ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಕಳೆದ 1198 ದಿನಗಳಿಂದಲೂ ತಮ್ಮ ಪೂರ್ವಜರ ಮಣ್ಣಿಗಾಗಿ ನಡೆಸುತ್ತಿದ್ದ ತಪಸ್ಸಿನಂತಹ ಹೋರಾಟಕ್ಕೆ ಇಂದು ಐತಿಹಾಸಿಕ ವಿಜಯ ಲಭಿಸಿದೆ. “ಇಂದು ಕರ್ನಾಟಕ ಗೆದ್ದಿದೆ! ನಮ್ಮ ಹಿರಿಯರ ಮಣ್ಣನ್ನು ನಾವು ಮಾರುವುದಿಲ್ಲ ಎಂಬ ರೈತರ ಅಚಲ ಸಂಕಲ್ಪಕ್ಕೆ ಕೊನೆಗೂ ಫಲ ಸಿಕ್ಕಿದೆ” ಎಂದು ಹೋರಾಟ ಸಮಿತಿಗಳು ಜಂಟಿಯಾಗಿ ಘೋಷಿಸಿವೆ. ಈ ಘೋಷಣೆ ರೈತರ ಮುಖದಲ್ಲಿ ಹರ್ಷವನ್ನು, ಕಣ್ಣಲ್ಲಿ ಆನಂದಭಾಷ್ಪವನ್ನು ತರಿಸಿತ್ತು ಎಂದು ಜಂಟಿ ಹೇಳಿಕೆ ತಿಳಿಸಿದೆ.
ರೈತರ ಕಷ್ಟಗಳಿಗೆ ಸರ್ಕಾರ ಆರಂಭದಲ್ಲಿ ಸ್ಪಂದಿಸದೆ, ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಕಠಿಣ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಕರ್ನಾಟಕವು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ದೃಢವಾಗಿ ತೀರ್ಮಾನಿಸಿ ಜೂನ್ 25ರಂದು “ದೇವನಹಳ್ಳಿ ಚಲೋ”ಗೆ ಕರೆ ನೀಡಿತ್ತು. ಈ ಕರೆಯು ಇಡೀ ಕರ್ನಾಟಕವನ್ನು ಜಾಗೃತಗೊಳಿಸಿತು; ನಟ ಪ್ರಕಾಶ್ ರಾಜ್ ಸೇರಿದಂತೆ ನಾಡಿನ ನಾಗರಿಕ ಸಮಾಜ ಅಮೋಘವಾಗಿ ಸ್ಪಂದಿಸಿತ್ತು. ಆದರೂ, ಆಡಳಿತವು ಹೋರಾಟಗಾರರನ್ನು ಬಂಧಿಸಿ ಚಳುವಳಿಯನ್ನು ದಮನಿಸುವ ಪ್ರಯತ್ನ ನಡೆಸಿತ್ತು. ಆದರೆ, ಕರ್ನಾಟಕದ ಎಲ್ಲಾ ಜನ ಸಂಘಟನೆಗಳ ನಾಯಕತ್ವ ಒಂದು ಮುಷ್ಟಿಯಾಗಿ, ದಿಟ್ಟವಾಗಿ ಇದನ್ನು ಎದುರಿಸಿ ಫ್ರೀಡಂ ಪಾರ್ಕ್‌ನಲ್ಲಿ “ಭೂ ಸತ್ಯಾಗ್ರಹ”ವನ್ನು ಮುಂದುವರೆಸಿತು ಎಂದು ಜಂಟಿ ಹೇಳಿಕೆ ತಿಳಿಸಿದೆ.
ಜುಲೈ 4ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು. ಅಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕತ್ವ ಒಳಗೊಂಡಂತೆ ವಿವಿಧ ರಾಜ್ಯಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿತ್ತು. ಕರ್ನಾಟಕದ ದುಡಿಯುವ ಜನರು, ವಿಶೇಷವಾಗಿ ಬಡ ಬಗರ್ ಹುಕುಂ ರೈತರು, ಭೂಮಿ ಹಕ್ಕು ಕಳೆದುಕೊಂಡವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ “ನಾಡ ಉಳಿಸಿ ಸಮಾವೇಶ”ವನ್ನು ಕರ್ನಾಟಕದ ದನಿಯಾಗಿ ಮಾರ್ಪಡಿಸಿದ್ದರು. ಸಭೆಯಲ್ಲಿ ಮುಖ್ಯಮಂತ್ರಿಗಳು “ಸರ್ಕಾರಕ್ಕೆ ಇನ್ನು 10 ದಿನಗಳ ಕಾಲಾವಕಾಶ ಕೊಡಿ” ಎಂದು ಚಳುವಳಿಗಾರರನ್ನು ಕೋರಿದ್ದರು. ರೈತರಿಗೆ ಯಾವುದೇ ವಂಚನೆಯಾಗದಂತೆ ನೋಡಿಕೊಳ್ಳಬೇಕು ಎಂಬ ಭಾವನಾತ್ಮಕ ಮನವಿಯೊಂದಿಗೆ ಈ ಕಾಲಾವಕಾಶವನ್ನು ಸರ್ಕಾರಕ್ಕೆ ನೀಡಲಾಗಿತ್ತು ಎಂದು ಅದು ಹೇಳಿದೆ.

ಈ ಹತ್ತು ದಿನಗಳ ಅವಧಿಯು ರೈತರಿಗೆ ಮತ್ತೊಂದು ಅಗ್ನಿಪರೀಕ್ಷೆಯಾಗಿತ್ತು. ರೈತರ ಒಗ್ಗಟ್ಟನ್ನು ಒಡೆಯಲು ಕೆಲವು ಸ್ಥಳೀಯ ಪುಡಾರಿಗಳು ಹಾಗೂ ರಿಯಲ್ ಎಸ್ಟೇಟ್ ಏಜೆಂಟರು ಅನೇಕ ಹುನ್ನಾರಗಳನ್ನು ನಡೆಸಿದರು. ಆದರೆ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಚನ್ನರಾಯಪಟ್ಟಣ ಹಾಗೂ 13 ಹಳ್ಳಿಗಳ ಜನ ಈ ಷಡ್ಯಂತ್ರವನ್ನು ಧೈರ್ಯದಿಂದ ವಿಫಲಗೊಳಿಸಿದರು. ಪ್ರತಿ ಹಳ್ಳಿಯಲ್ಲಿ ಗ್ರಾಮ ಸಂಕಲ್ಪ ಸಮಾವೇಶಗಳನ್ನು ನಡೆಸಿ, ಅಂತಿಮವಾಗಿ ಜುಲೈ 14ರಂದು ನಡೆದ “ಗ್ರಾಮ ಸಂಕಲ್ಪ ಸಮಾವೇಶ”ದಲ್ಲಿ “ಪ್ರಾಣ ಹೋದರೂ – ಭೂಮಿ ಕೊಡುವುದಿಲ್ಲ” ಎಂಬ ತಮ್ಮ ಒಗ್ಗಟ್ಟಿನ ಮತ್ತು ಪ್ರಾಣಕ್ಕಿಂತ ಮಿಗಿಲಾದ ತೀರ್ಮಾನವನ್ನು ಮತ್ತೊಮ್ಮೆ ರುಜುವಾತುಪಡಿಸಿದರು ಎಂದು ಹೇಳಿಕೆಯು ತಿಳಿಸಿದೆ.
ಇಂದು, ಅಂದರೆ ಜುಲೈ 15ರಂದು, ಇಡೀ ಕರ್ನಾಟಕ ಮಾತ್ರವಲ್ಲದೆ ಭಾರತವೇ ಕಾತರದಿಂದ ಕಾಯುತ್ತಿದ್ದ ಮಹತ್ವದ ಸಭೆ ವಿಧಾನ ಸೌಧದಲ್ಲಿ ನಡೆಯಿತು. ಸಭೆಯಲ್ಲಿ ನೇರವಾಗಿ ವಿಷಯಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಕೃಷಿಯನ್ನು ಬಿಡುವುದಿಲ್ಲ” ಎಂಬ ರೈತರ ಅಚಲ ಸಂಕಲ್ಪವನ್ನು, ಮತ್ತು “ಇಡೀ ಕರ್ನಾಟಕದ ಜನ ಸಂಘಟನೆಗಳು ಹಾಗೂ ನಾಗರಿಕರೆಲ್ಲಾ ಒಗ್ಗೂಡಿ ದನಿ ಎತ್ತಿದ್ದ ಐತಿಹಾಸಿಕ ಪರಿಯನ್ನು ಪುರಸ್ಕರಿಸಿ”, ಭೂಸ್ವಾಧೀನದ ಇಡೀ ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಕೈಬಿಡುವ ಐತಿಹಾಸಿಕ ತೀರ್ಮಾನವನ್ನು ಘೋಷಿಸಿದರು. ಜನಮನಕ್ಕೆ ಸ್ಪಂದಿಸಿದ್ದಕ್ಕಾಗಿ, ಈ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದ್ದಕ್ಕಾಗಿ ಸರ್ಕಾರಕ್ಕೆ, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಕಾಂಗ್ರೆಸ್ಸಿನ ಹೈಕಮಾಂಡ್‌ಗೆ, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿಯವರಿಗೆ ಹೋರಾಟ ಸಮಿತಿಗಳು ಕೃತಜ್ಞತೆಗಳನ್ನು ಸಲ್ಲಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಇದು ಜನ ಚಳುವಳಿಗಳ ಒಗ್ಗಟ್ಟಿನ ಹೋರಾಟಕ್ಕೆ ಸಂದ ಸಮಷ್ಟಿ ಜಯವಾಗಿದೆ” ಎಂದು ಹೋರಾಟಗಾರರು ಭಾವುಕವಾಗಿ ಬಣ್ಣಿಸಿದ್ದಾರೆ. ಈ ಐಕ್ಯತೆಯನ್ನು ಹೀಗೇ ಮುಂದುವರೆಸುವುದಾಗಿ, ಜನರ ನೋವಿಗೆ ದನಿಯಾಗಿ ದುಡಿಯುವುದಾಗಿ ಮತ್ತು ಆಳುವವರನ್ನು ಪ್ರಶ್ನಿಸುವ ಜನದನಿಯಾಗಿ ಕೆಲಸ ಮಾಡುವುದಾಗಿ ಈ ಐತಿಹಾಸಿಕ ಸಂದರ್ಭದಲ್ಲಿ ಮತ್ತೊಮ್ಮೆ ಸಂಕಲ್ಪ ತೊಟ್ಟಿದ್ದಾರೆ. ಕರ್ನಾಟಕದ ಅಭಿವೃದ್ಧಿ ಮಾದರಿ ಹೇಗಿರಬೇಕು? ಭೂ ಬಳಕೆ ನೀತಿ ಏನಾಗಿರಬೇಕು? ಎಂಬ ಅಮೂಲ್ಯ ಪ್ರಶ್ನೆಗಳ ಸುತ್ತ ಸಾರ್ವಜನಿಕ ಚರ್ಚೆ ಚಾಲನೆ ನೀಡುವ ತೀರ್ಮಾನವನ್ನೂ ತೆಗೆದುಕೊಳ್ಳುತ್ತಿದ್ದು, ಸರ್ಕಾರವೂ ಈ ಚರ್ಚೆಯಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
‘ಜನ ಚಳವಳಿಗಳ ಐಕ್ಯತೆ ಚಿರಾಯುವಾಗಲಿ!’
‘ಬಲವಂತದ ಭೂಸ್ವಾಧೀನಗಳು ಕೊನೆಯಾಗಲಿ!’
‘ಭೂಮಿಯ ಮೇಲೆ ದುಡಿಯುವ ಜನರ ಹಕ್ಕು ಮರುಸ್ಥಾಪನೆಯಾಗಲಿ!’
ಇದು ಹೋರಾಟಗಾರರ ಅಚಲ ನಂಬಿಕೆಯ, ಸಾಮೂಹಿಕ ಪ್ರಯತ್ನದ ಮತ್ತು ಪ್ರಜಾಪ್ರಭುತ್ವದ ವಿಜಯದ ಸಂಕೇತವಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ರೈತರ ಬೇಡಿಕೆ ಪರಿಗಣಿಸಿ ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ


