ಸುಡಾನ್‌ನ ಉತ್ತರ ದಾರ್ಫರ್ ರಾಜ್ಯದ ರಾಜಧಾನಿ ಅಲ್- ಫಾಶೆರ್ ಅನ್ನು ವಶಪಡಿಸಿಕೊಂಡ ಬಳಿಕ, ಕಳೆದ ಮೂರು ದಿನಗಳಲ್ಲಿ ಅರೆ ಸೈನಿಕ ಪಡೆ ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಕನಿಷ್ಠ 1,500 ಜನರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ರಾಜಧಾನಿ ಅಲ್-ಪಾಶೆರ್ ಅನ್ನು ಸಂಪೂರ್ಣ ವಶಕ್ಕೆ ಪಡೆದಿರುವ ಆರ್‌ಎಸ್‌ಎಫ್, ಇಡೀ ದಾರ್ಫರ್ ರಾಜ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. 2023ರಿಂದ ಸಂಪೂರ್ಣ ಸುಡಾನ್ ಅನ್ನು ನಿಯಂತ್ರಣಕ್ಕೆ ಪಡೆಯಲು ಆರ್‌ಎಸ್‌ಎಫ್ ಸುಡಾನ್ ಸೇನೆಯೊಂದಿಗೆ ಸಂಘರ್ಷದಲ್ಲಿ ತೊಡಗಿದೆ.
ಆರ್‌ಎಸ್‌ಎಫ್ ಕೈಯಿಂದ ಜೀವ ಕಾಪಾಡಿಕೊಳ್ಳಲು ಜನರು ಪಲಾಯನ ಮಾಡುತ್ತಿದ್ದಾರೆ. ಈ ವೇಳೆ ಅವರನ್ನು ಹಿಡಿದು ನಿರ್ದಯವಾಗಿ ಹತ್ಯೆ ಮಾಡಲಾಗುತ್ತಿದೆ. ಮನೆಗಳಿಗೆ ನುಗ್ಗಿ ಜನರನ್ನು ಕೊಲ್ಲಲಾಗುತ್ತಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಇದು ‘ನಿಜವಾದ ನರಮೇಧ’ ಎಂದು ದೇಶದ ಅಂತರ್ಯುದ್ಧವನ್ನು ವರದಿ ಮಾಡುವ ಗುಂಪು ಸುಡಾನ್ ಡಾಕ್ಟರ್ಸ್ ನೆಟ್‌ವರ್ಕ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
“ಇಂದು ಜಗತ್ತು ನೋಡುತ್ತಿರುವ ಹತ್ಯಾಕಾಂಡಗಳು ಒಂದೂವರೆ ವರ್ಷದ ಹಿಂದೆ ಅಲ್-ಫಾಶೆರ್‌ನಲ್ಲಿ ನಡೆದ ಹತ್ಯಾಕಾಂಡದ ಮುಂದುವರಿದ ಭಾಗವಾಗಿದೆ. ಆ ಸಮಯದಲ್ಲಿ ಬಾಂಬ್ ದಾಳಿ, ಹಸಿವು ಮತ್ತು ಕಾನೂನುಬಾಹಿರ ಮರಣದಂಡನೆಗಳ ಮೂಲಕ 14,000ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದರು” ಎಂದು ಡಾಕ್ಟರ್ಸ್ ನೆಟ್‌ವರ್ಕ್ ತಿಳಿಸಿದೆ.
ಅಕ್ಟೋಬರ್ 26ರಂದು ಆರ್‌ಎಸ್‌ಎಫ್ ಅಲ್-ಫಾಶೆರ್ ಅನ್ನು ವಶಪಡಿಸಿಕೊಂಡ ಬಳಿಕ, ಯೇಲ್ ವಿಶ್ವವಿದ್ಯಾನಿಲಯದ ಹ್ಯೂಮನಿಟೇರಿಯನ್ ರಿಸರ್ಚ್ ಲ್ಯಾಬ್, ತಾನು ತೆಗೆದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಶವಗಳ ರಾಶಿ, ದೊಡ್ಡ ಮಟ್ಟದ ರಕ್ತದ ಕಲೆಗಳು ಗೋಚರವಾಗಿವೆ. ಇವುಗಳು ಭೀಕರ ನರಮೇಧವನ್ನು ಸೂಚಿಸುತ್ತದೆ ಎಂದು ವರದಿಗಳು ಹೇಳಿತ್ತು.
ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಒಕ್ಕೂಟಗಳು ಹಿಂಸಾಚಾರವನ್ನು ಖಂಡಿಸಿತ್ತು. ಶಾಂತಿಗೆ ಕರೆ ಕೊಟ್ಟಿತ್ತು. ಈ ಬೆನ್ನಲ್ಲೇ ಸುಡಾನ್ ಡಾಕ್ಟರ್ಸ್ ನೆಟ್‌ವರ್ಕ್ ನೀಡಿರುವ ಭೀಕರದ ನರಮೇಧದ ವರದಿ ಜಗತ್ತನ್ನು ಬೆಚ್ಚಿ ಬೀಳಿಸಿದೆ.
ಆರ್‌ಎಸ್‌ಎಫ್ 2023ರಿಂದ ಸುಡಾನ್ ಸೈನ್ಯದೊಂದಿಗೆ ರಕ್ತಸಿಕ್ತ ಅಂತರ್ಯುದ್ಧದಲ್ಲಿ ತೊಡಗಿಕೊಂಡಿದೆ. ಪರಿಣಾಮ ಹತ್ತಾರು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 12 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಕಳೆದ 17 ತಿಂಗಳ ಮುತ್ತಿಗೆಯ ನಂತರ ಅಕ್ಟೋಬರ್ 26, 2025ರಂದು ದಾರ್ಫರ್‌ನಲ್ಲಿ ಸೇನೆಯ ಕೊನೆಯ ಭದ್ರಕೋಟೆಯಾದ ಅಲ್-ಫಾಶೆರ್ ಅನ್ನು ಅರೆಸೈನಿಕ ಪಡೆ ಆರ್‌ಎಸ್‌ಎಫ್ ವಶಪಡಿಸಿಕೊಂಡಿದೆ.
ವ್ಯಾಪಾರ ಒತ್ತಡ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ : ಪುನರುಚ್ಚರಿಸಿದ ಟ್ರಂಪ್


