Homeಮುಖಪುಟಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ..

ಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ..

ತಮಗೆ ಲಾಭವಾಗುವುದಾದರೆ ಬಿಜೆಪಿ ಮತ್ತು ಸಂಘಪರಿವಾರ ಯಾವ ನಾಯಕರ ಚಾರಿತ್ರ್ಯವಧೆ ಮಾಡುವುದಕ್ಕೂ ಸೈ, ಇತರೆ ಪಕ್ಷದ ಯಶಸ್ವಿ ನಾಯಕರನ್ನು ದತ್ತು ಪಡೆಯುವುದಕ್ಕೂ ಜೈ ಅನ್ನುತ್ತಿದೆ ಇತಿಹಾಸ.

- Advertisement -
- Advertisement -

ಹೆಚ್.ಎಸ್. ದೊರೆಸ್ವಾಮಿ ಈ ನಾಡಿನ ಸಾಕ್ಷಿ ಪ್ರಜ್ಞೆ ಭಾರತದ ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ಮಹಾತ್ಮಾ ಗಾಂಧಿ ದೆಸೆಯಿಂದ ಉದಯಿಸಿದ ಕೆಲವೇ ಕೆಲವು ಅಪರೂಪದ ವ್ಯಕ್ತಿತ್ವಗಳಲ್ಲೊಂದು. ಸ್ವಾತಂತ್ರ್ಯಪೂರ್ವ ಕಾಲಕ್ಕೂ ಸ್ವಾತಂತ್ರ್ಯಾ ನಂತರದ ಈಗಿನ 21ನೇ ಶತಮಾನಕ್ಕೂ ಪ್ರಾಮಾಣಿಕತೆ ಮತ್ತು ಆದರ್ಶಕ್ಕೆ ಪಳೆಯುಳಿಕೆಯಂತೆ ಉಳಿದುಕೊಂಡಿರುವ ಕೊನೆಯ ಕೊಂಡಿ ಎಂದರೆ ತಪ್ಪಾಗಲಾರದು.

ಆದರೆ, ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರನ್ನೇ ಅವಮಾನಿಸುವ ಮತ್ತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಜನ ಚಳುವಳಿಯೊಂದರ ದಿಕ್ಕು ತಪ್ಪಿಸಲು ಮುಂದಾಗಿರುವುದು ಶೋಚನೀಯ. ವಿಚಾರ ಇಷ್ಟಕ್ಕೆ ನಿಂತಿದ್ದರೆ ಅಡ್ಡಿಯಿಲ್ಲ. ಆದರೆ ದೊರೆಸ್ವಾಮಿ ಅವರನ್ನು ಹೀಗೆಳೆಯುವ ಭರದಲ್ಲಿ ಬಿಜೆಪಿ-ಸಂಘ ಪರಿವಾರವು ಇತಿಹಾಸ ಪುರುಷರ ಚಾರಿತ್ರ್ಯ ವಧೆ ಮಾಡುವ ತನ್ನ ಹಳೆಯ ಚಾಳಿಯನ್ನು ಮತ್ತೆ ಪುನರಾವರ್ತಿಸಿದೆ. ಬಿಜೆಪಿ ಉದ್ದೇಶಪೂರ್ವಕವಾಗಿ ಚಾರಿತ್ರ್ಯ ವಧೆ ಮಾಡುತ್ತಿರುವ ಸ್ವಾತಂತ್ರ್ಯ ಸೇನಾನಿಗಳ ಪಟ್ಟಿಯಲ್ಲಿ ದೊರೆಸ್ವಾಮಿಯವರು ಮೊದಲಿಗರಲ್ಲ ಭಾಗಶಃ ಕೊನೆಯವರೂ ಅಲ್ಲ.

ಏಕೆಂದರೆ, ಕಳೆದ 7 ದಶಕಗಳ ಇತಿಹಾಸದಲ್ಲಿ ಮಹಾತ್ಮಾ ಗಾಂಧಿ, ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂ ಅವರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ವರೆಗೆ ಸಂಘಪರಿವಾರದವರಿಂದ ಚಾರಿತ್ರ್ಯವಧೆಗೆ ಒಳಗಾದ ಇತಿಹಾಸ ಪುರುಷರು ಒಬ್ಬಿಬ್ಬರಲ್ಲ ಆ ಪಟ್ಟಿ ತುಂಬಾ ದೊಡ್ಡದಿದೆ. ಆ ಕುರಿತ ವರದಿ ಇಲ್ಲಿದೆ.

ಮಹಾತ್ಮನನ್ನೇ ಕೊಂದವರು ಅವರ ಆದರ್ಶವನ್ನೂ ಕೊಂದರಲ್ಲಾ?

ಕಳೆದ ಶತಮಾನದ ಶ್ರೇಷ್ಠ ಸಂತರಲ್ಲಿ ಮಹಾತ್ಮಾ ಗಾಂಧಿಯೂ ಪ್ರಮುಖರು. ದಕ್ಷಿಣ ಆಫ್ರಿಕಾದಿಂದ ಭಾರತದವರೆಗೆ ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆದರೆ, ಕೇವಲ ಧರ್ಮದ ಕಾರಣಕ್ಕೆ ಇಡೀ ವಿಶ್ವಕ್ಕೆ ಅಹಿಂಸೆಯನ್ನು ಬೋಧಿಸಿದ್ದ ಗಾಂಧಿಗೆ ಇದೇ ಸಂಘ ಪರಿವಾರದ ವ್ಯಕ್ತಿ ನಾಥೂರಾಮ್ ಗೋಡ್ಸೆ ಹಿಂಸಾತ್ಮಕ ಅಂತ್ಯ ಕಲ್ಪಿಸಿದ್ದ. ಗಾಂಧಿ ಸಾವಿಗೆ ಸಂಘ ಪರಿವಾರವೇ ಕಾರಣ ಎಂಬುದು ಬಹಿರಂಗ ಸತ್ಯ.

ಆದರೂ ಸಂಘ ಪರಿವಾರ ರಾಜಕೀಯವಾಗಿ ಬೆಳೆಯಲು ಗಾಂಧಿಯನ್ನು ಬಳಸಿಕೊಂಡಿತ್ತು. ಒಂದೆಡೆ ಗಾಂಧಿ ಕನಸಿನ ರಾಮರಾಜ್ಯ ಸ್ಥಾಪನೆಯೇ ತನ್ನ ಆದರ್ಶ ಎಂದು ಹೇಳಿಕೊಳ್ಳುವ ಬಿಜೆಪಿ ಗಾಂಧಿ ಹೆಸರನ್ನು ಮತವನ್ನಾಗಿ ಪರಿವರ್ತಿಸಿಕೊಂಡರೆ, ಮತ್ತೊಂದೆಡೆ ಸಂಘಪರಿವಾರ ಗಾಂಧಿಯ ಪುಣ್ಯತಿಥಿಯ ದಿನ ಅವರದೇ ಪ್ರತಿಕೃತಿಗೆ ಗುಂಡಿಕ್ಕಿ ವಿಕೃತ ನಗೆ ಬೀರಿತ್ತು. ಹಂತಕ ನಾಥೂರಾಮ ಗೋಡ್ಸೆಗೆ ದೇವಾಲಯ ಕಟ್ಟುವ ಮಾತುಗಳನ್ನಾಡಿತ್ತು.

ಸಂಸದ ಅನಂತಕುಮಾರ್ ಅಂತಹ ಕೆಲವು ಸಂಘ ಪರಿವಾರದ ಕಟ್ಟಾಳುಗಳು ತುಂಬು ಸಭೆಯಲ್ಲಿ “ಅಹಿಂಸಾತ್ಮಕ ಹೋರಾಟ ಎಂಬುದು ಒಂದು ಸೋಗಲಾಡಿ ಹೋರಾಟ-ಈ ಹೋರಾಟಕ್ಕೆ ಮುಂದಾದವರು ಬ್ರಿಟಿಷರ ಬಳಿ ಒಪ್ಪಂದ ಮಾಡಿಕೊಂಡು ಹೋರಾಟಕ್ಕೆ ಮುಂದಾಗುತ್ತಿದ್ದರು. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಅಹಿಂಸಾತ್ಮಕ ಹೋರಾಟದಿಂದ ಎಂಬುದು ಕೇವಲ ಭ್ರಮೆಯಷ್ಟೆ” ಎಂದು ಬಹಿರಂಗವಾಗಿಯೇ ಮಹಾತ್ಮನನ್ನು ಅವಮಾನಿಸಿದ್ದರು.

ಆದರೆ, ವಿಪರ್ಯಾಸ ನೋಡಿ ಮಹಾತ್ಮನ ಕನಸಿನ ರಾಮರಾಜ್ಯ ಸ್ಥಾಪನೆಗೆ ಕಂಕಣ ಕಟ್ಟಿರುವುದಾಗಿ ಹೇಳುವ ಇದೇ ಬಿಜೆಪಿ ನಾಯಕರು ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿದವರ ವಿರುದ್ಧ ಕ್ರಮ ಜರುಗಿಸಿಲ್ಲ; ಇನ್ನು ತುಂಬು ಸಭೆಯಲ್ಲಿ ಮಹಾತ್ಮನನ್ನು ಅವಮಾನ ಮಾಡಿದ ಸಂಸದ ಅನಂತಕುಮಾರ್ ಗೆ ಸ್ಪಷ್ಟನೆ ಕೇಳಿ ಕನಿಷ್ಟ ಒಂದು ನೊಟೀಸ್ ಸಹ ಜಾರಿ ಮಾಡಲಿಲ್ಲ ಎಂದರೆ ಮಹಾತ್ಮಾಗಾಂಧಿ ವಿಚಾರದಲ್ಲಿ ಆರ್‌ಎಸ್‍ಎಸ್ ಮತ್ತು ಬಿಜೆಪಿ ಎಂತಹ ಡಬಲ್ ಸ್ಟ್ಯಾಂಡರ್ಡ್ ಎಂಬುದು ಸ್ಪಷ್ಟವಾಗುತ್ತದೆ.

ಇವರು ಈಗಾಗಲೇ ಅನೇಕ ಕಡೆಗಳಲ್ಲಿ ನಾಥೂರಾಮ ಗೋಡ್ಸೆಗೆ ಹುತಾತ್ಮನ ಪಟ್ಟ ಕಟ್ಟಿ ಸಮಾಜದಲ್ಲಿ ಆತನ ಕುರಿತು ಒಂದು ಧನಾತ್ಮಕ ಜನಾಭಿಪ್ರಾಯ ಮೂಡಿಸುವ ಮತ್ತು ಯುವಕರ ಐಕಾನ್ ಎಂಬಂತೆ ಗೋಡ್ಸೆಯ ವ್ಯಕ್ತಿತ್ವವನ್ನು ಚಿತ್ರಿಸಲು ಮುಂದಾಗಿರುವುದು ಹಾಗೂ ಅದಕ್ಕೆ ಪೂರಕವಾಗಿ ಶಾಲಾ ಪಠ್ಯದಲ್ಲಿ ಇತಿಹಾಸವನ್ನು ತಿರುಚುವ ಕೆಲಸಕ್ಕೂ ಮುಂದಾಗಿರುವುದು ಇಂದು ಗುಟ್ಟಾಗೇನು ಉಳಿದಿಲ್ಲ. ಮುಖ್ಯವಾಗಿ ಉತ್ತರ ಪ್ರದೇಶದ ಶಾಲಾ ಪಠ್ಯ ಪುಸ್ತಕಗಳ ಮೂಲಕ ಅಲ್ಲಿನ ಮಕ್ಕಳಿಗೆ ಇಂತಹ ವಿಷವನ್ನು ಈಗಾಗಲೇ ಉಣಿಸಲಾಗುತ್ತಿರುವುದು ವಿಷಾದನೀಯ.

ಆಧುನಿಕ ಭಾರತದ ನಿರ್ಮಾತೃ ನೆಹರೂವನ್ನು ಬಿಟ್ಟಿಲ್ಲ ಈ ದುಷ್ಟರ ಕೂಟ

ಭಾಗಶಃ ಭಾರತದಲ್ಲಿ ಮಾಜಿ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರೂ ವಿರುದ್ಧ ನಡೆದಷ್ಟು ಸುಳ್ಳು ಅಪಪ್ರಚಾರ ಭಾಗಶಃ ಬೇರೊಬ್ಬ ನಾಯಕನ ವಿರುದ್ಧ ನಡೆದಿಲ್ಲವೇನೋ? ನವೀನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದ ನಂತರ ನೆಹರು ಅವರ ಚರಿತ್ರೆಯನ್ನು ದಿನನಿತ್ಯ ವಧೆ ಮಾಡುವ ಕೆಲಸಕ್ಕೆಂದೆ ಬಿಜೆಪಿ ಒಂದು ಐಟಿ ಸೆಲ್ ಅನ್ನು ಸಹ ರಚಿಸಿಕೊಂಡಿದೆ. ಈ ಐಟಿ ಸೆಲ್ ಮತ್ತು ಬಿಜೆಪಿ ಸಂಘ ಪರಿವಾರ ನೆಹರೂ ಇತಿಹಾಸವನ್ನು ಎಷ್ಟರಮಟ್ಟಿಗೆ ತಿರುಚಲು ಹೊರಟಿವೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಗಳೇ ಸಾಕಷ್ಟಿವೆ.

ಇತ್ತೀಚೆಗೆ ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, “ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ತಮ್ಮ ಕ್ಯಾಬಿನೆಟ್‍ನಲ್ಲಿ ಸಚಿವರಾಗಿ ಆಯ್ಕೆ ಮಾಡಿಕೊಳ್ಳಲು ನೆಹರೂ ಅವರಿಗೆ ಮನಸ್ಸಿರಲಿಲ್ಲ” ಎಂಬಂತಹ ಹೇಳಿಕೆಯನ್ನು ಕೊಟ್ಟಿದ್ದರು. ಅಸಲಿಗೆ ಕಳೆದ ಹಲವು ದಶಕಗಳಿಂದ ಇಂತಹ ಆಧಾರ ರಹಿತ ಹೇಳಿಕೆಗಳು ಸಮಾಜದಲ್ಲಿ ಆಗಾಗ ಚಾಲ್ತಿಗೆ ಬರುತ್ತಲೇ ಇವೆ.

ಆದರೆ, ಸಚಿವರ ಈ ಆಪಾದನೆಗೆ ಸಾಕ್ಷಿ ಸಮೇತ ಉತ್ತರಿಸಿದ್ದ ಇತಿಹಾಸಕಾರ ರಾಮಚಂದ್ರ ಗುಹಾ 1947ರಲ್ಲಿ ಖುದ್ದು ಜವಹರ್ ಲಾಲ್ ನೆಹರು ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ಬರೆದಿದ್ದ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ “ದಯವಿಟ್ಟು ಇತಿಹಾವನ್ನು ತಿರುಚುವ ಕೆಲಸ ಮಾಡಬೇಡಿ. ಇತಿಹಾಸವನ್ನು ತಿರುಚುವುದು ಸಚಿವರ ಕೆಲಸವಲ್ಲ, ಆ ಕರ್ತವ್ಯವನ್ನು ಬಿಜೆಪಿ ಐಟಿ ಸೆಲ್‍ಗೆ ಬಿಟ್ಟುಬಿಡಿ” ಎಂದು ಟಾಂಗ್ ನೀಡಿದ್ದರು.

ಪಂಡಿತ್ ಜವಹರ್‌ಲಾಲ್ ನೆಹರು ಈ ರಾಷ್ಟ್ರಕಂಡ ಅಪರೂಪದ ರಾಜಕಾರಣಿ ಮತ್ತು ಆಧುನಿಕ ಭಾರತದ ನಿರ್ಮಾತೃ ಎಂಬುದರಲ್ಲಿ ಎರಡು ಮಾತಿಲ್ಲ. ಧರ್ಮದ ಆಧಾರದಲ್ಲಿ ದೇಶ ಒಡೆದ ಪಾಕಿಸ್ತಾನ ಎಂಬ ಹೊಸ ರಾಷ್ಟ್ರ ನಿರ್ಮಾಣವಾದ ಕಾಲದಲ್ಲೂ ಸಹ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಕಟ್ಟಬೇಕು, ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ದೊರಕಬೇಕು, ಸಮಾನ ಸಮಾಜ ನಿರ್ಮಾಣವಾಗಬೇಕು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಆಯಾಮವನ್ನು ಮುಟ್ಟಬೇಕು, ಭಾರತ ಹೊಸ ತಲೆಮಾರಿನ ಅಭಿವೃದ್ಧಿ ರಾಷ್ಟ್ರವಾಗಬೇಕು ಎಂದು ಕನಸು ಕಟ್ಟಿದ್ದವರು ನೆಹರೂ. ಹೀಗೆ ಅವರ ಕನಸಿನ ಫಲವಾಗಿ ನಿರ್ಮಾಣವಾದದ್ದೇ, ಇಸ್ರೋ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಹೆಚ್‍ಎಎಲ್, ಇತ್ಯಾದಿ ಇತ್ಯಾದಿ.

ಕಾರ್ಖಾನೆಗಳು, ಅಣೆಕಟ್ಟೆಗಳು ಆಧುನಿಕ ಭಾರತದ ದೇವಾಲಯಗಳು ಎಂಬ ಘೋಷವಾಕ್ಯ ಮೊಳಗಿಸಿದ್ದ ನೆಹರೂ ರಾಷ್ಟ್ರದ ಉದ್ದಗಲಕ್ಕೂ ಹತ್ತಾರು ಕಾರ್ಖಾನೆಗಳನ್ನು, ಅಣೆಕಟ್ಟೆಗಳನ್ನು ಕಟ್ಟಿದ್ದರು. ನೆಹರೂ ಅವರ ಶ್ರಮಕ್ಕೆ ಸಾಕ್ಷಿಯಾಗಿ ಈಗಲೂ ಹತ್ತಾರು ಅಣೆಕಟ್ಟೆಗಳು ನಾಗರಿಕ ಸಮಾಜದ ಮತ್ತು ರೈತರ ಜೀವನಾಡಿಯಾಗಿ ಸಾಕ್ಷಿ ನುಡಿಯುತ್ತಿರುವುದು ಸುಳ್ಳಲ್ಲ. ಆದರೆ, ನೆಹರೂ ಅವರ ಚಾರಿತ್ರ್ಯವನ್ನೇ ವಧೆ ಮಾಡಲು ಮುಂದಾದ ಬಿಜೆಪಿ ಕೈಗೆ ತೆಗೆದುಕೊಂಡ ಅಸ್ತ್ರ ಒಂದೆರಡಲ್ಲ.

ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಸಂಘಪರಿವಾರ ಫೋಟೋ ಮಾರ್ಪಿಂಗ್ ಮಾಡುವ ಮೂಲಕ ನೆಹರೂ ಓರ್ವ ಸ್ತ್ರೀಲೋಲ, ಮಾದಕ ವ್ಯಸನಿ ಎಂಬಂತಹ ಇಮೇಜ್ ಕ್ರಿಯೇಟ್ ಮಾಡಲು ಹೊರಟರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಇದು ಒಂದು ಮಟ್ಟಿಗೆ ಯಶಸ್ವಿಯೂ ಆಗಿತ್ತು. ಮತ್ತೂ ಒಂದು ಹಂತಕ್ಕೆ ಮುಂದುವರೆದು ನೆಹರೂ ಅವರು ವಲ್ಲಭಬಾಯಿ ಪಟೇಲ್ ಅವರನ್ನು ಸಚಿವ ಸ್ಥಾನದಿಂದ ದೂರವಿಡಲು ನಿರ್ಧರಿಸಿದ್ದರು, ಪ್ರಧಾನಿ ಹುದ್ದೆಯನ್ನೇ ಪಟೇಲ್ ಅವರಿಂದ ಕಸಿದುಕೊಂಡರು ಎಂಬಂತಹ ಕಪೋಲಕಲ್ಪಿತ ಆಧಾರರಹಿತ ಕಥೆಗಳನ್ನು ಹರಿಬಿಟ್ಟಿತ್ತು.

ಈ ಕಥೆಗಳನ್ನು ನಿಜ ಎಂಬಂತೆ ಸಾರಿ ಹೇಳಲು ರಾಜ್ಯಮಟ್ಟದಲ್ಲಿ ಚಕ್ರವರ್ತಿ ಸೂಲಿಬೆಲೆಯಿಂದ ಸಂಸದ ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್, ಸಿಟಿ ರವಿವರೆಗೆ ಸಾಲು ಸಾಲು ಪಟಾಲಂ ತಲೆ ಎತ್ತಿತ್ತು. ಈ ಗುಂಪು ಕಳೆದ ಹಲವು ದಶಕಗಳಿಂದ ಪದೇ ಪದೇ ಒಂದು ಸುಳನ್ನು ಹತ್ತು ಬಾರಿ ಹೇಳುವ ಮೂಲಕ ನೆಹರೂ ಚರಿತ್ರೆಯನ್ನು ವಧೆ ಮಾಡುವ ತಮ್ಮ ಕಾರ್ಯವನ್ನು ಆರ್‍ಎಸ್‍ಎಸ್ ಅಣತಿಯಂತೆ ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದೆ. ಅಸಲಿಗೆ ಆರ್‍ಎಸ್‍ಎಸ್ ನೆಹರೂ ಅವರನ್ನು ದ್ವೇಷಿಸಲು ಕಾರಣಗಳೂ ಇಲ್ಲದೆ ಏನಿಲ್ಲ.

ಏಕೆಂದರೆ ಸ್ವಾತಂತ್ರ್ಯ ನಂತರ ಕಾಲದಲ್ಲಿ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ಪಾಕಿಸ್ತಾನದ ಮಾದರಿಯಲ್ಲಿ ಭಾರತವನ್ನೂ ಸಹ ಹಿಂದೂರಾಷ್ಟ್ರ ಮಾಡಲು ಮುಂದಾಗಿತ್ತು. ಆದರೆ, ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಬಿಡದೆ ಜಾತ್ಯತೀತ ತತ್ವದ ಅಡಿಯಲ್ಲಿ ಆದರ್ಶ ಹಾಗೂ ಅಷ್ಟೇ ಬಲಿಷ್ಠ ದೇಶವನ್ನಾಗಿ ಕಟ್ಟಿದ ಶ್ರೇಯ ನೆಹರೂಗೆ ಸಲ್ಲಬೇಕು. ಆದರೆ, ನೆಹರೂ ಅವರ ಈ ನಡೆ ಆರ್‍ಎಸ್‍ಎಸ್‍ಗೆ ಹಿನ್ನಡೆಯಾಗಿತ್ತು. ಇದೇ ಕಾರಣಕ್ಕೆ ಸಂಘಪರಿವಾರ ಹೆಜ್ಜೆ ಹೆಜ್ಜೆಗೂ ನೆಹರೂ ಚಾರಿತ್ರ್ಯವಧೆ ಮಾಡುವ ಮೂಲಕ ವಿಕೃತ ಸಂತೋಷ ಅನುಭವಿಸುತ್ತಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್‍ಗೂ ಅಪಮಾನ ಮಾಡಿತ್ತು ಆರ್‌ಎಸ್‍ಎಸ್

ಸಮಾಜದ ತಳಮಟ್ಟದಲ್ಲಿ ಜನಿಸಿ, ಅಸ್ಪೃಶ್ಯತೆ ಎಂಬ ಕಷ್ಟಕೋಟಲೆಯನ್ನು ದಾಟಿ ಈ ದೇಶಕ್ಕೆ ಸಂವಿಧಾನ ಎಂಬ ಮಹಾನ್ ಗ್ರಂಥವನ್ನು ಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಭಾರತದ ಪಾಲಿನ ಏಕೈಕ ಪೂಜನೀಯ ಗ್ರಂಥ ಎಂದರೆ ಅದು ಸಂವಿಧಾನ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇಂತಹ ಮಹಾನ್ ವ್ಯಕ್ತಿಯ ಚಾರಿತ್ರ್ಯವನ್ನೂ ದುಷ್ಟ ಆರ್‌ಎಸ್‍ಎಸ್ ಕೂಟ ವಧೆ ಮಾಡಲು ಹೊರಟಿತ್ತು ಎಂಬುದೇ ಅಸಹ್ಯಕರ ಸಂಗತಿ.

ಅಸಲಿಗೆ ಇತಿಹಾಸದ ಪುಟಗಳು ಉಳಿಸಿ ಹೋಗಿರುವ ಸಾಕ್ಷಿಗಳನ್ನು ಕೆದಕಿದರೆ, ಸ್ವಾತಂತ್ರ್ಯ ಕಾಲದಲ್ಲಿ ದೇಶಕ್ಕೊಂದು ಬಲಿಷ್ಠ ಸಂವಿಧಾನ ರಚಿಸಲು ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ಬಹುತೇಕರು ಮೇಲ್ವರ್ಗಕ್ಕೆ ಸೇರಿದವರು (ಉದ್ದೇಶಪೂರ್ವಕವಾಗಿ ಅವರ ಹೆಸರನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ) ಹೀಗಾಗಿ ಈ ಸಮಿತಿಯಲ್ಲಿ ಅಸ್ಪೃಶ್ಯ ಜಾತಿಗೆ ಸೇರಿದ ಅಂಬೇಡ್ಕರ್ ಸ್ಥಾನ ಪಡೆದದ್ದು ಬಹುತೇಕರಿಗೆ ಇಷ್ಟವಿರಲಿಲ್ಲ. ಹೀಗಾಗಿ ಎಲ್ಲರೂ ಈ ಸಮಿತಿಯಿಂದ ಹೊರ ನಡೆದಿದ್ದರು. ಆದರೆ, ಮಹಾತ್ಮಾ ಗಾಂಧಿ ಅವರ ಒತ್ತಾಸೆಯ ಮೇರೆಗೆ ಸತತ ಪರಿಶ್ರಮದಿಂದ ಅಂಬೇಡ್ಕರ್ ಒಬ್ಬರೇ ಇಡೀ ಸಂವಿಧಾನದ ಕರಡನ್ನು ಸಿದ್ಧಪಡಿಸಿದ್ದರು. ಭಾರತದ ಸಂವಿಧಾನ ರಚಿಸುವ ಸಲುವಾಗಿ ವಿವಿಧ ದೇಶಗಳ ಸಂವಿಧಾನವನ್ನು ನಿರಂತರವಾಗಿ ಅಧ್ಯಯನ ನಡೆಸಿದ್ದರು. ಅದರ ಫಲವಾಗಿ ದೇಶಕ್ಕೆ ಆದರ್ಶಮಯವಾದ ಲಿಖಿತ ಸಂವಿಧಾನ ರಚನೆಗೆ ಕಾರಣವಾದರು ಎನ್ನುತ್ತದೆ ಇತಿಹಾಸ.

ಆದರೆ, ಅಸ್ಪೃಶ್ಯ ಸಮಾಜಕ್ಕೆ ಸೇರಿದ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚಿಸಿದ್ದು ಮನುವಾದಿ ಸಂತತಿಗಳಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಎಂಬ ಈ ಕ್ರೆಡಿಟ್ ಅನ್ನು ಕಸಿದುಕೊಳ್ಳಲು ಸಂಘ ಪರಿವಾರ ಮಾಡಿದ ಉಪಾಯಗಳು, ಹೇಯಕೃತ್ಯಗಳು ಒಂದೇ ಎರಡೇ.

ಎಬಿವಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ವಿಭಾಗದ ಮುಖ್ಯಸ್ಥರೂ ಆಗಿರುವ ರಾಮ್ ಬಹದ್ದೂರ್ ರಾಯ್ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾರತದ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತು ಹೀಗೆ ಹೇಳಿದ್ದರು,- “ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟದ್ದು ಬಿ.ಆರ್. ಅಂಬೇಡ್ಕರ್ ಎಂಬುದು ಕೇವಲ ಕಟ್ಟುಕಥೆ. ನಿಜಕ್ಕೂ ಸಂವಿಧಾನವನ್ನು ರಚನೆ ಮಾಡಿದ್ದು ಬಿ.ಎನ್. ರಾವ್ ಎಂಬ ವ್ಯಕ್ತಿ.

ಬಿ.ಎನ್. ರಾವ್ ಅಂಬೇಡ್ಕರ್ ಅವರ ಸಹಾಯಕರಾಗಿದ್ದರು, “ವಿಶ್ವದ ಇತರೆ ದೇಶಗಳ ಸಂವಿಧಾನವನ್ನು ಅವರು ಓದಿ ತಮಗೆ ತಿಳಿದ ಆಂಗ್ಲ ಭಾಷೆಯಲ್ಲಿ ಬರೆದು ಅಂಬೇಡ್ಕರ್ ಗೆ ನೀಡಿದ್ದರು. ಅದನ್ನು ತಿದ್ದಿತೀಡಿದ ಅಂಬೇಡ್ಕರ್ ತಾನೇ ಸಂವಿಧಾನವನ್ನು ರಚಿಸಿದ್ದು ಎಂದು ಹೆಸರು ತೆಗೆದುಕೊಂಡರು. ಹಾಗೆ ನೋಡಿದರೆ ಸಂವಿಧಾನವನ್ನು ರಚನೆ ಮಾಡಿದ್ದು ಅಂಬೇಡ್ಕರ್ ಅಲ್ಲ ಮತ್ತು ಭಾರತದ ಸಂವಿಧಾನ ಪವಿತ್ರ ಗ್ರಂಥವೇನಲ್ಲ, ಆ ಗ್ರಂಥವನ್ನು ಸುಡಲು ಯಾರಾದರೂ ಕರೆ ನೀಡಿದರೆ ಆ ಕೆಲಸಕ್ಕೆ ಮುಂದಾಗುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ” ಎಂದು ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್ ಹೆಸರಿಗೆ ಚ್ಯುತಿ ಉಂಟು ಮಾಡಿದ್ದರು.

ಮೊನ್ನೆ ಮೊನ್ನೆ ಬಿಜೆಪಿ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಲ್ಗೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಸಂವಿಧಾನದ ಜೊತೆಗೆ ಸಂಘ ಪರಿವಾರದ ಪುರಾತನ ನಾಯಕ ದೀನ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು. ಈ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸುವ ಮತ್ತು ಇತಿಹಾಸವನ್ನು ತಿರುಚುವ ಕೆಲಸಕ್ಕೆ ಬಿಜೆಪಿ ಮುಂದಾಗಿತ್ತು. ತೀವ್ರ ವಿರೋಧದ ನಂತರ ಬಿಜೆಪಿ ಸಾಮಾಜಿಕ ಜಾಲತಾಣದಿಂದ ಆ ವಿವಾದಾತ್ಮಕ ಪೋಸ್ಟರ್ ಅನ್ನು ತೆಗೆಯಲಾಗಿತ್ತು.

ಇನ್ನೂ ಕೇಂದ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿ ಬಹುಮತದ ಸರ್ಕಾರವನ್ನು ರಚಿಸಿದ ಮರುದಿನವೇ ಸಂಸದ ಅನಂತಕುಮಾರ್ ತುಂಬು ಸಭೆಯಲ್ಲಿ “ಭಾರತದ ಸಂವಿಧಾನವನ್ನು ಬದಲಿಸಬೇಕು, ನಾವು ಬಂದಿರುವುದೇ ಅದಕ್ಕೆ” ಎಂಬಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು / ನೀಡುತ್ತಿರುವುದನ್ನು ಭಾಗಶಃ ಕನ್ನಡಿಗರು ಮರೆತಿರಲಿಕ್ಕಿಲ್ಲ.

ಕಾಂಗ್ರೆಸ್ ನಾಯಕರನ್ನು ಎರವಲು ಪಡೆದು ಬೆಳೆದ ಬಿಜೆಪಿ

ತಮಗಾಗದ ನಾಯಕರ ಇತಿಹಾಸವನ್ನು ತಿರುಚುವುದು ಮಾತ್ರವಲ್ಲ, ಇತರೆ ಪಕ್ಷದಿಂದ ನಾಯಕರನ್ನು ಎರವಲು ತಂದು ಅದೇ ಪಕ್ಷದ ವಿರುದ್ಧ ಹೋರಾಟ ನಡೆಸುವ ಕಲೆಯೂ ಬಿಜೆಪಿಗೆ, ಸಂಘಪರಿವಾರಕ್ಕೆ ಕರಗತವಾಗಿದೆ. ಹೀಗೆ ಬಳಸಲ್ಪಟ್ಟ ನಾಯಕರೇ ಸರ್ದಾರ್ ವಲ್ಲಭಬಾಯಿ ಪಟೇಲ್.

ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ಗುಜರಾತ್ ಮೂಲದ ಸರ್ದಾರ್ ವಲ್ಲಭಾಯಿ ಪಟೇಲ್ ಕಾಂಗ್ರೆಸ್ ಪಕ್ಷದ ಪ್ರಮುಖ ಸ್ತಂಭ ಎಂದು ಸ್ವತಃ ನೆಹರೂ ಅವರೇ ಘಂಟಾಘೋಷವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ಪಟೇಲರಿಗೆ ಮೋಸ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ, ಹೇಳಿಕೊಳ್ಳುವಂತಹ ನಾಯಕನಿಲ್ಲದ ತಮ್ಮ ಪಕ್ಷಕ್ಕೆ ಸರ್ದಾರ್ ಪಟೇಲರ ಹೆಸರನ್ನು ದತ್ತು ಪಡೆದುಕೊಂಡಿತ್ತು.

ಬಿಜೆಪಿ ನಾಯಕರ ಮೊದಲ ಆರೋಪವೇ ಪಟೇಲರು ದೇಶದ ಮೊದಲ ಪ್ರಧಾನಿ ಆಗಬೇಕಿತ್ತು. ಆದರೆ, ನೆಹರೂ ಈ ಸ್ಥಾನವನ್ನು ಕಸಿದುಕೊಂಡರು ಎಂಬುದು. ವಾಸ್ತವದಲ್ಲಿ ಭಾರತದಲ್ಲಿ ಮೊದಲ ಸಾರ್ವಜನಿಕ ಚುನಾವಣೆ ನಡೆದದ್ದೇ 1952ರಲ್ಲಿ. ಆದರೆ, ಡಿಸೆಂಬರ್ 15 1950ರಲ್ಲೇ ಪಟೇಲರು ಮೃತಪಟ್ಟಿದ್ದರು. ಹೀಗಿದ್ದ ಮೇಲೆ ಪಟೇಲರಿಂದ ಪ್ರಧಾನಿ ಹುದ್ದೆಯನ್ನು ತಪ್ಪಿಸುವುದು ಹೇಗೆ ಸಾಧ್ಯ.

ಹೀಗೆ ಪಟೇಲರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ನಿರಂತರವಾಗಿ ಆರೋಪಿಸುತ್ತಲೇ ಬಂದ ಬಿಜೆಪಿ ಕೊನೆಗೂ ಅವರನ್ನು ದತ್ತು ಪಡೆದು ಇಂದು ಗುಜರಾತ್‍ನಲ್ಲಿ ಆಕಾಶದೆತ್ತರಕ್ಕೆ ಪಟೇಲರ ಪ್ರತಿಮೆಯನ್ನು ನಿಲ್ಲಿಸಿದೆ. ಅದಕ್ಕೆ ‘ಸ್ಟ್ಯಾಚು ಆಫ್ ಯುನಿಟಿ’ ಎಂದು ಹೆಸರಿಟ್ಟಿದೆ. ವಿಪರ್ಯಾಸ ನೋಡಿ ಯುನಿಟಿ ಅಂದರೆ ಒಗ್ಗಟ್ಟು. ಗುಜರಾತ್‍ನಲ್ಲಿ ಒಗ್ಗಟ್ಟಿನ ದ್ಯೋತಕ ಎಂಬ ಆಶಯದ ಪ್ರತಿಮೆ ನಿಲ್ಲಿಸಿದ ಇದೇ ಬಿಜೆಪಿ ನಾಯಕರು ಇಂದು ಸಮಾಜದಲ್ಲಿ ವಿವಿಧ ಕೋಮಿನ ಜನ ಒಗ್ಗಟ್ಟಾಗಿರದಂತೆ ನೋಡಿಕೊಳ್ಳುವಲ್ಲೂ ಯಶಸ್ವಿಯಾಗಿದೆ. ಜನರನ್ನು ಒಡೆದು ಆಳುವ ಕೆಲಸಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಸಂಘ ಪರಿವಾರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಘ ಪರಿವಾರಕ್ಕೆ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಪಾಠ ಮಾಡಿದ್ದರು. ಆದರೆ, ಕಾರ್ಯಕ್ರಮದ ಮರುದಿನವೇ ಸ್ವತಃ ಪ್ರಣಬ್ ಮುಖರ್ಜಿ ಆರ್‌ಎಸ್‍ಎಸ್ ಬೈಠಕ್‍ನಲ್ಲಿ ಪಾಲ್ಗೊಂಡಿರುವಂತೆ ಫೋಟೋ ಮಾರ್ಪಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಸಂಘಪರಿವಾರದವರು ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಮಗೆ ಲಾಭವಾಗುವುದಾದರೆ ಬಿಜೆಪಿ ಮತ್ತು ಸಂಘಪರಿವಾರ ಯಾವ ನಾಯಕರ ಚಾರಿತ್ರ್ಯವಧೆ ಮಾಡುವುದಕ್ಕೂ ಸೈ, ಇತರೆ ಪಕ್ಷದ ಯಶಸ್ವೀ ನಾಯಕರನ್ನು ದತ್ತು ಪಡೆಯುವುದಕ್ಕೂ ಜೈ. ಇನ್ನೂ ತಂತ್ರಜ್ಞಾನ ಬಳಸಿ ಫೋಟೋ ಮಾರ್ಪಿಂಗ್ ಮಾಡುವ ಮೂಲಕ ಇತಿಹಾಸವನ್ನೇ ತಿರುಚುವ ಕೆಲಸಕ್ಕೂ ಜೈ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಭಾರತದ ಇತಿಹಾಸದಲ್ಲಿ ಸಾಲು ಸಾಲು ಸಾಕ್ಷಿಗಳಿವೆ.

ಇಂತಹ ಜೇಡರ ಬಲೆಯಲ್ಲೇ ಇದೀಗ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಸಿಲುಕಿರುವುದು. ದೊರೆಸ್ವಾಮಿ ಅವರ ಚಾರಿತ್ರ್ಯ ವಧೆ ಮಾಡುವ ಮೂಲಕ ಅವರ ಹಾಗೂ ಅವರ ಸಂಗಾತಿಗಳ ಹೋರಾಟದ ದಿಕ್ಕು ತಪ್ಪಿಸುವಂತೆ ಮಾಡುವುದು, ಋಣಾತ್ಮಕ ಜನಾಭಿಪ್ರಾಯ ಮೂಡಿಸುವುದು ಬಿಜೆಪಿ ಹಾಗೂ ಸಂಘ ಪರಿವಾರದ ಉದ್ದೇಶ. ಆದರೆ, ಬಿಜೆಪಿ-ಸಂಘ ಪರಿವಾರದ ಈ ನೀಚ ರಾಜಕೀಯ ಮತ್ತು ಇತಿಹಾಸವನ್ನು ತಿರುಚುವ ಹೀನ ಬುದ್ಧಿಯನ್ನು ಅರಿಯದವರೇನಲ್ಲ ಕನ್ನಡಿಗರು.

(ಲೇಖಕರು ಪತ್ರಕರ್ತರು, ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...