ದಕ್ಷಿಣ ಕನ್ನಡದಲ್ಲಿ ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಫೇಸ್ಬುಕ್ ಪೋಸ್ಟ್ ಮೂಲಕ ಕರೆ ಕೊಟ್ಟಿದ್ದ ಫೆಡರಲ್ ಬ್ಯಾಂಕಿನ ವ್ಯವಹಾರಿಕ ಮುಖ್ಯಸ್ಥನೆನ್ನಲಾದ ವಿಷ್ಣಪ್ರಸಾದ್ ನಿಡ್ಡಾಜೆ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ವೇಲೆಯಲ್ಲಿ ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಫೆಡರಲ್ ಬ್ಯಾಂಕ್ ತಿಳಿಸಿದೆ.
ತಾನು ಫೆಡರಲ್ ಬ್ಯಾಂಕಿನ ಅಧಿಕಾರಿಯೆಂದು ತನ್ನ ಫೇಸ್ ಬುಕ್ ಪ್ರೋಫೈಲ್ನಲ್ಲಿ ಹೇಳಿಕೊಂಡಿರುವ ವಿಷ್ಣುಪ್ರಸಾದ್ ಎಂಬುವವರು ವಿಟ್ಲದ ಬಳಿಯ ಸಾಲೆತ್ತೂರಿನಲ್ಲಿ ಮುಸ್ಲಿಮ್ ಮದುಮಗನೊಬ್ಬ ಕೊರಗರ ಆರಾದ್ಯ ದೈವ ಕೊರಗಜ್ಜನ ಅಣಕಿಸುವ ವೇಷ ತೊಟ್ಟಿದ್ದನೆಂಬ ಆರೋಪಕ್ಕೆ ಸಂಬಂಧಿಸಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ಇದರ ವಿರುದ್ದ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಟ್ವಿಟರ್ ಬಳಕೆದಾರರೊಬ್ಬರು ಫೆಡರಲ್ ಬ್ಯಾಂಕ್ನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಆರೋಪಿ ವಿರುದ್ದ ಪಿಎಫ್ಐ ಸಂಘಟನೆಯು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿತ್ತು.
ನಮ್ಮದು ಕೃಷ್ಣನ ತತ್ವ, ಶಿಶುಪಾಲನ ನೂರು ಪೆಟ್ಟುಗಳನ್ನು ಸಹಿಸೋದು, ನೂರೊಂದನೆ ಪೆಟ್ಟಿಗೆ ಢಿಮ್… ಬಾಂಧವರ ಸಾವಿರ ಪೆಟ್ಟು ಸಹಿಸೋದು, ನಂತರ ಗೋಧ್ರಾ ತರದ ಒಂದು ಪೆಟ್ಟಿನಲ್ಲಿ 20 ವರ್ಷ ಗಪ್ ಚುಪ್… ಗುಜರಾತಿನ ಕೊನೆಯ ಕೋಮುಗಲಭೆ ಯಾವಾಗ ಎಲ್ಲಿ ಹೇಗೆ ನಡೆಯಿತು ಅನ್ನೂದನ್ನ ಸ್ವಲ್ಪ ಯೋಚಿಸಿ ನೋಡಿದರೆ ಇದು ಅರ್ಥವಾದೀತು… ಬಹುಶಃ ವಿಟ್ಲ, ಮಂಗಳೂರು ಕಡೆ ಇನ್ನೂ ಅವುಗಳ ಕೌಂಟ್ ಪೂರ್ತಿ ಆಗಿಲ್ಲ ಅನ್ಸುತ್ತೆ… ಬಂದೂ ಬಂದೂ ಕೆಣಕುತ್ತಿವೆ… ಎಂದು ಹಿಂಸಾತ್ಮಕ ಬರಹ ವಿಷ್ಣುಪ್ರಸಾದ್ ತನ್ನ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದ. ಮತ್ತೊಂದು ಪೋಸ್ಟ್ನಲ್ಲಿ-ಕೊರಗಜ್ಜನ ವೇಷ ಹಾಕಿದ್ದಾನೆಂದು ಆರೋಪಿಸಲಾಗಿರುವ ಮುಸ್ಲಿಮರ ಮದುಮಗನ ಮನೆ, ಕಾರು, ಅಂಗಡಿ ಧ್ವಂಸ ಮಾಡಬೇಕೆಂಬರ್ಥದಲ್ಲಿ ಬರೆದಿದ್ದ. ಈಗ ವಿಷ್ಣುಪ್ರಸಾದ್ ಫೇಸ್ಬುಕ್ ಖಾತೆ ಡಿಲೀಟ್ ಆಗಿದೆ.
ಇದೆಲ್ಲವನ್ನು ಜಾಲತಾಣಿಗರು ಟ್ವೀಟ್ ಮೂಲಕ ಫೆಡರಲ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮುಜುಗರಕ್ಕೀಡಾಗಿದ್ದ ಫೆಡರಲ್ ಬ್ಯಾಂಕ್ ಆಡಳಿತಗಾರರು ಪ್ರತಿಕಿಯಿಸುವುದು ಅನಿವಾರ್ಯವಾಯಿತು. ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ನಮ್ಮ ಉದ್ಯೋಗಿಗಳ ಕಡೆಯಿಂದ ಯಾವುದೆ ಅಸಭ್ಯ, ಅನಪೇಕ್ಷಿತ ಅಥವಾ ಹಿಂಸಾತ್ಮಕ, ಪ್ರಶ್ನಾತ್ಮಕ ಕೃತ್ಯಗಳನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಅಂತಹ ವರ್ತನೆಯನ್ನು ಸಂಸ್ಥೆ ಎಂದು ಸಹಿಸುವುದಿಲ್ಲ. ಇಂತಹ ಯಾವುದೇ ಪ್ರಚೋದನೆಗೂ ಸಂಸ್ಥೆಗೂ ಸಂಬಂಧವಿಲ್ಲ. ಈ ಕುರಿತು ಸೂಕ್ತ ಕ್ರಮಕ್ಕಾಗಿ ವಿಚಾರಣೆ ಪ್ರಾರಂಭಿಸಲಾಗಿದೆ ಎಂದು ಫೆಡರಲ್ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ: ಕ್ಷಮೆ ಕೇಳಿದರೂ ಮುಗಿಯದ ಕೊರಗಜ್ಜ ಪ್ರಕರಣ: ಇಬ್ಬರ ಬಂಧನ