ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ದೇಶದ ವಿವಿಧ ನಗರಗಳಲ್ಲಿ ಮುಷ್ಕರ ನಡೆಸಿರುವ ಗಿಗ್ ಕಾರ್ಮಿಕರು, ಹೊಸ ವರ್ಷದ ಸಂಜೆಯಾದ ಇಂದು (ಡಿ.31) ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ನ್ಯಾಯಯುತ ಮತ್ತು ಪಾರದರ್ಶಕ ವೇತನ ಒದಗಿಸಬೇಕು, ಅಸುರಕ್ಷಿತ ’10 ನಿಮಿಷದ ವಿತರಣೆ’ (10-minute delivery) ಮಾದರಿಗಳನ್ನು ಕೊನೆಗೊಳಿಸಬೇಕು, ಅನಿಯಂತ್ರಿತ ಐಡಿ ನಿರ್ಬಂಧಿಸುವಿಕೆಯನ್ನು ಕೊನೆಗಾಣಿಸಬೇಕು ಮತ್ತು ಉತ್ತಮ ಸುರಕ್ಷತೆ, ವಿಶ್ರಾಂತಿ ವಿರಾಮಗಳು ಹಾಗೂ ಸಾಮಾಜಿಕ ಭದ್ರತಾ ಪ್ರಯೋಜನಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಿಗ್ ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ನ್ಯಾಯಯುತ ಮತ್ತು ಪಾರದರ್ಶಕ ವೇತನ ರಚನೆಯಲ್ಲಿ ರೈಡ್-ಹೇಲಿಂಗ್ ಚಾಲಕರಿಗೆ ಪ್ರತಿ ಕಿ.ಮೀಗೆ ಕನಿಷ್ಠ ರೂ. 20ಕ್ಕಿಂತ ಕಡಿಮೆಯಿಲ್ಲದ ಕನಿಷ್ಠ ದರವೂ ಸೇರಿದೆ. ದಿನಕ್ಕೆ 8 ಗಂಟೆಗಳ ಕೆಲಸ, ನಿಗದಿತ ಸಮಯಕ್ಕಿಂತ ಹೆಚ್ಚಿನ ಕೆಲಸಕ್ಕೆ ಹೆಚ್ಚುವರಿ ಪಾವತಿ, ಅಪಘಾತ, ಅನಾರೋಗ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಕಾರ್ಮಿಕರಿಗೆ ಬೆಂಬಲ ನೀಡಲು ಕ್ರಿಯಾತ್ಮಕ ವಿಮೆ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತಾ ಪ್ರಯೋಜನಗಳ ಬೇಡಿಕೆಯನ್ನು ಕಾರ್ಮಿಕರು ಮುಂದಿಟ್ಟಿದ್ದಾರೆ.
ಆ್ಯಪ್ ಆಧಾರಿತ ಗಿಗ್ ಕಾರ್ಮಿಕರ ಮುಷ್ಕರ ಎಂದರೆ ಬೀದಿಗಿಳಿದು ಮಾಡುವ ಹೋರಾಟವಲ್ಲ. ಆಹಾರ, ದಿನಸಿ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ವಿತರಣಾ ಏಜೆಂಟ್‌ಗಳು ಬಹು ಬೇಡಿಕೆಯ ಅವಧಿಯಲ್ಲಿ ತಮ್ಮ ಆ್ಯಪ್‌ಗಳನ್ನು ಲಾಗ್‌ಔಟ್ ಮಾಡುವುದಾಗಿದೆ ಈ ಮುಷ್ಕರದ ಸ್ವರೂಪ.
ಇದರಿಂದ ಜನರು ಸಮಸ್ಯೆಗೆ ಸಿಲುಕಲಿದ್ದಾರೆ. ಆ್ಯಪ್ ಕಂಪನಿಗಳ ಮೇಲೆ ಒತ್ತಡ ಬೀಳಲಿದೆ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಸರ್ಕಾರಕ್ಕೂ ಬಿಸಿ ತಟ್ಟಲಿದೆ. ಈ ಮೂಲಕ ಕಾರ್ಮಿಕರ ಸಮಸ್ಯೆ ಆಲಿಸಲು ಅವರು ಮುಂದಾಗಲಿದ್ದಾರೆ.
ಕ್ರಿಸ್‌ಮಸ್ ದಿನ ಫೆಡರೇಶನ್ ಆಫ್ ಆ್ಯಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (ಐಎಫ್‌ಎಟಿ) ಮತ್ತು ತೆಲಂಗಾಣ ಗಿಗ್ ಅಂಡ್ ಫ್ಲ್ಯಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಡಬ್ಲ್ಯುಯು) ನೇತೃತ್ವದಲ್ಲಿ ಬೆಂಗಳೂರು ಹೈದರಾಬಾದ್, ಮುಂಬೈ ಮತ್ತು ದೆಹಲಿ ನಗರಗಳಲ್ಲಿ ಗಿಗ್ ಕಾರ್ಮಿಕರು ಮುಷ್ಕರ ನಡೆಸಿದ್ದಾರೆ.
ಝೊಮ್ಯಾಟೋ, ಸ್ವಿಗ್ಗಿ, ಬ್ಲಿಂಕಿಟ್, ಝೆಪ್ಟೋ, ಆಮೆಝಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ವಿವಿಧ ಆಹಾರ ಮತ್ತು ಇತರ ವಸ್ತುಗಳ ವಿತರಣಾ ಆ್ಯಪ್‌ಗಳ ಸುಮಾರು 40 ಸಾವಿರ ವಿತರಣಾ ಏಜೆಂಟ್‌ಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ.
ಕ್ರಿಸ್‌ಮಸ್ ದಿನದ ಮುಷ್ಕರದಲ್ಲಿ ಬಿಸಿ ಹರಿಯಾಣದ ಗುರುಗ್ರಾಮ ನಗರದಲ್ಲಿ ಹೆಚ್ಚಾಗಿ ತಾಗಿದೆ ಎಂದು ವರದಿಯಾಗಿದೆ. ಅಲ್ಲಿನ ನಿವಾಸಿಗಳು ಆಹಾರ ಆರ್ಡರ್ ಮಾಡಿ ಗಂಟೆಗೂ ಹೆಚ್ಚು ಸಮಯ ಕಾಯುವಂತಾಗಿದೆ ಎಂದು ವರದಿಗಳು ಹೇಳಿವೆ.
ಕ್ರಿಸ್‌ಮಸ್ ದಿನದಂದು ಗಿಗ್ ಕಾರ್ಮಿಕರು (ವಿಶೇಷವಾಗಿ ಆಹಾರ ಮತ್ತು ದಿನಸಿ ವಿತರಣಾ ಏಜೆಂಟ್‌ಗಳು) ನಡೆಸಿದ ಮುಷ್ಕರದಿಂದ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಪರಿಣಾಮ ಬೀರಿಲ್ಲ. ಆದರೆ, ಇಂದಿನ (ಹೊಸ ವರ್ಷದ ಸಂಜೆ) ಮುಷ್ಕರ ಹೆಚ್ಚು ಪರಿಣಾಮ ಬೀರಬಹುದು. ಏಕೆಂದರೆ, ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗುತ್ತದೆ.
ಇಂದಿನ ಮುಷ್ಕರಕ್ಕೆ ಐಎಫ್‌ಎಟಿ, ಟಿಜಿಡಬ್ಲ್ಯುಯು ಜೊತೆಗೆ ಗಿಗ್ ಆ್ಯಂಡ್ ಫ್ಲ್ಯಾಟ್‌ಫಾರ್ಕ್ ವರ್ಕಸ್ ಯೂನಿಯನ್ (ಜಿಐಪಿಎಸ್‌ಡಬ್ಲ್ಯುಯೂ) ಕೂಡ ಕರೆ ನೀಡಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಬರೆದ ಜ್ಞಾಪಕ ಪತ್ರದಲ್ಲಿ ಜಿಐಪಿಎಸ್‌ಡಬ್ಲ್ಯುಯೂ ದೆಹಲಿ ಅಧ್ಯಕ್ಷೆ ಸೀಮಾ ಸಿಂಗ್, ಗಿಗ್ ಕಾರ್ಮಿಕರನ್ನು ಕಾರ್ಮಿಕ ಹಕ್ಕುಗಳಿಂದ ವ್ಯವಸ್ಥಿತವಾಗಿ ಹೊರಗಿಡುವುದರ ಜೊತೆಗೆ ಅವರು ಎದುರಿಸುತ್ತಿರುವ ಕಿರುಕುಳ, ತಾರತಮ್ಯ ಮತ್ತು ಹಿಂಸಾಚಾರದ ಬಗ್ಗೆ ಗಮನಸೆಳೆದಿದ್ದಾರೆ. ಈ ಮುಷ್ಕರವು ಗಿಗ್ ಕಾರ್ಮಿಕರು ಮತ್ತು ಇತರ ಪಕ್ಷಕಾರರನ್ನು ಒಗ್ಗೂಡಿಸಿ ಸರ್ಕಾರ ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಅವರು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರ, ಎಂಜಿ ರಸ್ತೆ ಮತ್ತು ಇಂದಿರಾನಗರದಂತಹ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ 8,000 ರಿಂದ 10,000 ವಿತರಣಾ ಕಾರ್ಮಿಕರು ದಿಢೀರ್ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಜಿಐಪಿಎಸ್‌ಡಬ್ಲ್ಯೂಯು ಸದಸ್ಯ ಚಂದನ್ ಕುಮಾರ್ ಅವರು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
“ಕಾರ್ಮಿಕರ ವೆಚ್ಚದಲ್ಲಿ ಕಂಪನಿಗಳು ಪಡೆಯುವ ಲಾಭದ ವಿರುದ್ಧ ನಾವು ನಿಲ್ಲುತ್ತೇವೆ. ಕಾರ್ಮಿಕರಿಲ್ಲದೆ, ಯಾವುದೇ ಆರ್ಡರ್ (ಆಹಾರ ಮತ್ತ ಇತರ ಆರ್ಡರ್) ಮಾಡಲು ಸಾಧ್ಯವಿಲ್ಲ, ಕಾರ್ಮಿಕರಿಲ್ಲದೆ ಯಾವುದೇ ಗಿಗ್ ಆರ್ಥಿಕತೆ ನಡೆಯಲ್ಲ” ಎಂದು ಕುಮಾರ್ ತಿಳಿಸಿದ್ದಾರೆ.
ಕಾರ್ಮಿಕರು ಆರ್ಡರ್‌ಗಳನ್ನು ನಿರಾಕರಿಸುತ್ತಾ ಶಾಂತಿಯುತ ಮುಷ್ಕರ ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸಲಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ಪೊಲೀಸ್ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಮಾರ್, “ನಾವು ಸಂಚಾರಕ್ಕೆ ಅಡ್ಡಿಪಡಿಸುವುದಿಲ್ಲ. ಇದು ಶಾಂತಿಯುತ, ಪ್ರಜಾಸತ್ತಾತ್ಮಕ ಪ್ರತಿರೋಧ. ನಾವು ಆರ್ಡರ್‌ಗಳನ್ನು ತಲುಪಿಸುವಾಗ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ನಮ್ಮ ಹಕ್ಕುಗಳನ್ನು ಕೇಳಲು ಹೊರಟಾಗ ಏಕೆ ಸಮಸ್ಯೆ?” ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಇತರ ನಗರಗಳಾದ ಮೈಸೂರು ಮತ್ತು ಬೆಳಗಾವಿಯಿಂದಲೂ ಕಾರ್ಮಿಕರು ಈ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಕುಮಾರ್ ಹೇಳಿದ್ದಾರೆ.
ಸ್ವಿಗ್ಗಿ, ಝೊಮ್ಯಾಟೋ ಮತ್ತು ಇತರ ಆಹಾರ ವಿತರಣಾ ಆ್ಯಪ್‌ಗಳ ಮೂಲಕ ಆರ್ಡರ್ ಮಾಡುವಲ್ಲಿ ಬೆಂಗಳೂರು ನಿರಂತರವಾಗಿ ಅಗ್ರ ನಗರಗಳಲ್ಲಿ ಸ್ಥಾನ ಪಡೆದಿದೆ. ಹೊಸ ವರ್ಷದ ಮುನ್ನಾದಿನದಂದು ಭಾರೀ ಸಂಖ್ಯೆಯಲ್ಲಿ ಜನರು ಆಹಾರ, ಪಾನಿಯಾ ಆರ್ಡರ್ ಮಾಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲೇ ಕಾರ್ಮಿಕರು ಮುಷ್ಕರ ಹಮ್ಮಿಕೊಂಡಿರುವುದರಿಂದ ಸಾವಿರಾರು ಜನರಿಗೆ ಸಮಸ್ಯೆ ಆಗುವುದು ಖಚಿತ ಎನ್ನಲಾಗಿದೆ.


