| ಪಿ.ಕೆ ಮಲ್ಲನಗೌಡರ್ |
ಬಳ್ಳಾರಿಯಲ್ಲಿ ಜಿಂದಾಲ್‍ಗೆ 3667 ಎಕರೆ ಭೂಮಿಯನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ನಂತರ, ಇದನ್ನು ಮರುಪರಿಶೀಲಿಸಲು ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಇಂದು ಸಭೆ ಸೇರಲಿದ್ದು ಅದು ನೀಡಲಿರುವ ಶಿಫಾರಸುಗಳು ಈ ರಾಜ್ಯದ ಜನತೆಗೆ ನ್ಯಾಯ ಒದಗಿಸಬಲ್ಲವೇ?
ಭೂಮಿ ಮಾರಾಟ ಮಾಡುವುದರಲ್ಲಿ ತಪ್ಪಿಲ್ಲ ಎಂದೋ ಅಥವಾ ಮಾರಾಟ ದರವನ್ನು ಹೆಚ್ಚಿಸಿ ಎಂದೋ ಸಮಿತಿ ಶಿಫಾರಸ್ಸು ಮಾಡಿದರೆ, ಅದು ಜನತೆಯ ಹಿತಾಸಕ್ತಿಯನ್ನು ಕಾಪಾಡುವುದೇ? ಇಂತಹ ಶಿಫಾರಸು ಬಂದರೆ ಬಿಜೆಪಿ ಮತ್ತೆ ಹೋರಾಟಕ್ಕೆ ಇಳಿಯುವುದೇ ಎಂಬ ಸಂಶಯಗಳು ಕಾಡುತ್ತಿವೆ. ಇದನ್ನು ವಿವರಿಸಲು ಈವರೆಗೆ ನಡೆದ ವಿದ್ಯಮಾನ ಮತ್ತು ನಾಟಕೀಯ ಪ್ರಸಂಗಗಳನ್ನು ನೋಡುವುದು ಅಗತ್ಯವಾಗಿದೆ.
ಬಿಜೆಪಿಯ ನಾಮಕಾವಸ್ಥೆ ಪ್ರತಿಭಟನೆ
ಏಕಾಏಕಿ ಮೇ 27ರಂದು ಸಚಿವ ಸಂಪುಟದ ಸಭೆಯಲ್ಲಿ ಜಿಂದಾಲ್ (ಜೆಎಸ್‍ಡ್ಬ್ಲೂ) ಕಂಪನಿಗೆ ಬಳ್ಳಾರಿಯಲ್ಲಿ 3,667 ಎಕರೆ ಭೂಮಿಯನ್ನು ಎಕರೆಗೆ ಒಂದು-ಒಂದೂವರೆ ಲಕ್ಷ ರೂ ದರದಲ್ಲಿ ಮಾರಲು ನಿರ್ಧರಿಸಲಾಗಿತು. ತಕ್ಷಣಕ್ಕೆ ಬಿಜೆಪಿಯಿಂದ ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಸಂಪುಟದ ಈ ನಿರ್ಧಾರವನ್ನು ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕ ಎಚ್‍ಕೆ ಪಾಟೀಲರು ಮರುದಿನವೇ ಸಾರ್ವಜನಿಕವಾಗಿಯೇ ವಿರೋಧಿಸಿ, ರಾಜ್ಯಕ್ಕೆ ಅನ್ಯಾಯ ಎಸಗುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಮುಜಖ್ಯಮಂತ್ರಿಗಳಿಗೆ ಪತ್ರ ಬರೆದರು. ಅವರ ಈ ನಿಲುವಿಗೆ ಪೂರಕವಾದ ಅಂಕಿ-ಅಂಶ ಮತ್ತು ದಾಖಲೆಗಳನ್ನು ಅವರು ಬಹಿರಂಗಪಡಿಸಿದರು. ನಾನುಗೌರಿ.ಕಾಮ್ ಮತ್ತು ಇನ್ನಿತರ ಕೆಲವು ಸುದ್ದಿಸಂಸ್ಥೆಗಳು ಹಾಗೂ ಕೆಲವು ಜನಪರ ಸಂಘಟನೆಗಳು ಈ ವಿಷಯವಾಗಿ ಸತತ ಪ್ರತಿರೋಧ ವ್ಯಕ್ತಪಡಿಸಿದ ಮೇಲಷ್ಟೇ ಬಿಜೆಪಿ ತಾನೂ ಸರ್ಕಾರದ ಈ ನಿರ್ಣಯದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಘೋಷಿಸಿ ಬೆಂಗಳೂರಿನಲ್ಲಿ ಎರಡು ದಿನ ಪ್ರತಿಭಟನೆ ನಡೆಸಿತ್ತು..

ಕಾಲಹರಣದ ಮೊರೆ ಹೋದ ಸರ್ಕಾರ
ಈ ವಿಷಯಕ್ಕೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಸಲು ಸಂಪುಟ ಸಮಿತಿ ರಚಿಸುವುದಾಗಿ ಜೂನ್ 14ರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಸರ್ಕಾರ ಉಪ ಸಮಿತಿ ರಚನೆಗೆ ತುರ್ತು ಆಸಕ್ತಿ ತೋರಲಿಲ್ಲ. ಇದನ್ನು ಪ್ರಸ್ನಿಸಬೇಕಾಗಿದ್ದ ಬಿಜೆಪಿ ಮತ್ತು ಕನ್ನಡದ ಬಹುಪಾಲು ಮೀಡಿಯಾಗಳು ನಿರಾಸಕ್ತಿ ತೋರಿದವು. ಆ ಹೊತ್ತಿಗೆ ಅವಕ್ಕೆ ಐಎಂಎ ವಂಚನೆ ವಿಷಯ ಮುಖ್ಯವಾಗಿತ್ತು.
ಮೊನ್ನೆಯಷ್ಟೇ (ಜೂನ್ 26) ಸರ್ಕಾರ ಸಂಪುಟ ಉಪಸಮಿತ ರಚಿಸಿದೆ. ಇದಕ್ಕೆ ಅಧ್ಯಕ್ಷರಾಗಿ ಗೃಹ ಸಚಿವ ಎಂ. ಬಿ ಪಾಟೀಲ್, ಸದಸ್ಯರಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್, ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇಗೌಡ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರನ್ನು ನೇಮಿಸಲಾಗಿದೆ. ವರದಿ ನೀಡಲು ಯಾವ ಕಾಲಮಿತಿಯನ್ನು ಸೂಚಿಸಿಲ್ಲ.

ಯಾವುದೇ ವ್ಯಕ್ತಿಯ ಸಾಮಥ್ರ್ಯವನ್ನು ಸುಲಭಕ್ಕೆ ಅಂದಾಜಿಸಬಾರದು ಎಂಬ ಅರಿವನ್ನು ಇಟ್ಟುಕೊಂಡು ನೋಡೋಣ. ಉದ್ಯಮಗಳಿಗೆ ಸರ್ಕಾರಿ ಭೂಮಿ ಮಾರುವ ಕುರಿತಂತೆ ಸಮಿತಿಯ ಸದಸ್ಯರಿಗೆ ನೀತಿ ನಿಯಮಗಳ ಜ್ಞಾನವಿದೆಯೇ, ಅವನ್ನೂ ಪರಿಶೀಲಿಸಿದ ನಂತರವೂ ಅವರು ಕ್ಯಾಬಿನೆಟ್ ನಿರ್ಣಯಕ್ಕೆ ವಿರೋಧವಾದ ವರದಿ ನೀಡುವರೇ? ಜಿಂದಾಲ್‍ಗೆ ಭೂಮಿ ಮಾರುವುದೇ ನ್ಯಾಯಯುತ ಎಂದು ವರದಿ ಶಿಫಾರಸು ಮಾಡಿದರೆ ಆಗಲೂ ಬಿಜೆಪಿ ಹೋರಾಟಕ್ಕೆ ಇಳಿಯುವುದೇ ಎಂಬ ಪ್ರಶ್ನೆಗಳು ಏಳುತ್ತವೆ. ಇಂದಿನ ಇಂತಹ ಬಹುತೇಕ ಸಂದರ್ಭಗಳನ್ನು ಅವಲೋಕಿಸಿದಾಗ ಇವೆಲ್ಲ ಅಸಾಧ್ಯ ಅನಿಸುತ್ತಿದೆ.
ಗೃಹ ಖಾತೆ ನೋಡಿಕೊಳ್ಳುತ್ತಿರುವ ಎಂ.ಬಿ. ಪಾಟೀಲರಿಗೆ ಈ ವಿಷಯವನ್ನು ತುರ್ತಾಗಿ ಪರಿಶೀಲಿಸಲು ಅಗತ್ಯವಾದ ಅಧ್ಯಯನ ಮಾಡಲು ಆಸಕ್ತಿ ಇರುವಂತೆ ಕಾಣುತ್ತಿಲ್ಲ. ಲಿಂಗಾಯತ ಧರ್ಮದ ಹೋರಾಟದಲ್ಲೂ ಆಗಾಗ ಕಾಣಿಸಿಕೊಳ್ಳುವ ಅವರಿಗೆ ಪುರುಸೊತ್ತೂ ಇಲ್ಲ. ಸಚಿವ ಕಾಶೆಂಪುರರಿಗೆ ಅಂತಹ ಸ್ಪೀಡು ಮತ್ತು ಚಾಕಚಕ್ಯತೆಯೂ ಇಲ್ಲ. ತನ್ನ ಗುಟ್ಟು ಮುಚ್ಚಿಕೊಳ್ಳಲು ಕಾಂಗ್ರೆಸ್ ಪ್ರಿಯಾಂಕ ಖರ್ಗೆಯವರನ್ನು ಹತೋಟಿ ಮಾಡಬಲ್ಲದು. ಮಿಗಿಲಾಗಿ ಅನನುಭವಿ ಪ್ರಿಯಾಂಕರಿಗೆ ಇದು ಗಂಭೀರ ವಿಷಯವೂ ಅಲ್ಲ. ಅಧ್ಯನಯನಶೀಲ ಸ್ವಭಾವದ, ಪಕ್ಷಪಾತಿಯಲ್ಲದ, ಈ ವಿವಾದದ ಹಿಂದಿನ ಹಿಕ್ಮತ್ತುಗಳನ್ನು ಶೀಘ್ರವಾಗಿ ಅರಿಯಬಲ್ಲ ತಾಕತ್ತಿರುವ ಕೃಷ್ಣ ಭೈರೇಗೌಡ ಒಬ್ಬರೇ ಏನು ಮಾಡಲು ಸಾಧ್ಯ?
ಹೀಗಾಗಿ, ಪಬ್ಲಿಕ್ ಮೆಮರಿ ಇಸ್ ಶಾರ್ಟ್ ಎನ್ನುವಂತೆ ಜನ ಈ ವಿಷಯವನ್ನು ಮರೆಯುತ್ತಾರೆ, ಮಾಧ್ಯಮಗಳು ಜಾಣ ಮರೆವು ಪ್ರದರ್ಶಿಸುತ್ತವೆ. ಜಿಂದಾಲ್ ಪರವಾಗಿರುವ ಎಲ್ಲ ಪಕ್ಷಗಳ ಲಾಬಿ ಕಾರ್ಯಾಚರಣೆಗೆ ಇಳಿಯುತ್ತದೆ. ಒಂದಿ ದಿನ ಯಾವ ದೊಡ್ಡ ಸುದ್ದಿಯಾಗದೇ ಜಿಂದಾಲ್‍ಗೆ ಕ್ರಯಪತ್ರವನ್ನು ಸರ್ಕಾರ ಹಸ್ತಾಂತರಿಸುತ್ತದೆ. ಅಲ್ಲಿಗೇ ಎಲ್ಲವೂ ‘ಸರಿ’ಯಾಗಿರುತ್ತದೆ!
ಸರ್ಕಾರಕ್ಕೆ ಮರುಪರಿಶೀಲನೆಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಸಂಪುಟ ಉಪಸಮಿತಿ ಬದಲು ಸದನ ಸಮಿತಿ ರಚಿಸಬೇಕಿತ್ತು. ಹಾಗೆ ಮಾಡಿ ಎಂದು ಒತ್ತಾಯಿಸಬೇಕಾಗಿದ್ದ ಬಿಜೆಪಿಯೇ ಚಕಾರ ಎತ್ತಲಿಲ್ಲ. ಈ ವಿಷಯ ಕುರಿತು ಮೊದಲಿಗೆ ದಾಖಲೆ ಸಮೇತ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಸದಸನ ಸಮಿತಿ ರಚಿಸಬಹುದಿತ್ತಲ್ಲ? ಹೀಗೆ ಮಾಡಿ ಎಂದು ಬಿಜೆಪಿಯೂ ಕೇಳಲಿಲ್ಲವಲ್ಲ? ಆದರೂ ಇಂದು ಏನಾಗುತ್ತೆ ನೋಡೋಣ..


