ಆರು ಮಂದಿ ನಕ್ಸಲ್ ಹೋರಾಟಗಾರರು ಇಂದು (ಜ.8) ಸರ್ಕಾರದ ಮುಂದೆ ಮುಖ್ಯವಾಹಿನಿಗೆ ಬಂದಿದ್ದಾರೆ. ಹಾಗೆಯೇ ಇವರಿಗೆ ನಕ್ಸಲ್ ಪ್ಯಾಕೇಜ್ ಮೂಲಕ ಸೂಕ್ತ ಆರ್ಥಿಕ, ಕಾನೂನು ಸಹಕಾರ ನೀಡುವುದಾಗಿ ಸರ್ಕಾರ ಭರವಸೆ ಕೊಟ್ಟಿದೆ. ಹಾಗೆಯೇ ಇಂದು (ಪೆ.1, 2025)ರಂದು ಮುಖ್ಯವಾಹಿನಿಗೆ ಬಂದಿರುವ ನಕ್ಸಲ್ ರವೀಂದ್ರ ಅವರಿಗೂ ಸರಕಾರ ಇದೆ ಭರವಸೆಯನ್ನು ಕೊಟ್ಟಿದೆ.
ಆದರೆ, ಈ ಹಿಂದೆ ಮುಖ್ಯವಾಹಿನಿಗೆ ಬಂದ ನಕ್ಸಲರಿಗೆ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿದೆಯೇ? ಎಂದು ನೋಡಿದರೆ, ಬಹಳ ಶೋಚನೀಯ ಪರಿಸ್ಥಿತಿ ನಮ್ಮ ಕಣ್ಣಮುಂದೆ ಬರುತ್ತದೆ.
ಈ ಹಿಂದೆ ಕನ್ಯಾಕುಮಾರಿ, ಹೊಸಗದ್ದೆ ಪ್ರಭಾ, ಶೋಭಾ, ಶ್ರೀಮತಿ ಇವರು ಮುಖ್ಯವಾಹಿನಿಗೆ ಬಂದಿದ್ದು, ಬಿ.ಜಿ. ಕೃಷ್ಣಮೂರ್ತಿ, ರಮೇಶ್ ಮತ್ತು ಸಾವಿತ್ರಿ ಅವರನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಈ ಕಾರಣಕ್ಕೆ ಈಗಲೂ ಇವರು ಕಾನೂನು ಸಮರ ನಡೆಸುತ್ತಾ ಸಂಕಷ್ಟದ ಜೀವನ ಮಾಡುತ್ತಿದ್ದಾರೆ. ಕೆಲವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಮುಖ್ಯವಾಹಿನಿಗೆ ಬಂದು ಕಳೆದ 7-8 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಕನ್ಯಾಕುಮಾರಿ ಅವರು ಬಿಡುಗಡೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಈ ನಡುವೆ ಅವರು ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆ ಮಗು ಕೂಡ ತನ್ನ ಬಾಲ್ಯವನ್ನು ಜೈಲಿನಲ್ಲಿ ಕಳೆಯುವಂತಾಗಿದ್ದು, ವ್ಯವಸ್ಥೆಯ ಲೋಪವಾಗಿದೆ.
ಮುಖ್ಯವಾಹಿನಿಗೆ ಬಂದು ಜಾಮೀನಿನ ಮೇಲೆ ಹೊರ ಬಂದಿರುವ ನಿಲುಗುಳಿ ಪದ್ಮನಾಭ್ ಅವರು ನಾನುಗೌರಿ ಜೊತೆ ಮಾತನಾಡಿ, ವಾರದಲ್ಲಿ 3-4 ದಿನ ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಜೀವನೋಪಾಯಕ್ಕಾಗಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ಸುಮಾರು 10 ಲಕ್ಷದವರೆಗೂ ಸಾಲ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೆ ಪೊಲೀಸರಿಂದ ಬಂಧಿಸಲ್ಪಟ್ಟ ಬಿ.ಜಿ.ಕೃಷ್ಣಮೂರ್ತಿ, ರಮೇಶ್ ಮತ್ತು ಸಾವಿತ್ರಿಯವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇವರ ವಿರುದ್ಧ ಹಲವು ಪ್ರಕರಣಗಳು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ದಾಖಲಾಗಿದ್ದು, ನಿತ್ಯವೂ ನ್ಯಾಯಾಲಯಕ್ಕೆ ಅಲೆಸಲಾಗುತ್ತಿದೆ ಎಂದು ಪದ್ಮನಾಭ್ ದೂರಿದ್ದಾರೆ.

ಸರ್ಕಾರ ಜ.8ರಂದು ಮುಖ್ಯವಾಹಿನಿಗೆ ನಕ್ಸಲರ ಜೊತೆ ಈ ಹಿಂದೆ ಶರಣಾದ, ಮುಖ್ಯವಾಹಿನಿಗೆ ಬಂದ ಮತ್ತು ಬಂಧಿಸಲ್ಪಟ್ಟವರ ಕುರಿತು ವಿಶೇಷ ಮುತುವರ್ಜಿವಹಿಸಿ ಪ್ರಕರಣಗಳನ್ನು ಬಗೆಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಮತ್ತೆ ನಕ್ಸಲ್ ಹೋರಾಟ ತಲೆ ಎತ್ತಬಾರದೆಂದರೆ ನಕ್ಸಲರ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸುವುದು ಬಹಳ ಮುಖ್ಯ ಎಂದು ಈ ಹಿಂದೆ ನಕ್ಸಲ್ ಚಟುವಟಿಕೆಯಿಂದ ಮುಖ್ಯವಾಹಿನಿಗೆ ಬಂದಿರುವ ಸಿರಿಮನೆ ನಾಗರಾಜ್ ಅಭಿಪ್ರಾಯಿಸಿದ್ದಾರೆ.
ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಅವರು ಮುಖ್ಯವಾಹಿನಿಗೆ ಬಂದ ನಂತರ ಕೆಲವು ದಿನಗಳನ್ನು ಜೈಲಿನಲ್ಲಿ ಕಳೆದು, ಪ್ರಕರಣದಿಂದ ಬೇಗನೆ ಖುಲಾಸೆಗೊಂಡು ಮುಖ್ಯವಾಹಿನಿಯಲ್ಲೇ ಇದ್ದು ಚಳುವಳಿಯನ್ನು ಮುಂದುವರಿಸುತ್ತಿದ್ದೇವೆ. ನಮ್ಮಂತೆ ಇಂದು ಬಿಡುಗಡೆಯಾದ ನಕ್ಸಲರ ಜೊತೆ ಸರ್ಕಾರ ವರ್ತಿಸಬೇಕೆಂದು ಸಿರಿಮನೆ ಒತ್ತಾಯಿಸಿದ್ದಾರೆ.
ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾವಣೆ; ಸಿಎಂ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಹೋರಾಟಗಾರರು


