ರಾಜ್ಯಪಾಲರು ಚುನಾಯಿತ ಪ್ರತಿನಿಧಿಗಳಲ್ಲ, ವಿಷಯ ಸುಪ್ರೀಂಕೋರ್ಟ್‌ಗೆ ತಲುಪುವ ಮುನ್ನವೇ ಆಯಾ ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಮೇಲೆ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ವಿಧೇಯಕಗಳನ್ನು ಅನುಮೋದಿಸುವಲ್ಲಿ ವಿಳಂಬ ಮಾಡಿದ್ದರ ವಿರುದ್ಧ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತನ್ನ ಕಳವಳ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಪೀಠ, ಈ ಬಗ್ಗೆ ಪಂಜಾಬ್ ರಾಜ್ಯಪಾಲರು ಕೈಗೊಂಡ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.
ಬಿಲ್ ವಿಚಾರ ಸುಪ್ರೀಂಕೋರ್ಟ್‌ಗೆ ಬರುವ ಮೊದಲೇ ರಾಜ್ಯಪಾಲರು ಅದಕ್ಕೆ ಸಹಿ ಮಾಡಿ ವಿಲೇವಾರಿ ಮಾಡಬೇಕು. ರಾಜ್ಯಪಾಲರು ಸ್ವಲ್ಪ ಆತ್ಮವಲೋಕನ ಮಾಡುವ ಅಗತ್ಯವಿದೆ. ಅವರು ಜನರ ಚುನಾಯಿತ ಪ್ರತಿನಿಧಿಗಳಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.
ಪ್ರಸ್ತುತ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಂಜಾಬ್ ವಿಧಾನಸಭೆ ಅಂಗೀಕರಿಸಿದ 27 ಮಸೂದೆಗಳಲ್ಲಿ 22ಕ್ಕೆ ಪುರೋಹಿತ್ ತಮ್ಮ ಒಪ್ಪಿಗೆ ನೀಡಿದ್ದಾರೆ. ರಾಜ್ಯಪಾಲ ಪುರೋಹಿತ್ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರದ ನಡುವಿನ ಇತ್ತೀಚಿನ ಕಿತ್ತಾಟದ ಬಳಿಕ ಅ.19 ರಂದು ಪಂಜಾಬ್ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು 3 ಮಸೂದೆಗಳಿಗೆ ತಮ್ಮ ಅನುಮೋದನೆಯನ್ನು ತಡೆಹಿಡಿದಿದ್ದರು.
ಪುರೋಹಿತ್ ಅವರು ಪಂಜಾಬ್ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ತಿದ್ದುಪಡಿ ಮಸೂದೆ- 2023, ಪಂಜಾಬ್ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ- 2023 ಮತ್ತು ಇಂಡಿಯನ್ ಸ್ಟ್ಯಾಂಪ್ (ಪಂಜಾಬ್ ತಿದ್ದುಪಡಿ) ಮಸೂದೆ 2023ಕ್ಕೆ ಅನುಮೋದನೆ ನೀಡಿಲ್ಲ.
ವಿಚಾರಣೆಯ ಸಂದರ್ಭದಲ್ಲಿ ಪಂಜಾಬ್ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮೆಹ್ತಾ, ಪುರೋಹಿತ್ ಅವರು ತಮ್ಮ ಮುಂದೆ ಇಟ್ಟಿರುವ ಮಸೂದೆಗಳ ಮೇಲೆ ಕ್ರಮ ಕೈಗೊಂಡಿದ್ದಾರೆ ಮತ್ತು ರಾಜ್ಯ ಸರ್ಕಾರದ ಮನವಿಯು ಅನಗತ್ಯ ದಾವೆಯಾಗಿದೆ ಎಂದು ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿದ್ದರು.
ಇದನ್ನು ಓದಿ:ಭಾರತದ ವಿರುದ್ಧ ಹೀನಾಯ ಸೋಲು: ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ ಶ್ರೀಲಂಕಾ


