ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯೆಸ್ ಅವರನ್ನು ದುಷ್ಕರ್ಮಿಗಳು ಇಂದು ಗುಂಡಿಕ್ಕಿ ಸಾಯಿಸಿದ್ದಾರೆ. ರಾಜಧಾನಿ ಪೋರ್ಟ್ ಎವ್ ಪ್ರಿನ್ಸ್ ನಗರದ ಅಧ್ಯಕ್ಷರ ಖಾಸಗಿ ನಿವಾಸದಲ್ಲಿ ಅಲ್ಲಿಯ ಕಾಲಮಾನ ಮಂಗಳವಾರ ಮಧ್ಯರಾತ್ರಿ 1 ಗಂಟೆ ಹೊತ್ತಿಗೆ ಹತ್ಯೆ ನಡೆದಿದೆ. ಅಧ್ಯಕ್ಷ ಮೋಯೆಸ್ ಹತ್ಯೆಯಯನ್ನು ಹೈಟಿ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು ರಾಷ್ಟ್ರಾಧ್ಯಕ್ಷರ ಸಾವಿನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದೆಂದು ನಿಯೋಜಿತ ಪ್ರಧಾನಿ ಮನವಿ ಮಾಡಿದ್ದಾರೆ. ಮೊಯೆಸ್ ಪತ್ನಿ ಮತ್ತು ದೇಶದ ಪ್ರಥಮ ಮಹಿಳೆ ಮಾರ್ಟಿನ್ ಮೊಯೆಸ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಖಾಸಗಿ ಕಮಾಂಡೋಗಳ ಗುಂಪೊಂದು ಕೆರಿಬಿಯ್ ದೇಶದ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿ ಅಧ್ಯಕ್ಷರ ಹತ್ಯೆಗೈದಿದೆ ಎಂದು ಪತ್ರಕರ್ತ ಮೈಕೆಲ್ ಡೀಬರ್ಟ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ‘ ಹಂತಕರಲ್ಲಿ ಕೆಲವರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದರು’ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ರಾಷ್ಟ್ರಾಧ್ಯಕ್ಷರ ಹತ್ಯೆ ಖಂಡಿಸಿ ಹೈಟಿ ಪ್ರಧಾನಿ ಡಾ. ಕ್ಲೌಡ್ ಜೋಸೆಫ್ ಹೇಳಿಕೆ ನೀಡಿದ್ದು ಸಾರ್ವಜನಿಕರಲ್ಲಿ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ದೇಶದ ಭದ್ರತಾ ಪರಿಸ್ಥಿತಿಗೆ ಯಾವುದೇ ಆತಂಕವಿಲ್ಲ. ಹೈಟಿ ರಾಷ್ಟ್ರೀಯ ಪೊಲೀಸ್ ಮತ್ತು ಹೈಟಿ ಸಶಸ್ತ್ರ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.. ಹಂತಕರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪ್ರಧಾನಿ ಪ್ರಕಟಣೆ ಹೊರಡಿಸಿದ್ದಾರೆ.
ಈ ವರ್ಷ ಫೆಬ್ರುವರಿಯಲ್ಲಿ ಜೊವೆನೆಲ್ ಮೊಯೆಸ್ ಅವರ ಹತ್ಯೆಗೆ ಪ್ರಯತ್ನ ನಡೆದಿತ್ತು. ಪ್ರತಿಪಕ್ಷ ನಾಯಕರ ಬೆಂಬಲವಿರುವ ಓರ್ವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೇರಿದಂತೆ, ಕೆಲವರು ತನ್ನನ್ನು ಕೊಲ್ಲಲು ಮತ್ತು ಸರ್ಕಾರ ಉರುಳಿಸಲು ಯತ್ನಿಸಿದ್ದರು ಎಂದು ಜೊವೆನೆಲ್ ಮೋಯೆಸ್ ಆರೋಪಿಸಿದ್ದರು. ಈ ಸಂಬಂಧ ಓರ್ವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೇರಿದಂತೆ ಹತ್ಯೆಗ ಯತ್ನಿಸಿದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಫೆಬ್ರುವರಿಯಲ್ಲಿ ಬಂಧಿತ ಸುಪ್ರೀಂಕೋರ್ಟ್ ನ್ಯಾಯಾಧೀಶ ಯವಿಕೆಲ್ ಡಬ್ರೆಜಿಲ್, ಮೊಯೆಸ್ ಅವರನ್ನು ಕೆಳಗಿಳಿಸಿ ತಾತ್ಕಾಲಿಕ ಅಧ್ಯಕ್ಷರಾಗಲು ಸಿದ್ದತೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಸಾಂಸ್ಥಿಕ ಕೊಲೆ : ತನಿಖೆಗೆ ಆಗ್ರಹಿಸಿ ಜೈಲಿನೊಳಗೆ ಉಪವಾಸ ಸತ್ಯಾಗ್ರಹ


