Homeಕರ್ನಾಟಕಒಳಮೀಸಲಾತಿಯ ಒಳಸುಳಿಗಳು

ಒಳಮೀಸಲಾತಿಯ ಒಳಸುಳಿಗಳು

- Advertisement -
- Advertisement -

ಕಳೆದ ಆಗಸ್ಟ್ ತಿಂಗಳ ಕೊನೆಯಲ್ಲಿ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿಯ ಒಳವರ್ಗೀಕರಣ ಮಾಡಿ ಹೊರಡಿಸಿರುವ ಸರ್ಕಾರಿ ಆದೇಶದೊಂದಿಗೆ, ಕಳೆದ ಮೂರು ನಾಲ್ಕು ದಶಕಗಳಿಂದ ಮಾದಿಗ ಸಮುದಾಯವು ಮುಖ್ಯವಾಗಿ ನಡೆಸಿಕೊಂಡು ಬಂದ ಹೋರಾಟವು ಒಂದು ಬಗೆಯ ತಾರ್ಕಿಕ ಅಂತ್ಯವನ್ನು ಕಂಡಿದೆ. ಮೀಸಲಾತಿ ಒಳ ವರ್ಗಿಕರಣ ಮಾಡುವ ಮೂಲಕ ಸರ್ಕಾರವು ತನ್ನ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರದ ದಾರಿ ಕಂಡುಕೊಂಡಿತಾದರೂ ಈ ಆದೇಶಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಮತ್ತು ಭಾವನೆಗಳು ತುಂಬಾ ವಿಭಿನ್ನವಾಗಿವೆ. ಅಸಮಾಧಾನದ ಕುದಿ ಒಳಗೊಳಗೇ ಇದ್ದರೂ ಕೆಲವು ಸಲ ಚಿಮ್ಮಿ ಬೀದಿಗೆ ಬರುತ್ತಿದೆ.

ತನ್ನ ಪಾಲಿನ ಮೀಸಲಾತಿಯು ತನಗೆ ಸಿಗಬೇಕೆಂದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಹಳ ಸುದೀರ್ಘವಾಗಿ ಮತ್ತು ಗಂಭೀರವಾಗಿ ನಡೆಸಿದ ಈ ಒಳಮೀಸಲಾತಿ ಹೋರಾಟದಲ್ಲಿ ಅಸ್ಪೃಶ್ಯತೆಯ ಶಿಲುಬೆಯನ್ನು ಹೊತ್ತುಕೊಂಡೇ ಹೆಣಗುವ ಮಾದಿಗ ಸಮುದಾಯಕ್ಕೆ ಮೇಲ್ನೋಟಕ್ಕೆ ತಾನು ಅಂದುಕೊಂಡ ಗುರಿ ಸಾಧಿಸುವಲ್ಲಿ ಜಯಗಳಿಸಿದಂತೆ ಕಂಡರೂ ತಾನು ಪಡೆದುಕೊಂಡ ಮೀಸಲಾತಿಯ ಪಾಲಿನ ಬಗ್ಗೆ ಖಚಿತವಾಗಿ ಏನೂ ಹೇಳಲಾಗದ ಸ್ಥಿತಿಯಲ್ಲಿದೆ. ಪ್ರಾರಂಭದಿಂದಲೂ ಮೀಸಲಾತಿಯ ಒಳವರ್ಗೀಕರಣವನ್ನು ಪ್ರಬಲವಾಗಿ ವಿರೋಧಿಸಿದ ಪರಿಶಿಷ್ಟ ಜಾತಿಪಟ್ಟಿಯಲ್ಲಿನ ಇತರೆ ಸಮುದಾಯಗಳು ಈಗ ತಮಗೆ ದಕ್ಕಿರುವ ಮೀಸಲಾತಿಯ ಪಾಲಿನ ಬಗೆಗೆ ಅತೃಪ್ತಿಯ ಆಕ್ರೋಶವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ತಮ್ಮತಮ್ಮ ಶಕ್ತಾನುಸಾರ ಸಂಘಟನಾತ್ಮಕವಾಗಿ ಹೋರಾಡುತ್ತಿವೆ. ಬಲಿಷ್ಟ ಜಾತಿಗಳ ನಡುವೆ ಮೀಸಲಾತಿಯ ವರ್ಗೀಕರಣದ ಪಾಲನ್ನು ಪ್ರತ್ಯೇಕ ಗುಂಪಾಗಿ ಪಡೆಯುವಲ್ಲಿ ಸೋತಿರುವ ಅಲೆಮಾರಿ ಸಮುದಾಯಗಳು ಈಗ ಹೋರಾಟದ ಕಣದಲ್ಲಿ ತೀವ್ರತರವಾಗಿ ತೊಡಗಿಕೊಂಡು ಸರ್ಕಾರ ಮತ್ತು ಸಮಾಜದ ಮುಂದೆ ತಮ್ಮ ನೈತಿಕವಾದ ಪ್ರಶ್ನೆಯನ್ನು ಇರಿಸಿವೆ.

ಸಂವಿಧಾನಬದ್ಧ ಮೀಸಲಾತಿಯನ್ನು ಪಡೆಯುವಲ್ಲಿ ತನಗೆ ಆಗಿರುವ ಚಾರಿತ್ರಿಕ ಅನ್ಯಾಯದ ವಿರುದ್ಧ ಮಾದಿಗ ಸಮುದಾಯವು ಕಂಡುಕೊಂಡಿದ್ದ ಉತ್ತರವೆಂದರೆ ಮೀಸಲಾತಿ ಒಳ ವರ್ಗೀಕರಣ. ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಸಮುದಾಯವು ಮೀಸಲಾತಿ ಪಡೆಯುವಲ್ಲಿ ತನಗೆ ಅನ್ಯಾಯವಾಗಿದೆ, ಸರ್ಕಾರಿ ಉದ್ಯೋಗಗಳು ಹಾಗೂ ಸವಲತ್ತುಗಳಲ್ಲಿ ಮಾದಿಗ ಸಮುದಾಯಕ್ಕೆ ಸಿಗಬೇಕಾಗಿದ್ದ ಪ್ರಮಾಣದಷ್ಟು ಪ್ರಾತಿನಿಧ್ಯವು ಸಿಗಲಿಲ್ಲ ಎಂದು 90ರ ದಶಕದಲ್ಲಿ ಶುರು ಮಾಡಿದ ಹೋರಾಟಕ್ಕೆ ಈಗ ಭರ್ತಿ 30 ವರ್ಷಗಳು ತುಂಬಿವೆ.

ಮಾದಿಗ ಸಮುದಾಯವು ಕರ್ನಾಟಕ ರಾಜ್ಯಾದ್ಯಂತ ತನ್ನ ಹೋರಾಟದಲ್ಲಿ ಅನುಭವಿಸಿದ ಹಿನ್ನಡೆಯ ವಿರುದ್ಧ ಆಗಾಗ್ಗೆ ಬೃಹತ್ ಸಮಾವೇಶಗಳು, ಪ್ರತಿಭಟನೆಗಳು, ಕಾಲ್ನಡಿಗೆ ಜಾಥಾಗಳು ಸೇರಿದಂತೆ ಹಲವು ಬಗೆಯ ಪ್ರತಿಭಟನೆಗಳನ್ನು ಮಾಡಿ ತನ್ನ ಹಕ್ಕಿನ ಪ್ರಶ್ನೆಯನ್ನು ಸರ್ಕಾರ ಮತ್ತು ಜನತೆಯ ಮುಂದೆ ಇರಿಸಿತ್ತು. ಮಾದಿಗರ ಹೋರಾಟದ ಒತ್ತಡಕ್ಕೆ ಮಣಿದ ಸರ್ಕಾರಗಳು ಇದುವರೆಗೆ ಎರಡು ಆಯೋಗಗಳು ಮತ್ತು ಒಂದು ಕ್ಯಾಬಿನೆಟ್ ಉಪ ಸಮಿತಿಯನ್ನು ನೇಮಕ ಮಾಡಿ, ಪರಿಶಿಷ್ಟ ಜಾತಿಗಳ ನಡುವೆ ಒಳ ಮೀಸಲಾತಿ ಒಳವರ್ಗೀಕರಣದ ಸಾಧ್ಯತೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಕೇಳಿದ್ದವು. ಅದರಂತೆ ಎರಡೂ ಆಯೋಗಗಳು ಮತ್ತು ಒಂದು ಕ್ಯಾಬಿನೆಟ್ ಉಪಸಮಿತಿಯು ತಮ್ಮ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿವೆ.

ಪಂಜಾಬ್ ರಾಜ್ಯ ಮತ್ತು ಇತರರು ವರ್ಸಸ್ ದವೀನರ್ ಸಿಂಗ್ ಪ್ರಕರಣದಲ್ಲಿ ಆಗಸ್ಟ್ 1 2024ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನುಸಾರ, ಒಳಮೀಸಲಾತಿ ಅನುಷ್ಠಾನದ ಬಗ್ಗೆ ನಿರ್ಧಾರ ಕೈಗೊಳ್ಳಲು ಕರ್ನಾಟಕ ಸರ್ಕಾರದಿಂದ ರಚನೆಗೊಂಡ ಜಸ್ಟಿಸ್ ಎಚ್‌ಎನ್ ನಾಗಮೋಹನದಾಸ್ ಏಕಸದಸ್ಯ ಆಯೋಗವು ಕರ್ನಾಟಕದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸಿತು. ಅದರಂತೆ ಪರಿಶಿಷ್ಟಜಾತಿಯ ಎಲ್ಲಾ 101 ಜಾತಿಗಳನ್ನು 5 ಗುಂಪುಗಳಾಗಿ ವಿಂಗಡಿಸಿ, ಪ್ರತಿ ಗುಂಪಿನ ಜನಸಂಖ್ಯೆ, ಆ ಗುಂಪಿನ ಸಾಮಾಜಿಕ ಹಿಂದುಳಿದಿರುವಿಕೆ, ಮತ್ತು ಆ ಗುಂಪು ಪಡೆದಿರುವ ಸರ್ಕಾರಿ ಉದ್ಯೋಗ ಮತ್ತು ಸವಲತ್ತುಗಳಲ್ಲಿ ಪಡೆದಿರುವ ಪ್ರಾತಿನಿಧ್ಯದ ಪ್ರಮಾಣ ಮುಂತಾದ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿ ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಿ ಆಗಸ್ಟ್ 4, 2025ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

ಆಯೋಗದ ವರದಿಯನ್ನು ಸ್ವೀಕರಿಸಿದ ಸರ್ಕಾರವು ಆಗಸ್ಟ್ 25ರಂದು ಅಧಿಕೃತ ಆದೇಶ ಹೊರಡಿಸಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಎಲ್ಲಾ 101 ಜಾತಿಗಳನ್ನು ನಾಗಮೋಹನದಾಸ್ ಆಯೋಗದ ಪ್ರಕಾರ ಮಾಡಲಾಗಿದ್ದ ಐದು ಪ್ರವರ್ಗಗಳ ಬದಲಾಗಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮೂರು ಗುಂಪುಗಳಾಗಿ ವಿಂಗಡಿಸಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17 ಮೀಸಲಾತಿಯನ್ನು ಈ ಮೂರು ಗುಂಪುಗಳಿಗೆ ಹಂಚಿಕೆ ಮಾಡಿತು.

ಅಸ್ಪೃಶ್ಯತೆಯ ಶೂಲದ ಮೇಲೆ ನಿಲ್ಲಿಸಲಾಗಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ 16 ಜಾತಿಗಳನ್ನು ಪ್ರವರ್ಗ-ಎ ಗುಂಪಿಗೆ ಸೇರಿಸಿ, ಶೇ 6 ಮೀಸಲಾತಿಯನ್ನು ನಿಗದಿಪಡಿಸಿದೆ. ಹೊಲೆಯ ಮತ್ತು ಹೊಲೆಯ ಸಂಬಂಧಿತ 19 ಜಾತಿಗಳನ್ನು ಪ್ರವರ್ಗ-ಬಿಚಿಣiಗೆ ಸೇರಿಸಿ ಶೇ.6 ಮೀಸಲಾತಿಯನ್ನು ನಿಗದಿಪಡಿಸಿದೆ. ಅತಿ ಸೂಕ್ಷ್ಮ ಸಮುದಾಯಗಳಾದ ಸುಮಾರು 49 ಅಲೆಮಾರಿ ಸಮುದಾಯಗಳನ್ನು ಸಮಾಜದಲ್ಲಿ ಸ್ಪೃಶ್ಯ ಜಾತಿಗಳು ಎಂದೇ ಕರೆಸಿಕೊಳ್ಳುವ ಲಂಬಾಣಿ ಭೋವಿ ಕೊರಚ ಕೊರಮ ಮತ್ತು ಅವುಗಳ ಸಂಬಂಧಿತ ಜಾತಿಗಳ ಜೊತೆಗೆ ಸೇರಿಸಲಾಗಿದೆ. ಈ ಸ್ಪೃಶ್ಯ ಸಮುದಾಯಗಳು ಮತ್ತು ಅಲೆಮಾರಿಗಳೂ ಸೇರಿದಂತೆ 63 ಜಾತಿಗಳನ್ನು ಪ್ರವರ್ಗ-ಸಿ ಗುಂಪಿಗೆ ಸೇರಿಸಿ, ಈ ಗುಂಪಿಗೆ ಶೇಕಡ 5 ಮೀಸಲಾತಿಯನ್ನು ನಿಗದಿಪಡಿಸಿದೆ.

ನಾಗಮೋಹನ ದಾಸ್ ಆಯೋಗದಲ್ಲಿ ಏನಿತ್ತು?

ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟ ನಾಗಮೋಹನದಾಸ್ ಆಯೋಗವು ನೀಡಿದ ವರದಿಯು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಲ್ಲ 101 ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ, ಪರಿಶಿಷ್ಟ ಜಾತಿಗಳಿಗೆ ನಿಗದಿಯಾಗಿರುವ ಶೇಕಡ 17ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿತ್ತು. ಈ ಐದು ಗುಂಪುಗಳನ್ನು ಗುರುತಿಸುವಾಗ ಅನುಸರಿಸಿದ ಮುಖ್ಯವಾದ ಮಾನದಂಡಗಳೆಂದರೆ- ಯಾವ್ಯಾವ ಪ್ರವರ್ಗಗಳ ಜನಸಂಖ್ಯೆ ಎಷ್ಟೆಷ್ಟು? ಆಯಾ ಪ್ರವರ್ಗದವರ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಯಾವ ಪ್ರಮಾಣದಲ್ಲಿದೆ? ಯಾವ್ಯಾವ ಸಮುದಾಯಗಳು ಎಷ್ಟೆಷ್ಟು ಸರಕಾರಿ ಉದ್ಯೋಗ ಮತ್ತು ಸವಲತ್ತುಗಳನ್ನು ಪಡೆದಿವೆ ಎಂಬ ಸಂಗತಿಗಳ ಬಹಳ ಸೂಕ್ಷ್ಮ ಅಧ್ಯಯನ. ಶೇ.17ರ ಮೀಸಲಾತಿಯನ್ನು ಆ 5 ಪ್ರವರ್ಗಗಳಿಗೆ ಹಂಚಿಕೆ ಮಾಡಿತ್ತು. ಈ ಹಂಚಿಕೆಗೆ ಸಂಬಂಧಿಸಿದಂತೆ ವರದಿಯಲ್ಲಿ ಹೇಳಲಾಗಿರುವ ಮಾಡಲಾಗಿರುವ ಸಮರ್ಥನೆ ಹೀಗಿತ್ತು.

“ಪ್ರವರ್ಗಗಳಿಗೆ ಮೀಸಲಾತಿಯನ್ನು ಹಂಚಿಕೆ ಮಾಡಬೇಕಾದರೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಬೇಕು. ಆದರೆ ಕೇವಲ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿದರೆ ಸಾಮಾಜಿಕ ನ್ಯಾಯದ ಗುರಿ ಸಾಧಿಸಲು ಸಾಧ್ಯವಿಲ್ಲ. ಜನಸಂಖ್ಯೆಯ ಜೊತೆಗೆ ಶೈಕ್ಷಣಿಕ ಉದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಬೇಕಾಗಿದೆ. ಕಳೆದ 75 ವರ್ಷಗಳಲ್ಲಿ ಪರಿಶಿಷ್ಟ ಜಾತಿಯ ಕೆಲವು ಜಾತಿಗಳು ಮೀಸಲಾತಿ ಸೌಲಭ್ಯಗಳನ್ನು ಅನುಭವಿಸಿಕೊಂಡು ಸ್ವಲ್ಪಮಟ್ಟಿಗೆ ಸಬಲೀಕರಣಗೊಂಡಿವೆ. ಆದರೆ ಇದೇ ಪರಿಶಿಷ್ಟ ಜಾತಿಯ ಕೆಲವು ಜಾತಿಗಳ ಜನರ ಜೀವನ ಇಂದಿಗೂ ಹೀನಾಯವಾಗಿದೆ. ಇವರ ಮತ್ತು ಇವರ ಮಕ್ಕಳ ಶೈಕ್ಷಣಿಕ ಮಟ್ಟ ಬಹಳ ಕಡಿಮೆ ಇದೆ. ತತ್ಪರಿಣಾಮವಾಗಿ ಉನ್ನತ ಶಿಕ್ಷಣವಿಲ್ಲ ಮತ್ತು ಸರ್ಕಾರಿ ಉದ್ಯೋಗವಿಲ್ಲ. ಇಂತಹ ಜಾತಿಗಳ ಶೈಕ್ಷಣಿಕ, ಉದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಮೀಸಲಾತಿಯ ಪ್ರಮಾಣವನ್ನು ಹಂಚಬೇಕಾಗಿದೆ.

ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಕೆಲವು ಜಾತಿಗಳಲ್ಲಿ ಶೈಕ್ಷಣಿಕ, ಔದ್ಯೋಗಿಕ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾದ ಚಲನಶೀಲತೆಯನ್ನು ಕಾಣಬಹುದು. ಅದೇ ಸಮಯದಲ್ಲಿ ಕೆಲವು ಜಾತಿಗಳಿಗೆ ಮೀಸಲಾತಿಯ ಸವಲತ್ತು ತಲುಪಲೇ ಇಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಉತ್ತಮ ಸ್ಥಿತಿಯಲ್ಲಿರುವವರು ತಮಗಿಂತ ವಂಚಿತರಾದವರಿಗೆ ಎಳ್ಳಷ್ಟು ತ್ಯಾಗ ಮಾಡಬೇಕಾಗಿದೆ. ಈ ನೀತಿಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡಬೇಕು.”

ಮೇಲ್ಕಂಡ ಅತ್ಯಂತ ಮಾನವೀಯವಾದ, ಸಾಮಾಜಿಕ ನ್ಯಾಯದ ಪರವಾದ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ಬಹಳ ಹತ್ತಿರವಿರುವ ಈ ಒಳನೋಟಗಳನ್ನು ಗಮನದಲ್ಲಿರಿಸಿಕೊಂಡು ಐದು ಪ್ರವರ್ಗಗಳನ್ನು ಸೃಷ್ಟಿಸಿದ ನಾಗಮೋಹನದಾಸ್ ಆಯೋಗವು ಶೇಕಡ 17 ಮೀಸಲಾತಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಿತ್ತು.

59 ಜಾತಿಗಳ ಪ್ರವರ್ಗ-ಎಗೆ ಶೇ.1
18 ಜಾತಿಗಳ ಪ್ರವರ್ಗ-ಬಿಗೆ ಶೇ. 6
17 ಜಾತಿಗಳ ಪ್ರವರ್ಗ-ಸಿಗೆ ಶೇ.5
4 ಜಾತಿಗಳ ಪ್ರವರ್ಗ-ಡಿಗೆ ಶೇ.4
3 ಜಾತಿಗಳ ಪ್ರವರ್ಗ-ಇಗೆ ಶೇ. 1

ನಾಗಮೋಹನದಾಸ್ ಆಯೋಗವು ನೀಡಿರುವ ವರದಿಯು ಸಕಾರಾತ್ಮಕ ತಾರತಮ್ಯದ ಆಧಾರದ ಮೇಲೆ ಪ್ರವರ್ಗಗಳನ್ನು ಸೃಷ್ಟಿಸಿ, ಅವುಗಳ ಜನಸಂಖ್ಯೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆ ಹಾಗೂ ಸರ್ಕಾರಿ ಉದ್ಯೋಗಗಳು ಮತ್ತು ಸವಲತ್ತುಗಳಲ್ಲಿ ಆ ಪ್ರವರ್ಗಗಳು ಈಗಾಗಲೇ ಪಡೆದಿರುವ ಪ್ರಾತಿನಿಧ್ಯವನ್ನು ಗಮನದಲ್ಲಿರಿಸಿಕೊಂಡು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ?

2024ರ ಆಗಸ್ಟ್ ಒಂದರಂದು ಪರಿಶಿಷ್ಟ ಜಾತಿಗಳ ವರ್ಗೀಕರಣ ಮತ್ತು ಅವುಗಳ ನಡುವೆ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನೀಡಿದ ಐತಿಹಾಸಿಕ ತೀರ್ಪು ಈ ದೇಶದಲ್ಲಿ ಶೋಷಿತರಲ್ಲಿಯೇ ಶೋಷಿತರಾದ ಮತ್ತು ವಂಚಿತರಲ್ಲಿಯೇ ವಂಚಿತರಾದ ಸಮುದಾಯಗಳ ಪಾಲಿಗೆ ಬಹಳ ದೊಡ್ಡ ಭರವಸೆಯಾಗಿ ಕಂಡಿತ್ತು. ಸುಪ್ರೀಂಕೋರ್ಟಿನ ತೀರ್ಪಿನಲ್ಲಿ, “ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪಟ್ಟಿ ಮಾಡಲಾಗಿರುವ ಪರಿಶಿಷ್ಟ ಜಾತಿಗಳನ್ನು ಗುಂಪುಗಳಾಗಿ ವಿಂಗಡಿಸಬಹುದಾಗಿದೆ ಮತ್ತು ಈ ಗುಂಪುಗಳಿಗೆ ಸಂವಿಧಾನದ 15(4) ಮತ್ತು 16(4) ನೇ ವಿಧಿಗಳ ಅನುಸಾರ ನೀಡಲಾದ ಮೀಸಲಾತಿಯನ್ನು ಹಂಚಿಕೆ ಮಾಡಬಹುದಾಗಿದೆ” ಎಂಬುದನ್ನು ಎತ್ತಿಹಿಡಿಯಲಾಗಿತ್ತು. ಸುಪ್ರೀಂಕೋರ್ಟ್‌ನ ಈ ತೀರ್ಪು ಅಸಹಾಯಕ ಮತ್ತು ತಬ್ಬಲಿ ಸಮುದಾಯಗಳು ಪಡೆದುಕೊಂಡ ಬಹಳ ದೊಡ್ಡ ಜೀವದಾನ ಎಂದರೆ ಅತಿಶಯೋಕ್ತಿಯಾಗಲಾರದು.

ಇಂತಹ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟು ಪರಿಶಿಷ್ಟ ಜಾತಿಗಳ ವರ್ಗೀಕರಣ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂಬ ನಿರ್ದೇಶನವನ್ನು ನೀಡಿದೆ.

  1. ಪರಿಶಿಷ್ಟ ಜಾತಿಗಳನ್ನು ಗುಂಪುಗಳನ್ನಾಗಿ ವರ್ಗೀಕರಿಸುವ ಸಂದರ್ಭದಲ್ಲಿ ನಿಖರವಾದ ದತ್ತಾಂಶಗಳಿರಬೇಕು
  2. ಜಾತಿಗಳ ಗುಂಪುಗಳನ್ನು ಮಾಡುವಾಗ ಅವುಗಳ ಬಹುರೂಪತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು
  3. ಪ್ರತಿ ಜಾತಿ ಗುಂಪಿನ ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕು
  4. ಪ್ರಾತಿನಿಧ್ಯವನ್ನು ಸರ್ಕಾರಿ ಉದ್ಯೋಗಗಳು ಮತ್ತು ಸವಲತ್ತುಗಳಲ್ಲಿ ಪಡೆದಿರುವ ಸೌಲಭ್ಯಗಳನ್ನು ಗಮನಿಸಿಕೊಂಡು ಗುಂಪುಗಳನ್ನು ಮತ್ತು ಮೀಸಲಾತಿ ಹಂಚಿಕೆಯನ್ನು ಮಾಡುವುದು
  5. ಈ ಒಳ ವರ್ಗಿಕರಣವು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ.

ಆದರೆ ಆಗಿದ್ದೇನು?

ಕರ್ನಾಟಕ ಸರ್ಕಾರ ನಾಗಮೋಹನದಾಸ್ ಆಯೋಗದ ವರದಿಯನ್ನು ಪರಿಗಣಿಸಿ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಮುಂದಾದಾಗ, ಕೆಲವು ಪರಿಶಿಷ್ಟ ಜಾತಿಗಳ ರಾಜಕಾರಣಿಗಳು ಮತ್ತು ಹೋರಾಟಗಾರರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದನ್ನು ಇಡೀ ರಾಜ್ಯದ ಜನರ ಗಮನಕ್ಕೆ ಬಂದಿತು. ಪ್ರವರ್ಗಗಳ ವಿಂಗಡಣೆಗೆ ಸಂಬಂಧಿಸಿದಂತೆ ವರದಿಯ ಎಲ್ಲಾ ಆಶಯಗಳ ಪೈಕಿ ಕೇವಲ ಜನಸಂಖ್ಯೆಯ ಪ್ರಮಾಣದ ಮಾನದಂಡವನ್ನು ಮಾತ್ರ ಪರಿಗಣಿಸುವಂತೆ ಒತ್ತಡ ಹಾಕಿದ್ದು ಎಲ್ಲರಿಗೂ ತಿಳಿದಿದೆ. ಕೇವಲ ತಮ್ಮ ಜಾತಿಗಳು ಇರುವ ಪ್ರವರ್ಗದ ಜನಸಂಖ್ಯೆಯು ಉಳಿದೆಲ್ಲ ಪ್ರವರ್ಗಗಳ ಜನಸಂಖ್ಯೆಗಿಂತ ಜಾಸ್ತಿ ಇರಬೇಕು ಮತ್ತು ತಮ್ಮ ಪ್ರವರ್ಗಕ್ಕೆ ನೀಡಿರುವ ಮೀಸಲಾತಿಯ ಪ್ರಮಾಣವೂ ಜಾಸ್ತಿ ಆಗಬೇಕು ಎಂಬ ಒಂದಂಶಕ್ಕೆ ಪಟ್ಟು ಹಿಡಿದು ಕೂರಲಾಯಿತು.

ಹೀಗೆ ಪಟ್ಟು ಹಿಡಿದು ಕೂತವರ ಪ್ರಜ್ಞೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಸಾಮಾಜಿಕ ನ್ಯಾಯದ ಪರಿಕಲ್ಪನೆಗಾಗಲೀ, ಭಾರತ ಸಂವಿಧಾನದ ಪ್ರಜಾಪ್ರಭುತ್ವದ ಆಶಯಗಳಿಗಾಗಲೀ ಖಂಡಿತ ಯಾವ ಜಾಗವೂ ಇರಲಿಲ್ಲ. ಕೆಲವು ದಲಿತ ರಾಜಕಾರಣಿಗಳು ಪ್ರವರ್ಗಗಳ ವಿಂಗಡಣೆ ಮತ್ತು ಅವುಗಳಿಗೆ ಮಾಡಿದ ಮೀಸಲಾತಿ ಹಂಚಿಕೆಯ ಸಂದರ್ಭದಲ್ಲಿ ಮಾತ್ರ ಬಾಬಾಸಾಹೇಬರನ್ನು ಮರೆತದ್ದು ಆತ್ಮ ವಂಚನೆಯೇ ಸರಿ.

ಪ್ರಬಲ ಜಾತಿಗಳು ರಾಜಕೀಯ ಮೇಲಾಟವನ್ನು ತೋರಿಸಬೇಕಾದ ಸಂದರ್ಭ ಬಂದಾಗಲೆಲ್ಲ ತಮ್ಮ ಜಾತಿಗಳಿಗಿರುವ ಆಸ್ತಿ ಹಣ ಮತ್ತು ತೋಳು ಬಲಗಳನ್ನು ಒಟ್ಟಾಗಿ ಬಳಸಿ, ಸಾಮಾಜಿಕ ಶ್ರೇಣಿಯಲ್ಲಿ ತಮಗಿಂತ ಕೆಳಗಿರುವ ದುರ್ಬಲ ಸಮುದಾಯಗಳ ಬಾಯಿ ಮುಚ್ಚಿಸಿ ಹುಟ್ಟಡಗಿಸಿರುವುದು ಚರಿತ್ರೆಯುದ್ದಕ್ಕೂ ನಡೆದುಕೊಂಡೇ ಬಂದಿದೆ. ಪ್ರಬಲ ಜಾತಿಗಳ ಒಟ್ಟು ಚಿಂತನೆ ಮತ್ತು ಹೋರಾಟಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳಾಗಲಿ ಸಾಮಾಜಿಕ ನ್ಯಾಯದ ದನಿಯಾಗಲಿ ಎಂದಿಗೂ ಇರುವುದಿಲ್ಲ. ಮೇಲ್ಜಾತಿಗಳ ಸೀಮಿತವಾದ ಆಶಯ ಎಂದರೆ ತಮ್ಮ ಜಾತಿ ಜನಸಂಖ್ಯೆಯನ್ನು ಉಳಿದ ಜಾತಿಗಳಿಗಿಂತ ಹೆಚ್ಚಿದೆ ಎಂದು ಬಿಂಬಿಸಿಕೊಳ್ಳುವುದು, ತಮ್ಮ ಜಾತಿಗಳಲ್ಲಿ ಸಂಗ್ರಹಗೊಂಡಿರುವ ಅಪಾರವಾದ ಭೂಮಿ, ಬಂಡವಾಳ ಮತ್ತು ಅಧಿಕಾರಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮತ್ತು ಆ ಮೂಲಕ ತಮ್ಮ ಸಾಮಾಜಿಕ ಮತ್ತು ರಾಜಕೀಯ ಮೇಲಾಟವನ್ನು ಸದಾ ಕಾಪಾಡಿಕೊಳ್ಳುವುದು. ಬಹುಪಾಲು ಮೇಲ್ಜಾತಿಗಳ ಪ್ರಜ್ಞೆ ಮತ್ತು ಕ್ರಿಯೆಗಳ ವರ್ತುಲದಲ್ಲಿ ಪ್ರಜಾಪ್ರಭುತ್ವ, ಭಾರತದ ಸಂವಿಧಾನ, ಸಾಮಾಜಿಕ ನ್ಯಾಯಗಳು ನೆಲೆಗೊಂಡ ಮೌಲ್ಯಗಳೇ ಆಗಿಲ್ಲ. ಅವು ಆ ಸಮುದಾಯಗಳ ಅತ್ಯಂತಿಕ ಆದರ್ಶಗಳಂತೂ ಮೊದಲೇ ಇಲ್ಲ. ವಿಪರ್ಯಾಸವೆಂದರೆ ಗಂಟೆಗಟ್ಟಲೆ ಬಾಬಾ ಸಾಹೇಬ್ ಅಂಬೇಡ್ಕರರ ಬರಹ ಮತ್ತು ಭಾಷಣಗಳನ್ನು ಸ್ವತಃ ಬಾಬಾ ಸಾಹೇಬರಿಗಿಂತಲೂ ಚೆನ್ನಾಗಿ ಮಾತಾಡಬಲ್ಲ ದಲಿತ ರಾಜಕಾರಣಿಗಳು ಮತ್ತು ಪುಢಾರಿಗಳು, ಜಾತಿ ಜಗದ್ಗುರುಗಳು ಮೀಸಲಾತಿ ಹಂಚಿಕೆ ಸಂದರ್ಭದಲ್ಲಿ ಮೇಲ್ಜಾತಿಗಳಿಗಿಂತ ಹೇಗೆ ಮತ್ತು ಎಲ್ಲಿ ವಿಭಿನ್ನವಾಗಿ ನಡೆದುಕೊಂಡಿದ್ದಾರೆ?

ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಒಳಮೀಸಲಾತಿಗಳ ತಾತ್ವಿಕತೆ

ಬಹುಶಃ ಸ್ವಾತಂತ್ರ್ಯಾನಂತರ ಅತ್ಯಂತ ಹೆಚ್ಚು ಸಲ ಬಳಕೆಯಾಗಿ ಸವಕಲಾಗಿರುವ ಪರಿಕಲ್ಪನೆ ಎಂದರೆ ಅದು ಸಾಮಾಜಿಕ ನ್ಯಾಯವೇ ಇರಬೇಕು. ಆಧುನಿಕ ಸಮಾಜಗಳು ರಾಜಕೀಯವಾಗಿ ಪ್ರಜಾಪ್ರಭುತ್ವ ಮಾದರಿಯನ್ನು ಒಪ್ಪಿಕೊಂಡರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನ ವ್ಯವಸ್ಥೆಯಾಗಿಯೇ ಮುಂದುವರಿಯುವುದಾದರೆ, ಅಂತಹ ವ್ಯವಸ್ಥೆಗಳು ಸಕಾರಾತ್ಮಕ ತಾರತಮ್ಯವನ್ನು ಅಳವಡಿಸಿಕೊಂಡಿರುವುದು ಮತ್ತು ಆ ಸಮಾಜದ ಹಿಂದುಳಿದ ಮತ್ತು ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಾ ಬಂದಿರುವುದು ಅನೇಕ ದೇಶಗಳಲ್ಲಿ ನಡೆದು ಬಂದಿದೆ.

ಭಾರತವು ಪ್ರಜಾಪ್ರಭುತ್ವ ಆಡಳಿತ ಮಾದರಿಯನ್ನು ಒಪ್ಪಿಕೊಂಡರೂ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ನಿವಾರಿಸಿಕೊಂಡು ಸಮಸಮಾಜವಾಗಿ ಬದಲಾಗಲು ಸಾಧ್ಯವಾಗಲಿಲ್ಲ. ಭಾರತದ ಸಂವಿಧಾನದ 14ನೇ ವಿಧಿಯು ಸಮಾನತೆಯ ತಾತ್ವಿಕತೆಯನ್ನು ಬಹಳ ಬಲವಾಗಿ ಪ್ರತಿಪಾದಿಸುತ್ತದೆ. ಕಟ್ಟಕಡೆಯ ಶೋಷಿತ ಮನುಷ್ಯನವರೆಗೆ ಸಮಾನತೆಯ ಫಲಗಳು ತಲುಪಬೇಕೆನ್ನುವುದು ಸಂವಿಧಾನದ ಶ್ರೇಷ್ಠ ಆದರ್ಶ ಮತ್ತು ಆಶಯ. ಇದನ್ನೇ ಸಾಮಾಜಿಕ ನ್ಯಾಯವೆಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಗುರುತಿಸುತ್ತಾರೆ.

ಪ್ರತಿ ವ್ಯಕ್ತಿಗೂ ಮುಖ್ಯ ಎಂದು ಪರಿಭಾವಿಸಿ, ಆತನ ಹಕ್ಕುಗಳನ್ನ ಗುರುತಿಸುವ ಮತ್ತು ರಕ್ಷಿಸುವ ಪರಿಕಲ್ಪನೆ ಸಾಮಾಜಿಕ ನ್ಯಾಯ. ಸಾಮಾಜಿಕ ವ್ಯವಸ್ಥೆಯ ಕಾನೂನು, ನೈತಿಕತೆಗಳ ವಿಕಾಸದ ಪ್ರಕ್ರಿಯೆಗಳಲ್ಲಿ ಪ್ರತಿ ಮನುಷ್ಯ ನ್ಯಾಯವನ್ನು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಗಳ ರೂಪದಲ್ಲಿ ಅನುಭವಿಸಬೇಕು. ಉಳ್ಳವರು ಮತ್ತು ಇಲ್ಲದವರ ನಡುವೆ ಅಸಮಾನತೆ ತೊಲಗಿ ಸ್ಥಿರ ಸಮಾಜ ಮತ್ತು ಸಮೃದ್ಧ ದೇಶಗಳು ಸೃಷ್ಟಿಯಾಗಬೇಕಾದರೆ ಅಲ್ಲಿ ಅಸಹಾಯಕರು, ಬಡವರು, ದುರ್ಬಲರು, ಮಹಿಳೆಯರು, ಶೋಷಿತರು ಹೀಗೆ ಎಲ್ಲ ವಂಚಿತ ಸಮುದಾಯಗಳು ಯಾವುದೇ ಮನುಷ್ಯನಿಗೆ ಕಡಿಮೆ ಇಲ್ಲದ ಸರಿಸಮಾನ ಹಕ್ಕುಗಳನ್ನು ಮತ್ತು ನ್ಯಾಯವನ್ನು ಪಡೆಯುವ ಪರಿಕಲ್ಪನೆಯೇ ಈ ಸಾಮಾಜಿಕ ನ್ಯಾಯ.

ಪ್ರಜಾಪ್ರಭುತ್ವ ಮಾದರಿಯ ಜೀವನ ಕ್ರಮಕ್ಕೆ ಅರ್ಥ ಮತ್ತು ಮಹತ್ವ ನೀಡುವ ಕ್ರಾಂತಿಕಾರಿ ಪರಿಕಲ್ಪನೆಯೆಂದರೆ ಸಾಮಾಜಿಕ ನ್ಯಾಯ ಎಂದು ಸುಪ್ರೀಂಕೋರ್ಟಿನ ಹಿಂದಿನ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಗಜೇಂದ್ರಗಡಕರ್ ಅಭಿಪ್ರಾಯ ಪಡುತ್ತಾರೆ. ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಕುರಿತು ಚಿಂತಿಸುತ್ತಾ, “ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಗಳ ವಿಸ್ತರಣೆಯಾಗಬೇಕಾದರೆ ಸಾಂವಿಧಾನಿಕ ಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಇರಲೇಬೇಕು. ಸಾಮಾಜಿಕ ನ್ಯಾಯವಿದ್ದಲ್ಲಿ ಮಾತ್ರ ಸೌಹಾರ್ದ ಮತ್ತು ಸ್ಥಿರಸಮಾಜಗಳು ಏರ್ಪಡುತ್ತವೆ, ಅತ್ಯಂತಿಕವಾಗಿ ಸಹೋದರತೆಯು ನಿರ್ಮಾಣಗೊಳ್ಳುತ್ತದೆ. ಪ್ರಜಾಪ್ರಭುತ್ವವು ಉಳಿಯಬೇಕಾದರೆ ಕೆಲವೇ ಕೆಲವರ ಮೇಲಾಟವನ್ನು ಮುರಿಯುವ ಸಾಮಾಜಿಕ ನ್ಯಾಯ ಅಗತ್ಯವಿದೆ” ಎಂದು ಅಭಿಪ್ರಾಯಪಡುತ್ತಾರೆ.

ಗತಕಾಲದ ಅನ್ಯಾಯಗಳು ಮತ್ತು ಅಸಮಾನ ಸಾಮಾಜಿಕ ವ್ಯವಸ್ಥೆಗಳು ನಾಶವಾದರೆ ಮಾತ್ರ ಎಲ್ಲರಿಗೂ ಸಮಾನ ಪ್ರಾತಿನಿಧ್ಯ ಮತ್ತು ಸಮಾನ ಅವಕಾಶಗಳು ಸಿಗುತ್ತವೆ. ಆಗ ಮಾತ್ರ ಶೋಷಿತರು ಹಾಗೂ ಹಿಂದುಳಿದವರನ್ನು ಮೇಲೆತ್ತಲು ಸಾಧ್ಯ ಎಂಬುದು ಬಾಬಾಸಾಹೇಬರ ಖಚಿತವಾದ ನಿಲುವು. ಈ ನಿಲುವೇ ಈ ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿಯ ಹಿಂದಿನ ತಾತ್ವಿಕತೆ ಆಗಿದೆ.

ಇದೇ ತಾತ್ವಿಕತೆಯು ಒಳ ಮೀಸಲಾತಿಯ ಬೇಡಿಕೆಯ ಹಿಂದೆಯೂ ಕೂಡ ಇದೆ; ಒಳ ಮೀಸಲಾತಿ ಪರವಾಗಿ ಹೋರಾಟ ಮಾಡುತ್ತಲೇ ಬಂದಿರುವ ಮಾದಿಗರಂತಹ ಶೋಷಿತ ಸಮುದಾಯಗಳ ವಾದವೂ ಇದನ್ನೇ ಅನುಸರಿಸುತ್ತಿದೆ. ಆದ್ದರಿಂದಲೇ ಕಳೆದ 30 ವರ್ಷಗಳಿಂದ ತನಗಾಗಿರುವ ವಂಚನೆಯನ್ನು ಸರಿಪಡಿಸಿ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಒಳಮೀಸಲಾತಿ ಹೋರಾಟಗಾರರು ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಈ ಹೋರಾಟದ ಪ್ರತಿಫಲವೇ ಈಗ ಕರ್ನಾಟಕದಲ್ಲಿ ಜಾರಿಯಾಗಿರುವ ಒಳ ಮೀಸಲಾತಿ ಎಂಬ ಸಾಮಾಜಿಕ ನ್ಯಾಯದ ಹಂಚಿಕೆ.

ನೆಲೆ ನಿಂತವರು ವರ್ಸಸ್ ಅಲೆಮಾರಿಗಳು

ಈಗ ಹಂಚಿಕೆಯಾಗಿರುವ ಮೀಸಲಾತಿಯು ತಮ್ಮ ಜಾತಿ ಜನಸಂಖ್ಯೆಗೆ ಸಿಗಬೇಕಾದ ಪ್ರಮಾಣಕ್ಕಿಂತಲೂ ಕಡಿಮೆಯಾಗಿದೆ, ತಮ್ಮ ಸಮುದಾಯಕ್ಕೆ ಈಗ ದೊರಕಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಮೀಸಲಾತಿ ಹಂಚಿಕೆ ಆಗಬೇಕೆಂದು ಕೆಲವು ಜಾತಿ ಮತ್ತು ಗುಂಪುಗಳು ಹೋರಾಟ ಮಾಡುತ್ತಿವೆ. ಇನ್ನೊಂದು ದಿಕ್ಕಿನಲ್ಲಿ “ತಮ್ಮವು ಅತ್ಯಂತ ಸೂಕ್ಷ್ಮ ಸಮುದಾಯಗಳು, ತಾವು ನೆಲೆ ನಿಂತ ಸಮುದಾಯಗಳಲ್ಲ, ತಾವು ಊರಿಂದ ಊರಿಗೆ ಅಲೆಯುವ ಅಲೆಮಾರಿ ಸಮುದಾಯಗಳು, ತಮಗೆ ಒಂದು ಸ್ಥಿರವಾದ ನೆಲೆಯೂ ಇಲ್ಲ ಸಮಾಜದಲ್ಲಿ ಬೆಲೆಯೂ ಇಲ್ಲ. ನಮಗೆ ಸಾಮಾಜಿಕ ಗುರುತುಗಳೇ ಇಲ್ಲದಿರುವಾಗ ನಮಗೆ ಘನತೆಯ ಮಾತೆಲ್ಲಿ?” ಎನ್ನುತ್ತಿವೆ ಅಲೆಮಾರಿ ಪರಿಶಿಷ್ಟ ಸಮುದಾಯಗಳು.

ಮನಸ್ಸನ್ನು ಆಳವಾಗಿ ಕಲಕುವ ಇಂತಹ ನೈತಿಕತೆಯ ಪ್ರಶ್ನೆಗಳನ್ನು ಮುಂದಿಟ್ಟು, ಕಣ್ಣೀರಲ್ಲೇ ತಮ್ಮ ಸಾವಿರಾರು ವರ್ಷಗಳಾದ ಅಸಹಾಯಕತೆ ಸಂಕಟಗಳನ್ನು ತೋಡಿಕೊಳ್ಳುವ ಅಲೆಮಾರಿ ಸಮುದಾಯಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲೇ ಅತ್ಯಂತ ದುರ್ಬಲ ಸಮುದಾಯಗಳು. ಯಾಕೆಂದರೆ ಈ ಸಮುದಾಯಗಳಿಗೆ ಸ್ಥಿರವಾಗಿ ನೆಲೆ ನಿಲ್ಲಲು ಅಂಗೈಯಗಲದ ಜಾಗ ಸಹ ಸಿಕ್ಕಿಲ್ಲದಿರುವುದು ಸುಲಭಕ್ಕೇ ಗೋಚರವಾಗುತ್ತದೆ. ಯಾರದೋ ಖಾಸಗಿ ಜಾಗದಲ್ಲಿ ಅಥವಾ ರಸ್ತೆಯ ಪಕ್ಕ ಅಥವಾ ಸರ್ಕಾರಿ ಜಾಗದಲ್ಲಿ ಹರಿದ ಬಟ್ಟೆಯ ಪ್ಲಾಸ್ಟಿಕ್ ತುಂಡುಗಳ ಸಣ್ಣಸಣ್ಣ ಟೆಂಟುಗಳನ್ನು ಹಾಕಿಕೊಂಡು ಒಂದಷ್ಟು ದಿನಗಳ ಕಾಲ ಈ ಸಮುದಾಯಗಳು ಬದುಕು ನೂಕುತ್ತವೆ. ಒಂದೆರಡು ವಾರಗಳು ಕಳೆಯುವಷ್ಟರಲ್ಲಿ ಆ ಜಾಗಗಳ ಮಾಲೀಕರು ಬಂದು ಆ ಟೆಂಟುಗಳನ್ನು ಕಿತ್ತೆಸೆದ ತಕ್ಷಣ ಮುಂದಿನ ಖಾಲಿ ಜಾಗ ಹುಡುಕುತ್ತಾ ಅಥವಾ ಮುಂದಿನ ಊರನ್ನೇ ಹುಡುಕುತ್ತಾ ಕಾಲು ಎಳೆದುಕೊಂಡು ಮುಂದಕ್ಕೆ ಹೋಗುತ್ತವೆ.

ಯಾವ ನಿಶ್ಚಿತ ಕಸುಬೂ ಗೊತ್ತಿಲ್ಲದ ಬಹುಪಾಲು ಭಿಕ್ಷೆ ಬೇಡಿ ಅಥವಾ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳನ್ನು ಹಿಡಿದು ತಿನ್ನುತ್ತಾ ಬದುಕುವ ಈ ಹಲವು ಅಲೆಮಾರಿ ಸಮುದಾಯಗಳಿಗೆ ಸರ್ಕಾರದ ಸವಲತ್ತುಗಳಾಗಲಿ ಅವಕಾಶಗಳಾಗಲೀ ಸಿಕ್ಕಿರುವುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಒಂದು ಕಡೆ ನೆಲೆನಿಲ್ಲದ ಸ್ಥಿತಿಯೇ ಈ ಸಮುದಾಯಗಳು ಅನುಭವಿಸುತ್ತಿರುವ ಬಹಳ ದೊಡ್ಡ ಸಾಮಾಜಿಕ ಅಂಗವಿಕಲತೆ. ಇದರಿಂದಾಗಿಯೇ ಈ ಸಮುದಾಯಗಳಿಗೆ ಶಿಕ್ಷಣವಾಗಲಿ, ಉದ್ಯೋಗಗಳಾಗಲಿ ಸರ್ಕಾರದ ಸವಲತ್ತುಗಳಾಗಲಿ ದೊರಕುವುದು ತುಂಬಾ ಕಷ್ಟ. ಸದಾ ಒಂದು ಹಿಡಿ ಅನ್ನಕ್ಕೋ, ಹರಿದ ಒಂದು ತುಂಡು ಹಳೆಯ ಬಟ್ಟೆಗೋ ಮನೆಮನೆಗೆ ತಿರುಗಿ ಭಿಕ್ಷೆ ಬೇಡುವ ಈ ಸಮುದಾಯಗಳು ಶತಮಾನಗಳಿಂದ ಅಕ್ಷರ, ಅನ್ನ, ಬಟ್ಟೆ, ಆರೋಗ್ಯದ ಕೊರತೆಯನ್ನು ಅನುಭವಿಸುತ್ತಾ ಬಂದಿವೆ.

ಇಂತಹ ದುರ್ಬಲ ಜಾತಿಗಳನ್ನು ಈಗ ಒಳಮೀಸಲಾತಿಯ ಹಂಚಿಕೆಯ ಪ್ರಕಾರ ಸೃಷ್ಟಿಸಲಾಗಿರುವ ಪ್ರವರ್ಗ-ಸಿಗೆ ಸೇರಿಸಲಾಗಿದೆ. ಶೇಕಡ 5 ಮೀಸಲಾತಿಯನ್ನು ಹಂಚಿಕೆ ಮಾಡಲಾಗಿರುವ ಪ್ರವರ್ಗ-ಸಿಯಲ್ಲಿ ಕೆಲವು ನೆಲೆನಿಂತ ಮತ್ತು ಸ್ವಲ್ಪವಾದರೂ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡ ಸಮುದಾಯಗಳು ಇವೆ. ಜತೆಗೆ ಸುಮಾರು 49ಕ್ಕಿಂತ ಹೆಚ್ಚು ಅಲೆಮಾರಿ ಸಮುದಾಯಗಳು ಸೇರಿಕೊಂಡಿವೆ. ಸಾಮಾಜಿಕವಾಗಿ ಸ್ವಲ್ಪವಾದರೂ ಗುರುತು, ಘನತೆ ಮತ್ತು ಪ್ರಾತಿನಿಧ್ಯಗಳು ಇರುವ ಸಮುದಾಯಗಳ ಜೊತೆ ತಮ್ಮ ಸೇರ್ಪಡೆಯಾಗಿರುವುದನ್ನ ಗಟ್ಟಿಯಾಗಿ-ಸಂಘಟಿತರಾಗಿ ಎದುರಿಸಲಾಗದೆ ಅಲೆಮಾರಿ ಸಮುದಾಯಗಳು ತಮ್ಮ ಅಧೀರತೆ, ಅಸಹಾಯಕತೆ ಮತ್ತು ಆತಂಕಗಳನ್ನು ತೋಡಿಕೊಳ್ಳುತ್ತಿವೆ. ತಮ್ಮನ್ನು ಯಾವ ಪ್ರವರ್ಗದ ಜೊತೆಯೂ ಸೇರಿಸದೆ ಪ್ರತ್ಯೇಕ ಪ್ರವರ್ಗವನ್ನಾಗಿ ಮಾಡಿ, ತಮ್ಮ ಜನಸಂಖ್ಯೆ, ಸಾಮಾಜಿಕ ಹಿಂದುಳಿದಿರುವಿಕೆ ಹಾಗೂ ಶಿಕ್ಷಣ ಉದ್ಯೋಗ ಮತ್ತು ಸವಲತ್ತುಗಳಲ್ಲಿ ತಾವು ಅನುಭವಿಸುತ್ತಿರುವ ಪ್ರಾತಿನಿಧ್ಯದ ಕೊರತೆಯನ್ನು ಗಮನಿಸಿ ತಮಗೆ ಪ್ರತ್ಯೇಕ ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಅವು ಹೋರಾಡುತ್ತಿವೆ.

ಭಾರತದಂತಹ ನಮ್ಮ ಪ್ರಜಾಪ್ರಭುತ್ವದಲ್ಲಿ ನಂಬರ್ ಗೇಮ್ ಅಥವಾ ಸಂಖ್ಯಾಬಲ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದು ಜಾತಿಗಳ ಜನಸಂಖ್ಯೆ ಆಗಿರಲಿ ಅಥವಾ ಜಾತಿಗಳು ಪಡೆದಿರುವ ಶಿಕ್ಷಣ, ಉದ್ಯೋಗ ಮತ್ತು ಸವಲತ್ತುಗಳಲ್ಲಿ ಪಡೆದಿರುವ ಪ್ರಾತಿನಿಧ್ಯವಾಗಲಿ, ಸಂಖ್ಯಾ ಪ್ರಮಾಣವೇ ಬಹಳ ಮುಖ್ಯವಾಗುತ್ತದೆ. ಹೆಚ್ಚಿನ ಜನಸಂಖ್ಯೆ ಇರುವ ಜಾತಿಗಳು ತಮ್ಮ ರಾಜಕೀಯ ಮೇಲಾಟವನ್ನು ಮೆರೆಯುತ್ತವೆ. ಜನಸಂಖ್ಯೆ ಕಡಿಮೆ ಇರುವ ಬಲಿಷ್ಟ ಜಾತಿಗಳು ನಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಾಮಾಜಿಕ ಸಮೀಕರಣಗಳ ಮೂಲಕ ವಿಭಿನ್ನ ಜಾತಿಗಳ ನಡುವೆ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಮುಂದಾಗುತ್ತವೆ. ಇಂತಹ ಸಮೀಕರಣಗಳ ರಾಜಕೀಯ ಲೆಕ್ಕಾಚಾರದಿಂದ ಬಲಿಷ್ಠ ಅಧಿಕಾರವನ್ನು ಹಿಡಿಯುತ್ತಾ, ಅನುಭವಿಸುತ್ತಾ ಬಂದಿರುವ ಒಂದು ದೊಡ್ಡ ಚರಿತ್ರೆಯೇ ಕರ್ನಾಟಕದಲ್ಲಿ ಇದೆ. ಇದೇ ಮಾದರಿಯನ್ನು ಅನುಸರಿಸಿ ಅಧಿಕಾರ ಮತ್ತು ಪ್ರಾತಿನಿಧ್ಯಗಳನ್ನು ಹಿಡಿಯಬೇಕು ಎನ್ನುವುದು ಈಗ ಕೆಳಜಾತಿಗಳ ಲೆಕ್ಕಾಚಾರ.

ಇನ್ನೊಂದೆಡೆ ಯಾವ ಸಮುದಾಯಗಳು ಶಿಕ್ಷಣ, ಉದ್ಯೋಗ, ಸವಲತ್ತು, ಭೂಮಿ, ಬಂಡವಾಳ ಮುಂತಾದ ಸಂಗತಿಗಳಲ್ಲಿ ಬಲಿಷ್ಠವಾಗುತ್ತವೋ ಅಂತಹ ಸಮುದಾಯಗಳು ರಾಜಕೀಯವಾಗಿ ಪ್ರಜ್ಞಾವಂತ ಸಮುದಾಯಗಳಾಗಿ ಬದಲಾಗುತ್ತವೆ ಮತ್ತು ಆ ಮೂಲಕ ರಾಜಕೀಯ ಅಧಿಕಾರಕ್ಕೆ ಹತ್ತಿರವಾಗುತ್ತವೆ ಮತ್ತು ರಾಜಕೀಯ ಅಧಿಕಾರವನ್ನು ನಿಯಂತ್ರಿಸುತ್ತವೆ. ಈ ದಾರಿಯಲ್ಲಿ ಅಡ್ಡಿಯಾದ ಉಳಿದ ಇತರೆ ಜಾತಿಗಳನ್ನು ತುಳಿದು ಮುಂದಕ್ಕೆ ಹೋಗುತ್ತವೆ. ಇಡೀ ಜಾತಿ ವ್ಯವಸ್ಥೆಯನ್ನು ನಿಯಂತ್ರಿಸುವ ಮೇಲ್ಜಾತಿಗಳ ಹಿಡಿತದ ಹಿಂದೆ ಈ ಸೂತ್ರವೇ ಇಂದಿಗೂ ಕೆಲಸ ಮಾಡುತ್ತಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇದೇ ಸೂತ್ರ ಈಗ ಕೆಳಜಾತಿಗಳ ನಡೆಯಲ್ಲೂ ಕಾಣುತ್ತಿದೆ.

ಬಿ. ಎಲ್. ರಾಜು
ಶಿವಮೊಗ್ಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ರಾಜು ಅವರು ಸಾಮಾಜಿಕ ಕಾರ್ಯಕರ್ತರು ಕೂಡ. ಶೋಷಿತರ ಧ್ವನಿಯಾಗಿ ಒಳಮೀಸಲಾತಿ ಸೇರಿದಂತೆ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...

ಬೆಂಗಳೂರು ಚಲೋ: ಧರಣಿ ಸ್ಥಳಕ್ಕೆ ಬಾರದ ಸಚಿವರು, ಕೋಪಗೊಂಡು ರಸ್ತೆಗಿಳಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ 'ಬೆಂಗಳೂರು ಚಲೋ' ಬುಧವಾರ (ನವೆಂಬರ್ 26) ಫ್ರೀಡಂ...

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿಗಳ ಪ್ರತಿಭಟನೆ: ವಿಐಟಿ ಭೋಪಾಲ್ ವಿವಿ ಕ್ಯಾಂಪಸ್ ಧ್ವಂಸ, ವಾಹನಗಳಿಗೆ ಬೆಂಕಿ

ಇಂದೋರ್-ಭೋಪಾಲ್ ಹೆದ್ದಾರಿಯಲ್ಲಿರುವ ಸೆಹೋರ್ ಜಿಲ್ಲೆಯ ವಿಐಟಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ತಡರಾತ್ರಿ ನಡೆದ ಪ್ರತಿಭಟನೆ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ತಿರುಗಿದ್ದು, ಕೋಪಗೊಂಡ ವಿದ್ಯಾರ್ಥಿಗಳು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ ಕ್ಯಾಂಪಸ್ ಆಸ್ತಿಗೆ ಹಾನಿ ಮಾಡಿದ್ದಾರೆ...