ಕಳೆದ ವರ್ಷ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದ್ದ ಯುವಕನನ್ನು ಕಳೆದ ವಾರ ಪಟೌಡಿಯಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಗುರುಗಾಂವ್ ಪೊಲೀಸರು ಬಂಧಿಸಿದ್ದಾರೆ.
ಬಿಸಲಪುರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪಟೌಡಿ ಪೊಲೀಸ್ ಠಾಣೆಯಲ್ಲಿ ರಾಮ ಭಕ್ತ ಗೋಪಾಲ್ ವಿರುದ್ಧ ಸೆಕ್ಷನ್ 153ಎ ಹಾಗೂ 295ಎ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದು ಆತ ಎದುರಿಸುತ್ತಿರುವ ಎರಡನೇ ಕಸ್ಟಡಿ ವಿಚಾರಣೆಯಾಗಿದೆ. ಕಳೆದ ವರ್ಷ ಗುಂಡು ಹಾರಿಸಿದ ಆರೋಪದಲ್ಲಿ ಆತನನ್ನು ಬಂಧಿಸಿದಾಗ ಆತನಿನ್ನು 18 ವರ್ಷ ತುಂಬಿರದ ಬಾಲಕನಾಗಿದ್ದ. ಆದರೆ ಈಗ 19 ವರ್ಷದ ಆತನನ್ನು ಗೌತಮ್ ಬುದ್ದ ನಗರದಿಂದ ಗುರುಗಾಂವ್ ಪೊಲೀಸರು ಬಂಧಿಸಿದ್ದಾರೆ.
ಜುಲೈ 04 ರಂದು ಪಟೌಡಿಯಲ್ಲಿ ಲವ್ ಜಿಹಾದ್ ಸೇರಿದಂತೆ ಇತರ ವಿಷಯಗಳ ಕುರಿತು ಮಹಾಪಂಚಾಯತ್ ಏರ್ಪಡಿಸಲಾಗಿತ್ತು. ಅಲ್ಲಿ ಈತ ಭಾಗವಹಿಸಿ “ನಮ್ಮ ಸಹೋದರಿಯರನ್ನು ಅವರು ಅಪಹರಿಸುತ್ತಿರುವಾಗ, ನಾವೇಕೆ ಅವರ ಸಹೋದರಿಯರನ್ನು ಅಪಹರಿಸಬಾರದು? ಭಯೋತ್ಪಾದನ ಮನಸ್ಥಿತಿಯ ಜನರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಸಿಎಎ ಬೆಂಬಲಿಸಿ ಜಾಮಿಯಾಗೆ ಹೋಗಿದ್ದ ನನಗೆ ಪಟೌಡಿ ಬಹುದೂರವಿಲ್ಲ” ಎಂದು ಭಾಷಣ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಮಹಾಪಂಚಾಯತ್ ಅನ್ನು ಹಿಂದೂ ಧರ್ಮ ರಕ್ಷಾ ಮಂಚ್ ಆಯೋಜಿಸಿತ್ತು. ವಿಶ್ವ ಹಿಂದೂ ಪರಿಷತ್, ಕರ್ಣಿಸೇನಾ ಮತ್ತು ಬಿಜೆಪಿಯ ಮುಖಂಡರು ಈ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಹಂಚಲಾದ ಕರಪತ್ರದಲ್ಲಿ ಇದು ಲವ್ ಜಿಹಾದ್, ಮಾರ್ಕೆಟ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ಮತಾಂತರ ಜಿಹಾದ್ ವಿರುದ್ಧ ಎಂದು ಬರೆಯಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2020ರ ಜನವರಿ 30 ರಂದು ದೆಹಲಿಯ ಜಾಮಿಯಾ ಬಳಿ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಕಪ್ಪು ಜಾಕೆಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದ ಈತ “ಯೆ ಲೋ ಆಜಾದಿ (ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ) ಎಂದು ಕೂಗಿ ಗುಂಡು ಹಾರಿಸಿದ್ದ. ಈ ಕಾರಣಕ್ಕಾಗಿ ಆತನನ್ನು ಕೊಲೆ ಮತ್ತು ಅಕ್ರಮ ಶಶಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು. ಆನಂತರ ಆತ ಮೈಂಡ್ ವಾಷ್‌ಗೊಳಗಾಗಿದ್ದ ಮತ್ತು ಪಶ್ಚಾತ್ತಾಪ ಪಟ್ಟಿದ್ದಾನೆ ಎಂದು ಆತನ ಕುಟುಂಬ ಹೇಳಿದಾಗ ಜಾಮೀನು ದೊರೆತಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶ ಜನಸಂಖ್ಯಾ ಮಸೂದೆ: ‘ಒನ್-ಚೈಲ್ಡ್’ ನೀತಿಯನ್ನು ತೆಗೆದು ಹಾಕುವಂತೆ ವಿಹೆಚ್‌ಪಿ ಒತ್ತಾಯ


