ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬ ಕೋರ್ಟ್ ಕೌನ್ಸಲಿಂಗ್ ನಡೆಸಿ ಒಟ್ಟಾಗಿಯೆ ಇರಿ ಎಂದು ಹೇಳಿದ್ದಕ್ಕೆ ಕೋಪಗೊಂಡು ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿಯೇ ಹೆಂಡತಿಯ ಕುತ್ತಿಗೆ ಕೊಯ್ದಿರುವ ಆತಂಕಕಾರಿ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜರುಗಿದೆ.
ಹೆಂಡತಿಯ ಕುತ್ತಿಗೆ ಕೊಯ್ದು ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಸುತ್ತಲಿನವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದಿದ್ದ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿವಕುಮಾರ್ ಎಂಬುವವರು ಚೈತ್ರ ಎಂಬುವವರನ್ನು 7 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಸಂಸಾರದಲ್ಲಿ ತೀರಾ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಅವರಿಬ್ಬರ ಜೊತೆ ಕೌನ್ಸಲಿಂಗ್ ನಡೆಸಿದ ಕೋರ್ಟ್ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳಿಗೆ ಬೇರೆ ಬೇರೆಯಾಗುವ ಅಗತ್ಯವಿಲ್ಲ. ಹಿಂದಿನ ಕಹಿ ಮರೆತು ಒಟ್ಟಾಗಿ ಬಾಳುವಂತೆ ಹೇಳಿತ್ತು. ಅದನ್ನು ಅವರಿಬ್ಬರೂ ಪರಸ್ಪರ ಒಪ್ಪಿಕೊಂಡಿದ್ದರು. ಕೋರ್ಟ್ ಮುಗಿಸಿ ಹೊರಬಂದ ಕೂಡಲೇ ಚೈತ್ರರನ್ನು ಶೌಚಾಲಯದತ್ತ ಎಳೆದೊಯ್ದ ಶಿವಕುಮಾರ್ ಚಾಕುವಿನಿಂದ ಕುತ್ತಿಗೆ ಕೊಯ್ದು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೈತ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತ ಸೋರಿಕೆಯಾದ ಕಾರಣ ಅವರ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಶಿವಕುಮಾರ್ ಮೇಲೆ ಪೊಲೀಸರು ಕೊಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಆತ ಕೋರ್ಟ್ ಆವರಣದೊಳಕ್ಕೆ ಮಾರಕಾಸ್ತ್ರಗಳನ್ನು ತಂದಿದ್ದು ಹೇಗೆ ಎಂದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ


