ಈದುಲ್ ಫಿತರ್ (ರಂಝಾನ್ ಹಬ್ಬ) ದಿನವಾದ ಭಾನುವಾರ (ಮಾ.30) ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಿದ್ದ ಮನೆ ಮತ್ತು ಟೆಂಟ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಸಂಸ್ಥೆ ವರದಿ ಮಾಡಿದೆ.
“ಖಾನ್ ಯೂನಿಸ್‌ನಲ್ಲಿ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದ ಮನೆ ಮತ್ತು ಟೆಂಟ್ ಮೇಲೆ ಬೆಳಗಿನ ಜಾವ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ಎಂಟು ಮಂದಿ ಹುತಾತ್ಮರಾಗಿದ್ದಾರೆ” ಎಂದು ಗಾಝಾದ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮೂದ್ ಬಸ್ಸಲ್ ಎಎಫ್‌ಪಿಗೆ ತಿಳಿಸಿದ್ದಾರೆ.
ಗಾಝಾದಲ್ಲಿ ಯುದ್ಧ ನಿಲ್ಲಿಸುವ ಕದನ ವಿರಾಮ ಪ್ರಸ್ತಾಪವನ್ನು ಮಧ್ಯವರ್ತಿಗಳ ಮೂಲ ಸ್ವೀಕರಿಸಿರುವುದಾಗಿ ಇಸ್ರೇಲ್ ಮತ್ತು ಹಮಾಸ್ ಎರಡೂ ಒಪ್ಪಿಕೊಂಡ ನಡುವೇ ಇಸ್ರೇಲ್ ಆಕ್ರಮಣ ನಡೆಸಿದೆ.
ಮಾರ್ಚ್ 18ರಂದು ಇಸ್ರೇಲ್ ವೈಮಾನಿಕ ಮತ್ತು ನೆಲ ದಾಳಿ ನಡೆಸಿದ್ದರಿಂದ ಗಾಝಾ ಪಟ್ಟಿಯಲ್ಲಿ ಎರಡ್ಮೂರು ವಾರಗಳ ಕಾಲ ಆಕ್ರಮಣಕ್ಕೆ ತಡೆಯೊಡ್ಡಿದ್ದ ಕದನ ವಿರಾಮ ಒಪ್ಪಂದ ಮುರಿದು ಬಿದ್ದಿದೆ.
ಮತ್ತೆ ಕದನ ವಿರಾಮ ಜಾರಿಗೆ ತಂದು ಆಕ್ರಮಣ ನಿಲ್ಲಿಸಲು ಮತ್ತು ಹಮಾಸ್ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಇಸ್ರೇಲಿಗರ ಬಿಡುಗಡೆ ಮಧ್ಯವರ್ತಿಗಳಾದ ಈಜಿಪ್ಟ್, ಕತಾರ್ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಯತ್ನ ಮುಂದುವರೆಸಿದೆ ಎಂದು ವರದಿಯಾಗಿದೆ.
ಮಧ್ಯವರ್ತಿಗಳು ಮಂಡಿಸಿದ ಹೊಸ ಕದನ ವಿರಾಮ ಪ್ರಸ್ತಾಪವನ್ನು ಹಮಾಸ್ ಗುಂಪು ಅನುಮೋದಿಸಿದೆ ಮತ್ತು ಅದನ್ನು ಬೆಂಬಲಿಸುವಂತೆ ಇಸ್ರೇಲ್ ಅನ್ನು ಒತ್ತಾಯಿಸಿದೆ ವರದಿ ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಪ್ರಸ್ತಾವನೆಯನ್ನು ಸ್ವೀಕರಿಸಿರುವುದನ್ನು ದೃಢಪಡಿಸಿದ್ದು, ಇಸ್ರೇಲ್ ಇದಕ್ಕೆ ಪ್ರತಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಹೇಳಿದೆ.
ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಇದುವರೆಗೆ ಬಲಿಯಾದ ಪ್ಯಾಲೆಸ್ತೀನಿಯರ ಸಂಖ್ಯೆ 50,277ಕ್ಕೆ ತಲುಪಿದೆ.
ನೇಪಾಳ | ರಾಜಪ್ರಭುತ್ವ ಮರುಸ್ಥಾಪನೆಗಾಗಿ ಪ್ರತಿಭಟನೆ; ಇಬ್ಬರು ಸಾವು, 45 ಜನರಿಗೆ ಗಾಯ


