ್‌ಐಟಿಯು ಬೆಂಗಳೂರಿನಲ್ಲಿ ಆತನನ್ನು ಬಂಧಿಸಿತು. ಅವನ ಮೇಲೆ ಮೊದಲಿಗೆ ಶಸ್ತ್ರಾಸ್ತ್ರ ಕಾಯಿದೆಯನ್ವಯ ಕೇಸು ಹಾಕಲಾಯಿತಾದರೂ, ನಂತರದ ಹಂತದಲ್ಲಿ ಭಗವಾನ್ ಹತ್ಯೆ ಸಂಚಿನಲ್ಲಿ ಆತನ ಪಾತ್ರಕ್ಕಾಗಿಯೂ ಕೇಸುಹಾಕಲಾಯಿತು.
ಆದರೆ, ಎಸ್‌ಐಟಿ- ಪ್ರವೀಣ ಎಲ್ಲಿದ್ದಾನೆ ಎಂಬುದನ್ನು ತಿಳಿಯುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿತ್ತು. ಫೆಬ್ರವರಿ 26ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯಲಿರುವ ಮದುವೆ ಸಮಾರಂಭವೊಂದರಲ್ಲಿ ತಾನು ಪಿಸ್ತೂಲನ್ನು ಪ್ರವೀಣನಿಗೆ ಕೊಡಬೇಕಾಗಿತ್ತು ಎಂದು ನವೀನ್ ಕುಮಾರ್ ಬಾಯಿಬಿಟ್ಟ. ಎಸ್‌ಐಟಿ ಮದುವೆ ಸಮಾರಂಭಕ್ಕೆ ದಾಳಿ ಮಾಡಿ ಪ್ರವೀಣನನ್ನು ಬಂಧಿಸುವ ಯೋಜನೆ ಹಾಕಿತು. ಆದರೆ, ದುರದೃಷ್ಟವಶಾತ್ ಸುದ್ದಿ ಚಾನೆಲೊಂದು ದಾಳಿಯ ಹಿಂದಿನ ದಿನ ಎಸ್‌ಐಟಿಯು ಉಡುಪಿಯ ಮದುವೆ ಸಮಾರಂಭವೊಂದರಲ್ಲಿ ಪ್ರವೀಣ ಎಂಬವನ್ನು ಹಿಡಿಯಲು ಯತ್ನಿಸುತ್ತಿದೆ ಎಂಬ ಬೇಜವಾಬ್ದಾರಿಯ ಸುದ್ದಿ ಪ್ರಸಾರ ಮಾಡಿತು. (ಎಸ್‌ಐಟಿ ಒಳಗೆ ಅಥವಾ ಇಲಾಖೆಯಲ್ಲಿಯೂ ಹಂತಕರ ಮೇಲೆ ಸಹಾನುಭೂತಿ ಇದ್ದವರು ಇದ್ದರೆಂಬುದನ್ನು, ಅವರೇ ಇಷ್ಟು ನಿಖರ ಮಾಹಿತಿ ಸೋರಿಕೆ ಮಾಡಲು ಸಾಧ್ಯವಿತ್ತು ಎಂಬುದನ್ನು ಇದು ತೋರಿಸುತ್ತದೆ.)
ಈ ಹಿನ್ನಡೆಯ ಹೊರತಾಗಿಯೂ ಎಸ್‌ಐಟಿ ನೂರಕ್ಕೂ ಹೆಚ್ಚು ಪಬ್ಲಿಕ್ ಬೂತುಗಳಿಂದ ಮಾಡಲಾಗುತ್ತಿದ್ದ ಫೋನ್ ಕರೆಗಳ ಮೇಲೆ ನಿಗಾ ಮುಂದುವರಿಸಿತು. ಆತನ ಧ್ವನಿಯನ್ನು ಕೇಳಿದಾಕ್ಷಣ ಗುರುತಿಸಲು ಸಾಧ್ಯವಾಗುವಷ್ಟರ ಮಟ್ಟಿಗೆ ಅಧಿಕಾರಿಗಳಿಗೆ ಮತ್ತೆ ಮತ್ತೆ ಆತನ ಧ್ವನಿಯನ್ನು ಕೇಳಿಸಲಾಯಿತು. ತಂಡಗಳು ಮುಂದಿನ ಎರಡು ತಿಂಗಳುಗಳ ಕಾಲ ಸಾವಿರಾರು ಕರೆಗಳನ್ನು ಆಲಿಸಿದರೂ, ಪ್ರವೀಣನ ಧ್ವನಿ ಮತ್ತೆ ಕೇಳಿಸಲೇ ಇಲ್ಲ.
ಆದರೆ, ಮೇ ತಿಂಗಳ ಮೊದಲ ವಾರದಲ್ಲಿ ಕಣ್ಗಾವಲು ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಒಬ್ಬರು ಬೆಳಗ್ಗಿನ ಹೊತ್ತು ಎಸ್‌ಐಟಿಯಲ್ಲಿನ ಹಿರಿಯ ಅಧಿಕಾರಿಗೆ ಫೋನ್ ಮಾಡಿದರು. ಅವರು ಒಂದು ಕರೆಯಲ್ಲಿ ಪ್ರವೀಣನ ಧ್ವನಿಯನ್ನು ಕೇಳಿದ್ದರು. ಅದು ಪ್ರವೀಣನೇ ಎಂದೂ, ಆತನ ಧ್ವನಿ ತನಗೀಗ ಪರಿಚಿತವೆಂದೂ, ಆ ಕರೆ ಉಡುಪಿ ಜಿಲ್ಲೆಯಲ್ಲಿರುವ ಸಾರ್ವಜನಿಕ ಟೆಲಿಫೋನ್ ಬೂತೊಂದರಿಂದ ಬಂದಿದೆಯೆಂದೂ ಅವರು ತಿಳಿಸಿದರು.
ಎಸ್‌ಐಟಿಯು ಪ್ರವೀಣ ಪ್ರಯಾಣ ಮಾಡಿರಬಹುದಾದ ಬೇರೆ ಬೇರೆ ಜಿಲ್ಲೆಗಳ 126 ಟೆಲಿಫೋನ್ ಬೂತುಗಳ ಪಟ್ಟಿ ಮಾಡಿತ್ತು. ಅವುಗಳಲ್ಲಿ 30ರಷ್ಟು ಬೂತುಗಳ ಮೇಲೆ ವಿಶೇಷ ನಿಗಾ ಇರಿಸಲಾಗಿತ್ತು. ಯಾಕೆಂದರೆ, ಆತ ಹಿಂದೆಯೂ ಅವುಗಳಿಂದ ಕರೆ ಮಾಡಿದ್ದ. ಅವುಗಳಲ್ಲೆಲ್ಲ ಒಬ್ಬೊಬ್ಬ ಪೊಲೀಸರನ್ನು ಮಫ್ತಿಯಲ್ಲಿ ಇರಿಸಲಾಗಿತ್ತು. ಹಲವು ದಿನಗಳ ಬಳಿಕ ಪ್ರವೀಣ ಇನ್ನೊಂದು ಕರೆ ಮಾಡಿದ. ಆಗ ಆ ಬೂತಿನ ಹೊರಗಿದ್ದ ಕಾನ್‌ಸ್ಟೇಬಲನ್ನು ಎಚ್ಚರಿಸಲಾಯಿತು. ಅವರು ಆತನ ಚಿತ್ರ ತೆಗೆದು ತಕ್ಷಣವೇ ಎಸ್‌ಐಟಿಗೆ ರವಾನಿಸಿದರು. ಭಗವಾನ್ ಕೊಲೆ ಸಂಚು ಪ್ರಕರಣದಲ್ಲಿ ಒಳಗಿದ್ದ ಆರೋಪಿಯೊಬ್ಬ, ಬೂತಿನಲ್ಲಿದ್ದಾತ ನಿಜವಾಗಿಯೂ ಪ್ರವೀಣನೇ ಎಂದು ದೃಢಪಡಿಸಿದ. ತಕ್ಷಣವೇ ಎಸ್‌ಐಟಿಯಿಂದ ಆದೇಶ ಹೊರಟಿತು. ಅದೆಂದರೆ- ಆತನನ್ನು ಬಂಧಿಸಬೇಡಿ, ಹಿಂಬಾಲಿಸಿ. ಎಸ್‌ಐಟಿಗೆ ಆಗ ಗೊತ್ತಿರಲಿಲ್ಲ- ಆತ ಅವರನ್ನು ಆ ತನಕದ ಅತ್ಯಂತ ದೊಡ್ಡ ಮೀನಿನ ಬಳಿಗೆ ಕೊಂಡೊಯ್ಯಲಿದ್ದ.
(ಮುಂದುವರಿಯುವುದು)…
ಭಾಗ 2 ಓದಿ: ಗೌರಿ ಹತ್ಯೆಯ ತನಿಖೆಯ ಜಾಡು ಹಿಡಿದು ಹೊರಟಾಗ ಸಿಕ್ಕ ರೋಚಕ ಸತ್ಯಗಳು… ಭಾಗ-2


