ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಮಹಾದೇವ್ ಆ್ಯಪ್ ಮತ್ತು ರೆಡ್ಡಿಅನ್ನಪ್ರೆಸ್ಟೋಪ್ರೊ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಛತ್ತೀಸ್‌ಗಢ ಸರ್ಕಾರವು ಈ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಲು ಅಧಿಕಾರ ಹೊಂದಿದ್ದರೂ ಯಾವುದೇ ಮನವಿಯನ್ನು ಕಳುಹಿಸಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದು, ಇಡಿ ಮನವಿಯ ಮೇರೆಗೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನ್ನ ಹೇಳಿಕೆಯಲ್ಲಿ ಮಹಾದೇವ್ ಆ್ಯಪ್ ಮತ್ತು ರೆಡ್ಡಿಅನ್ನಪ್ರೆಸ್ಟೊಪ್ರೊ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿ ಆದೇಶಗಳನ್ನು ಹೊರಡಿಸಿದೆ. ಅಕ್ರಮ ಬೆಟ್ಟಿಂಗ್ ಆಪ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆಗಳು ಮತ್ತು ಛತ್ತೀಸ್‌ಗಢದ ಮಹಾದೇವ್ ಬುಕ್ ಮೇಲಿನ ದಾಳಿಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಸೆಕ್ಷನ್ 69A IT ಕಾಯಿದೆಯ ಅಡಿಯಲ್ಲಿ ಆ್ಯಪ್‌ನ್ನು ಮುಚ್ಚಲು ಶಿಫಾರಸು ಮಾಡುವ ಎಲ್ಲಾ ಅಧಿಕಾರವನ್ನು ಛತ್ತೀಸ್‌ಗಢ ಸರ್ಕಾರ ಹೊಂದಿದೆ. ಆದರೆ ಅವರು ಶಿಫಾರಸು ಮಾಡಲಿಲ್ಲ ಮತ್ತು ಕಳೆದ 1.5 ವರ್ಷಗಳಿಂದ ತನಿಖೆ ನಡೆಸುತ್ತಿರುವಾಗ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ವಿನಂತಿಯನ್ನು ಮಾಡಿಲ್ಲ. ವಾಸ್ತವವಾಗಿ EDಯಿಂದ ವಿನಂತಿಯನ್ನು ಸ್ವೀಕರಿಸಲಾಗಿದೆ ಮತ್ತು ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜೀವ್ ಚಂದ್ರ ಶೇಖರ್ ಹೇಳಿದ್ದಾರೆ.
ಛತ್ತೀಸ್‌ಗಢ ಪೊಲೀಸ್ ಪಡೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಭೀಮ್ ಸಿಂಗ್ ಯಾದವ್ ಮತ್ತು ಅಸೀಮ್ ದಾಸ್ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಬಂಧನದಲ್ಲಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆಯ ನಿಯಾಮಾವಳಿಗಳ ಉಲ್ಲಂಘನೆಗಾಗಿ ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇದಕ್ಕೂ ಮೊದಲು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರಿಗೆ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರು 508 ಕೋಟಿ ನೀಡಿರುವ ಕುರಿತು ಆರಂಭಿಕ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಇಡಿ ಅಧಿಕಾರಿಗಳ ಹೇಳಿಕೆ ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಮಹಾದೇವ್ ಆ್ಯಪ್ ಮೂಲಕ ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನು ರಾಜಕಾರಣಿಗಳು, ಅಧಿಕಾರಿಗಳಿಗೆ ಲಂಚವಾಗಿ ನೀಡಲಾಗಿದೆ ಎಂದು ಇ.ಡಿ ಹಿಂದೆ ಹೇಳಿತ್ತು. ಅಲ್ಲದೆ, ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹಲವು ಪ್ರಮುಖರು, ಬಾಲಿವುಡ್ ನಟರಿಗೆ ಸಮನ್ಸ್ ಜಾರಿ ಮಾಡಿತ್ತು.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ಹಾಜರಾಗುವಂತೆ ನಟ ರಣಬೀರ್ ಕಪೂರ್, ಹಾಸ್ಯಗಾರ ಕಪಿಲ್ ಶರ್ಮ, ನಟಿಯರಾದ ಹುಮಾ ಖುರೇಷಿ ಮತ್ತು ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ನೀಡಿತ್ತು.
ಇದನ್ನು ಓದಿ: ಗುಂಡ್ಲುಪೇಟೆ: ಬಂಡೀಪುರ ಅರಣ್ಯದಲ್ಲಿ ಗುಂಡಿನ ಚಕಮಕಿ: ಯುವಕ ಬಲಿ


