ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಖಂಡಿಸಿ ಮೈಸೂರು ಚಲೋ ಮೆರವಣಿಗೆ ನಡೆಸಲು ಹೈಕೋರ್ಟ್ ಅನುಮತಿ ನಿರಾಕರಿಸಿದ್ದು, ಪುಟ್‌ಬಾಲ್ ಕ್ರೀಡಾಂಗಣದಲ್ಲಿ ಒಂದೂವರೆ ತಾಸು ಸಮಾವೇಶ ನಡೆಸಲು ಮಾತ್ರ ಷರತ್ತುಬದ್ದ ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಮೈಸೂರು ಚಲೋಗೆ ಅನುಮತಿ ನಿರಾಕರಿಸಿದ್ದ ನಗರ ಪೊಲೀಸ್ ಆಯುಕ್ತರ ಕ್ರಮ ಪ್ರಶ್ನಿಸಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕಸದಸ್ಯ ಪೀಠ ಸೋಮವಾರ (ಫೆ.24) ವಿಚಾರಣೆ ನಡೆಸಿದೆ.
ಮೈಸೂರಿನ ಫುಟ್‌ಬಾಲ್ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಅರ್ಜಿದಾರರು ಸಭೆ/ಸಮಾವೇಶ ನಡೆಸಬಹುದು. ಇದಕ್ಕೆ 1 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಅನ್ನು ಮೈಸೂರು ಪೊಲೀಸ್ ಆಯುಕ್ತರಿಗೆ ಒದಗಿಸಬೇಕು. ಸಮಾವೇಶದಲ್ಲಿ ಭಾಗಿಯಾಗುವ ಯಾರೂ ಪ್ರಚೋದನಾಕಾರಿ ಭಾಷಣ ಮಾಡದಂತೆ ಅರ್ಜಿದಾರರು ಖಾತರಿವಹಿಸಬೇಕು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಅರ್ಜಿದಾರರನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಇಂದು (ಫೆ.24) ಬೆಳಿಗ್ಗೆ ಮೈಸೂರು ಚಲೋ ನಡೆಸಲು ರಾಷ್ಟ್ರೀಯ ಸುರಕ್ಷಾ ಜನಾಂದೋಲನಾ ಸಮಿತಿ ಮುಂದಾಗಿತ್ತು. ಆದರೆ, ನಿಷೇಧಾಜ್ಞೆ ಜಾರಿಗೊಳಿಸಿದ್ದ ಪೊಲೀಸರು ಮೆರವಣಿಗೆ, ಸಭೆಗೆ ಅನುಮತಿ ನಿರಾಕರಿಸಿದ್ದರು. ಆದರೆ, ಮಧ್ಯಾಹ್ನ 3:30ರ ಬಳಿಕ ಒಂದೂವರೆ ತಾಸು ಸಭೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ವರದಿ ಹೇಳಿದೆ.
ಮೈಸೂರು ಪೊಲೀಸ್ ಆಯುಕ್ತರು ಫುಟ್‌ಬಾಲ್ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಅಗತ್ಯ ಬಂದೋಬಸ್ತ್ ಮಾಡಬೇಕು. ಇಡೀ ಸಭೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಸೀಮಿತ ಅವಧಿಗೆ ನಿಷೇಧಾಜ್ಞೆ ಹಿಂಪಡೆಯಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ. ಅರ್ಜಿ ಇತ್ಯರ್ಥಪಡಿಸಿದೆ ಎಂದು ವರದಿ ವಿವರಿಸಿದೆ.
ಇಂದು ವಿಚಾರಣೆ ವೇಳೆ ಅರ್ಜಿದಾರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್ ಅವರು “ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಜಿಹಾದಿ ಮನಸ್ಥಿತಿಯವರು ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಮೈಸೂರಿನ ಗನ್ ಹೌಸ್‌ನಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಶಾಂತಿಯುತವಾಗಿ ಮೈಸೂರು ಚಲೋ ನಡೆಲು ಅನುಮತಿಸುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕು ರಕ್ಷಿಸಬೇಕು” ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಒಂದು ವಾರ ಅಥವಾ 10 ದಿನಗಳ ಬಳಿಕ ಅರ್ಜಿದಾರರು ಸಭೆ/ಮೆರವಣಿಗೆ ನಡೆಸಬಹುದಾಗಿದೆ. ಈಗಾಗಲೇ ಸಭೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದಎರಡು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಹಾಗೂ ಅಹಿತರಕರ ಘಟನೆ ನಡೆದರೆ ಅರ್ಜಿದಾರರನ್ನು ಹೊಣೆ ಮಾಡಲಾಗದು. ಹೀಗಾಗಿ, ಅನುಮತಿ ನೀಡಬಾರದು” ಎಂದಿದ್ದಾರೆ.
ಅರ್ಜಿದಾರರಿಗೆ ಸಭೆ ನಡೆಸಲು ಅನುಮತಿಸುವ ಮತ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ಸಾಕಷ್ಟು ಯೋಚಿಸಿದ ನ್ಯಾಯಾಲಯ ರಾಜ್ಯ ಸರ್ಕಾರ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಸಭೆ ನಡೆಸಲು ಅನುಮತಿಸುವ ಸಂಬಂಧ ಸೂಚನೆ ಪಡೆಯಲು ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಭಾನುಪ್ರಕಾಶ್ ಅವರಿಗೆ ಸೂಚಿಸಿತ್ತು. ಇದರ ಆಧಾರದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ ಎಎಜಿ ಅವರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರೊಂದಿಗೆ ಸಭೆ ಮಾಡಲು ಅನುಮತಿಸಬಹುದು” ಎಂದಿದ್ದಾರೆ.
ಇದನ್ನು ಆಲಿಸಿದ ಪೀಠವು ಅರ್ಜಿದಾರರ ನಿರಂತರ ಕೋರಿಕೆಯ ಮೇರೆಗೆ ಸೀಮಿತ ಅವಧಿಗೆ ಸಭೆ/ಸಮಾವೇಶ ನಡೆಸಲು ಷರತ್ತುಗಳನ್ನು ವಿಧಿಸಿ, ಅನುಮತಿಸಿದೆ ಎಂದು ಬಾರ್ & ಬೆಂಚ್ ವರದಿ ತಿಳಿಸಿದೆ.
ಕೆಎಸ್‌ಆರ್‌ಟಿಸಿ ಕಂಡಕ್ಟರ್ ಹಲ್ಲೆ ಪ್ರಕರಣ | ಆರೋಪಿ ವಿರುದ್ಧ ಗೂಂಡಾ ಕಾಯ್ದೆ: ಸಚಿವ ರಾಮಲಿಂಗಾ ರೆಡ್ಡಿ


