ಗುಜರಾತ್‌ನ ಮೊರ್ಬಿ ಜಿಲ್ಲೆಯ ಶ್ರೀಸೋಖ್ದಾ ಪ್ರಾಥಮಿಕ ಶಾಲೆಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳಿಗೆ ಸೇರಿದ 153 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ನಿರಾಕರಿಸಿದ್ದು, ದಲಿತ ಮಹಿಳೆ ಅಡುಗೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ವರದಿಯಾಗಿದೆ.
ಮಧ್ಯಾಹ್ನದ ಬಿಸಿಯೂಟ ಮಾಡುವ ಕೆಲಸವನ್ನು ಕಳೆದ ಜೂನ್‌ನಲ್ಲಿ ದಲಿತ ಮಹಿಳೆ ಧಾರಾ ಮಕ್ವಾನಾ ಅವರಿಗೆ ಶಾಲಾ ಅಧಿಕಾರಿಗಳು ಗುತ್ತಿಗೆ ನೀಡಿದರು. ಆ ನಂತರದಲ್ಲಿ ವಿದ್ಯಾರ್ಥಿಗಳ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡದಂತೆ ತಡೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ವಿದ್ಯಾರ್ಥಿಗಳು ಊಟಕ್ಕೆ ಬರುತ್ತಿರಲಿಲ್ಲ. ನಂತರ ಪೋಷಕರನ್ನು ಪ್ರಶ್ನಿಸಲಾಯಿತು. ದಲಿತ ಮಹಿಳೆ ಬೇಯಿಸಿದ ಆಹಾರವನ್ನು ನಮ್ಮ ಮಕ್ಕಳು ತಿನ್ನಲು ಬಿಡುವುದಿಲ್ಲ ಎಂದು ಹೇಳಿದರು” ಎಂದು ಎಂದು ದಲಿತ ಮಹಿಳೆಯ ಪತಿ ಗೋಪಿ ಪ್ರತಿಕ್ರಿಯೆ ನೀಡಿದ್ದಾರೆ. ಮಾರ್ಕ್ವಾನಾ ತಯಾರಿಸಿದ ದೊಡ್ಡ ಪ್ರಮಾಣದ ಆಹಾರ ವ್ಯರ್ಥವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ, ಗೋಪಿ ಪೊಲೀಸರಿಗೆ ದೂರು ನೀಡಿದ್ದು, ಅದನ್ನು ಪೊಲೀಸ್ ಉಪಾಧೀಕ್ಷಕರಿಗೆ ವರ್ಗಾಯಿಸಲಾಗಿದೆ. “ಆದರೆ, ಇದು ಶಾಲಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ನಡುವಿನ ವಿಷಯವಾಗಿರುವುದರಿಂದ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಶಾಲೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಪೋಷಕರ ನಡುವೆ ಈ ವಿಷಯದ ಬಗ್ಗೆ ಎರಡು ಭಾರಿ ಸಭೆಗಳನ್ನು ನಡೆಸಲಾಗಿದೆ. ಆದರೆ ತಮ್ಮ ನಿಲುವನ್ನು ಬದಲಾಯಿಸಲು ಪೋಷಕರು ನಿರಾಕರಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದಾರೆ.
“ಜಾತಿವಾದಿ ಧೋರಣೆ ಬೇಡ. ಎಲ್ಲರೂ ಸಮಾನರು. ಯಾರೂ ಅಸ್ಪೃಶ್ಯರಲ್ಲ ಎಂದು ನಾವು ಮಕ್ಕಳಿಗೆ ಕಲಿಸಬಹುದು. ದುಃಖಕರವೆಂದರೆ, ನಾವು ಅವರ ಪೋಷಕರನ್ನು ಮನವೊಲಿಸಲು ಸಾಧ್ಯವಿಲ್ಲ” ಎಂದು ಪ್ರಾಂಶುಪಾಲರು ವಿಷಾದಿಸಿದ್ದಾರೆ.
ಇದನ್ನೂ ಓದಿರಿ: ‘ನೀನು ಕೂಲಿ ಕೆಲಸ ಮಾಡಬೇಕು, ಶಾಲೆಯಲ್ಲಿ ಅಡುಗೆಯನ್ನಲ್ಲ’: 6 ತಿಂಗಳಾದರೂ ದಲಿತ ಮಹಿಳೆಗೆ ನಿಲ್ಲದ ಕಿರುಕುಳ
ದಲಿತ ಮಹಿಳೆ ತಯಾರಿಸಿ ಊಟವನ್ನು ನಿರಾಕರಿಸಿದ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ದಲಿತ ಭೋಜನ್ಮಾತಾ (ಬಿಸಿಯೂಟದ ಸಿಬ್ಬಂದಿ) ಸುನಿತಾ ದೇವಿ ಅವರು ಬೇಯಿಸಿದ ಮಧ್ಯಾಹ್ನದ ಊಟವನ್ನು ಕೆಲವು ಮೇಲ್ಜಾತಿಯ ವಿದ್ಯಾರ್ಥಿಗಳು ನಿರಾಕರಿಸಿದ ಪ್ರಕರಣ ನಡೆದು ಆರು ತಿಂಗಳಾಯಿತು. ಆದರೆ ಇಷ್ಟು ದಿನದ ನಂತರವೂ ಉತ್ತರಖಾಂಡ್‌ನ ಚಂಪಾವತ್‌ನ ಸುಖಿದಂಗ್ ಸರ್ಕಾರಿ ಅಂತರ ಕಾಲೇಜಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸವರ್ಣೀಯ ಜಾತಿಯ ಮಕ್ಕಳು ಅಸ್ಪೃಶ್ಯತೆ ಆಚರಿಸುವುದನ್ನು ಮುಂದುರಿಸಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.
‘ಟೈಮ್ಸ್ ಆಫ್ ಇಂಡಿಯಾ’ ಜೊತೆ ಮಾತನಾಡಿದ್ದ ಸುನೀತಾ, “ನಾನು ತಯಾರಿಸಿದ ಊಟವನ್ನು ಡಿಎಂ ಕೋರಿಕೆಯ ನಂತರವೂ ಅವರು ತಿನ್ನಲು ಸಿದ್ಧರಿಲ್ಲ. ಆದರೆ, ಇತರ ಭೋಜನ್ಮಾತಾ ವಿಷಯದಲ್ಲಿ ಹೀಗಾಗಿಲ್ಲ. ನನ್ನ ಬಗೆಗೆ ಇರುವ ತಾರತಮ್ಯದ ಮನೋಭಾವವನ್ನು ಅಧಿಕಾರಿಗಳಿಂದ ಬದಲಾಯಿಸಲು ಸಾಧ್ಯವಾಗದಿದ್ದಾಗ, ಇನ್ಯಾರೂ ಸರಿಪಡಿಸಬಲ್ಲರು?” ಎಂದು ಪ್ರಶ್ನಿಸಿದ್ದರು.
“ನಾನು ಅಡುಗೆ ಕೆಲಸ ಬಿಟ್ಟು ಕೂಲಿ ಕೆಲಸ ಮಾಡಬೇಕೆಂದು ಮಕ್ಕಳು ಬಯಸುತ್ತಾರೆ” ಎಂದು ಸುನಿತಾ ದುಃಖ ತೋಡಿಕೊಂಡಿದ್ದರು.



ಇದು ಈ ದೇಶದ ದುರಂತ.
ಈ ವಿಚಾರದಲ್ಲಿ ಮಕ್ಕಳಿಗಿಂತಲೂ ಪೋಷಕರುಗಳಿಗೆ ಜಾತಿ ವ್ಯವಸ್ಥೆಯ ಅನಿಷ್ಟತೆಯ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಎಳೆ ವಯಸ್ಸಿನ ಮಕ್ಕಳಲ್ಲಿ ಈಗ ಬಗ್ಗೆ ಜಾಗ್ರತಿ ಮೂಡಿಸಬೇಕು, ಆದರೆ ಇಡೀ ವ್ಯವಸ್ಥೆಯೇ ಜಾತಿ ಆಧಾರಿತ ಆಗಿರುವಾಗ ಅರಿವು ಮೂಡಿಸುವವರು ಯಾರು.