ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆದ ನಂತರ, ಬಜರಂಗದಳ ಮತ್ತು ಹಿಂದೂ ರಕ್ಷಾ ದಳದ ಸದಸ್ಯರ ಗುಂಪೊಂದು ಆಕೆಯ ಕುಟುಂಬದ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಹಿಂದುತ್ವವಾದಿ ದಕ್ಷ ಚೌಧರಿ ನೇತೃತ್ವದಲ್ಲಿ ಪ್ರಕಾಶ್ ಸಿಂಗ್, ಅನ್ನು, ಅಕ್ಕು, ಅಮಿತ್ ಮತ್ತು ಅಭಿಷೇಕ್ ಎಂಬವರ ಗುಂಪು ಕಳೆದ ವಾರದ ಕೊನೆಯಲ್ಲಿ ಗಾಝಿಯಾಬಾದ್‌ನ ಗ್ರಾಮೀಣ ಪ್ರದೇಶದ ತುಳಸಿ ನಿಕೇತನ ಪ್ರದೇಶದಲ್ಲಿ ಬಾಲಕಿಯ ಮನೆಗೆ ನುಗ್ಗಿ ಹಲ್ಲೆ ಮಾಡಿದೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ದಾಳಿ ನಡೆಸಿದ ದುಷ್ಕರ್ಮಿಗಳು ‘ಇಸ್ಲಾಮೋಫೋಬಿಕ್’ ಘೋಷಣೆಗಳನ್ನು ಕೂಗಿದ್ದಾರೆ. ಬಾಲಕಿಯ ಮನೆಗೆ ಹಾನಿ ಮಾಡಲು ಯತ್ನಿಸಿದ್ದಾರೆ. ಆಕೆಯ ತಾಯಿಯನ್ನು ಅತ್ಯಂತ ಕೆಟ್ಟದ್ದಾಗಿ ನಿಂದಿಸಿದ್ದಾರೆ ಎಂದು ವರದಿ ವಿವರಿಸಿದೆ.
ದಾಳಿಯಲ್ಲಿ ಭಾಗಿಯಾದ ಪ್ರಮುಖ ಆರೋಪಿ ದಕ್ಷ ಚೌಧರಿ ವಿರುದ್ಧ ಈಗಾಗಲೇ ಜೆಎನ್‌ಯುಎಸ್‌ಯು ಮಾಜಿ ನಾಯಕ ಕನ್ಹಯ್ಯಾ ಕುಮಾರ್‌ಗೆ ಕಪಾಳಮೋಕ್ಷ, ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರನ್ನು ಥಳಿಸುವುದು ಮತ್ತು ಗಾಝಿಯಾಬಾದ್‌ನ ಮಸೀದಿಯೊಳಗೆ ಶೂ ಧರಿಸಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸುವುದು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರುವ ದಕ್ಷ ಚೌಧರಿ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿದ್ದರೂ, ಆತ ಮುಕ್ತವಾಗಿ ಓಡಾಡುತ್ತಿದ್ದಾನೆ. ಮುಸ್ಲಿಂ ದ್ವೇಷ ಹಬ್ಬಿಸಲು ತಂಡವನ್ನು ಕಟ್ಟಿಕೊಂಡಿದ್ದಾನೆ. ಬಹಿರಂಗವಾಗಿ ಮುಸ್ಲಿಮರ ವಿರುದ್ದ ಹಿಂಸಾಚಾರಕ್ಕೆ ಕರೆ ಕೊಡುತ್ತಿದ್ದಾನೆ ಎಂದು ವರದಿಗಳು ಹೇಳುತ್ತವೆ.
ಬಾಲಕಿ ಮತ್ತು ಆಕೆಯ ಕುಟುಂಬದ ಮೇಲೆ ದಾಳಿ ಮಾಡಿದ ಈ ಘಟನೆ ಸಂಬಂಧ ದಕ್ಷ ಚೌಧರಿ, ಅನ್ನು ಚೌಧರಿ, ಅಕ್ಕು ಪಂಡಿತ್, ಅಮಿತ್ ಠಾಕೂರ್ ಮತ್ತು ಇತರರ ವಿರುದ್ಧ ತೀಲಾ ಮೋಡ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
“ಅನ್ನು ಮತ್ತು ಅಮಿತ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಮುಖ ಆರೋಪಿ ದಕ್ಷ ಮತ್ತು ಇತರರು ತಲೆಮರೆಸಿಕೊಂಡಿದ್ದಾರೆ” ಎಂದು ಗಾಝಿಯಾಬಾದ್‌ನ ಶಾಲಿಮಾರ್ ಗಾರ್ಡನ್‌ನ ಎಸಿಪಿ ಅತುಲ್ ಕುಮಾರ್ ಸಿಂಗ್ ಹೇಳಿದ್ದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ದಕ್ಷ ಚೌಧರಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಎಸಿಪಿ ಹೇಳಿದ್ದಾರೆ. ಆದರೆ, ಆತ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪೋಸ್ಟ್‌ಗಳನ್ನು ಹಾಕುವುದನ್ನು ಮುಂದುವರಿಸಿದ್ದಾನೆ. “ಬಾಲಕಿ ಮತ್ತು ಆಕೆಯ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ. ಸನಾತನ ಧರ್ಮಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ” ಎಂಬುವುದಾಗಿ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.
ಘಟನೆಯ ನಂತರ, ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳಿಗೆ ಹೆಸರುವಾಸಿಯಾದ ಹಿಂದೂ ರಕ್ಷಾ ದಳದ ಮುಖ್ಯಸ್ಥೆ ಪಿಂಕಿ ಚೌಧರಿ ದ್ವೇಷ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಹಲವಾರು ವಿಡಿಯೋಗಳನ್ನು ಹಂಚಿಕೊಂಡಿರುವ ಪಿಂಕಿ, ಮುಸ್ಲಿಂ ಬಾಲಕಿಯ ಬಂಧನಕ್ಕೆ ಮತ್ತು ಆಕೆಯ ಕುಟುಂಬದ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡುವಂತೆ ಆಗ್ರಹಿಸಿದ್ದಾರೆ. “ನಾವು ಸನಾತನ ಧರ್ಮಕ್ಕಾಗಿ ಪೂರ್ಣ ಶಕ್ತಿಯಿಂದ ಹೋರಾಡುತ್ತಿದ್ದೇವೆ. ಏನು ಬೇಕಾದರೂ ಆಗಬಹುದು, ನಾವು ಯಾವುದೇ ಮಟ್ಟಕ್ಕೆ ಹೋಗಬಹುದು” ಎಂದು ತನ್ನ ವಿಡಿಯೋ ಒಂದರಲ್ಲಿ ಪಿಂಕಿ ಹೇಳಿದ್ದಾರೆ.
ದಕ್ಷ ಚೌಧರಿ ಸ್ವತಃ ಪೋಸ್ಟ್ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ಹುಡುಗಿಯನ್ನು ಥಳಿಸಿ ಪೊಲೀಸರ ಸಮ್ಮುಖದಲ್ಲಿ ಕ್ಷಮೆಯಾಚಿಸುವಂತೆ ಒತ್ತಾಯಿಸಿರುವುದು ಇದೆ ಎಂದು ಮಕ್ತೂಬ್ ಮೀಡಿಯಾ ಹೇಳಿದೆ.
ಪಾಟ್ನಾ | ಜನ ಸುರಾಜ್ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣ : ಜೆಡಿಯು ಅಭ್ಯರ್ಥಿಯ ಬಂಧನ


