Homeಅಂಕಣಗಳುಪಿಕೆ ಟಾಕೀಸ್: ಕ್ರಾಂತಿಕಾರಿ ಕೊಸ್ತಾರ ದಿಟ್ಟ ಪೊಲಿಟಿಕಲ್ ಸಿನಿಮಾಗಳು

ಪಿಕೆ ಟಾಕೀಸ್: ಕ್ರಾಂತಿಕಾರಿ ಕೊಸ್ತಾರ ದಿಟ್ಟ ಪೊಲಿಟಿಕಲ್ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 09 – ಜಾಗತಿಕ ಸಿನಿಮಾ/ ಗ್ರೀಸ್/ ಕೊಸ್ತಾ ಗಾವ್ರಸ್

ಝೀ/Z (1969, ಫ್ರೆಂಚ್): ಈ ಸಿನಿಮಾದಲ್ಲಿ ಬರುವ ಪಾತ್ರಗಳು ಮತ್ತು ಘಟನೆಗಳು ನಿಜವಾದ ಬದುಕಿಗೆ ಹೋಲಿಕೆಯಾಗುವುದು ಕಾಕತಾಳೀಯವಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿಯೇ ಮಾಡಿರುವುದೆಂಬ ಪ್ರಕಟನೆಯ ಮೂಲಕ ಆರಂಭವಾಗುವ ಸಿನಿಮಾ ಇದು. ಗ್ರೀಸ್ ಭಾಷೆಯಲ್ಲಿ Z ಎಂದರೆ, ’ಅವನು ಅಮರ’ಎಂದರ್ಥ. 1967ರಿಂದ 1974ರವರೆಗೂ ಗ್ರೀಸ್‌ನ ಅಧಿಕಾರದಲ್ಲಿದ್ದ ಬಲಪಂಥೀಯ ಸೈನ್ಯಾಧಿಕಾರಿಗಳ ಸಮಯವನ್ನು ’ಜುಂಟಾ ಎರಾ’ ಎನ್ನುತ್ತಾರೆ. ಆಗಿನ ಸಮಯದಲ್ಲಾಗುವ ರಾಜಕೀಯ ಬದಲಾವಣೆಗಳನ್ನು ದಿಟ್ಟವಾಗಿ ಚಿತ್ರಿಸಿರುವ ಸಿನಿಮಾ.

ಎಡಪಂಥೀಯ ನಾಯಕನೊಬ್ಬ ಶಾಂತಿ ಸಾರುವ ಸಲುವಾಗಿ ಸಭೆಯನ್ನು ಸೇರಿಸಿ, ಭಾಷಣ ನೀಡಿ ಹೊರಗೆ ಬರುತ್ತಾನೆ. ಎಡಪಂಥೀಯರನ್ನು ಮತ್ತು ಕಮ್ಯೂನಿಸಂಅನ್ನು ದ್ವೇಷಿಸುವ ಅತಿರೇಕದ ಬಲಪಂಥೀಯ ಗುಂಪಿನ ಸದ್ಯಸ್ಯರು ಪೊಲೀಸ್ ಮತ್ತು ಮಿಲಿಟರಿ ಬಳಗದ ಎದುರುಗಡೆಯೇ ಆ ನಾಯಕನನ್ನು ಕೊಲ್ಲುತ್ತಾರೆ. ಇದನ್ನು ಅಪಘಾತ ಎನ್ನುವಂತೆ ಚಿತ್ರಿಸಲು ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳು ಮಾಡುವ ಪ್ರಯತ್ನಗಳನ್ನೆಲ್ಲ, ಸುದ್ದಿ ಪತ್ರಿಕೆಯೊಂದರ ಪೋಟೋಗ್ರಾಫರ್‌ನ ಮತ್ತು ನ್ಯಾಯಯುತವಾದ ವಿಚಾರಣೆ ಮಾಡುವ ಅಧಿಕಾರಿಯ ದಿಟ್ಟತನದ ಕೆಲಸದ ಫಲವಾಗಿ ಸೋತು ನಿಜ ಹೊರಗೆ ಬರುತ್ತದೆ.

ಮುಖ್ಯಪಾತ್ರಧಾರಿ ಕೇವಲ ಹನ್ನೆರಡು ನಿಮಿಷಗಳು ಮಾತ್ರ ಸಿನಿಮಾದಲಿದ್ದರೆ, ಅವನನ್ನು ಹತ್ಯೆ ಮಾಡಿದ ಮತ್ತು ಹತ್ಯೆಗೆ ಸಹಾಯ ಮಾಡಿದವರನ್ನು ಹುಡುಕಿ, ವಿಚಾರಣೆ ನಡೆಸುವ ಪ್ರಕ್ರಿಯೆಯೆ ಉಳಿದ ಸಿನಿಮಾ.

PC : Lives and Times

ಯೇಸು, ಬುದ್ದ, ಮಹಾವೀರ ಬಂದರೂ ಮನುಷ್ಯರ ಮನಸ್ಸುಗಳಲ್ಲಿ ಪ್ರೀತಿ ತುಂಬಲಾಗಲಿಲ್ಲ. ಎದುರಿಗಿರುವ ಮನುಷ್ಯನ ಕುರಿತು ಏನೂ ತಿಳಿಯದೆ ಇದ್ದರೂ ಕೇವಲ ಊಹಾಪೋಹಗಳು, ಗಾಳಿ ಸುದ್ದಿಗಳಿಂದಲೇ ಕೊಲ್ಲುವಂತ ದ್ವೇಷ ಹುಟ್ಟುವ-ಹುಟ್ಟಿಸುವಂತೆ ಮಾಡುವ ವಿದ್ಯಮಾನ ದೇಶ-ಕಾಲಗಳನ್ನು ಮೀರಿದ್ದು. ಈಗ ಇದು ಡಿಜಿಟಲ್ ಅವತಾರ ತಳೆದು, ವ್ಯಾಟ್ಸಾಪ್ ಮೆಸೇಜುಗಳಿದ್ದರೇ ಸಾಕು ನಮ್ಮನಿಮ್ಮಲ್ಲಿ ದ್ವೇಷ ತುಂಬಿಸುವುದು ಸುಲಭವಾಗಿದೆ. ಇಂದಿಗೂ ಇದೇ ಕುತಂತ್ರವನ್ನೇ ಬಳಸಿ ಕೋಮುಗಲಭೆ ಸೃಷ್ಟಿಸಿ, ರಾಜಕೀಯ ಪಕ್ಷಗಳು ಗೆಲ್ಲುವುದಕ್ಕೆ ಸಾಧ್ಯವೂ ಆಗುತ್ತಿರುವುದನ್ನು ನಾವು ಕಾಣಬಹುದು.

ಈ ಸಿನಿಮಾದ ಕಥೆ ಗ್ರೀಸ್ ದೇಶದ ರಾಜಕೀಯ ಸ್ಥಿತಿಗತಿಗಳನ್ನು ತೋರಿಸಿದರೂ, ಅಲ್ಲಿ ಮಿಲಿಟರಿ ಸರ್ವಾಧಿಕಾರಿ ಆಡಳಿತ ಇದ್ದುದರಿಂದ, ನಿರ್ದೇಶಕ ಕೊಸ್ತಾ ಫ್ರೆಂಚ್ ಭಾಷೆಯಲ್ಲಿ, ಫ್ರಾನ್ಸಿನ ನಟ-ನಟಿಯರನ್ನು ಬಳಸಿಕೊಂಡು ಫ್ರೆಂಚ್ ಮತ್ತು ಅಲ್ಜೆರಿಯಾ ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಸಿನಿಮಾವನ್ನು ಗ್ರೀಸಿನಲ್ಲಿ ಎಂಟು ವರ್ಷಗಳ ಕಾಲ ನಿಷೇಧಿಸಿರುವುದು ಇಲ್ಲಿ ಉಲ್ಲೇಖನೀಯ.

ಎಡಪಂಥೀಯ ನಾಯಕನ ಕೊಲೆಯ ಸಮಯದ ದಂಗೆಯಲ್ಲಿ ಪಾಲ್ಗೊಂಡಿದ್ದವರೆಲ್ಲ ಅತಿ ಸಾಮ್ಯಾನರು, ಬೀದಿ ವ್ಯಾಪಾರಿಗಳು, ಮಾಂಸದಂಗಡಿಯವರು, ಚಪ್ಪಲಿ ಮಾರುವವರು, ಹೀಗೆ. ಇವರಗಳ ಮನಸ್ಸಿನಲ್ಲಿ ದ್ವೇಷ ತುಂಬಿ
ಈ ಕೃತ್ಯ ಎಸಗುವಂತೆ ಮಾಡಿರುವುದು ವಿಚಾರಣೆಯಲ್ಲಿ ತಿಳಿಯುತ್ತದೆ. ಸರ್ಕಾರದ ಕುಮ್ಮಕ್ಕಿನಿಂದ ಈ ಕೃತ್ಯದಲ್ಲಿ ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳೆಲ್ಲ ಪಾಲ್ಗೊಂಡಿರುತ್ತಾರೆ. ವಿಚಾರಣೆಗೆ ಪಾಲ್ಗೊಳ್ಳಲು ಬರುವ ಸಾಕ್ಷಿಗಳನ್ನು ಕೊಲ್ಲುವುದಕ್ಕೆ ಪ್ರಯತ್ನಿಸುತ್ತಾರೆ.

ಸರ್ಕಾರದಿಂದ ಅಧಿಕಾರ ದುರ್ಬಳಕೆ, ಸರ್ಕಾರದ ವಿರುದ್ಧ ಯಾರೇ ಧ್ವನಿ ಎತ್ತಿದ್ದರೂ ಅವರನ್ನು ಹತ್ತಿಕ್ಕಲು ಮಾಡುವ ಪ್ರಯತ್ನಗಳಲ್ಲಿ ಪೊಲೀಸ್ ವ್ಯವಸ್ಥೆ ಸೇರಿಕೊಳ್ಳುವುದು, ಬೆದರುಬೊಂಬೆಯಂತೆ ಉಳಿಯುವ ನ್ಯಾಯಾಂಗ, ತನ್ನದೇ ದೇಶದ ಪ್ರಜೆಗಳ ಮೇಲೆ ಹಿಂಸಾಚಾರವನ್ನು ನಡೆಸುವುದು ಇವೆಲ್ಲವನ್ನೂ ಸಿನಿಮಾ ಮೂಲದಲ್ಲಿ ಹಿಡಿದಿಡುತ್ತದೆ.

ಸಿನಿಮಾದ ಕೊನೆಯಲ್ಲಿ ಎಲ್ಲರ ತಪ್ಪು ಬಹಿರಂಗವಾದರೂ, ಸರ್ಕಾರ ವಿರುದ್ಧ ಮಾತಾಡಿದವರನ್ನು ಕೊಂದು, ಹತ್ಯೆಯನ್ನು ಅಪಘಾತದಂತೆ ಬಿಂಬಿಸುವಲ್ಲಿ ಸರ್ಕಾರ ಯಶಸ್ವಿಯಾಗುತ್ತದೆ. ಸರ್ಕಾರದ ಪರವಾಗಿ ನಿಂತವರನ್ನೆಲ್ಲ ದೂಷಮುಕ್ತರನ್ನಾಗಿಸಿ ವರ್ಗಾವಣೆ ಮಾಡಿಸಿ ತಪ್ಪುಗಳನ್ನು ಮುಚ್ಚಿಹಾಕಲಾಗುತ್ತದೆ.

ಝೀ, ಸಿನಿಮಾ ಇತಿಹಾಸದಲ್ಲೇ ಕ್ರಾಂತಿಕಾರಿ ಎನ್ನಬಹುದು. ಇದೇ ಕಾರಣಕ್ಕೆ ಈ ಸಿನಿಮಾಗೆ ಅಸ್ಕರ್ (ಬೆಸ್ಟ್ ಫಾರಿನ್) ಪ್ರಶಸ್ತಿ ಸಿಕ್ಕಿರುತ್ತದೆ.

ಸ್ಟೇಟ್ ಆಫ್ ಸೀಝ್ (1972, ಫ್ರೆಂಚ್): ಬಂಡವಾಳಿಶಾಹಿ ರಾಷ್ಟ್ರವಾದ ಅಮೆರಿಕ ಬಹಿರಂಗವಾಗಿ ಪ್ರಜಾಪ್ರಭುತ್ವದ ಪರ ಮಾತಾಡಿದರೂ, ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ಬೇರೆ ಬೇರೆ ದೇಶಗಳ ಸರ್ಕಾರಗಳನ್ನು ಬದಲಾಯಿಸಿ ರಹಸ್ಯವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನಗಳೇ ಈ ಸಿನಿಮಾ

ಊರಿನಾಚೆಯ ಹೆದ್ದಾರಿಯಲ್ಲಿ ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಕಿಕ್ಕಿರಿದ್ದಾರೆ. ಒಳಬರುವ ಮತ್ತು ಹೊರಹೋಗುವ ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ. ಅನುಮಾನ ಬಂದವರನ್ನು ಸೈನಿಕರು ಅಲ್ಲೇ ಹೊಡೆದು ಜೀಪುಗಳಿಗೆ ತುಂಬಿಸುತ್ತಿದ್ದಾರೆ. ಅಲ್ಲಿ ಅವರು ಹುಡುಕುತ್ತಿರುವುದು ಅಪಹರಣಗೊಂಡಿರುವ ಅಮೆರಿಕ ದೇಶದ ರಹಸ್ಯ ಪೊಲೀಸ್ ಮೇಲಾಧಿಕಾರಿಯನ್ನು. ಇದು 1970ರ ಉರುಗ್ವೆ ದೇಶದ ಪರಿಸ್ಥಿತಿಯಾಗಿರುತ್ತದೆ.

ಉರುಗ್ವೆ ದೇಶದಲ್ಲಿ ಕ್ಷಿಪ್ರ ಕ್ರಾಂತಿಯಿಂದ ಮಿಲಿಟರಿ ಅಧಿಕಾರಿಗಳು ಸರ್ಕಾರವನ್ನು ವಶಪಡೆದಿರುತ್ತಾರೆ. ಇದನ್ನು ಪ್ರಶ್ನಿಸಿದವರನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ಈ ಕಾರಣಕ್ಕೆ ಸಂಘಟನೆಯೊಂದನ್ನು ಏರ್ಪಾಡು ಮಾಡಿ, ಕಮ್ಯುನಿಸಂ ಸಿದ್ಧಾಂತದ ವಿರುದ್ಧ ಹೋರಾಡುವ ಗುಂಪೊಂದು ಅಮೆರಿಕದಿಂದ ರಹಸ್ಯವಾಗಿ ಬಂದು ಇಲ್ಲಿನ ಮಿಲಿಟರಿ ಮತ್ತು ಪೊಲೀಸರಿಗೆ ತರಬೇತಿ ಕೊಡುತ್ತಿರುತ್ತಾರೆ. ಆ ಸಮಯದಲ್ಲಿ ಅಮೆರಿಕ ಅಧಿಕಾರಿಯೊಬ್ಬನನ್ನು ಅಪಹರಣ ಮಾಡಲಾಗುತ್ತದೆ.

PC :

ಅಪಹರಿಸಿದ ಗೆರಿಲ್ಲಾ ಹೋರಾಟಗಾರರು, ಅಮೆರಿಕದ ಅಧಿಕಾರಿಯನ್ನು ವಿಚಾರಣೆ ಮಾಡುವ ಸಮಯದಲ್ಲಿ ಅತಿ ಭಯಾನಕ ವಿಷಯಗಳು ಹೊರಬರುತ್ತವೆ. ಸರ್ಕಾರದ ವಿರುದ್ಧ ಮಾತಾಡಿದವರನ್ನು ವಿವಿಧ ರೀತಿಯಲ್ಲಿ ಚಿತ್ರ ಹಿಂಸೆ ನೀಡುವುದಕ್ಕೆ, ಉರುಗ್ವೆ ಪೊಲೀಸರಿಗೆ ತರಬೇತಿ ನೀಡಲು ಇವನು ಬಂದಿರುತ್ತಾನೆ. ಪ್ರತಿಭಟನಾಕಾರರನ್ನು ಬೆತ್ತಲೆ ಮಾಡಿ, ಮರ್ಮಾಂಗಗಳಿಗೆ ವಿದ್ಯುತ್ ಶಾಕ್ ನೀಡುವುದು, ಅವರ ಕೂದಲುಗಳನ್ನು ಕತ್ತರಿಸುವುದು ಹೀಗೆ. ಇದ್ಯಾವುದಕ್ಕೂ ಜಗ್ಗದೇ ಸಂಘಟನೆಗೆ(ಗೆರಿಲ್ಲಾ) ಸೇರಿಕೊಂಡರೆ, ಅವರನ್ನು ಹುಡುಕಿ ಗುಂಡುಕ್ಕಿ ಕೊಲ್ಲುವುದು!

ಅಧಿಕಾರಿಯ ಜೊತೆ ನಡಿಯುವ ಮಾತುಕತೆಯಲ್ಲಿ, “ಪ್ರಜಾಪ್ರಭುತ್ವವಾಗಲೀ ಇಲ್ಲ ಸರ್ವಾಧಿಕಾರಿಯ ಸರ್ಕಾರವಾಗಲಿ ಪೊಲೀಸರ ಕೆಲಸ ಪ್ರಜೆಗಳಿಗೆ ರಕ್ಷಣೆ ನೀಡಬೇಕಾ ಇಲ್ಲವಾ?” ಎಂಬ ಪ್ರಶ್ನೆಯಲ್ಲಿಯೇ ಪೊಲೀಸರ ಕ್ರೂರತೆ ಮತ್ತು ಹಿಂಸೆಯಿಂದ ನಲುಗಿದ ಇಡೀ ದೇಶದ ಕಥೆಯನ್ನು ಹೇಳುತ್ತದೆ.

ಈ ಅಧಿಕಾರಿಯ ಬಿಡುಗಡೆಗೆ ಅಮೆರಿಕ ಸರ್ಕಾರ ಮತ್ತು ಗೆರಿಲ್ಲಾಗಳ ನಡುವಿನ ಮಾತುಕತೆ ನಡೆಯುವ ಸಮಯದಲ್ಲೇ ಹಲವಾರು ಗೆರಿಲ್ಲಾ ಸದಸ್ಯರನ್ನು ಅಮೆರಿಕ ಬೆಂಬಲದ ಉರುಗ್ವೆ ಸೈನಿಕರು ಹಿಡಿಯುತ್ತಾರೆ. ಇದರಿಂದ ವಿಚಲಿತಗೊಂಡ ಗೆರಿಲ್ಲಾಗಳು ಅಧಿಕಾರಿಯನ್ನು ಕೊಲ್ಲುತ್ತಾರೆ. ಅದೇ ಜಾಗಕ್ಕೆ ಮತ್ತೊಬ್ಬ ಅಮೆರಿಕ ಅಧಿಕಾರಿ ಬರುತ್ತಾನೆ. ಅವನನ್ನು ಏನಾದರೂ ಮಾಡಬೇಕೆಂಬ ಗೆರಿಲ್ಲಾಗಳ ಪ್ರಯತ್ನಗಳಲ್ಲಿ, ಸ್ಥಿತಿ ಮತ್ತೆ ಮೊದಲಿಗೆ ಬರುತ್ತದೆ.

ಈ ಸಿನಿಮಾ ಅತಿ ವೇಗದಿಂದ ಚಿತ್ರಣಗೊಂಡಿದೆ. ಅಪಹರಣ, ಹಿಂಸಿಸುವ ದೃಶ್ಯಗಳು ನೈಜವಾಗಿದ್ದು ಪ್ರೇಕ್ಷಕನನ್ನು ನಲುಗಿಸಬಲ್ಲವು. ಸರ್ಕಾರ ಪ್ರಾಯೋಜಿತ ಹಿಂಸೆಯನ್ನು ನಿರ್ದೇಶಕ ಸಶಕ್ತವಾಗಿ ಹಿಡಿದಿಟ್ಟಿದ್ದಾನೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಸರ್ವಾಧಿಕಾರಿಯ ಕಪಿಮುಷ್ಟಿಯ ಹಿಡಿತಕ್ಕೆ ಸಿಕ್ಕಿದ್ದರೂ, ಪತ್ರಿಕೆ-ಮಾಧ್ಯಮಗಳು ಸರಿಯಾಗಿ ಕೆಲಸ ನಿರ್ವಹಿಸಿ ಸರ್ಕಾರ ದೌರ್ಜನ್ಯಗಳನ್ನು ತರಾಟೆಗೆ ತೆಗೆದುಕೊಂಡು ಅವುಗಳನ್ನು ಸರಿಯಾಗಿ ದಾಖಲಿಸಲು ಸಾಧ್ಯವಾದರೆ, ಅವುಗಳಿಂದ ಪ್ರೇರಿತವಾಗಿ ಇಂತಹ ಸಿನಿಮಾಗಳ ಬರಲು ಸಾಧ್ಯ. ಆದರೆ ಟಿವಿ ಮತ್ತು ಪತ್ರಿಕೆಗಳು ಸರ್ಕಾರದ ತಾಳಕ್ಕೆ ಕುಣಿದರೆ ಅದಕ್ಕಿಂತ ಭಯಾನಕ ಸನ್ನಿವೇಶ ಇನ್ನೊಂದಿಲ್ಲ.

ಕೆಲವರ್ಷಗಳ ಕಾಲ ಈ ಸಿನಿಮಾವನ್ನು ಅಮೆರಿಕದಲ್ಲಿ ನಿಷೇಧಿಸಲಾಗಿತ್ತು.

ಕಾನ್ಸ್‌ಟಂಟಿನೋಸ್ ಗಾವ್ರಸ್/ ಕೊಸ್ತಾ ಗಾವ್ರಸ್: ಕೊಸ್ತಾ ಕ್ರಾಂತಿಕಾರಿ ಪೊಲಿಟಿಕಲ್ ಚಿತ್ರ ನಿರ್ದೇಶಕ. ಸಾಮಾನ್ಯವಾಗಿ ಸಿನಿಮಾ ಮಾಡುವುದೇ ಅತಿ ಸಾಹಸದ ಕೆಲಸ. ಅದರಲ್ಲಿಯೂ ಮಿಲಿಟರಿ ಆಡಳಿತವಿರುವ ತನ್ನ ದೇಶದ ಕಥೆಯನ್ನು, ಹಲವು ವಿರೋಧಗಳ ನಡುವೆ ಬೇರೆ ದೇಶಕ್ಕೆ ಹೋಗಿ, ಬೇರೆಯದೆ ಭಾಷೆಯ ನಟನಟಿಯರನ್ನು ಬಳಸಿ ಝೀ ಸಿನಿಮಾದಲ್ಲಿ ಕಟ್ಟಿರುವುದು ಸಾಹಸಮಯವೇ ಸರಿ.

ಕೊಸ್ತಾರ ಕಥಾವಸ್ತು ಸರ್ಕಾರದ ಅಧಿಕಾರ ದುರ್ಬಳಕೆ, ಸರ್ಕಾರ ಪ್ರಾಯೋಜಿತ ಹಿಂಸಾಚಾರ, ಬಂಡವಾಳಶಾಹಿಗಳ ಹಸ್ತಕ್ಷೇಪ, ದೈತ್ಯ ಮೀಡಿಯಾ ಸಂಸ್ಥೆಗಳ ಹಾಗೂ ದೈತ್ಯ ಬ್ಯಾಂಕುಗಳ ಮೋಸಗಳು ಮತ್ತು ಅವುಗಳಿಂದ ಜನರ ಬದುಕಿಗೆ ಉಂಟಾಗುವ ತೊಂದರೆಗಳನ್ನು ಹಿಡಿದಿಡುತ್ತವೆ.

ಕೊಸ್ತಾ ಅತಿ ಡೈನಾಮಿಕ್ ಫಿಲ್ಮ್ ಮೇಕರ್. ವೇಗವಾಗಿ ಚಲಿಸುವ ಪಾತ್ರಗಳು, ಅವುಗಳನ್ನು ಸೆರೆಹಿಡಿಯಲು ಅದೇ ವೇಗದಲ್ಲಿ ಚಲಿಸುವ ಕ್ಯಾಮರಾ, ಅದಕ್ಕೆ ಬೇಕಾದ ಸಂಕಲನ ಇವರ ಶೈಲಿ. ಇಪ್ಪತ್ತು ನಿಮಿಷಗಳ ಕಾಲ ಸುಮ್ಮನೆ ಕೂತು ಸಿನಿಮಾವನ್ನು ಬರಮಾಡಿಕೊಳ್ಳಬೇಕಷ್ಟೇ. ನಾಯಕನ್ಯಾರು? ಕಥೆಯೇನು? ಎಂಬ ಸಂಪ್ರದಾಯಿಕ ಪ್ರಶ್ನೆಗಳನ್ನು ಕೇಳುವಂತಿಲ್ಲ.

ಇವರ ಪ್ರಪಂಚವೇ ಬೇರೆ. ಕೆಲವು ದೃಶ್ಯಗಳಲ್ಲಿ ಸಾವಿರಾರು ಮಂದಿ ಇರಬಹುದು. ಅಲ್ಲಿ ಎಲ್ಲರೂ ಅವರದ್ದೇ ಕೆಲಸ ಮತ್ತು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಕೊಸ್ತಾರ ಕ್ಯಾಮರಾ ದೂರದಿಂದ, ಕಾಡಿನಲ್ಲಿರುವ ಪ್ರಾಣಿಗಳನ್ನು ಸೆರೆಹಿಡಿಯುವಂತೆ ಚಿತ್ರಿಸುವುದರಿಂದ ಇವೆಲ್ಲ ನಿಜವೆಂಬಂತೆ ಅನಿಸದೆ ಇರದು.

PC : DW (ಕೊಸ್ತಾ ಗಾವ್ರಸ್)

ಸಾಮಾನ್ಯವಾಗಿ ಸಿನಿಮಾ ದೃಶ್ಯ ಫುಲ್ ಶಾಟ್‌ನಿಂದ ದೃಶ್ಯ ಶುರುವಾಗಿ ಕ್ಲೋಸ್‌ಅಪ್‌ನಲ್ಲಿ ಮುಗಿಯುತ್ತದೆ. ಆದರೆ ಕೊಸ್ತಾ ವಿಧಾನ ಇದಕ್ಕೆ ವಿರುದ್ಧ. ಕ್ಲೋಸ್‌ಅಪ್‌ನಿಂದ ಫುಲ್ ಶಾಟ್‌ಗೆ ಬಂದು ನಿಲ್ಲುತ್ತದೆ.

ಮಿಸ್ಸಿಂಗ್(1982, ಇಂಗ್ಲಿಷ್) ಸಿನಿಮಾದಲ್ಲಿ, ಅಮೆರಿಕದ ತಂದೆ ಚಿಲಿ ದೇಶದಲ್ಲಿ ಕಳೆದು ಹೋಗಿರುವ ಯುವ ಮಗನನ್ನು ಹುಡುಕುವ ಕಥೆಯಿದ್ದರೂ, ತಂದೆಯ ದೃಷ್ಟಿಕೋನದಿಂದ ಚಿಲಿ ದೇಶದ ಸರ್ಕಾರದಲ್ಲಿರುವ ಮಿಲಿಟರಿ ದುರಾಡಳಿತ ಮತ್ತು ಹಿಂಸಾಚಾರವನ್ನು ನೋಡಬಹುದು. ಲೆಕ್ಕವಿಲ್ಲದಷ್ಟು ಜನಗಳನ್ನು ಕೊಂದು ಅಧಿಕಾರಕ್ಕೆ ಬರುವುದು, ಅದರ ವಿರುದ್ಧ ಧ್ವನಿ ಎತ್ತಿದವರನ್ನು ಕೊಲ್ಲುವುದು ಇವೆಲ್ಲವನ್ನೂ ಕಾಣಿಸುತ್ತಾರೆ.

ಹಾಗೆಯೇ ಮ್ಯಾಡ್ ಸಿಟಿ(1997, ಇಂಗ್ಲಿಷ್) ಸಿನಿಮಾದಲ್ಲಿ ಮ್ಯೂಸಿಯಂನಲ್ಲಿ ಕೆಲಸ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್ ಒಬ್ಬ, ಮರಳಿ ಕೆಲಸ ಪಡೆಯುವ ಚಡಪಡಿಕೆಯಲ್ಲಿ ಗನ್ ಎತ್ತಿಕೊಳ್ಳುತ್ತಾನೆ. ಇದರಿಂದಾಗುವ ಬದಲಾವಣೆಗಳನ್ನು 24/7 ನ್ಯೂಸ್ ಮಾಧ್ಯಮಗಳು ಅವರವರ ಟಿ.ಆರ್.ಪಿಗಾಗಿ ಅವನನ್ನು ಕೊಲ್ಲುವಂತೆ ಮಾಡುವ ಘೋರಕಥನವನ್ನು ಸಿನಿಮಾ ಹೊಂದಿದೆ.

ಕೊಸ್ತಾರು ಗ್ರೀಸ್‌ನಲ್ಲಿ ಹುಟ್ಟಿದ್ದರೂ ಫ್ರಾನ್ಸ್‌ನಲ್ಲಿ ಓದಿ, ಅಮೆರಿಕಕ್ಕೆ ಹೋಗುತ್ತಾರೆ. ಅವರ ಇಪ್ಪತ್ತೆಂಟು ಸಿನಿಮಾಗಳಲ್ಲಿ 2019ರ ’ಅಡಲ್ಟ್ಸ್ ಇನ್ ದಿ ರೂಮ್’ ಸಿನಿಮಾದ ಕೆಲಭಾಗ ಮಾತ್ರ ಗ್ರೀಕ್ ಭಾಷೆಯಲ್ಲಿದೆ. ಇನ್ಯಾವುದೇ ಸಿನಿಮಾದಲ್ಲೂ ಗ್ರೀಕ್ ಭಾಷೆಯನ್ನು ಬಳಸಿಲ್ಲ. ಮೊದಲಿಗೆ ಗ್ರೀಸಿನ ರಾಜಕೀಯ ಸ್ಥಿತಿಗತಿಗಳಿಂದ, ಫ್ರೆಂಚ್ ಭಾಷೆಯಲ್ಲಿ ಸಿನಿಮಾ ಮಾಡಬೇಕಾಯಿತು. ಮುಂದೆ ಸಾಗುತ್ತಾ ದೇಶ ಭಾಷೆಗಳ ಎಲ್ಲೆಗಳನ್ನೇ ಮೀರಿ ದಿಟ್ಟತನದಿಂದ ಸಿನಿಮಾಗಳನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ: ಪಿಕೆ ಟಾಕೀಸ್: ನಿಗೂಢ ಅಥೆನ್ಸ್‌ನ ಜನಜೀವನವನ್ನು ಚಿತ್ರಿಸಿರುವ ಅದನ್ನು ಅಲೆಗರಿಯಾಗಿಸುವ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...