ಅಲಹಾಬಾದ್ ಹೈಕೋರ್ಟ್ ಆದೇಶದಂತೆ 5 ನಗರಗಳಲ್ಲಿ ಲಾಕ್ ಡೌನ್ ಜಾರಿ ಮಾಡಲು ಉತ್ತರಪ್ರದೇಶ ಸರ್ಕಾರ ನಿರಾಕರಿಸಿದೆ. ಸಾಂಕ್ರಾಮಿಕ ರೋಗವು “ನಮ್ಮ ವೈದ್ಯಕೀಯ ಮೂಲಸೌಕರ್ಯವನ್ನು ವಾಸ್ತವಿಕವಾಗಿ ಅಸಮರ್ಥಗೊಳಿಸಿದೆ… ವಿಶೇಷವಾಗಿ ಪ್ರಯಾಗರಾಜ್, ಲಕ್ನೋ, ವಾರಣಾಸಿ, ಕಾನ್ಪುರ್ ಮತ್ತು ಗೋರಖ್ಪುರದಂತಹ ನಗರಗಳಲ್ಲಿ’ ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತ್ತು.
ಕೋವಿಡ್ ನಿಭಾಯಿಸಲು ಲಕ್ನೋ, ಪ್ರಯಾಗರಾಜ್, ವಾರಣಾಸಿ, ಕಾನ್ಪುರ್ ಮತ್ತು ಗೋರಖ್ಪುರ್ ಈ ಐದು ನಗರಗಳಲ್ಲಿ ಏಪ್ರಿಲ್ 26 ರವರೆಗೆ ಲಾಕ್ ಡೌನ್ ಮಾಡುವ ನಿನ್ನೆ ಹೈಕೋರ್ಟ್ ಆದೇಶದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಲಾಕ್‌ಡೌನ್ ಜಾರಿಗೊಳಿಸಲು ಉತ್ತರಪ್ರದೇಶ ಸರ್ಕಾರ ನಿನ್ನೆ ಸಂಜೆಯೇ ನಿರಾಕರಿಸಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಜೀವ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸಬೇಕಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸುವುದು ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಬಂದ್ ಮಾಡುವುದು ಸೇರಿದಂತೆ ಸರಣಿ ಕ್ರಮಗಳನ್ನು ಹೈಕೋರ್ಟ್ ಆದೇಶಿಸಿತ್ತು.
ಯುಪಿ 24 ಗಂಟೆಗಳಲ್ಲಿ ದಾಖಲೆಯ 30,000 ಕ್ಕಿಂತ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ನ್ಯಾಯಾಲಯವು ಹಣಕಾಸು ಸಂಸ್ಥೆಗಳು, ವೈದ್ಯಕೀಯ ಅಥವಾ ಆರೋಗ್ಯ ಸೇವೆಗಳನ್ನು ನೀಡುವ ವ್ಯವಹಾರ, ಕೈಗಾರಿಕಾ ಮತ್ತು ವೈಜ್ಞಾನಿಕ ಸಂಸ್ಥೆಗಳು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಕಚೇರಿಗಳು, ಸರ್ಕಾರಿ ಅಥವಾ ಖಾಸಗಿ, ಮುಚ್ಚಲು ಆದೇಶಿಸಿತ್ತು. ಸ್ಥಳೀಯ ಸಂಸ್ಥೆಗಳಿಗೆ ವಿನಾಯಿತಿ ನೀಡಿತ್ತು.
ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಹೇಳಿತ್ತು.
ಇದನ್ನೂ ಓದಿ: ಯುಪಿಯ 5 ನಗರಗಳಲ್ಲಿ ಏ.26ರವರೆಗೆ ಲಾಕ್ ಡೌನ್ ಜಾರಿಗೆ ಹೈಕೋರ್ಟ್ ಆದೇಶ


