ಪ್ರಾಚೀನ ಭಾರತದಲ್ಲಿ ಹಿಂದೂಗಳು ಬರಿ ’ಅಶ್ವಮೇಧ ಯಜ್ಞ’ ಮಾಡಿ ಕುದುರೆಗಳನ್ನೂ, ’ಗೋಮೇಧ ಯಜ್ಞ’ ಮಾಡಿ ಹಸುಗಳನ್ನೂ ಬಲಿಕೊಟ್ಟು ಅವುಗಳ ಮಾಂಸವನ್ನು ಬೇಯಿಸಿ ದೇವರ ಪ್ರಸಾದವೆಂದು ತಿನ್ನುತ್ತಿದ್ದರಷ್ಟೇ ಅಲ್ಲ, ’ನರಮೇಧ ಯಜ್ಞ’ ಮಾಡಿ ಮನುಷ್ಯರನ್ನೂ ಬಲಿ ಕೊಟ್ಟು ನೈವೇದ್ಯ ನೀಡುತ್ತಿದ್ದರು ಎಂಬುದಕ್ಕೆ ಸನಾತನ ಧರ್ಮಗ್ರಂಥಗಳಲ್ಲಿ ಹಲವು ಉಲ್ಲೇಖಗಳಿವೆ.
ಇಬ್ಬರು ಮಹಿಳೆಯರನ್ನು ನಿಧಿ ಪ್ರಾಪ್ತಿಗಾಗಿ ಬಲಿ ಕೊಟ್ಟ ಆರೋಪದ ಮೇಲೆ ಕೇರಳದಲ್ಲಿ ಭಗವಲ ಸಿಂಗ್ ಮತ್ತು ಅವನ ಹೆಂಡತಿ ಲೈಲಾ ಅವರುಗಳನ್ನು ಪೊಲೀಸರು ಬಂಧಿಸಿರುವುದಾಗಿ ದಿನಾಂಕ 12, ಅಕ್ಟೋಬರ್ 2022ರ ಪತ್ರಿಕೆಗಳು ವರದಿ ಮಾಡಿವೆ. ಈ ಪ್ರಕರಣದಲ್ಲಿ ಮೂರನೇ ಆರೋಪಿ ಮುಹಮ್ಮದ್ ಶಫಿ ಅನ್ನುವನನ್ನೂ ಹೆಸರಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ಯವತಮಾಳ ಜಿಲ್ಲೆಯಲ್ಲಿ ಗುಪ್ತ ನಿಧಿಯನ್ನು ಪಡೆಯುವ ಉದ್ದೇಶದಿಂದ 18 ವರ್ಷ ವಯಸ್ಸಿನ ಯುವತಿಯೊಬ್ಬಳನ್ನು ಬಲಿ ಕೊಡಲು ಪ್ರಯತ್ನಿಸಿದ್ದಕಾಗಿ 9 ಜನರನ್ನು ಪೊಲೀಸರು ಬಂಧಿಸಿರುವುದಾಗಿ 2022ರ ಏಪ್ರಿಲ್ ತಿಂಗಳ 27ರಂದು ಪಿ.ಟಿ.ಐ. ವರದಿ ಮಾಡಿತ್ತು. ಅದೇ ರೀತಿ ಉತ್ತರಪ್ರದೇಶದ ನೊಯಿಡಾದಲ್ಲಿ ಏಳು ವರ್ಷ ವಯಸ್ಸಿನ ಬಾಲಕಿಯೊಬ್ಬಳನ್ನು ಅಪಹರಿಸಿ ಹೋಳಿ ಹಬ್ಬದ ದಿನ ಬಲಿಕೊಡಲು ಪ್ರಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದರು ಎಂದು 2022ರ ಮಾರ್ಚ 15ರಂದು ಪಿ.ಟಿ.ಐ. ವರದಿ ಮಾಡಿತ್ತು. ಈ ಹುಚ್ಚು ಎಷ್ಟರಮಟ್ಟಿಗೆ ನೆತ್ತಿಗೆ ಏರಿದೆ ಎಂದರೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ತನ್ನನ್ನು ದೇವಿ ಎಂದು ಪರಿಭಾವಿಸಿಕೊಂಡ ತಾಯಿಯೊಬ್ಬಳು ತನ್ನ 24 ವರ್ಷ ವಯಸ್ಸಿನ ಮಗನನ್ನೇ ಕೊಡಲಿಯಿಂದ ಕೊಂದು ಬಲಿ ತೆಗೆದುಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದುದಾಗಿ 2021ರ ಅಕ್ಟೋಬರ್ 33ರಂದು ಪಿ.ಟಿ.ಐ. ವರದಿ ಮಾಡಿತ್ತು. ಈ ಎಲ್ಲಾ ಸುದ್ದಿಗಳ ಹಿನ್ನೆಲೆಯಲ್ಲಿ ಸನಾತನ ಧರ್ಮಗ್ರಂಥಗಳಲ್ಲಿ ನರಮೇಧದ ಬಗ್ಗೆ ಇರುವ ಉಲ್ಲೇಖಗಳನ್ನು ಅವಲೋಕಿಸಬಹುದು.
ವೇದಗಳಲ್ಲಿ ನರಮೇಧ
ಇಂತಹ ನರಮೇಧಗಳ ಬಗ್ಗೆ ಋಗ್ವೇದದಿಂದ ಮೊದಲು ಮಾಡಿ ಸರಿಸುಮಾರು ಎಲ್ಲಾ ಹಿಂದೂ ಗ್ರಂಥಗಳಲ್ಲೂ ಪ್ರಸ್ತಾಪವಿದೆ. “ಋಗ್ವೇದದ ಪುರುಷಸೂಕ್ತ ನಿಜವಾದ ನರಮೇಧವನ್ನು ವಿವರಿಸುವುದಿಲ್ಲ, ಆದರೆ ಎಲ್ಲಾ ಸಂಭವನೀಯತೆಯಲ್ಲೂ, ಇತಿಹಾಸಪೂರ್ವ ಕಾಲದಲ್ಲಿ ನಡೆಸಲಾಗುತ್ತಿದ್ದ ಅದರ ಸ್ಮರಣೆಯನ್ನು ಸಂರಕ್ಷಿಸುತ್ತದೆ” ಎಂದು ’ದ ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ ಪೀಪಲ್’ ಎಂಬ ಸಂಪುಟದ ’ದ ವೇದಿಕ್ ಏಜ್’ ಎಂಬ ಅಧ್ಯಾಯದಲ್ಲಿ ಋಗ್ವೇದ ಕಾಲದ ಧರ್ಮ ಮತ್ತು ತತ್ವಚಿಂತನೆಯ ಬಗ್ಗೆ ಬರೆಯುತ್ತ ಇತಿಹಾಸಕಾರ ವಿ.ಎಂ.ಆಪ್ಟೆ ಅಭಿಪ್ರಾಯ ಪಡುತ್ತಾರೆ.
ಋಗ್ವೇದದ ಪುರುಷ ಸೂಕ್ತದಲ್ಲಿ ’ಪುರುಷ’ನಿಂದ ಸೃಷ್ಟಿಯಾದ ದೇವತೆಗಳು ಮತ್ತು ಋಷಿಗಳು ಪುರುಷನನ್ನೇ ಆಹುತಿ ಕೊಟ್ಟು ಯಜ್ಞವನ್ನು ಪೂರ್ಣಗೊಳಿಸುತ್ತಾರೆ. ಸಾಯಣರು ಇದನ್ನು ಮಾನಸ ಯಜ್ಞ ಎಂದು ಕರೆಯುತ್ತಾರೆ. ಇದೊಂದು ’ಸರ್ವಹುತ’ ಯಜ್ಞವಾಗಿತ್ತು. ’ಸರ್ವಹುತಃ’ ಎಂಬ ಶಬ್ದಕ್ಕೆ ವಿವರಣೆ ನೀಡುತ್ತ ಋಗ್ವೇದವನ್ನು ಕನ್ನಡಕ್ಕೆ ಅನುವಾದಿಸಿರುವ ವಿದ್ವಾನ್ ಎಚ್.ಪಿ.ವೆಂಕಟರಾಯರು “ಸರ್ವಹುತಃ ಎಂದರೆ ಸರ್ವಾತ್ಮಕನಾದ ಪುರುಷನನ್ನೇ ಆಹುತಿಯನ್ನಾಗಿ ಅರ್ಪಿಸಿದ ಯಾಗದಿಂದ ಎಂದು ತಾತ್ಪರ್ಯ. ಪ್ರಕೃತದಲ್ಲಿ ಪುರುಷಮೇಧವನ್ನು ನಿರ್ದೇಶಿಸಿದೆ” ಎಂದು ಬರೆಯುತ್ತಾರೆ. ನಂತರ ಈ ಪುರುಷನನ್ನು ದರ್ಭೆಯ ಮೇಲೆ ಸ್ಥಾಪಿಸಿ, ಅವನನ್ನು ಪಶುಗಳನ್ನು ಕಟ್ಟುವ ಯೂಪಸ್ತಂಭಕ್ಕೆ ಕಟ್ಟಿ ಅವನನ್ನು ವಧಿಸಿ, ಕತ್ತರಿಸಿ ಯಜ್ಞವನ್ನು ಸಂಪನ್ನಗೊಳಿಸಲಾಗುತ್ತದೆ. ಈ ಯಜ್ಞದಲ್ಲಿ ಪುರುಷನನ್ನು ಎಷ್ಟು ತುಂಡುಗಳಾಗಿ ತುಂಡರಿಸಲಾಯಿತು ಎಂದು ಪುರುಷ ಸೂಕ್ತದ 10ನೆಯ ಮಂತ್ರ ಪ್ರಶ್ನಿಸಿದರೆ ಉತ್ತರವಾಗಿ 11ನೆಯ ಮಂತ್ರ ನಾಲ್ಕು ವರ್ಣಗಳ ಸೃಷ್ಟಿಯ ಬಗ್ಗೆ ಹೇಳುತ್ತ ಮುಖದಿಂದ ಬ್ರಾಹ್ಮಣನೂ, ಬಾಹುಗಳಿಂದ ಕ್ಷತ್ರಿಯರೂ, ತೊಡೆಗಳಿಂದ ವೈಶ್ಯರೂ ಪಾದಗಳಿಂದ ಶೂದ್ರರೂ ಹುಟ್ಟಿದುದಾಗಿ ಹೇಳುತ್ತದೆ.
’ಪುರುಷ’ನನ್ನೇ ಬಲಿ ಕೊಡುವ ಈ ಯಜ್ಞದ ಪ್ರಸ್ತಾಪವನ್ನು ಯಜುರ್ವೇದವೂ (31.15-16) ಪುನರುಚ್ಚರಿಸುತ್ತದೆ. “ದೇವಾ ಯದ್ಧ್ಯಜ್ಞಂ ತನ್ವಾನಾ ಅಬಧ್ರನ್ ಪುರುಷಂ ಪಶುಂ, ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್” ಅಂದರೆ ಯಜ್ಞವನ್ನು ಮಾಡುತ್ತಿದ್ದ ದೇವತೆಗಳು ಪುರುಷನನ್ನು ಬಲಿಪಶುವಂತೆ ಕಟ್ಟಿಹಾಕಿ ಅವನ ಆಹುತಿ ನೀಡಿದರು, ಇದೇ ಧರ್ಮದ ಅತ್ಯಂತ ಪ್ರಾಚೀನ ನಿಯಮವಾಗಿತ್ತು ಎಂದು ಹೇಳುತ್ತದೆ.
ಯಜುರ್ವೇದ ವಾಜಸನೇಯಿ ಸಂಹಿತೆಯ ಅಧ್ಯಾಯ 30 ಪುರುಷಮೇಧವನ್ನು ವಿವರಿಸುತ್ತ ಕೊನೆಗೆ ಹೀಗೆ ಹೇಳುತ್ತದೆ: “ಅಥೈತಾನಷ್ಟೌ ವಿರೂಪಾನಾಂ, ಲಭತೇತಿರ್ದೀಘಂ ಚಾತಿಹ್ರಸ್ವಂ ಚಾತಿ ಸ್ಥೂಲಂ, ಚಾತಿ ಕೃಷಂ, ಚಾತಿ ಶುಕ್ಲಂ, ಚಾತಿ ಕೃಷ್ಣಂ, ಚಾತಿ ಕುಲ್ವಂ, ಚಾತಿಲೋಮಶಂ ಚ, ಅಶೂದ್ರಾ ಅಬ್ರಾಹ್ಮಣಾಸ್ತೆ ಪ್ರಾಜಾಪ್ತ್ಯಾ”: ಅಂದರೆ “ಈಗ ಅವನು ಈ ಕೆಳಗಿನ ಎಂಟು ವಿಧದ ವಿವಿಧ ಪುರುಷರನ್ನು ವಧಸ್ತಂಭಕ್ಕೆ ಕಟ್ಟಿಹಾಕುತ್ತಾನೆ; ಒಬ್ಬ ತುಂಬಾ ಎತ್ತರ, ಒಬ್ಬ ತುಂಬಾ ಕುಳ್ಳ, ಒಬ್ಬ ತುಂಬಾ ದಪ್ಪ, ಒಬ್ಬ ತುಂಬಾ ತೆಳ್ಳಗೆ, ಒಬ್ಬ ತುಂಬಾ ಬಿಳಿ, ಒಬ್ಬ ತುಂಬಾ ಕಪ್ಪು, ಒಬ್ಬ ಬೋಳು, ಒಬ್ಬ ತುಂಬಾ ಕೂದಲುಳ್ಳವನು. ಇವರು ಶುದ್ರರೂ ಆಗಿರಬಾರದು, ಬ್ರಾಹ್ಮಣರೂ ಆಗಿರಬಾರದು. ಇವರನ್ನೆಲ್ಲ ಪ್ರಜಾಪತಿಗೆ ಸಮರ್ಪಿಸಬೇಕು.” ’ವ್ರಾತ್ಯ’ರನ್ನೂ ’ಮಾಗಧ’ರನ್ನೂ ಈ ಪಟ್ಟಿಗೆ ಸೇರಿಸಲಾಗಿದೆಯಲ್ಲದೇ ಈ ಅಧ್ಯಾಯ ಬಲಿ ಕೊಡಬಹುದಾದ ವ್ಯಕ್ತಿಗಳ ಹಲವಾರು ವೃತ್ತಿಗಳನ್ನೂ, ಉದ್ಯೋಗಗಳನ್ನೂ ಪಟ್ಟಿಮಾಡುತ್ತದೆ.
ಇದನ್ನೂ ಓದಿ: ಅಶ್ವಮೇಧ ಯಜ್ಞ ಹಿಂದೂಗಳೂ ಹೆಮ್ಮೆಗೆ ಅರ್ಹವೇ?
ವಾಜಸನೇಯಿ ಸಂಹಿತೆ ಮತ್ತು ತೈತ್ತರೀಯ ಬ್ರಾಹ್ಮಣಗಳಲ್ಲಿ ಪುರುಷಮೇಧದಲ್ಲಿ ಬಲಿಯಾಗಬಹುದಾದ ವ್ಯಕ್ತಿಗಳ ವೃತ್ತಿಗಳು, ಉದ್ಯೋಗಗಳು, ಕಲೆ, ಕರಕುಶಲ ವಸ್ತುಗಳು ಮತ್ತು ಕೈಗಾರಿಕೆಗಳ ಅತ್ಯಂತ ವಿಸ್ತಾರವಾದ ಪಟ್ಟಿಯನ್ನು ನೀಡಲಾಗಿದೆ. ಉದಾಹರಣೆಗೆ ಅನುಕ್ಷತ್ರಿ, ಅನುಚರ, ಹಸುವನ್ನು ಕೊಲ್ಲುವ ಗೋಘ್ನ, ಅಕ್ಕಸಾಲಿಗ, ರೈತ, ಬಡಗಿ, ಜ್ಯೋತಿಷಿ, ಮದ್ಯ ತಯಾರಿಸುವವನು, ಕಸೂತಿ ಮಾಡುವವಳು, ಅಶ್ವಪಾಲಕ, ಆನೆಪಾಲಕ, ಹೊಲದಲ್ಲಿ ಕೈಯಿಂದ ಚಪ್ಪಾಳೆ ಹೊಡೆದು ಶಬ್ದ ಮಾಡಿ ಪಕ್ಷಿಗಳನ್ನು ಓಡಿಸುವವನು ಇತ್ಯಾದಿ.
ಅಥರ್ವಣವೇದದಲ್ಲಿಯೂ ನರಮೇಧದ ಪ್ರಸ್ತಾಪವಿದೆ. (11.2.9) “ಚತುರ್ನಮೊ ಅಷ್ಟಕೃತ್ವೊಂ ಭವಾಯ ದಶ ಕೃತ್ವಃ ಪಶುಪತೆ ನಮಸ್ತೆ, ತವೆಮೆ ಪಂಚ ಪಶವೊ ವಿಭಕ್ತಾ ಗಾವೊ, ಅಶ್ವಾ, ಪುರುಷಾ ಅಜಾವಯಃ”: ಅಂದರೆ ನಾಲ್ಕು ಬಾರಿ, ಎಂಟು ಬಾರಿ ಭವಕ್ಕೆ ಗೌರವ ಸಲ್ಲಿಸಿ, ಹೌದು, ಮೃಗಗಳ ಅಧಿಪತಿ, ಹತ್ತು ಬಾರಿ ನಿಮಗೆ ನಮಸ್ಕರಿಸುತ್ತೇನೆ, ಈ ಪ್ರಾಣಿಗಳು, ಐದು ಥರದ ಪ್ರಾಣಿಗಳು, ಹಸುಗಳು, ಮೇಕೆಗಳು, ಕುರಿಗಳು, ಪುರುಷರು ಮತ್ತು ಕುದುರೆಗಳು, ನಿಮ್ಮವು ಎಂದು ಹೇಳುತ್ತದೆ.
ಶುನಃಶೇಪನ ಕಥೆ
ಬೈಬಲ್ಲಿನಲ್ಲಿ ದೇವರು ಅಬ್ರಹಾಮನಿಗೆ ನೀನು ಪ್ರೀತಿಸುವ ನಿನ್ನ ಏಕೈಕ ಮಗನನ್ನು ನನಗೆ ಬಲಿ ಕೊಡು ಎಂದು ಹೇಳುತ್ತಾನೆ. ದೈವಾಜ್ಞೆಯನ್ನು ಪಾಲಿಸಲು ಅಬ್ರಹಾಮ್ ಹೋದಾಗ ದೇವದೂತ ಅವನನ್ನು ತಡೆಯುತ್ತಾನೆ, ಸುಮಾರು ಇಂಥದೇ ಕಥೆ ಹಿಂದೂ ಗ್ರಂಥಗಳಲ್ಲೂ ಇದೆ. ಇಲ್ಲಿ ವರುಣನು ಹರಿಶ್ಚಂದ್ರನಿಗೆ ತನ್ನ ಮಗನನ್ನು ಬಲಿ ಕೊಡಬೇಕೆಂದು ಕೇಳುತ್ತಾನೆ. ಆದರೆ ನಂತರ ದೇವತೆಗಳು ಅವನನ್ನು ಬಲಿಯಾಗುವುದರಿಂದ ತಪ್ಪಿಸುತ್ತಾರೆ. ಇವನೇ ಶುನಃಶೇಪ ಹೆಸರಿನ ವ್ಯಕ್ತಿ.
ಇವನು ನರಮೇಧದ ಇತಿಹಾಸಪೂರ್ವ ಕಾಲದ ಮೊದಲ ಉದಾಹರಣೆ ಎಂದು ತೋರುತ್ತದೆ. ಋಗ್ವೇದದ ಮೊದಲ ಮಂಡಲದ 24ರಿಂದ 30ರವರೆಗಿನ ಏಳು ಸೂಕ್ತಗಳ ಸುಮಾರು ನೂರು ಮಂತ್ರಗಳಲ್ಲಿ ಇವನ ಬಗ್ಗೆ ಪ್ರಸ್ತಾಪವಿದೆ. ಇದಲ್ಲದೇ ಹಲವು ವ್ಯತ್ಯಾಸಗಳೊಂದಿಗೆ ರಾಮಾಯಣದಲ್ಲಿಯೂ, ಭಾಗವತ ಮತ್ತು ವಿಷ್ಣು ಪುರಾಣಗಳಲ್ಲಿಯೂ, ಐತರೇಯ ಬ್ರಾಹ್ಮಣದಲ್ಲಿಯೂ ಇವನನ್ನು ಬಲಿಕೊಡುವ ವಿವರಗಳಿವೆ.
ಐತರೇಯ ಬ್ರಾಹ್ಮಣದ 33ನೇ ಅಧ್ಯಾಯವು ಶುನಃಶೇಪನ ಕಥೆಯನ್ನು ಈ ಕೆಳಗಿನಂತೆ ಹೇಳುತ್ತದೆ: ಇಕ್ಷ್ವಾಕು ಕುಟುಂಬಕ್ಕೆ ಸೇರಿದ ರಾಜ ಹರಿಶ್ಚಂದ್ರ 100 ಹೆಂಡತಿಯರನ್ನು ಹೊಂದಿದ್ದರೂ ಒಬ್ಬ ಮಗನನ್ನು ಪಡೆದಿರಲಿಲ್ಲ. ಆಗ ಋಷಿ ನಾರದನು ಹರಿಶ್ಚಂದ್ರನಿಗೆ ವರುಣನನ್ನು ಪೂಜಿಸಿ ಮಗನನ್ನು ಕೇಳು ಮತ್ತು ಆ ಮಗನನ್ನು ನಿನಗೆ ಬಲಿ ಕೊಡುತ್ತೇನೆಂದು ವರುಣನಿಗೆ ಮಾತು ಕೊಡು ಎಂದು ಹೇಳಿದನು. ಪರಿಣಾಮವಾಗಿ, ಹರಿಶ್ಚಂದ್ರನಿಗೆ ಒಬ್ಬ ಮಗ ಹುಟ್ಟಿದನು ಮತ್ತು ಅವನಿಗೆ ರೋಹಿತ್ ಎಂದು ಹೆಸರಿಸಲಾಯಿತು. ವರುಣನು ಬಲಿ ಕೇಳಿದಾಗ ಹರಿಶ್ಚಂದ್ರನು ಒಂದಲ್ಲ ಒಂದು ನೆಪ ಮಾಡಿ ಬಲಿ ಕೊಡುವುದನ್ನು ಮುಂದೂಡುತ್ತ ಹೋದನು. ಕೊನೆಗೆ ಬಲಿ ಕೊಡಲು ನಿರ್ಧರಿಸಲೇಬೇಕಾಯಿತು. ಇದರಿಂದ ರೋಹಿತ್ ಕೋಪಗೊಂಡು ಕಾಡಿಗೆ ಓಡಿಹೋದ. ಆರು ವರ್ಷಗಳ ಕಾಲ ಕಾಡಿನಲ್ಲಿ ಅಲೆದಾಡಿದ ನಂತರ ರೋಹಿತ್ ಋಷಿ ಅಜಿಗರ್ತನನ್ನು ಭೇಟಿಯಾಗಿ ತನ್ನ ಬದಲಿಗೆ ಬಲಿಯಾಗಲು ತನ್ನ ಮೂವರು ಗಂಡುಮಕ್ಕಳಲ್ಲಿ ಒಬ್ಬನನ್ನು 100 ಹಸುಗಳಿಗೆ ಬದಲಾಗಿ ಮಾರುವಂತೆ ಕೋರಿದನು. ಅಜಿಗರ್ತ ತನ್ನ ಹಿರಿಯ ಮಗನನ್ನು ಕೊಡಲು ನಿರಾಕರಿಸಿದರೆ, ಅವನ ಹೆಂಡತಿ ಕಿರಿಯ ಮಗನನ್ನು ಕೊಡಲು ನಿರಾಕರಿಸಿದಳು. ಇದರ ಪರಿಣಾಮವಾಗಿ ಮಧ್ಯಮ ಮಗ ಶುನಃಶೇಪ ನರಬಲಿಯಾಗಲು ಒಪ್ಪಿಕೊಂಡ. ಯಜ್ಞದಲ್ಲಿ ಋಷಿಗಳಾದ ವಸಿಷ್ಠ, ವಿಶ್ವಾಮಿತ್ರ ಮತ್ತು ಜಮದಗ್ನಿ ಇವರು ಭಾಗವಹಿಸಿದರು. ಆದರೆ ಅವರಲ್ಲಿ ಯಾರೂ ಶುನಃಶೇಪನನ್ನು ಯಜ್ಞದ ಕೋಲಿಗೆ ಕಟ್ಟಿಹಾಕಲು ಮತ್ತು ಅವನನ್ನು ಕತ್ತರಿಸಲು ಒಪ್ಪಲಿಲ್ಲ. ಆದರೆ ಇವೆರಡನ್ನು ಮಾಡಲು ಒಂದೊಂದು ಕೆಲಸಕ್ಕೆ ಪ್ರತಿಯಾಗಿ ನೂರು ಹಸುಗಳನ್ನು ಪಡೆಯುವ ಷರತ್ತಿನ ಮೇಲೆ ಅಜಿಗರ್ತನು ಒಪ್ಪಿಕೊಂಡ. ನಂತರ ಶುನಃಶೇಪ ತನ್ನ ರಕ್ಷಣೆಗಾಗಿ ಪ್ರಜಾಪತಿಗೆ ನಂತರ ಹಲವಾರು ದೇವತೆಗಳಲ್ಲಿ ಮೊರೆಹೊಕ್ಕ. ಈ ದೇವರುಗಳೆಲ್ಲ ಇನ್ನೊಬ್ಬ ದೇವರನ್ನು ಮೊರೆಹೋಗುವಂತೆ ಹೇಳಿ ತಪ್ಪಿಸಿಕೊಳ್ಳುತ್ತ ಹೋದರು. ಕೊನೆಗೆ ಹೇಗೂ ಶುನಃಶೇಪನನ್ನು ಬಂಧಿಸಿದ ಹಗ್ಗಗಳು ಸಡಿಲಗೊಂಡವು ಮತ್ತು ಹೀಗೆ ಶುನಃಶೇಪ ಬಲಿಯಾಗುವುದು ತಪ್ಪಿತು.
ರಾಮಾಯಣದಲ್ಲಿ ನರಮೇಧ
ವಾಲ್ಮೀಕಿ ರಾಮಾಯಣದ ಬಾಲಕಾಂಡದ 61ನೆಯ ಸರ್ಗದಲ್ಲಿಯೇ ನರಬಲಿಯ ಪ್ರಸ್ತಾಪವಿದೆ. ಆದರೆ ಇಲ್ಲಿ ರಾಜ ಹರಿಶ್ಚಂದ್ರನ ಬದಲಿಗೆ ಇಕ್ಷ್ವಾಕು ಕುಟುಂಬದ ರಾಜ ಅಂಬರೀಶನನ್ನು ಮತ್ತು ಅಜಿಗರ್ತನ ಬದಲಿಗೆ ಋಷಿ ರಿಚಿಕನನ್ನು ಪ್ರಸ್ತಾಪಿಸಲಾಗಿದೆ. ರಾಮನ ತಾತ ಅಂಬರೀಶ ಅಶ್ವಮೇಧ ಯಜ್ಞವನ್ನು ಮಾಡಿದಾಗ ಇಂದ್ರ ಅವನ ಕುದುರೆಯನ್ನು ಕದಿಯುತ್ತಾನೆ. ಆಗ ಕುದುರೆಯ ಬದಲಿಗೆ ನರಬಲಿ ಕೊಡಬೇಕಾಗುತ್ತದೆ ಎಂದು ಬ್ರಾಹ್ಮಣರು ಹೇಳುತ್ತಾರೆ. (ಪ್ರಾಯಶ್ಚಿತ್ತಂ ಮಹಧ್ವ್ಯೇತನ್ನರಂ ವಾ ಪುರುಷರ್ಷಭ, ಆನಯಸ್ವ ಪಶುಂ ಶೀಘ್ರಂ ಯಾವತ್ ಕರ್ಮ ಪ್ರವರ್ತತೆ). ಇಲ್ಲಿ ಅಂಬರೀಶ ತಾನೇ ಸ್ವತಃ ನರಬಲಿಯಾಗಲು ಒಪ್ಪುವವನನ್ನು ಹುಡುಕಿಕೊಂಡು ಋಷಿ ರಿಚಿಕನ ಬಳಿ ಬಂದು ಆತನ ಮೂರು ಮಕ್ಕಳಲ್ಲಿ ಒಬ್ಬನನ್ನು ಕೊಡಬೇಕೆಂದು ಕೇಳುತ್ತಾನೆ. ದೊಡ್ಡ ಮಗನನ್ನು ಕೊಡಲು ರಿಚಿಕ ಹಾಗೂ ಸಣ್ಣ ಮಗನನ್ನು ಕೊಡಲು ರಿಚಿಕನ ಹೆಂಡತಿ ಒಪ್ಪದೇ ಇದ್ದಾಗ ಎರಡನೆಯ ಮಗ ಶುನಃಶೇಪ ಬಲಿಯಾಗಲು ಮುಂದಾಗುತ್ತಾನೆ. ಅಂಬರೀಶ ಚಿನ್ನ ಬೆಳ್ಳಿ ಹಾಗೂ ಒಂದು ಲಕ್ಷ ಹಸುಗಳನ್ನು ಋಷಿ ರಿಚಿಕನಿಗೆ ಬೆಲೆಯಾಗಿ ಕೊಟ್ಟು ಶುನಃಶೇಪನನ್ನು ತನ್ನ ಯಜ್ಞದಲ್ಲಿ ಬಲಿಯಗಲು ಕೊಂಡುಕೊಳ್ಳುತ್ತಾನೆ. (ಗವಾಂ ಶತಸಹಸ್ರೇಣ ವಿಕ್ರೀಣೀಷೆ ಸುಯಂ ಯದಿ, ಪಶೋರರ್ಥೆ ಮಹಾಭಾಗ ಕೃತಕೃತ್ಯೋಸ್ಮಿ ಭಾರ್ಗವ).
ಮಹಾಭಾರತದಲ್ಲಿ ನರಮೇಧ
ಮಹಾಭಾರತದಲ್ಲಿ ಹಲವಾರು ಬಾರಿ ನರಮೇಧವನ್ನು ಪ್ರಸ್ತಾಪಿಸಲಾಗಿದೆ. ತೀರ್ಥಸ್ಥಾನಗಳ ಬಗ್ಗೆ ಒಂದು ಸಲ ಗೌತಮ ಋಷಿ ಅಂಗೀರಸ ಋಷಿಯನ್ನು ಕೇಳಿದಾಗ “ನೈಮಿಷೆ ಸ್ವರ್ಗತೀರ್ಥೆ ಚ ಉಪಸ್ಪೃಷ್ಯ ಜಿತೇಂದ್ರಿಯಃ, ಫಲಂ ಪುರುಷಮೇಧಸ್ಯ ಲಭೇನ್ಮಾಸಂ ಕೃತೋದಕಃ” (13.26.32), ಅಂದರೆ “ಅನಲಮ್ಯ, ಅಂಧಕ ಅಥವಾ ನೈಮಿಷ ಅಥವಾ ಸ್ವರ್ಗವೆಂಬ ತೀರ್ಥೆಗಳಲ್ಲಿ ತನ್ನ ಇಂದ್ರಿಯಗಳ ಮೇಲೆ ನಿಯಂತ್ರಣವಿಟ್ಟುಕೊಂಡು ಸ್ನಾನ ಮಾಡುವವನಿಗೆ ಮತ್ತು ಪಿತೃಗಳಿಗೆ ನೀರಿನ ತರ್ಪಣ ಬಿಡುವವನಿಗೆ ನರಮೇಧ ಮಾಡಿದರೆ ಸಿಕ್ಕುವಷ್ಟು ಪುಣ್ಯ ದೊರಕುತ್ತದೆ” ಎಂದು ಅಂಗೀರಸ ಹೇಳುತ್ತಾನೆ.
ಅಶ್ವಮೇಧಿಕ ಪರ್ವದಲ್ಲಿ ವ್ಯಾಸ ಮಹರ್ಷಿ ಯುಧಿಷ್ಠಿರನಿಗೆ “ರಾಜಸೂಯಾಶ್ವಮೇಧೌ ಚ ಸರ್ವಮೇಧಂ ಚ ಭಾರತ, ನರಮೇಧಂ ಚ ನೃಪತೆ ತ್ವಮಾಹರ ಯುಧಿಷ್ಠಿರ” (3.8), ಅಂದರೆ “ರಾಜಸೂಯ ಯಜ್ಞವನ್ನು ಮಾಡಲು ಸಿದ್ಧತೆಗಳನ್ನು ಮಾಡು. ಹಾಗೆಯೇ ಸರ್ವಮೇಧವನ್ನು ಮಾಡಲು, ನರಮೇಧವನ್ನು ಮಾಡಲು ಸಿದ್ಧತೆಗಳನ್ನು ಮಾಡಿಕೋ ಎಂದು ಹೇಳುತ್ತಾನೆ.
ಅನುಶಾಸನ ಪರ್ವದಲ್ಲಿ (26.39) ಭೀಷ್ಮ ಯುಧಿಷ್ಠಿರನಿಗೆ “ಕಪೋತಕೆ ನರಃ ಸ್ರಾತ್ವಾ ಅಷ್ಟಾವಕ್ರೆ ಕೃತೊದಕಃ, ದ್ವಾದಶಾಹಂ ನಿರಾಹಾರೊ ನರಮೇಧಫಲಂ ಲಭೇತ್, ಅಂದರೆ ಆಷಾಢ ಮಾಸದ ಚಂದ್ರನ ಹನ್ನೆರಡನೆಯ ದಿನದಂದು ಉಪವಾಸವನ್ನು ಆಚರಿಸುವ ಮೂಲಕ ಮತ್ತು ಕೃಷ್ಣನನ್ನು ಕುಬ್ಜನಂತೆ (ಅಸುರ ರಾಜ ವಾಲಿಯನ್ನು ವಂಚಿಸಿದ) ಪೂಜಿಸುವ ಮೂಲಕ, ಒಬ್ಬ ವ್ಯಕ್ತಿ ನರಮೇಧಯಜ್ಞ ಮಾಡಿದಷ್ಟು ಪುಣ್ಯವನ್ನು ಪಡೆಯುತ್ತಾನೆ ಮತ್ತು ಅಪ್ಸರೆಯರೊಂದಿಗೆ ಸಂತೋಷದಿಂದ ಕ್ರೀಡೆಗಳನ್ನು ಮಾಡುತ್ತಾನೆ” ಎಂದು ಹೇಳುತ್ತಾನೆ.
ಮಹಾಭಾರತದ ಅನುಶಾಸನ ಪರ್ವದಲ್ಲಿ (105.35) ಭೀಷ್ಮ ಯುಧಿಷ್ಠಿರನಿಗೆ ಬ್ರಹ್ಮ ಹಾಗೂ ಭಗೀರಥರ ನಡುವೆ ನಡೆದ ಒಂದು ಸಂವಾದದ ಬಗ್ಗೆ ಹೇಳುತ್ತಾನೆ. ಬ್ರಹ್ಮ ಭಗೀರಥನಿಗೆ ನೀನು ಹೇಗೆ ಇಂತಹ ಉಚ್ಛ ಸ್ಥಾನವನ್ನು ಪಡೆದೆ ಎಂದು ಕೇಳಿದಾಗ ಭಗೀರಥ ಬ್ರಹ್ಮನಿಗೆ ತಾನು ಇತರ ಹಲವಾರು ಯಜ್ಞಗಳನ್ನು ಮಾಡಿದುದರ ಜೊತೆಗೆ ಏಳು ನರಮೇಧಗಳನ್ನು ಮಾಡಿದ ಬಗ್ಗೆ ಹೇಳುತ್ತಾನೆ. “ತ್ರಿಶದಗ್ನಿಮಹಂ ಬ್ರಹ್ಮನ್ನಯಜಂ ಯಚ್ಚ ನಿತ್ಯದಾ| ಅಷ್ಟಾಭಿಃ ಸರ್ವಮೇಧಶ್ಚ ನರಮೇಧಶ್ಚ ಸಪ್ತಭಿಃ” ಅಂದರೆ ಎಲ್ಲಾ ಪ್ರಾಣಿಗಳ ಕೊಬ್ಬನ್ನು ಬೆಂಕಿಯ ಮೇಲೆ ಸುರಿಯುವ ಎಂಟು ಯಜ್ಞಗಳಲ್ಲಿ ನಾನು ದೇವತೆಗಳನ್ನು ಆರಾಧಿಸಿದೆ. ಮನುಷ್ಯರ ಕೊಬ್ಬನ್ನು ಬೆಂಕಿಯಲ್ಲಿ ಸುರಿದ ಏಳು ಯಜ್ಞಗಳಲ್ಲಿ ನಾನು ಅವರನ್ನು ಆರಾಧಿಸಿದೆ. ಸಾವಿರದ ಇಪ್ಪತ್ತೆಂಟು ವಿಶ್ವಜಿತ್ ಯಜ್ಞಗಳಲ್ಲಿ ನಾನು ಅವರನ್ನು ಆರಾಧಿಸಿದೆ”.
ಮಹಾಭಾರತದ ಶಲ್ಯ ಪರ್ವದಲ್ಲಿ ಋಷಿ ಜೈಗಿಶವ್ಯ ಹಾಗೂ ಋಷಿ ಅಸಿತ-ದೇವಲರ ಉಪಾಖ್ಯಾನವಿದೆ, ಅದರಲ್ಲಿ ಜೈಗಿಶವ್ಯನನ್ನು ಹುಡುಕಿಕೊಂಡು ಋಷಿ ದೇವಲ ಹೊರಟಾಗ, ಆತ ಜೈಗಿಶವ್ಯನನ್ನು ಬೇರೆಬೇರೆ ಯಜ್ಞಗಳನ್ನು ಮಾಡಿದ ಫಲವಾಗಿ ಜೀವಿಸುತ್ತಿದ್ದ ಯಾಜಮಾನರ ಲೋಕಗಳಲ್ಲಿ ಕಾಣುತ್ತಾನೆ. ಈ ರೀತಿ ಮನುಷ್ಯರನ್ನು ಬಲಿ ಕೊಡುವ ಯಜ್ಞಗಳನ್ನು ಮಾಡಿದ ಯಾಜಮಾನರು ಬದುಕುತ್ತಿದ್ದ ಲೋಕದಲ್ಲಿಯೂ ಅವನನ್ನು ಕಾಣುತ್ತಾನೆ. (ಅಶ್ವಮೇಧಂ ಕ್ರತುವರಂ ನರಮೇಧಂ ತಥೈವ ಚ, ಆಹರಂತಿ ನರಶ್ರೇಷ್ಠಾಸ್ತೇಷಾಂ ಲೋಕೇಷ್ವಪಶ್ಯತ – ಮಹಾಭಾರತ, ಶಲ್ಯ ಪರ್ವ, 49.35)
ಇತರ ಗ್ರಂಥಗಳಲ್ಲಿ
ಪುರುಷಮೇಧದ ಬಗ್ಗೆ ಶತಪಥ ಬ್ರಾಹ್ಮಣ (13.6.1 ಮತ್ತು7) ಹೀಗೆ ಹೇಳುತ್ತದೆ; ಪುರುಷ ನಾರಾಯಣನು ಹೀಗೆ ಬಯಸಿದನು: ’ನಾನು ಎಲ್ಲ ಜೀವಿಗಳನ್ನು ದಾಟಿದ್ದೇನೆ. ಇಲ್ಲಿ ಈಗ ನಾನು ಮಾತ್ರ ಎಲ್ಲವೂ (ಈ ಬ್ರಹ್ಮಾಂಡ) ಆಗಿದ್ದೇನೆ. ಅವನು ಈ ಐದು ದಿನಗಳ ಯಜ್ಞವನ್ನು ವೀಕ್ಷಿಸಿದನು, ಪುರುಷಮೇಧವನ್ನು ನೋಡಿದನು ಮತ್ತು ಅದನ್ನು ಸ್ವೀಕರಿಸಿದನು. ಅದರಿಂದ ದೇವರಿಗೆ ಅರ್ಪಣೆಯನ್ನು ಮಾಡಿದನು; ಮತ್ತು ಅರ್ಪಣೆಯನ್ನು ನಿರ್ವಹಿಸಿದ ನಂತರ ಅವನು ಎಲ್ಲ ಜೀವಿಗಳನ್ನು ದಾಟಿಹೋದನು, ಮತ್ತು ಇಲ್ಲಿ ಅವನೇ ಎಲ್ಲವೂ ಆದನು. ಮತ್ತು ನಿಜಕ್ಕೂ, ಇದನ್ನು ತಿಳಿದುಕೊಂದವನು ಪುರುಷಮೇಧ ಅಥವಾ ಇದನ್ನು ಬರಿ ತಿಳಿದುಕೊಂಡವನು ಕೂಡ ಎಲ್ಲಾ ಜೀವಿಗಳನ್ನು ದಾಟಿಹೋಗುತ್ತಾನೆ ಮತ್ತು ಇಲ್ಲಿ ಅವನೇ ಎಲ್ಲವೂ ಆಗುತ್ತಾನೆ’. ಈ ಪುರುಷಮೇಧವು ಐದು ದಿನಗಳ ಯಜ್ಞವಾಗಿರುತ್ತದೆ.
ಕಾಳಿಕಾಪುರಾಣದ ಅಧ್ಯಾಯ 71ರಲ್ಲಿ ನರಬಲಿಯ ಪ್ರಸ್ತಾಪವಿದೆ. ಅದನ್ನು ಹಾಸನದ ಸಂಸ್ಕೃತ ಪಂಡಿತರಾದ ವೆಂಕಟರಾಯರು ಕನ್ನಡಕ್ಕೆ ಅನುವಾದಿಸಿದ್ದಾರೆ ಮತ್ತು ಅದನ್ನು ನಾಲ್ಕು ಸಂಪುಟಗಳಲ್ಲಿ ಅಂದಿನ ಮೈಸೂರು ಮಹಾರಾಜರು ಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ 1944ರಲ್ಲಿ ಪ್ರಕಟಿಸಿದ್ದಾರೆ. ಅದರ ಹಲವು ಶ್ಲೋಕಗಳನ್ನು ಇಲ್ಲಿ ಗಮನಿಸಬಹುದು.
“ಖಡ್ಗಶ್ಚ ಕೃಷ್ಣಸಾರಶ್ಚ ಗೋಧಿಕಾ ಶರಭೋ ಹರಿಃ ಶಾರ್ದೂಲಶ್ಚ ನರಶ್ಚೈವ ಸ್ವಗಾತ್ರರುಧಿರಂ ತಥಾ”: ಖಡ್ಗ ಮೃಗ, ಕೃಷ್ಣ ಸಾರಂಗ, ಶರಭ, ಸಿಂಹ, ಹುಲಿ, ಮನುಷ್ಯ ಮತ್ತು ತನ್ನ (ಸಾಧಕನ) ಶರೀರದ ರಕ್ತ, ಇವುಗಳು ಬಲಿ ಕೊಡಲು ಪ್ರಶಸ್ತವಾದುವುಗಳೆಂದು ಪರಿಗಣಿಸಲ್ಪಟ್ಟಿವೆ. (71.4).
“ಮಾಸೈಕಂ ತೃಪ್ತಿಮಾಪ್ನೋತಿ ಗ್ರಾಹೈರ್ಮಾಸಾಂಸ್ತು ತ್ರೀನಥ, ಮೃಗಾನಾಂ ಶೋಣಿರ್ವೈರ್ದೇವೀ ನರಾಣಾಮಪಿ ಶೋಣಿತೈಃ”: ಮೃಗಗಳ ರಕ್ತದಿಂದಲೂ ಮನುಷ್ಯರ ರಕ್ತದಿಂದಲೂ ದೇವಿಯು ಎಂಟು ತಿಂಗಳವರೆಗೆ ತೃಪ್ತಿಯನ್ನು ಹೊಂದುವಳು. (71.7)
ಇದನ್ನೂ ಓದಿ: ’ಮಾಂಸ ಭಕ್ಷಿಸುವ ಕಾಳಿಮಾತೆ’ ವಿವಾದದ ಹಿನ್ನೆಲೆ; ಸನಾತನ ಧರ್ಮದಲ್ಲಿ ಮಾಂಸ ಭಕ್ಷಣೆಯ ಕುರುಹುಗಳು
“ನರೇಣ ಬಲಿನಾ ದೇವೀ ಸಹಸ್ರಂ ಪರಿವತ್ಸರಾನ್ ವಿಧಿದತ್ತೇನ ಚಾಪ್ನೋತಿ ತೃಪ್ತಿಂ ಲಕ್ಷಂ ತ್ರಿಭಿರ್ನರೈ. ನಾರೇಣೈವಾಥ ಮಾಂಸೇನ ತ್ರಿಸಹಸ್ರಂ ಚ ವತ್ಸರಾನ್, ತೃಪ್ತಿಮಾಪ್ನೋತಿ ಕಾಮಾಖ್ಯಾ ಭೈರವೀ ಮಮ ರೂಪಧೃಕ್”: ಒಬ್ಬ ಮನುಷ್ಯನನ್ನು ವಿಧಿಪೂರ್ವಕವಾಗಿ ಬಲಿಯಾಗಿ ಅರ್ಪಿಸುವುದರಿಂದ ದೇವಿಯು ಸಹಸ್ರ ವರ್ಷಗಳ ವರೆಗೆ ತೃಪ್ತಿಯನ್ನೈದುವಳು, ಮೂರು ಮನುಷ್ಯರನ್ನು ಬಲಿಯಾಗಿ ಅರ್ಪಿಸುವುದರಿಂದ ಒಂದು ಲಕ್ಷ ವರ್ಷಗಳವರೆಗೆ ಸಂತುಷ್ಟಳಾಗುವಳು. ನನ್ನ ರೂಪವನ್ನು ಧರಿಸಿರುವ ಭೈರವಿಯೆಂಬಕಾಮಾಖ್ಯಾ ದೇವಿಯು ನರಮಾಂಸದಿಂದ ಮೂರು ಸಹಸ್ರ ವರ್ಷಪರ್ಯಂತ ಸಂತುಷ್ಟಿಯನ್ನು ಹೊಂದುವಳು. (71.18-19).
ಪುರುಷಮೇಧದ ಬಗ್ಗೆ ಡಾ. ರವೀಂದ್ರನಾಥ ಶರ್ಮಾ ಅವರು ತಮ್ಮ ಪುಸ್ತಕ ’ಕಲ್ಚರ್ ಎಂಡ್ ಸಿವಿಲೈಸೇಶನ್ ಎಸ್ ರಿವೀಲ್ಡ ಇನ್ ಶ್ರೌತಸೂತ್ರಾಸ್’ ನಲ್ಲಿ ಹೀಗೆ ಬರೆಯುತ್ತಾರೆ; “ಪುರುಷಮೇಧವು ಅಶ್ವಮೇಧವನ್ನು ಅನೇಕ ವಿಷಯಗಳಲ್ಲಿ ಹೋಲುತ್ತದೆ. ಈ ಆಚರಣೆಯಲ್ಲಿ ಮನುಷ್ಯನನ್ನು ಬಲಿ ಕೊಡಲಾಗುತ್ತದೆ. ಬ್ರಾಹ್ಮಣ ಅಥವಾ ಕ್ಷತ್ರಿಯನಾಗಿರುವ ಪುರುಷನನ್ನು ಬಲಿ ಕೊಡಲು 1000 ಹಸುಗಳು ಮತ್ತು 100 ಕುದುರೆಗಳನ್ನು ಕೊಟ್ಟು ಖರೀದಿಸಲಾಗುತ್ತದೆ. ಅವನನ್ನು ಒಂದು ವರ್ಷದವರೆಗೆ ಸ್ವತಂತ್ರವಾಗಿ ಓಡಾಡಲು ಬಿಡಲಾಗುತ್ತದೆ. ಈ ಅವಧಿಯಲ್ಲಿ ಅವನು ಸಂಯಮವನ್ನು ಕಾಯ್ದುಕೊಳ್ಳಬೇಕು. ನಂತರ ಅವನನ್ನು ಬಲಿಕೊಡಬೇಕು. ಯಜ್ಞದ ಯಜಮಾನ ಎಲ್ಲವನ್ನೂ ತ್ಯಾಗ ಮಾಡಿ ಆಶ್ರಮಕ್ಕೆ ತೆರಳುವ ಸರ್ವಮೇಧದಲ್ಲಿ ಪುರುಷಮೇಧವು ಅತ್ಯಂತ ಉನ್ನತ ಮಟ್ಟದ ಯಜ್ಞ”.
ಒಟ್ಟಿನಲ್ಲಿ ಇಲ್ಲದಿರುವ ದೇವರನ್ನು ಒಲಿಸಲು ಇರುವ ಮನುಷ್ಯರನ್ನು ಬಲಿ ಕೊಡುವ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ.

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


