ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ತೀವ್ರ ಪ್ರತಿಭಟನೆಗಳ ನಡುವೆ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ ಕೋಲ್ಕತ್ತಾಗೆ ಆಗಮಿಸಿದ್ದಾರೆ.
ಪ್ರಧಾನ ಮಂತ್ರಿಯ ಆಗಮನದ ಕೆಲವೇ ಗಂಟೆಗಳ ಮೊದಲು ಕೋಲ್ಕತ್ತಾದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಅದರಲ್ಲೂ ವಿಶೇಷವಾಗಿ ಅವರ ಬೆಂಗಾವಲು ಹೋಗುವ ಮಾರ್ಗದಲ್ಲಿ ಗೋ ಬ್ಯಾಕ್ ಮೋದಿ ಘೋಷಣೆಗಳು ಸಿಡಿದೆದ್ದಿದ್ದವು.

ಯುವಜನರು, ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಘೋಷಣೆಗಳನ್ನು ಕೂಗಿದರು. “ಮೋದಿ ಹಿಂತಿರುಗಿ” ಎಂದು ಹೇಳುವ ಬ್ಯಾನರ್‌ಗಳ ಜೊತೆಗೆ ಕಪ್ಪು ಧ್ವಜಗಳು ಎಲ್ಲೆಡೆ ಗೋಚರಿಸುತ್ತಿದ್ದವು.
ಮಧ್ಯಾಹ್ನ 3ರ ಹೊತ್ತಿಗೆ ಎಡಪಂಥೀಯ ವಿದ್ಯಾರ್ಥಿ ಸಂಘಗಳ ಸದಸ್ಯರು ಕೋಲ್ಕತಾ ವಿಮಾನ ನಿಲ್ದಾಣದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹೋರಾಟ ಆರಂಭಿಸಿದ್ದಾರೆ.
ಶುಕ್ರವಾರ ಸಂಜೆಯಿಂದಲೇ ರಾಜ್ ಭವನದ ಹತ್ತಿರದಲ್ಲಿ ತೃಣಮೂಲ ಛಾತ್ರ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಧರಣಿ ಪ್ರದರ್ಶನದಲ್ಲಿ ಮಮತಾ ಬ್ಯಾನರ್ಜಿ ಹಾಜರಾಗಿ ಬೆಂಬಲ ಸೂಚಿಸಿದ್ದಾರೆ.
ಇಂದು ಮಧ್ಯಾಹ್ನ ಕೋಲ್ಕತ್ತಾಗೆ ಮೋದಿ ಬಂದಿಳಿದಾಗ ರಾಜ್ಯಪಾಲ ಜಗದೀಪ್ ಧಂಕರ್, ಮೇಯರ್ ಫಿರ್ಹಾದ್ ಹಕೀಮ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು ಸ್ವಾಗತ ಕೋರಿದ್ದಾರೆ.

ಮೊದಲೇ ಯೋಜಿಸಿದಂತೆ ರಾಜಭವನಲ್ಲಿ ಮೋದಿ ಇಂದು ರಾತ್ರಿ ಉಳಿಯದೇ ಬೇಲೂರು ಮಠದಲ್ಲಿ ರಾತ್ರಿ ಕಳೆಯಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಹೌರಾ ಜಿಲ್ಲೆಯ ಮಠದ ಸನ್ಯಾಸಿಗಳು ಮೋದಿಯವರ ವಾಸ್ತವ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.
ಹೊಸ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಕೋಲ್ಕತ್ತಾದ ಎರಡು ಅಧಿಕೃತ ಕಾರ್ಯಕ್ರಮಗಳಿಗೆ ಹಾಜರಾಗಿ ರಾಜಭವನಕ್ಕೆ ಹಿಂದಿರುಗಲಿದ್ದಾರೆ. ಅಲ್ಲಿ ಅವರು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ನಾಯಕರನ್ನು ಭೇಟಿ ಮಾಡುತ್ತಾರೆ ಮತ್ತು ಮಮತಾ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಮೋದಿಯವರು ರಾತ್ರಿ ಕಳೆಯಲು ಬೇಲೂರು ಮಠಕ್ಕೆ ಹೋಗುತ್ತಾರೆ.
ಹೂಗ್ಲಿ ನದಿಯ ಮಿಲೇನಿಯಮ್ ಪಾರ್ಕ್‌ನಲ್ಲಿ ಅಥವಾ ರಾಜಭವನದಲ್ಲಿ ಮಮತಾ ಬ್ಯಾನರ್ಜಿ ಮೋದಿಯವರನ್ನು ಭೇಟಿಯಾಗಬಹುದು ಎಂದು ಟಿಎಂಸಿ ಮುಖಂಡರು ಹೇಳಿದ್ದಾರೆ, ಅಲ್ಲಿ ಪ್ರಧಾನಿ ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ .


