ಕರ್ನಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಜೂನ್ 11 ರಿಂದ ಬಾರಿ ಮಳೆಯಾಗುತ್ತಿದ್ದು ಗುಡುಗು ಸಿಡಿಲಿನ ಆರ್ಭಟಕ್ಕೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಭಾನುವಾರ ರಾತ್ರಿ ಬಾರಿ ಮಿಂಚು ಮತ್ತು ಸಿಡಿಲಿನ ಆಘಾತಕ್ಕೆ ಜನರು ಮೃತಪಟ್ಟಿರುವ ಘಟನೆ ವರದಿಯಾಗಿತ್ತು. ಮಂಗಳವಾರದ ಹೊತ್ತಿಗೆ ಸಿಡಿಲಿನ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬಿಡುವು ನೀಡಿದ್ದ ಮಳೆ ಮಂಗಳವಾರ ಮುಂಜಾನೆಯಿಂದಲೇ ಮತ್ತೆ ಚುರುಕುಗೊಂಡಿದೆ. ನಗರದ ಹನುಮಂತ ನಗರ, ಬಸವನಗುಡಿ, ಕೆ.ಆರ್. ಮಾರ್ಕೆಟ್ ಸೇರಿದಂತೆ ಇಂದು ಮುಂಜಾನೆಯಿಂದಲೇ ಮಳೆ ಹೊಡೆಯುತ್ತಿದ್ದು ಕೆಲಸ ಕಾರ್ಯಗಳಿಗೆ ಹೊರಟಿದ್ದ ಜನರ ಓಡಾಟಕ್ಕೆ ಅಡಚಣೆಯಾಗಿರುವುದು ಕಂಡು ಬಂತು.
ಭಾರತದ ಬಹುತೇಕ ಕಡೆಗಳಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ರಾತ್ರಿಯಿಂದ ಬಾರಿ ಮಳೆಯಾಗುತ್ತಿದೆ. ಹದಿನೈದು ದಿನ ತಡವಾಗಿ ಆಗಮಿಸದ ಮುಂಗಾರು ದೆಹಲಿ ಮತ್ತು ಸುತ್ತ ಮುತ್ತಲಿನ ಗುರುಗ್ರಾಮ, ಫರಿದಾಬಾದ್ ಪ್ರದೇಶಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕರು ಮನೆ ಬಿಟ್ಟು ಎತ್ತರದ ಪ್ರದೇಶಗಳಲ್ಲಿ ರಕ್ಷಣೆ ಪಡೆದಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ಸೆಲ್ಫಿ ತೆಗೆದುಕೊಳ್ಳುವಾಗ ಸಿಡಿಲು ಬಡಿದು 11 ಮಂದಿ ಸಾವು
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉತ್ತರಾಖಂಡ, ಜಮ್ಮು, ಪಂಜಾಬ್, ರಾಜಸ್ಥಾನದಂತಹ ಅನೇಕ ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಕ್ಕೆ ಇದುವರೆಗೆ 75 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬಾರಿ ಮಳೆ ಮತ್ತು ಗುಡುಗಿನ ಆರ್ಭಟಕ್ಕೆ ಉತ್ತರ ಭಾರತದ ಅನೇಕ ನಗರಗಳಲ್ಲಿ ಜನಜೀವನ ಅಸ್ಥವ್ಯಸ್ಥವಾಗಿದ್ದು ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ . ಹಿಮಾಚಲ ಮತ್ತು ಉತ್ತರಾಖಂಡದ ಹಲವಾರು ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಉತ್ತರಪ್ರದೇಶದಲ್ಲಿ ಮಿಂಚಿನಿಂದ ಸುಮಾರು 40 ಜನರು ಸಾವನ್ನಪ್ಪಿದ್ದಾರೆ, ಮಧ್ಯಪ್ರದೇಶದಲ್ಲಿ ಸುಮಾರು 20 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಹಿಮಾಚಲದ ಕಾಂಗ್ರಾ ಮತ್ತು ಡಾಲ್‌ಹೌಸಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸೋಮವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಧರ್ಮಶಾಲಾ ನಗರವು ಸಂಪೂರ್ಣ ಜಲಾವೃತವಾಗಿದೆ. ಬೃಹತ್ ಮೋಡಗಳು ಸ್ಫೋಟಗೊಂಡು ಇದ್ದಕ್ಕಿದ್ದಂತೆ ಪ್ರವಾಹೋಪಾದಿಯಲ್ಲಿ ಮಳೆ ಸುರಿಯಲು ಆರಂಭಿಸಿದ ಕಾರಣ ಅನೇಕ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಪ್ರವಾಹದಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿರುವುದು ವರದಿಯಾಗಿದೆ.
ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರಿ ಮಳೆ: ನೆಲಕ್ಕುರುಳಿದ ವಿದ್ಯುತ್ ಕಂಬಗಳು-ನದಿ ನೀರಿನ ಮಟ್ಟದಲ್ಲಿ ಹೆಚ್ಚಳ
ನೈಸರ್ಗಿಕ ವಿಪತ್ತನ್ನು ಅರಿತುಕೊಂಡು ಕೇಂದ್ರ ಗೃಹ ಸಚಿವಾಲಯವು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಕ್ಕೆ ಎಲ್ಲಾ ಸಹಾಯವನ್ನು ನೀಡಲು ಮುಂದಾಗಿರುವುದಾಗಿ ಹೇಳಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.


