ಗೋವಾದಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುವುದು ಮತ್ತು ಯುವಜನರಿಗೆ ಉದ್ಯೋಗ ಖಾತ್ರಿ ನೀಡಲಾಗುವುದು ಎಂದು ದೆಹಲಿ ಸಿಎಂ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈಗಾಗಲೇ 1.12 ಲಕ್ಷ ಯುವಜನರು ಉದ್ಯೋಕ ಖಾತ್ರಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 2.9 ಕುಟುಂಬಗಳು ಉಚಿತ ವಿದ್ಯುತ್ ಗಾಗಿ ನೋಂದಣಿ ಮಾಡಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಉಚಿತ ಧಾರ್ಮಿಕ ಯಾತ್ರೆಗಳನ್ನು ಆಯೋಜಿಸುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಆಪ್ ಅಧಿಕಾರಕ್ಕೆ ಬಂದರೆ ರಾಮನ ದರ್ಶನಕ್ಕೆ ಅಯೋಧ್ಯಗೆ ಕರೆದೊಯ್ಯುತ್ತೇವೆ. ಕ್ರಿಶ್ಚಿಯನ್ ಸಹೋದರರನ್ನು ವೇಲಂಕಾಣಿಗೆ ಮತ್ತು ಮುಸ್ಲಿಮರನ್ನು ಅಜ್ಮೀರ್ ಶರೀಫ್‌ಗೆ ಕರೆಯೊಯ್ಯಲಾಗುವುದು. ಬಹಳಷ್ಟು ಜನರು ಸಾಯಿ ಬಾಬಾರ ಮೇಲೆ ನಂಬಿಕೆಯಿಟ್ಟಿದ್ದಾರೆ. ಅವರಿಗೆ ಶಿರಡಿಗೆ ಉಚಿತ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಿತ್ಯ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿರುವ ಅವರು ಇದನ್ನು ಅಲ್ಲಿನ ಮಾಜಿ ರಾಜ್ಯಪಾಲರೇ ಬಹಿರಂಗವಾಗಿ ಹೇಳಿದ್ದಾರೆ ಎಂದಿದ್ದಾರೆ. ರಾಜ್ಯಪಾಲರಿಗೆ ರಾಜ್ಯದಲ್ಲಿ ಏನೇನು ನಡೆಯುತ್ತದೆ ಎಂಬುದರ ಮಾಹಿತಿ ಒಳಗಿನಿಂದಲೇ ತಿಳಿದಿರುತ್ತದೆ. ಹಾಗಾಗಿ ಇಲ್ಲಿನ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಗೆ ಸಿಎಂ ಪ್ರಮೋದ್ ಸಾವಂತ್ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಹೇಳಿದ್ದಾರೆ. ಸತ್ಯಪಾಲ್‌ರವರು ಸುಮ್ಮನೆ ಮಾತಾಡುವ ವ್ಯಕ್ತಿಯಲ್ಲ. ಗೌರವವುಳ್ಳ ವ್ಯಕ್ತಿಯಾಗಿದ್ದು ಅವರೇ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸತ್ಯಪಾಲ್ ಮಲ್ಲಿಕ್‌ರವರು ಗೋವಾ ಸಿಎಂ ವಿರುದ್ಧ ಮಾತ್ರ ಆರೋಪ ಮಾಡಿಲ್ಲ. ಕೇಂದ್ರ ಸಚಿವರ ವಿರುದ್ಧವೂ ಭ್ರಷ್ಟಾಚಾರದ ಆರೋಪವೊರಿಸಿದ್ದಾರೆ. 1947ರಿಂದ ಇಲ್ಲಿಯವರೆಗೂ ರಾಜ್ಯಪಾಲರು ತಮ್ಮದೇ ಪಕ್ಷದ ಮುಖ್ಯಮಂತ್ರಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರಲಿಲ್ಲ. ಅದು ಈಗ ಸಂಭವಿಸಿದೆ ಮತ್ತು ಬಿಜೆಪಿ ಬಹಿರಂಗವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಭಾರೀ ಭ್ರಷ್ಟಾಚಾರ: ಮೇಘಾಲಯ ರಾಜ್ಯಪಾಲರ ಗಂಭೀರ ಆರೋಪ
2017ರ ವಿಧಾನಸಭಾ ಚುನಾವಣೆಯಲ್ಲಿ ಆಪ್ ಭರ್ಜರಿಯಾಗಿ ಸಿದ್ಧತೆ ನಡೆಸಿ ಎಲ್ಲಾ 40 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿತ್ತು. ಆದರೆ ಒಂದು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕಡೆ ಠೇವಣಿ ಕಳೆದುಕೊಂಡಿತ್ತು. 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ 13 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಹಲವು ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿ ಅಧಿಕಾರ ಹಿಡಿದಿತ್ತು.
2022 ರಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಪೈಪೋಟಿ ನಡೆಸಿದರೆ, ಆಪ್ ಜೊತೆಗೆ ಟಿಎಂಸಿ ಸಹ ಕಣಕ್ಕಿಳಿದಿವೆ. ಟಿಎಂಸಿಯ ಮಮತಾ ಬ್ಯಾನರ್ಜಿಯವರು 3 ದಿನ ಗೋವಾ ಪ್ರವಾಸ ನಡೆಸಿದರೆ ಅದೇ ಸಮಯದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಸಹ ಗೋವಾದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಒಟ್ಟಿನಲ್ಲಿ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನ ಯೂನಿಟ್ ವಿದ್ಯುತ್‌ಗೆ 3 ರೂ ಕಡಿತ ಘೋಷಿಸಿದ ಸಿಎಂ ಚನ್ನಿ


