ಹೊನ್ನಾವರದಲ್ಲಿ ನಡೆಯುತ್ತಿರುವ ಖಾಸಗಿ ಬಂದರು ಕಾಮಗಾರಿಯಿಂದ ತಮ್ಮ ಬದುಕು ಮೂರಾಬಟ್ಟೆ ಮಾಡುತ್ತದೆಂಬ ಆತಂಕದಲ್ಲಿ ಮೀನುಗಾರರು ಕಂಗಾಲಾಗಿದ್ದರೆ, ಮೀನುಗಾರರ ಅಸಾಯಕತೆಯನ್ನು ರಾಜಕಾರಣಿಗಳು ಪ್ರತಿಷ್ಠೆಯ ಮೇಲಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹಾಲಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ಬಂದರು ಯೋಜನೆ ಪರವಾಗಿದ್ದಾರೆ, ಮಾಜಿ ಶಾಸಕ ಮಂಕಾಳ್ ವೈದ್ಯ ಮೀನುಗಾರರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ. ವಾಣಿಜ್ಯ ಬಂದರು ನಿರ್ಮಾಣ ಕೈಬಿಡಬೇಕು ಇಲ್ಲದಿದ್ದರೆ ಮೀನುಗಾರರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು ಎಂದವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಮಾತನಾಡಿದ ಅವರು, “ಶಾಸಕ ಸುನೀಲ್ ನಾಯ್ಕ ಎರಡು ನಾಲಿಗೆ ಮನುಷ್ಯ. ಅವರು ಮೀನುಗಾರರ ಪರ ನಿಲ್ಲಬೇಕು, ಇಲ್ಲವೆ ಪೋರ್ಟ್ ಕಂಪನಿ ಜತೆಗಿರಲಿ ಎಂದು ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಂದರು ಕಾಮಗಾರಿ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಮತ್ತು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳುತ್ತಿದ್ದಾರೆ. ಇದೇನೊ ನಿಜ. ಆದರೆ 2010ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸದ್ರಿ ಯೋಜನೆಗೆ ಮಂಜೂರು ನೀಡಲಾಗಿತ್ತು. ಆ ಹೊತ್ತಲ್ಲಿ ಬಂದರು ಮತ್ತು ಮೀನುಗಾರಿಕಾ ಮಂತ್ರಿಯಾಗಿದ್ದ ಕೃಷ್ಣಪಾಲೆಮಾರ್ ಹೊನ್ನಾವರ ಪೋರ್ಟ್ ಕಂಪನಿಗೆ 5 ಎಕರೆ ಜಾಗ ನೀಡಿದ್ದರು. ಆ ನಂತರ ಮುಳುಗಡೆಯಾಗಿರುವ ಮಲ್ಲುಕುರ್ವಾದ 5 ಎಕರೆ ಸೇರಿಸಿ ಒಟ್ಟೂ 10 ಎಕರೆ ಪ್ರದೇಶ ಪೋರ್ಟ್ ಪ್ರೈ.ಲೀ ಬಿಜೆಪಿ ಸರ್ಕಾರವೇ ಕೊಟ್ಟಿತ್ತು. ಈಗ 50 ಎಕರೆ ಖಾಸಗಿ ಬಂದರಿಗಾಗಿ ಮೀಸಲಿಡಲಾಗಿದೆ” ಎಂದು ವೈದ್ಯ ತಿಳಿಸಿದ್ದಾರೆ.
ಹೊನ್ನಾವರ ಪೋರ್ಟ್ ಕಂಪನಿ ಮುಖ್ಯಸ್ಥರು 2007ರಲ್ಲಿ ಮೀನುಗಾರರ ಮುಂದೆ ಅವರ ಕಸುಬಿಗೆ ಯಾವ ತೊಂದರೆಯಾಗದಂತೆ ಬೇಕ್ ವಾಟರ್ ನಿರ್ಮಿಸಿ ಡ್ರಜಿಗ್ ಕಾಮಗಾರಿ ಜತೆ ಬಂದರು ಕಟ್ಟುವುದಾಗಿ ಹೇಳಿದ್ದರಿಂದ ಅಂದಿನ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ ನೆರೆವೆರಿಸಿದ್ದರು. ಎಂದ ವೈದ್ಯ ಈಗಿನ ಕಾಮಗಾರಿ ಹಿಂದಿನ ನೀಲಿ ನಕ್ಷೆಯಂತಿಲ್ಲವೆಂದು ಆರೋಪಿಸಿದ್ದಾರೆ.
ಅಂದು ಯೋಜನೆಯ ನೀಲ ನಕ್ಷೆಯಲ್ಲಿ 40 ಮೀಟರ್ ಅಗಲದ ರಸ್ತೆ, ರೈಲ್ವೆಹಳಿ, ನೀರು ಸರಬರಾಜು ಯೋಜನೆಗಳು ಇರಲಿಲ್ಲ. ಈಗ ಇದೆಲ್ಲ ಸೇರಿಸಲಾಗಿದೆ. ಮೀನುಗಾರರ ಮನೆ ಇರುವ ಜಾಗ ಸರಕಾರದ್ದು ಎನ್ನುತ್ತಾರೆ ಶಾಸಕರು. ಮರುಕ್ಷಣವೆ ಮೀನುಗಾರರ ಒಂದು ಮನೆಯೂ ತೆರವುಗೊಳಿಸುವುದಿಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ ವೈದ್ಯ, ಯೋಜನೆಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದರು.
ಶಾಸಕರಿಗೆ ಪೋರ್ಟ್ ಪ್ರೈ.ಲಿ ಮೇಲೇಕೆ ಪ್ರೀತಿಯಿದೆ ಎಂದು ತಿಳಿಯುತ್ತಿಲ್ಲ. ಯೋಜನೆಯ ಅವಾಂತರದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ; ಯಾವಾಗ ಬೇಕಿದ್ದರು ಮೀನುಗಾರರ ಉಪಸ್ಥಿತಿಯಲ್ಲಿ ಕರೆದರೆ ದಾಖಲೆ ಸಮೇತ ಬರುತ್ತೇನೆ. ಕಾಸರಗೋಡು ಗ್ರಾ.ಪಂ ಯೋಜನೆಗೆ ಎನ್.ಒ.ಸಿ ಕೊಟ್ಟಿದ್ದು ಕಾಂಗ್ರೆಸ್ ಆಡಳಿತದಲ್ಲಿ ಎನ್ನುವುದಾದರೆ ಮೀನುಗಾರರು 52ದಿನಗಳ ಕಾಲ ಧರಣಿ ನಡೆಸಿದಾಗಲಾದರೂ ಶಾಸಕರು ರದ್ದು ಮಾಡಿಸಬಹುದಿತ್ತಲ್ಲ ಎಂದವರು ಪ್ರಶ್ನಿಸಿದರು.

ಯಾವ ಮೀನುಗಾರರ ಮತದಿಂದ ಗೆದ್ದಿದ್ದರೋ ಅದೇ ಮೀನುಗಾರರನ್ನು ಈಗ ಕೇವಲವಾಗಿ ಕಾಣಲಾಗುತ್ತಿದೆ. ಪಾವಿನಕುರ್ವಾ ನಡುಗಡ್ಡೆಯಿಂದ ಮಂಕಿಜಡ್ಡಿ ಗುಡ್ಡದವರೆಗೆ ಬಂದರು ಯೋಜನೆ ಸಾಗಲಿದೆ. ಮಂಕಿಜಡ್ಡಿ ಗುಡ್ಡದ 150 ಎಕರೆ ಅರಣ್ಯ ಪ್ರದೇಶ ಲೀಸಿಗೆ ಪಡೆದು ಲೂಟಿಗೆ ಪ್ಲಾನ್ ಹಾಕಲಾಗಿದೆ. ಟೂಲ್‌ಕಿಟ್ ಮಾಡಿ ರಾಜಕೀಯ ಲಾಭ ಬಿಜೆಪಿಗರು ಎತ್ತಲು ಹವಣಿಸುತ್ತಾರೆ. ಕಳೆದ ಚುನಾವಣೆ ಹೊತ್ತಲ್ಲಿ ಪರೇಶ್ ಮೇಸ್ತ ಮತ್ತು ಮಾಗೋಡಿನ ಕಾವ್ಯ ಪ್ರಕರಣದಲ್ಲಿ ಟೂಲ್‌ಕಿಟ್ ಮಾಡಿದ್ದರು. ಮಂಕಿದೋಣಿ ದುರಂತದಲ್ಲಿ ಮೀನುಗಾರರಿಗೆ ನ್ಯಾಯ ಕೊಡಿಸಲಾಗದವರಿಗೆ ಟೂಲ್‌ಕಿಟ್‌ಗಷ್ಟೆ ಮೀನುಗಾರರು ಬೇಕು ಎಂದು ಆಕ್ರೋಶ ವೈದ್ಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೊನ್ನಾವರ ಖಾಸಗಿ ಬಂದರು ಸ್ಥಾಪನೆಗಾಗಿ ಮೀನುಗಾರರ ಮೇಲೆ ದಾಳಿ: ಮಾನವ ಹಕ್ಕು ಆಯೋಗಕ್ಕೆ ದೂರು


