ಈ ಬಾರಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಹಣವಿಲ್ಲ, ಸಾಲ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜಿಎಸ್‌ಟಿ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಈ ಕುರಿತು ಪಿಣರಾಯಿ ವಿಜಯನ್, “ರಾಜ್ಯಗಳಿಗೆ ನೀಡಬೇಕಾದ ಜಿಎಸ್‌ಟಿ ಪರಿಹಾರ ಮೊತ್ತವನ್ನು ನೀಡಿ. ರಾಜ್ಯಗಳಿಗೆ ಎದುರಾಗಿರುವ ತೊಂದರೆಯನ್ನು ನೀಗಿಸಲು ಸಹಕಾರಿಯಾಗಬೇಕೆಂದು, ಮತ್ತು ರಾಜ್ಯಗಳ ಪರಿಸ್ಥಿತಿಯನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಈ ಪತ್ರ ಬರೆದಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
Wrote to Hon'ble @PMOIndia Shri. @narendramodi ji to convey the concerns of the Govt of Kerala with regard to the hurdles in the payment of GST compensation to the States. pic.twitter.com/bt96Bbo2xE
— Pinarayi Vijayan (@vijayanpinarayi) September 2, 2020
ಇದನ್ನೂ ಓದಿ: ಕೋವಿಡ್‌ನಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿತ: ರಾಜ್ಯಗಳಿಗೆ ಪಾಲು ನೀಡಲು ಹಣವಿಲ್ಲವೆಂದ ಕೇಂದ್ರ!
“2017 ರ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ರಾಜ್ಯಗಳಿಗೆ ಪರಿಹಾರ ಮೊತ್ತವನ್ನು ಪ್ರತಿ ಎರಡು ತಿಂಗಳಿಗೊಮ್ಮೆ, ತಿಂಗಳಾಂತ್ಯದಲ್ಲಿ ಭರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ 2019-20ನೇ ಸಾಲಿನಿಂದ ಏಪ್ರಿಲ್ 2020ರವರೆಗೆ ಜಿಎಸ್‌ಟಿ ಪರಿಹಾರ ಮೊತ್ತವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿರುವುದಿಲ್ಲ. ಕೇರಳಕ್ಕೆ ನೀಡಬೇಕಾದ ಬಾಕಿ, 2020-21ನೇ ಹಣಕಾಸು ವರ್ಷದಲ್ಲಿ ಆಗಸ್ಟ್ ವರೆಗೆ 7000 ಕೋಟಿ ಇದೆ” ಎಂದು ಪತ್ರದಲ್ಲಿ ಹೇಳಿದ್ದಾರೆ.
“41ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಕೊರೊನಾ ಸಾಂಕ್ರಾಮಿಕದಿಂದಾಗಿ ಜಿಎಸ್‌ಟಿ ಸಂಗ್ರಹ ಕುಸಿತವಾಗಿದೆ ಎಂದು ಹೇಳಲಾಗಿತ್ತು. ಹಾಗಾಗಿ ಪರಿಹಾರವನ್ನು ರಾಜ್ಯಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಇದರಿಂದ ರಾಜ್ಯಗಳ ಪರಿಸ್ಥಿತಿ ಇನ್ನೂ ಅಧೋಗತಿಗೆ ಹೋಗಬಹುದು” ಎಂದು ಹೇಳಿದ್ದಾರೆ.
ಒಟ್ಟು 3 ಲಕ್ಷ ಕೋಟಿ ರೂಗಳ ಕುಸಿತವನ್ನು ಕೇಂದ್ರ ಎದುರಿಸುತ್ತಿದೆ. ಕೇವಲ 65000 ಕೋಟಿ ಸೆಸ್ ಸಂಗ್ರಹವಾಗುವ ನಿರೀಕ್ಷೆಯಿದ್ದು ಉಳಿದ 2.35 ಲಕ್ಷ ಕೋಟಿ ಕೊರತೆ ಬೀಳುತ್ತದೆ. ಹಾಗಾಗಿ ಮೊದಲ ಆಯ್ಕೆಯಾಗಿ ಆರ್‌ಬಿಐನಿಂದ 97,000 ಕೋಟಿ ರೂ. ಸಾಲ ಪಡೆಯಬಹುದು. ಎರಡನೇ ಆಯ್ಕೆಯಾಗಿ ಹೊರಗಿನಿಂದ 2.35 ಲಕ್ಷ ಕೋಟಿ ಸಾಲ ಪಡೆಯಬಹುದೆಂಬ ಮತ್ತು ಅದನ್ನು 2022ರ ನಂತರ ಕೇಂದ್ರ ಭಾಗಶಃ ತೀರಿಸುತ್ತದೆ ಎಂಬ ಎರಡು ಆಯ್ಕೆಗಳನ್ನು ಕೇಂದ್ರವು ರಾಜ್ಯಗಳ ಮುಂದಿಟ್ಟಿದೆ.
ಆರ್‌ಬಿಐ ನಿಂದ ಸಾಲ ಪಡೆದರೆ ಅಸಲು ಬಡ್ಡಿ ಎರಡನ್ನು ಕೇಂದ್ರ ತೀರಿಸಲಿದೆ. ಒಂದು ವೇಳೆ ಹೊರಗಿನಿಂದ 2.35 ಲಕ್ಷ ಸಾಲ ಪಡೆದರೆ ಕೇಂದ್ರ ಅಸಲನ್ನು ಮಾತ್ರ ತೀರಿಸುವುದಾಗಿಯೂ, ರಾಜ್ಯಗಳು ಬಡ್ಡಿ ಭರಿಸಬೇಕೆಂದು ಕೇಂದ್ರ ಹೇಳಿದೆ.
“ಈ ಎರಡೂ ಆಯ್ಕೆಗಳನ್ನು ಹಿಂತೆಗೆದುಕೊಂಡು, ರಾಜ್ಯಗಳಿಗೆ ನೀಡಬೇಕಾಗಿರುವ ಪರಿಹಾರವನ್ನು ನೀಡುವಂತೆ ಹಣಕಾಸು ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ಪ್ರಧಾನಿಯವರನ್ನು ಕೇಳಿಕೊಳ್ಳುತ್ತೇನೆ” ಎಂದು ವಿನಂತಿಸಿದ್ದಾರೆ.
“ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಕೊರತೆ ಸರಿದೂಗಿಸಲು ಪರಿಹಾರಕ್ಕಾಗಿ ಕೇಂದ್ರ ನೀಡಿರುವ ಆಯ್ಕೆಗಳು ಸ್ವೀಕಾರಾರ್ಹವಲ್ಲ. ಜಿಎಸ್‌ಟಿ ಆದಾಯದ ಕೊರತೆಯನ್ನು ನೀಗಿಸಲು ರಾಜ್ಯಗಳು ಸಾಲ ಪಡೆಯುವ ಪ್ರಸ್ತಾಪವನ್ನು ಕೇರಳ ರಾಜ್ಯವು ತಿರಸ್ಕರಿಸುತ್ತದೆ” ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ನಿನ್ನೆ ಹೇಳಿದ್ದರು.
ಜಿಎಸ್‌ಟಿ ನಿಯಂತ್ರಣ ಕಾನೂನಿನಡಿಯಲ್ಲಿ, ಜಿಎಸ್‌ಟಿ ಜಾರಿಗೆ ಬಂದ ಜುಲೈ 1, 2017 ರಿಂದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳಿಗೆ ಆದಾಯ ನಷ್ಟಕ್ಕೆ ಕೇಂದ್ರದಿಂದ ಪಾವತಿ ಖಾತರಿ ನೀಡಲಾಗಿದೆ. 2022ರವರೆಗೂ ರಾಜ್ಯಗಳು ನಷ್ಟ ಹೊಂದಿದ್ದಲ್ಲಿ ಕೇಂದ್ರ ಅದನ್ನು ತುಂಬಿಕೊಡುವ ಭರವಸೆ ನೀಡಿತ್ತು.
ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹ ಕೊರತೆ: ಸಾಲ ಪಡೆಯಿರಿ ಎಂಬ ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ಕೇರಳ


