Homeಕರ್ನಾಟಕಮಾಧ್ಯಮಗಳ "ಮಾಂಸ" ಕಜ್ಜಾಯ!

ಮಾಧ್ಯಮಗಳ “ಮಾಂಸ” ಕಜ್ಜಾಯ!

- Advertisement -
- Advertisement -

ಆಗಸ್ಟ್ ಮೂರರಂದು ಸಿದ್ದರಾಮೋತ್ಸವ ನಡೆದದ್ದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಕಾಂಗ್ರೆಸ್ ನಡೆಸಿದ ತಯಾರಿಯ ಮೊದಲ ಹೆಜ್ಜೆ ಎಂಬುದು ಅರಿವಾಗುತ್ತಲೇ ಆಡಳಿತ ಪಕ್ಷ ಮತ್ತದರ ಬೆಂಬಲಿಗರಲ್ಲಿ ಉಂಟಾಗಿರುವ ಚಡಪಡಿಕೆ ಎದ್ದು ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರ ಈ ದಾವಣಗೆರೆ ’ಗೂಗ್ಲಿಯು, ಬಿಜೆಪಿ ಕರ್ನಾಟಕದ ವಿಧಾನಸಭಾ ಚುನಾವಣೆಗೆಂದು ಮೊದಲೇ ಬರೆದು ಅಂತಿಮಗೊಳಿಸಿಕೊಂಡಿದ್ದ ಸ್ಕ್ರಿಪ್ಟಿಗೆ ಹೊಂದುತ್ತಿರಲಿಲ್ಲ ಎಂಬುದಕ್ಕೆ ಕಳೆದ ಇಪ್ಪತ್ತು ದಿನಗಳಲ್ಲಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಎಬ್ಬಿಸಲಾಗಿರುವ ವಿವಾದಗಳೇ ಸಾಕ್ಷಿ ಒದಗಿಸುತ್ತಿವೆ. ಈ ಹಿಂದಿನ ಚುನಾವಣೆಗಳಲ್ಲೆಲ್ಲ ಬಿಜೆಪಿಗೆ ಈ ಮೊದಲೇ ತಯಾರಿಸಿಟ್ಟ ಸ್ಕ್ರಿಪ್ಟ್ ಯಶಸ್ಸು ತಂದುಕೊಡುತ್ತಿತ್ತು. ಆಡಳಿತಪಕ್ಷವಾಗಿ ಕುಳಿತಿದ್ದರೂ, ವಿರೋಧ ಪಕ್ಷದ ಮೇಲೇ ಪ್ರೊ-ಆಕ್ಟಿವ್ ಆಗಿ ದಾಳಿ ಮಾಡುವ ತಂತ್ರಗಾರಿಕೆಯ ಸ್ಕ್ರಿಪ್ಟ್ ಅದು. ಹಾಗಾದಾಗಲೆಲ್ಲ, ಆಗಿರುವ ದಾಳಿಗೆ ಪ್ರತಿಕ್ರಿಯಿಸುವುದರಲ್ಲೇ ಸಮಯ ಕಳೆಯುತ್ತಿದ್ದ ಎದುರಾಳಿಗಳಿಗೆ ತಮ್ಮ ಸ್ವಂತ ಸ್ಕ್ರಿಪ್ಟನ್ನು ಸಿದ್ಧಗೊಳಿಸಿಕೊಳ್ಳುವುದಕ್ಕೂ ಅವಕಾಶ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಹಾಗಾಗಲಿಲ್ಲ. ಸಿದ್ದರಾಮೋತ್ಸವ ಯಾರದ್ದೆಲ್ಲ ನಿರೀಕ್ಷೆಗಳನ್ನು ಮೀರಿದೆಯೋ, ಬಿಟ್ಟಿದೆಯೋ ಗೊತ್ತಿಲ್ಲ; ಬಿಜೆಪಿಯ ಮಟ್ಟಿಗೆ ಮಾತ್ರ, ಈ ಸಮಾವೇಶ ’ನಿರೀಕ್ಷೆಗೂ ಮೀರಿದ ಕಾಂಗ್ರೆಸ್ ಯಶಸ್ಸು ಅನ್ನಿಸಿಬಿಟ್ಟಿದೆ! ಬಾಯಿ ಬಿಟ್ಟು ಹೇಳದಿದ್ದರೂ, ಚಡಪಡಿಕೆಯ ಮೂಲಕ ಈ ಅನಿಸಿಕೆ ಎದ್ದು ಕಾಣಿಸತೊಡಗಿದೆ.

ಮೊದಲ ಒಂದೆರಡು ವಾರ ಕೇವಲ ಟ್ರಾಲ್ ಸೇನೆಯ ಮೂಲಕ ಸಿದ್ದರಾಮಯ್ಯನವರ ದಾವಣಗೆರೆ ಯಶಸ್ಸನ್ನು ಕೌಂಟರ್ ಮಾಡುವ ಪ್ರಯತ್ನಗಳು ನಡೆದವು. ಆದರೆ ಯಾವಾಗ ಸಿದ್ದರಾಮಯ್ಯ ಅದಕ್ಕೆಲ್ಲ ಕ್ಯಾರೇ ಅನ್ನದೆ ತನ್ನ ಅಜೆಂಡಾ ಪ್ರಕಾರ ಮುಂದಡಿಯಿಡತೊಡಗಿದರೋ, ಅಲ್ಲಿಗೆ ಈ ಬಾರಿಯ ಚುನಾವಣಾ ಆಟದ ನಿಯಮಗಳು ಮೊದಲ ಸುತ್ತಿನಲ್ಲೇ ತನ್ನ ಕೈತಪ್ಪಲಾರಂಭಿಸಿವೆ ಎಂಬುದು ಆಡಳಿತ ಪಕ್ಷಕ್ಕೆ ಅರಿವಾಗಿದೆ. ಹಾಗಾಗಿ, ಈಗ ಬಿಜೆಪಿಯ ಗರ್ಭಗುಡಿ ಮತ್ತು ಪರಿವಾರ ಗಣಗಳೆಲ್ಲ ಎಚ್ಚೆತ್ತುಕೊಂಡಿವೆ. ಇದಿನ್ನೂ ಆರಂಭ ಮಾತ್ರ. ಚುನಾವಣೆಯ ಹೊಸ್ತಿಲಿಗೆ ತಲುಪುವ ವೇಳೆಗೆ ಏನೇನೆಲ್ಲ ವಿವಾದಗಳೇಳಲಿವೆ, ತಿರುವುಗಳು ಸಿಗಲಿವೆ ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ, ಈಗ ನಡೆದಿರುವುದು ಆಡಳಿತ ಪಕ್ಷದ ಎಂದಿನ ’ಸ್ಕ್ರಿಪ್ಟೆಡ್ ಆಟ ಅಲ್ಲ!

ವಿವಾದಗಳು
ಆಗಸ್ಟ್ 20ನೇ ತಾರೀಕಿನ ಬಳಿಕದ ಘಟನೆಗಳನ್ನು ಒಂದೊಂದಾಗಿ ಗಮನಿಸಿ.
* ಆಗಸ್ಟ್ 20ರಂದು ಮಡಿಕೇರಿಗೆ ಹೋದ ಪ್ರತಿಪಕ್ಷ ನಾಯಕ, ’ಷ್ಯಾಡೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಹನದ ಮೇಲೆ ಮೊಟ್ಟೆ ಎಸೆಯಲಾಗುತ್ತದೆ. ಈ ಆಟ ಆಡಿದವರ ಮಟ್ಟಿಗೇ ಇದು ಎಷ್ಟು ಅಸ್ತವ್ಯಸ್ತ ಆಟ ಎಂದರೆ, ದಾರಿಯಲ್ಲಿ ಹೋಗುತ್ತಿದ್ದ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆಗೆ ಜನ ಸೇರಿಸಿದ್ದು ಏಕೆ? ಮೊಟ್ಟೆ ಎಸೆದದ್ದು ಏಕೆ? ಎಸೆದವರು ಯಾರು? ಎಸೆದವರನ್ನು ಠಾಣೆಯಿಂದ ಬಿಡಿಸಿ ತಂದವರು ಯಾರು? ಆಪಾದಿತ ವ್ಯಕ್ತಿ ತಾನು ಕಾಂಗ್ರೆಸ್ಸಿಗ ಎಂದು ಹೇಳಿದ್ದು ಯಾಕೆ? ಆ ಬಳಿಕ ಆ ವ್ಯಕ್ತಿಯ ಬಗ್ಗೆ ಸಿಕ್ಕ ಮಾಹಿತಿಗಳೇನು? ॒ ಇನ್ನಷ್ಟೇ ತಿಳಿಯಾಗಬೇಕಿರುವ ಹಲವು ಗೊಂದಲಗಳಿಗೆ ಈ ಘಟನೆ ಹಾದಿಮಾಡಿಕೊಟ್ಟಿದೆ. ಇದು “ಸ್ಕ್ರಿಪ್ಟ್ ಇಲ್ಲದ ತಂತ್ರಗಾರಿಕೆ” ಎಂಬುದಕ್ಕೆ ಈ ಗೊಂದಲಗಳೇ ಸಾಕ್ಷಿ. ಇನ್ನು ಆಗಸ್ಟ್ ೨೬ಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ಮಡಿಕೇರಿ ಜಿಲ್ಲಾ ಪೊಲೀಸ್ ಮುಖ್ಯಾಲಯಕ್ಕೆ ಮುತ್ತಿಗೆಯ ರೂಪದಲ್ಲಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ; ಈ ಇಡಿಯ ಗೊಂದಲ ಈ ಲೇಖನ ಪ್ರಕಟಗೊಳ್ಳುವ ಹೊತ್ತಿಗೆ ಕ್ಲೈಮ್ಯಾಕ್ಸ್ ಸನಿಹಕ್ಕೆ ತಲುಪಲಿದೆ. (ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿರುವ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಭಟನೆಯನ್ನು ಮುಂದೂಡಿರುವುದಾಗಿ ತಿಳಿಸಿದೆ.)

* ಆಗಸ್ಟ್ 21ರಂದು ಸಿದ್ದರಾಮಯ್ಯನವರು ಚಿಕ್ಕಮಗಳೂರಿಗೆ ತೆರಳುವ ದಾರಿಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡುತ್ತಾರೆ. ಆ ಭೇಟಿಯ ಬಳಿಕ, ಏಕಾಏಕಿ ಮಠದ ಸ್ವಾಮೀಜಿಗಳು, ತಮ್ಮ ಮತ್ತು ಸಿದ್ದರಾಮಯ್ಯನವರ ಭೇಟಿಯಲ್ಲಿ ನಡೆದಿರಬಹುದಾದ ಖಾಸಗಿ ಮಾತುಕತೆಗಳ ಬಗ್ಗೆ ಪತ್ರಿಕೆಗಳಿಗೆ ನೀಡಿದರೆನ್ನಲಾದ ಹೇಳಿಕೆ ದೊಡ್ಡದಾಗಿ ಸುದ್ದಿಯಾಗುತ್ತದೆ. ಲಿಂಗಾಯತ ಧರ್ಮಕ್ಕೆ ಸಂಬಂಧಿಸಿ, ಕಳೆದ ಚುನಾವಣೆಗಳ ವೇಳೆ ಭಾರೀ ವಿವಾದ ಸೃಷ್ಟಿ ಆಗಿದ್ದ ಹಿನ್ನೆಲೆಯಲ್ಲಿ, “ಸಿದ್ದರಾಮಯ್ಯನವರ ಪಶ್ಚಾತ್ತಾಪದ ಸುದ್ದಿ” ಮಾಧ್ಯಮಗಳಿಗೆ ಬಿಡಲಾರದ್ದೆನ್ನಿಸುತ್ತದೆ! ಅದಕ್ಕೆ ಸಿದ್ದರಾಮಯ್ಯನವರು ತಾನು ವಿವರಣೆ ನೀಡಿದ್ದೇ ಹೊರತು, ಪಶ್ಚಾತ್ತಾಪ ವ್ಯಕ್ತಪಡಿಸಿದ್ದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿವಾದ ಕೂಡ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಇಬ್ಬರು ಸಾರ್ವಜನಿಕ ವ್ಯಕ್ತಿಗಳ ನಡುವಿನ ಖಾಸಗಿ ಮಾತುಕತೆಗಳು ಹೀಗೆ ಬಹಿರಂಗಗೊಂಡಾಗ, ಅದು ಎಲ್ಲರಿಗೂ ’ಡೆಲಿಕೇಟ್ ಆಗುವುದು ಸಹಜ.

* ಆಗಸ್ಟ್ 22ರಂದು ಮತ್ತೊಂದು ವಿವಾದ ಏಳುತ್ತದೆ. ಮಡಿಕೇರಿ ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮುನ್ನ ಮಾಂಸಾಹಾರ ತಿಂದಿದ್ದರು ಎಂದು ಕೆದಕಲಾದ ವಿವಾದ ಅದು. ಇದು ಕಳೆದ ಚುನಾವಣೆಗೆ ಮುನ್ನ ಸಿದ್ದರಾಮಯ್ಯನವರು ಧರ್ಮಸ್ಥಳಕ್ಕೆ ಭೇಟಿ ನೀಡುವ ಮುನ್ನ ಮೀನು ತಿಂದಿದ್ದರು ಎಂಬ ವಿವಾದದ ಮುಂದುವರಿಕೆ!

ಇದಲ್ಲದೇ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಅವರ ಮಾತುಗಳು, ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿ ಆರೆಸ್ಸೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಡಿಪಿ ಬದಲಾವಣೆ ಮಾಡದಿರುವ ಹಾಗೂ ಅದು ಇತ್ತೀಚೆಗಿನ ತನಕವೂ ರಾಷ್ಟ್ರಧ್ವಜಾರೋಹಣ ಮಾಡದಿರುವ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನೂ ವಿವಾದವಾಗಿಸಲು ವಿಫಲ ಪ್ರಯತ್ನಗಳು ನಡೆದಿದ್ದವು.

ಕಾಮನ್ ಫ್ಯಾಕ್ಟರ್!
ಈ ಎಲ್ಲ ವಿವಾದಗಳಲ್ಲಿ ಒಂದು ಕಾಮನ್ ಫ್ಯಾಕ್ಟರ್ ಇದೆ. ಅದು “ಮಾಧ್ಯಮ!”
ಆಡಳಿತ ಪಕ್ಷದ ’ಚುನಾವಣಾ ಯಂತ್ರಕ್ಕೆ ಅಗತ್ಯವೆನ್ನಿಸಿದಾಗಲೆಲ್ಲ, ಅದರ ಚತುರಂಗಬಲಗಳಾದ ಪರಿವಾರ ಗಣ, ಟ್ರೋಲ್ ಸೇನೆ, ಮಾಧ್ಯಮ ಸಾಮಂತರು ಮತ್ತು ಕಾರ್ಯಕರ್ತರ ಆಕ್ಷೋಹಿಣಿಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಹೊಸದಲ್ಲ. ಮೇಲಿನಿಂದ ಒಂದು ಸ್ಕ್ರಿಪ್ಟ್ ಬಂದಾಗ, ಅದರಲ್ಲಿ ತಮ್ಮತಮ್ಮ ಪಾತ್ರಗಳನ್ನು ಈ ಚತುರಂಗ ಬಲಗಳು ಪರಿಣಾಮಕಾರಿಯಾಗಿ ನಿರ್ವಹಿಸುತ್ತವೆ. ಇದು ಈಗೀಗ ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ ಈ ಬಾರಿ ಏನಾಗಿದೆ ಎಂದರೆ, ದಾವಣಗೆರೆ ಗೂಗ್ಲಿಯನ್ನು ಕಂಡ ಚತುರಂಗಬಲಗಳು ತಮ್ಮ ಸ್ಕ್ರಿಪ್ಟ್ ಬರುವ ಮೊದಲೇ ಪ್ಯಾನಿಕ್ ಬಟನ್ ಒತ್ತಿವೆ. ಈ ಸ್ಥಳೀಯವಾದ ’ಓವರ್ ಡೂ’ ಸಿದ್ದರಾಮಯ್ಯ ಅವರ ವಿರುದ್ಧ ಏಳುತ್ತಿರುವ ವಿವಾದಗಳಲ್ಲಿ ಎದ್ದು ಕಾಣಿಸುತ್ತಿದೆ. ಈ ಎಲ್ಲ ವಿವಾದಗಳ ಮೂಲವನ್ನು ಹುಡುಕುವುದು ಸುಲಭ. ನಿರ್ದಿಷ್ಟವಾಗಿ ಯಾವ ಚಾನೆಲ್‌ಗಳ/ಪತ್ರಿಕೆಗಳ ಯಾರೆಲ್ಲ ವರದಿಗಾರರು ಏನೆಲ್ಲ ಪ್ರಶ್ನೆಗಳನ್ನು ಸಿದ್ದರಾಮಯ್ಯನವರಿಗೆ ಎಸೆಯುತ್ತಾರೆ? ಅವನ್ನು ಯಾವ ಚಾನೆಲ್ಲುಗಳು-ಪತ್ರಿಕೆಗಳು ಹೇಗೆ ವರದಿ ಮಾಡುತ್ತವೆ, ಅದಕ್ಕೆ ಆಡಳಿತ ಪಕ್ಷದ ಯಾವೆಲ್ಲ ನಾಯಕರು ಪ್ರತಿಕ್ರಿಯಿಸುತ್ತಾರೆ ಎಂಬುದರ ’ಮ್ಯಾಪಿಂಗ್ ಮಾಡಿಕೊಂಡರೆ, ’ಪ್ಯಾನಿಕ್ ನಕಾಶೆ’ ಸಿಗುತ್ತದೆ.

ಮಡಿಕೇರಿ-ಚಿಕ್ಕಮಗಳೂರು ಕಡೆ ಅತಿವೃಷ್ಟಿ-ನೆರೆ ಸಮೀಕ್ಷೆಗೆ ಎಂದು ಹೋಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಲ್ಲಿ ಮಳೆ ಹಾನಿ, ಭೂ ಕುಸಿತ, ಹಾನಿಯ ಪ್ರಮಾಣ, ಪರಿಹಾರ ಇತ್ಯಾದಿಗಳ ಬಗ್ಗೆ ಯಾವ್ಯಾವ ಮಾಧ್ಯಮಗಳು ಎಷ್ಟು ಪ್ರಶ್ನೆ ಕೇಳಿವೆ ಮತ್ತು ಆ ಬಗ್ಗೆ ಎಷ್ಟು ಸುದ್ದಿ ಪ್ರಸಾರ ಆಗಿದೆ ಎಂದು ಪರಿಶೀಲಿಸಿದರೆ, ಇದೆಲ್ಲ ಏನು ನಡೆದಿದೆ ಮತ್ತು ಯಾಕೆ ನಡೆದಿರಬಹುದು ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟ ಚಿತ್ರಣ ಸಿಗುತ್ತದೆ. ಕಳೆದ ಬಾರಿಯ ಚುನಾವಣೆಯಲ್ಲಿ ವಿವಾದ ಸಾಮರ್ಥ್ಯ ಇದೆ ಎಂದು ಸಾಬೀತಾಗಿರುವ “ಲಿಂಗಾಯತ ಧರ್ಮ, “ಮಾಂಸ ತಿಂದು ದೇಗುಲ ಭೇಟಿ”ಯಂತಹ ಸಂಗತಿಗಳನ್ನು ಈಗ ಚುನಾವಣೆಯ ರನ್‌ಅಪ್ ಆರಂಭಗೊಂಡಿರುವಾಗಲೇ ಮುಂಚೂಣಿಗೆ ತಂದು “ಕಜ್ಜಾಯ” ಬಡಿಸಲು ಮಾಧ್ಯಮಗಳು ಶ್ರಮ ಹಾಕುತ್ತಿವೆ. ಈ ಚುನಾವಣೆಗೆ ಚತುರಂಗಬಲಗಳ ಸ್ಕ್ರಿಪ್ಟ್ ಅವರಿಗೆ ಇನ್ನಷ್ಟೇ ತಲುಪಬೇಕಾಗಿದ್ದು, ಕಳೆದ ಬಾರಿಯ ಸ್ಕ್ರಿಪ್ಟ್‌ಅನ್ನೇ ಬಳಸಿಕೊಂಡು ಕೋಟೆ ಕಾಯುವ ಕೆಲಸ ಆರಂಭಗೊಂಡಂತಿದೆ. ಹಾಗಾಗಿ, ಅದರಲ್ಲಿ ಗೊಂದಲಗಳು ಎದ್ದು ಕಾಣಿಸುತ್ತಿವೆ.

ತಂತ್ರಗಾರಿಕೆ
2023ರಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯಲು ಹಾಲಿ ಆಡಳಿತ ಪಕ್ಷದ ಮ್ಯಾಕ್ರೋ ತಂತ್ರಗಾರಿಕೆ ಈಗಾಗಲೇ ಕಾರ್ಯೋನ್ಮುಖವಾಗಿದೆ.
* ಜೆಡಿಎಸ್ ಬಗ್ಗೆ ಆಡಳಿತ ಪಕ್ಷ ತಳೆದಿರುವ ನಿಲುವು (ವಿಧಾನಪರಿಷತ್ತಿನಿಂದ ಆರಂಭಿಸಿ ಮಾಜೀ ಪ್ರಧಾನಿ ದೇವೇಗೌಡರ ಜೊತೆ ಸೌಹಾರ್ದತೆಯನ್ನು ನಿಭಾಯಿಸುವ ತನಕ)
* ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷ ಮತ್ತು ಕಾಂಗ್ರೆಸ್ ಕಡೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ದಾವೇದಾರರೂ ಆಗಿರುವ ಡಿ. ಕೆ. ಶಿವಕುಮಾರ್ ಅವರನ್ನು ಐಟಿ, ಇಡಿ, ಸಿಬಿಐಗಳ ಮೂಲಕ ಯಾವ ಹೊತ್ತಿಗೂ ಕಾನೂನಿನ ಕುಣಿಕೆಗೆ ಸಿಗುವಂತೆ ಸಿದ್ಧಪಡಿಸಿಟ್ಟುಕೊಂಡಿರುವುದು.
* ಆಡಳಿತಾತ್ಮಕವಾಗಿ ಹೇಳಿಕೊಳ್ಳುವಂತಹ ಸಾಧನೆಗಳು ಇಲ್ಲದಿರುವುದರಿಂದಾಗಿ ಮತದಾರರ ಧ್ರುವೀಕರಣ ಆಗುವುದಕ್ಕೆ ಅಗತ್ಯ ಇರುವ “ಧರ್ಮಕಾರಣ”ವನ್ನು ಮುಂಚೂಣಿಗೆ ತರುತ್ತಿರುವುದು (ಯುಪಿ ಮಾದರಿ, ಕ್ರಿಯೆ-ಪ್ರತಿಕ್ರಿಯೆ ಹೇಳಿಕೆಗಳನ್ನು ನೆನಪಿಸಿಕೊಳ್ಳಿ)
* ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸಮುಖಗಳಿಗೆ ತಯಾರಿ ಮತ್ತು ಸಂಘಟನಾತ್ಮಕವಾಗಿ ಹುರುಪು ಮೂಡಿಸುವ ಕೆಲಸಗಳು
* ಚುನಾವಣೆಯಲ್ಲಿ ಬಲಾಬಲ ಲೆಕ್ಕಾಚಾರ ಅಂದಾಜು ಮಾಡಿಕೊಳ್ಳುವುದಕ್ಕಾಗಿ “ಬಿಗ್ ಡೇಟಾ” ಸಂಗ್ರಹ ಮತ್ತು ಮೈಕ್ರೊ ಟಾರ್ಗೆಟಿಂಗಿಗೆ ತಯಾರಿ.
* ತಾವು ಕರ್ನಾಟಕದ ಮಟ್ಟಿಗೆ ನಿಭಾಯಿಸಬೇಕಿರುವ ಏಕೈಕ ನಾಯಕ ಸಿದ್ದರಾಮಯ್ಯ ಎಂಬ ಅರಿವು.
* ಈಗ ಕಟ್ಟಕಡೆಗೆ, ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿದ್ದು ತಪ್ಪು ನಿರ್ಧಾರ ಎಂಬ ಅರಿವು ಮೂಡಿ, ಅವರನ್ನು ಮತ್ತೊಮ್ಮೆ ನಿರ್ಣಾಯಕ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದು.
ಇವಿಷ್ಟು ಸದ್ಯಕ್ಕೆ ಕಣ್ಣಿಗೆ ಕಾಣಿಸುತ್ತಿರುವ ತಂತ್ರಗಾರಿಕೆಯ ಭಾಗಗಳು. ಉಳಿದಂತೆ ಚುನಾವಣೆಗೆ ನೇರ ತಯಾರಿ, ಕಾರ್ಯಕರ್ತರ ದಂಡಿಗೆ ಚುರುಕು ಮುಟ್ಟಿಸುವ ಕೆಲಸ, ಫೀಲ್ಡಿಗಿಳಿದು ಕೆಲಸಇ॒ವಕ್ಕೆಲ್ಲ ಇನ್ನೂ ಸಾಕಷ್ಟು ಸಮಯ ಇದೆ. ಆದರೆ, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಸಿಕ್ಕ ಅನಿರೀಕ್ಷಿತ ಯಶಸ್ಸು ಆಡಳಿತ ಪಕ್ಷದಲ್ಲಿ ಸಣ್ಣ ಬೇಗುದಿ, ಅನಿಶ್ಚಿತತೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ಸಿಗೆ ತನ್ನದೊಂದು ತಂತ್ರಗಾರಿಕೆ ಇಟ್ಟುಕೊಂಡು ಚುನಾವಣೆ ಎದುರಿಸಲು ಅವಕಾಶ ನೀಡಬಾರದು, ಅವರೇನಿದ್ದರೂ ತಮ್ಮ ತಂತ್ರಗಳಿಗೆ ಪ್ರತಿ ತಂತ್ರ ಹೂಡುವುದರಲ್ಲೇ ವ್ಯಸ್ಥರಾಗಿರಬೇಕು ಎಂದುಕೊಂಡಿದ್ದ ಆಡಳಿತ ಪಕ್ಷಕ್ಕೆ ದಾವಣಗೆರೆ ಬೆಳವಣಿಗೆ ಅನಿರೀಕ್ಷಿತ. ಜೊತೆಗೆ ವ್ಯಾಪಕ ಭ್ರಷ್ಟಾಚಾರ, 40% ಕಮಿಷನ್ ಸುದ್ದಿ, ಗೊಂದಲಮಯ ಆಡಳಿತ ಯಂತ್ರದ ಯು ಟರ್ನ್‌ಗಳು, ಪಕ್ಷದ ಒಳಗಿನ ಕಚ್ಚಾಟಗಳು ಎಲ್ಲವೂ ಒಟ್ಟಾಗಿರುವುದೇ ಈಗ “ಪ್ಯಾನಿಕ್ ಬಟನ್ ಕಡೆ ಕೈ ಹೋಗಲು ಕಾರಣ ಆದಂತಿದೆ.

ಒಟ್ಟಿನಲ್ಲಿ, ಈ ಸ್ಕ್ರಿಪ್ಟ್ ರಹಿತ ಮೇಲಾಟ ಹೀಗೇ, ನಿಶ್ಚಿತ ಗುರಿ ಇಲ್ಲದೇ ಮುಂದುವರಿದರೆ, ಅದು ಸಿದ್ದರಾಮಯ್ಯನವರ ಎರಡನೇ ಬಾರಿಯ ಮುಖ್ಯಮಂತ್ರಿ ಹುದ್ದೆ ದಾವೇದಾರಿಕೆಗೆ ಇನ್ನಷ್ಟು ಬಲವನ್ನೂ, ಆದ್ಯತೆಯನ್ನೂ ತಂದುಕೊಟ್ಟರೆ ಅಚ್ಚರಿ ಇಲ್ಲ.

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ, ದುಪ್ಪಟ್ಟು, ನಮ್ದೇಕತೆ ಅವರ ಕೆಲವು ಪ್ರಕಟಿತ ಪುಸ್ತಕಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...