ಇ-ಕೆವೈಸಿ ಲೋಪದಿಂದಾಗಿ ಗುಜರಾತ್‌ನ 10 ಲಕ್ಷ ಜನರು ಪಡಿತರವಿಲ್ಲದೆ ಬಳಲುತ್ತಿದ್ದಾರೆ ಎಂದು TNIE ವರದಿ ಮಾಡಿದೆ. 2025ರ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಸುಮಾರು 10 ಲಕ್ಷ ಫಲಾನುಭವಿಗಳು ಅಪೂರ್ಣ ಕೆವೈಸಿ ಔಪಚಾರಿಕತೆಗಳಿಂದಾಗಿ ಪಡಿತರವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ವರದಿ ಬಹಿರಂಗಪಡಿಸಿದೆ. ಗುಜರಾತ್ | ಇ-ಕೆವೈಸಿ
ಗರ್ಭಾವಸ್ಥೆಯ ಹಂತದಿಂದ ಪ್ರೌಢಾವಸ್ಥೆಯವರೆಗೆ ಪ್ರತಿಯೊಬ್ಬ ನಾಗರಿಕರಿಗೂ ಆಹಾರವನ್ನು ಖಾತರಿಪಡಿಸುವುದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಲ್ಲಿ ಕಡ್ಡಾಯವಾಗಿದೆ. ಆದಾಗ್ಯೂ, ಗುಜರಾತ್‌ನಲ್ಲಿ ಈ ಹಕ್ಕನ್ನು ರಕ್ಷಿಸಲು ಉದ್ದೇಶಿಸಲಾದ ವ್ಯವಸ್ಥೆಯಲ್ಲಿ ಬಿರುಕು ಬಿಟ್ಟಿದೆ ಎಂದು ವರದಿ ಸೂಚಿಸಿದೆ.
ನೀತಿಯ ಭರವಸೆಗಳು ಮತ್ತು ವಾಸ್ತವ ವಿತರಣೆಯ ನಡುವಿನ ಅಂತರವನ್ನು ಈ ಬೃಹತ್ ಲೋಪ ಬಹಿರಂಗಪಡಿಸಿದ್ದು, ಇದರಿಂದಾಗಿ ಲಕ್ಷಾಂತರ ದುರ್ಬಲ ನಾಗರಿಕರು ಅಧಿಕಾರಶಾಹಿ ಅಡೆತಡೆಗಳ ನಡುವೆ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.
ಅನ್ನ ಸುರಕ್ಷಾ ಅಧಿಕಾರ ಅಭಿಯಾನದ ಪ್ರಕಾರ, ಕೇಂದ್ರದ NDPS ಪೋರ್ಟಲ್ ಗುಜರಾತ್‌ನಲ್ಲಿ 3.82 ಕೋಟಿ ಫಲಾನುಭವಿಗಳನ್ನು ಪಟ್ಟಿ ಮಾಡಿದೆ. ಆದರೂ, ಕಳೆದ ಮೂರು ತಿಂಗಳುಗಳಲ್ಲಿ, ನಿಜವಾದ ಫಲಾನುಭವಿಗಳ ಸಂಖ್ಯೆ ಕೇವಲ 3.72 ಕೋಟಿಯಿಂದ 3.76 ಕೋಟಿಯವರೆಗೆ ಇದೆ. ಸುಮಾರು 10 ಲಕ್ಷ ಅರ್ಹ ಜನರು ಈ ಯೋಜನೆ ಪ್ರಯೋಜನದಿಂದ ವಂಚಿತರಾಗಿದ್ದಾರೆ.
ಕಡ್ಡಾಯ ಇ-ಕೆವೈಸಿಯಲ್ಲಿ ವಿಳಂಬ ಮತ್ತು ದೋಷಗಳು ಇದರ ಲೋಪಕ್ಕೆ ಕಾರಣ ಎಂದು ಹೇಳಲಾಗಿದ್ದರೂ, ಅದು ಒಂದೇ ಸಮಸ್ಯೆಯಲ್ಲ ಎಂದು ವರದಿ ಉಲ್ಲೇಖಿಸಿದೆ. ನಿರ್ದಿಷ್ಟ ಅವಧಿಯವರೆಗೆ (ಸಾಮಾನ್ಯವಾಗಿ ಸತತ 3 ತಿಂಗಳು) ಪಡಿತರ ಅಂಗಡಿಗಳಿಂದ ಯಾವುದೇ ಆಹಾರ ಧಾನ್ಯವನ್ನು ಖರೀದಿಸದ ಸೈಲೆಂಟ್ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೂಡಾ ಮತ್ತೊಂದು ಬಿಕ್ಕಟ್ಟನ್ನು ಸೃಷ್ಟಿಸಿದೆ.
ಕಳೆದ ಮೂರು ತಿಂಗಳಲ್ಲಿ ಗುಜರಾತ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಸೈಲೆಂಟ್ ಕಾರ್ಡ್‌ಗಳು ದಾಖಲಾಗಿವೆ ಎಂದು ವರದಿ ಹೇಳಿದೆ. ಮೂರು ತಿಂಗಳವರೆಗೆ ಬಳಸದಿದ್ದರೆ ಪಡಿತರ ಚೀಟಿಗಳು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತವೆ.
ಅನ್ನಾ ಸುರಕ್ಷಾ ಅಧಿಕಾರ ಅಭಿಯಾನ ಸಂಯೋಜಕಿ ಪಂಕ್ತಿ ಜೋಗ್ ಮಾತನಾಡಿ, “ದಾಖಲೆಯಲ್ಲಿ ಜನರು ಪಡಿತರ ಸಂಗ್ರಹಿಸುವುದನ್ನು ನಿಲ್ಲಿಸಿದಂತೆ ಕಾಣುತ್ತದೆ. ಆದರೆ, ಅಪೂರ್ಣ ಇ-ಕೆವೈಸಿಯಿಂದಾಗಿ ಪಡಿತರ ವಿತರಕರು ತಮ್ಮನ್ನು ಹಿಂತಿರುಗಿ ಹೋಗುವಂತೆ ಹೇಳುತ್ತಿದ್ದಾರೆ ಎಂದು ಕುಟುಂಬಗಳು ಹೇಳಿಕೊಳ್ಳುತ್ತಿವೆ. ಅವರು ಆಹಾರವಿಲ್ಲದೆ ಉಳಿದಿದ್ದು, ವ್ಯವಸ್ಥೆಯ ಕಾರಣಕ್ಕೆ ಅವರ ಪಡಿತರ ಚೀಟಿಗಳು ನಿಷ್ಕ್ರಿಯವಾಗಿದೆ” ಎಂದು ಹೇಳಿದ್ದಾರೆ.
“ಇದು ತೀಕ್ಷ್ಣವಾದ ಮತ್ತು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಇ-ಕೆವೈಸಿ ಸಮಸ್ಯೆಗಳಿಂದಾಗಿ ಜನರಿಗೆ ಪಡಿತರ ನಿರಾಕರಿಸಲ್ಪಟ್ಟರೆ ಮತ್ತು ಅವರ ಕಾರ್ಡ್‌ಗಳನ್ನು ಸೈಲೆಂಟ್ ಎಂದು ಗುರುತಿಸಿದರೆ, ಲಕ್ಷಾಂತರ ಜನರನ್ನು ಅನೈಚ್ಛಿಕ ಹಸಿವಿಗೆ ತಳ್ಳುವಂತೆ ಮಾಡಿದ ಹೊಣೆ ಯಾರು ಹೊತ್ತುಕೊಳ್ಳಬೇಕು? ಪ್ರತಿ ಪಡಿತರ ಚೀಟಿ ಸಾಮಾನ್ಯವಾಗಿ ಮೂರು ಅಥವಾ ಹೆಚ್ಚಿನ ಕುಟುಂಬ ಸದಸ್ಯರಿದ್ದರೆ, ಬಾಧಿತ ವ್ಯಕ್ತಿಗಳ ನಿಜವಾದ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಿರಬಹುದು, ”ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
2013ರಲ್ಲಿ, ಸಂಸತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯನ್ನು ಅಂಗೀಕರಿಸಿತು. ಇದು ಅಂಗನವಾಡಿಗಳಲ್ಲಿನ ಮಕ್ಕಳಿಂದ ಹಿಡಿದು ನಗರದ ಬಡವರವರೆಗೆ ಪ್ರತಿಯೊಬ್ಬ ಭಾರತೀಯರನ್ನು ಕಾನೂನುಬದ್ಧ ಆಹಾರ ಸುರಕ್ಷತಾ ಜಾಲದ ಅಡಿಯಲ್ಲಿ ತರುವ ಗುರಿಯನ್ನು ಹೊಂದಿದೆ. ಇದರ ಅಡಿಯಲ್ಲಿ ಶಾಲೆಯಲ್ಲಿನ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಯ ಪೌಷ್ಟಿಕಾಂಶ ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಯಂತಹ ತನ್ನ ವ್ಯಾಪ್ತಿಯ ಪ್ರಮುಖ ಯೋಜನೆಗಳ ಅಡಿಯಲ್ಲಿ ತಂದಿದೆ.
ಗುಜರಾತ್ ರಾಜ್ಯವು ಏಪ್ರಿಲ್ 1, 2016 ರಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ತನ್ನ ಗ್ರಾಮೀಣ ಜನಸಂಖ್ಯೆಯ 75% ಮತ್ತು ನಗರದ 50%ರಷ್ಟು ಜನರಿಗೆ ಸಬ್ಸಿಡಿ ಧಾನ್ಯಗಳು ₹2/ಕೆಜಿಗೆ ಗೋಧಿ, ₹3/ಕೆಜಿಗೆ ಅಕ್ಕಿ ಮತ್ತು ₹1/ಕೆಜಿಗೆ ಕಡಿಮೆ ಸಂಸ್ಕರಿತ ಧಾನ್ಯಗಳು ನೀಡುವ ಭರವಸೆ ನೀಡಲಾಗಿತ್ತು. ಹೆಚ್ಚುವರಿ ಪೋಷಣೆಗಾಗಿ ದ್ವಿದಳ ಧಾನ್ಯಗಳು, ಬೇಳೆಕಾಳು ಮತ್ತು ಎಣ್ಣೆಯೊಂದಿಗೆ ಇದನ್ನು ವಿಸ್ತರಿಸಲು ರಾಜ್ಯಗಳಿಗೆ ಅವಕಾಶ ನೀಡಲಾಯಿತು. ಗುಜರಾತ್ | ಇ-ಕೆವೈಸಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಾವೇರಿ: ಪೌರಕಾರ್ಮಿಕರ ಹಲ್ಲೆ ಪ್ರಕರಣದಲ್ಲಿ ಅಕ್ಷತಾ ಪ್ರಮುಖ ಆರೋಪಿ: ದೂರು
ಹಾವೇರಿ: ಪೌರಕಾರ್ಮಿಕರ ಹಲ್ಲೆ ಪ್ರಕರಣದಲ್ಲಿ ಅಕ್ಷತಾ ಪ್ರಮುಖ ಆರೋಪಿ: ದೂರು

