ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಆರ್‌ಟಿ) ತನ್ನ ಹಲವು ಹೊಸ ಇಂಗ್ಲಿಷ್ ಮಾಧ್ಯಮ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳನ್ನು ನೀಡಿದೆ. ಅವುಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸಲು ಉದ್ದೇಶಿಸಲಾದ ಪುಸ್ತಕಗಳು ಸೇರಿವೆ ಎಂದು ಇಂಡಿಯಾ ಟುಡೇ ಸೋಮವಾರ ವರದಿ ಮಾಡಿದೆ.
ಎನ್‌ಸಿಆರ್‌ಟಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಶಾಲಾ ಶಿಕ್ಷಣವನ್ನು ಸುಧಾರಿಸುವ ಕಾರ್ಯಕ್ರಮಗಳು ಮತ್ತು ನೀತಿಗಳ ಕುರಿತು ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತದೆ.
ಪಠ್ಯಪುಸ್ತಕಗಳ ಶೀರ್ಷಿಕೆಗಳನ್ನು ಬದಲಾಯಿಸುವ ಮಂಡಳಿಯ ನಿರ್ಧಾರವನ್ನು ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಟೀಕಿಸಿದ್ದಾರೆ. ಈ ನಿರ್ಧಾರವು ಅರ್ಥಹೀನ ಎಂದು ಅವರು ಹೇಳಿದ್ದು, ಪುನರ್ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಹಿಂದೆ 6ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕಕ್ಕೆ ‘ಹನಿಸಕಲ್’ ಎಂಬ ಹೆಸರಿತ್ತು. ಅದನ್ನು ಈಗ ‘ಪೂರ್ವಿ’ ಎಂದು ಬದಲಾಯಿಸಲಾಗಿದೆ. ಇದರ ಹಿಂದಿ ಅರ್ಥ ‘ಪೂರ್ವ’ ಎಂದಾಗಿದೆ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಒಂದು ರಾಗದ ಹೆಸರೂ ಹೌದು ಎಂದು ವರದಿ ಹೇಳಿದೆ.
ಮುಂದುವರಿದು, 1 ಮತ್ತು 2 ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಈಗ ‘ಮೃದಂಗ್’ ಎಂದು ಹೆಸರಿಸಲಾಗಿದೆ ಮತ್ತು 3 ನೇ ತರಗತಿಯ ಪಠ್ಯಪುಸ್ತಕದ ಹೆಸರನ್ನು ‘ಸಂತೂರ್’ ಎಂದು ಬದಲಾಯಿಸಲಾಗಿದೆ. ಮೃದಂಗ್ ಮತ್ತು ಸಂತೂರ್ ಭಾರತೀಯ ಸಂಗೀತ ವಾದ್ಯಗಳ ಹೆಸರುಗಳಾಗಿವೆ.
ಎನ್‌ಸಿಇಆರ್‌ಟಿ ಈ ಹಿಂದೆ ವಿವಿಧ ಭಾಷೆಗಳಲ್ಲಿ ಪಠ್ಯಪುಸ್ತಕಗಳಿಗೆ ವಿಭಿನ್ನ ಶೀರ್ಷಿಕೆಗಳನ್ನು ಬಳಸಿತ್ತು ಎಂದು ಇಂಡಿಯಾ ಟುಡೇ ವರದಿ ಹೇಳಿದೆ. 6 ನೇ ತರಗತಿಯ ಗಣಿತ ಪಠ್ಯಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಮ್ಯಾಥ್‌ಮ್ಯಾಟಿಕ್ಸ್, ಹಿಂದಿಯಲ್ಲಿ ಗಣಿತ್ ಮತ್ತು ಉರ್ದು ಭಾಷೆಯಲ್ಲಿ ರಿಯಾಜಿ ಎಂದು ಕರೆಯಲಾಗಿತ್ತು.
ಹೊಸ ಬದಲಾವಣೆಯ ಪ್ರಕಾರ, ಗಣಿತ ಪಠ್ಯಪುಸ್ತಕದ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳಿಗೆ ಗಣಿತ್ ಪ್ರಕಾಶ್ ಎಂದು ಹೆಸರಿಸಲಾಗಿದೆ. ಉರ್ದು ಆವೃತ್ತಿಯ ಶೀರ್ಷಿಕೆ ಏನು ಎಂಬುದು ಸ್ಪಷ್ಟವಾಗಿಲ್ಲ.
ಕೇರಳದ ವಿರೋಧ
ಪಠ್ಯಪುಸ್ತಕಗಳಿಗೆ ಹಿಂದಿ ಮರುನಾಮಕರಣ ಮಾಡುವ ಎನ್‌ಸಿಇಆರ್‌ಟಿಯ ನಿರ್ಧಾರವು ‘ಒಕ್ಕೂಟ ವ್ಯವಸ್ಥೆಯ ತತ್ವಗಳು ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ’ ವಿರುದ್ಧವಾಗಿದೆ ಎಂದು ಸೋಮವಾರ ಕೇರಳದ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಹೇಳಿದ್ದಾರೆ.
“ಇದು ಅರ್ಥಹೀನ ಮಾತ್ರವಲ್ಲ, ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಹಾಳುಮಾಡುವ ರೀತಿಯಲ್ಲಿ ಒಬ್ಬರ ಸಾಂಸ್ಕೃತಿಕ ಮೌಲ್ಯಗಳನ್ನು ಹೇರುವ ಕೃತ್ಯವಾಗಿದೆ” ಎಂದಿದ್ದಾರೆ.
ಭಾಷಾ ವೈವಿಧ್ಯತೆಯನ್ನು ಗೌರವಿಸಲು ಮತ್ತು ಮಕ್ಕಳ ಮನಸ್ಸಿನಲ್ಲಿ ಸೂಕ್ಷ್ಮ ಸಂವೇದನೆಯನ್ನು ಬೆಳೆಸಲು ದಶಕಗಳಿಂದ ಬಳಸಲಾಗುತ್ತಿದ್ದ ಇಂಗ್ಲಿಷ್ ಶೀರ್ಷಿಕೆಗಳನ್ನು ಬದಲಾಯಿಸುವುದು ಸಂಪೂರ್ಣವಾಗಿ ತಪ್ಪು ಎಂದು ಹೇಳಿದ್ದಾರೆ.
“ಹಿಂದಿಯೇತರ ಇತರ ರಾಜ್ಯಗಳಂತೆ ಕೇರಳ ಕೂಡ ಭಾಷಾ ವೈವಿಧ್ಯತೆಯನ್ನು ರಕ್ಷಿಸಲು ಮತ್ತು ಪ್ರಾದೇಶಿಕ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಲು ಬದ್ಧವಾಗಿದೆ. ಪಠ್ಯಪುಸ್ತಕಗಳ ಶೀರ್ಷಿಕೆಗಳು ಕೇವಲ ಹೆಸರುಗಳಲ್ಲ; ಅವು ಮಕ್ಕಳ ಗ್ರಹಿಕೆ ಮತ್ತು ಕಲ್ಪನೆಯನ್ನು ರೂಪಿಸುತ್ತವೆ. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಶೀರ್ಷಿಕೆಗಳಿಗೆ ಅರ್ಹರು. ಶಿಕ್ಷಣವು ಹೇರಿಕೆಯ ಸಾಧನವಾಗಿರಬಾರದು, ಬದಲಾಗಿ ಸಬಲೀಕರಣ ಮತ್ತು ಒಮ್ಮತದ ಸಾಧನವಾಗಿರಬೇಕು” ಎಂದಿದ್ದಾರೆ.
ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸಲು ರಾಜ್ಯ ಸರ್ಕಾರಗಳು ಒಗ್ಗೂಡಬೇಕೆಂದು ಅವರು ಕರೆ ನೀಡಿದ್ದಾರೆ.
2020ರ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಎನ್‌ಸಿಇಆರ್‌ಟಿ 2023ರಲ್ಲಿ ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸಿತು. ಮೊದಲು 1 ಮತ್ತು 2 ನೇ ತರಗತಿಯ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿತ್ತು. ನಂತರ 2024 ರಲ್ಲಿ 3 ಮತ್ತು 6 ನೇ ತರಗತಿಯ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿತ್ತು. 4, 5, 7 ಮತ್ತು 8 ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಈಗ ಬಿಡುಗಡೆ ಮಾಡಲಾಗುತ್ತಿದೆ.
ಉತ್ತರಪ್ರದೇಶ: ಮುಸ್ಲಿಂ ಯುವತಿಯ ಬುರ್ಖಾ ಬಿಚ್ಚಿ ಥಳಿತ; ವೀಡಿಯೋ ವೈರಲ್


