ಒಂದು ಪ್ರಸಂಗ: ಅಂದು ಶನಿವಾರ. ಕಿರಣ್ ಮತ್ತು ಆರಿಫ್ ಇಬ್ಬರೂ ಅರ್ಧ ದಿನದ ಶಾಲೆ ಮುಗಿಸಿ, ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ, ಕಿರಣ್ ಆರಿಫ್‌ಗೆ ಹೀಗಂದ: ’ಲೇ, ಆರಿಫ್ ಏನೋ ಇಷ್ಟೊಂದ್ ಬಿಸಿಲಿದೆ ಇವತ್ತು. ಮೈಯಲ್ಲಾ ಚುರ್ ಚುರ್ ಅಂತಿದೆ’. ಅದಕ್ಕೆ ಆರಿಫ್, ’ಏ ಬೇಸಿಗೆ ಕಾಲದಲ್ಲಿ ಬಿಸಿಲು ಬರ್‌ದಿರಾ ಮಳೆನಾ ಬರತ್ತೆ’ ಅಂದಾ. ಕಿರಣ್: ’ಏ ಅದ್ ನನಗೂ ಗೊತ್ತೋ. ಬೇಸಿಗೆ ಕಾಲ ಇದು ಅಂತ. ಆದರೆ, ಅದೆಂಗೋ ಬೇಸಿಗೆ ಕಾಲದಲ್ಲಿ ಬಿಸ್ಲು, ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಬರತ್ತೆ? ನಂಗಂತೂ ಇದು ಅರ್ಥಾನೇ ಆಗಿಲ್ಲ. ಆರಿಫ್: ’ಏ ಬಿಡೋ, ನನಗೆ ಈ ವರ್ಷ ಕಾಲಗಳು ಅನ್ನೋ ಪಾಠ ಐತೆ. ಅದನ್ನ ಇನ್ನೂ ಮೇಷ್ಟ್ರು ಪಾಠ ಹೇಳಿಲ್ಲ. ಅವ್ರು ಪಾಠ ಮಾಡಿದ್ಮೇಲೆ ನಾನೇ ನಿನಗೆ ಹೇಳ್ತಿನಿ. ಆದ್ರೇ ಈ ಜೋಸೆಫ್ ಅವ್ನಲ್ಲಾ’. ಕಿರಣ್: ’ಯಾರೇಳು? ಅದೇ ಆ ಪಕ್ದೂರೋನ್ ಅಲ್ವಾ’. ಆರಿಫ್: ’ಹೌದೋ ಅವ್ನೇ, ಅವ್ನು ಒಂದ್ ಕಥೆ ಹೇಳ್ತಿದ್ದಾ.. ಭೂಮಿ ಸೂರ್ಯನ ಸುತ್ತ ಅಂಡಾಕಾರದಲ್ಲಿರುವ ಕಕ್ಷೆಯಲ್ಲಿ ಸುತ್ತುತ್ತಿರಬೇಕಾದ್ರೆ, ಸೂರ್ಯನಿಗೆ ಹತ್ತಿರ ಬಂದಾಗ ಬೇಸಿಗೆ ಕಾಲ, ದೂರ ಹೊದಾಗ ಮಳೆಗಾಲ ಅಂತ. ಅದೆ ಇರಬೇಕೆನೊ!’.
ಈ ಪ್ರಸಂಗದಲ್ಲಿ ಆರಿಫ್ ಹೇಳಿದ ಉತ್ತರ ನಿಮಗೆ ಸರಿ ಅನ್ನಿಸತ್ತಾ? ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ಭೂಮಿಗೆ ಶಾಖವು ಹೆಚ್ಚಿರುತ್ತದೆ ಹಾಗಾಗಿ ಬೇಸಿಗೆ ಕಾಲ ಬರುತ್ತದೆ ಎಂಬ ಈ ವಿವರಣೆ ಸರಿಯೇ? ಅಥವಾ ತಪ್ಪೇ? ನಿಮಗೂ ಕೂತಹಲ ಹೆಚ್ಚುತ್ತಿರಬೇಕಲ್ಲವಾ?
ನಮಗೆಲ್ಲರಿಗೂ ತಿಳಿದಿರುವಹಾಗೆ ಭೂಮಿ ಸೂರ್ಯನ ಸುತ್ತ ಗೋಳಾಕಾರದಲ್ಲಿ ಸುತ್ತುತ್ತಿದೆ. ಅಲ್ಲದೇ, ಆ ಗೋಳಾಕಾರಕ್ಕೆ ಎರಡು ಕೇಂದ್ರ ಬಿಂದು ಇದ್ದು, ಸೂರ್ಯನು ಒಂದು ಕೇಂದ್ರ ಬಿಂದುವಿನಲ್ಲಿದ್ದಾನೆ ಎಂಬುದು ತಿಳಿದಿದೆ. ಹಾಗಿದ್ದಾಗ, ಭೂಮಿಯು ಸೂರ್ಯನ ಸುತ್ತ ಸುತ್ತವಾಗ, ವರ್ಷದ ಕೆಲವು ತಿಂಗಳು ಸೂರ್ಯನಿಂದ ದೂರ ಮತ್ತು ಕೆಲವು ತಿಂಗಳು ಸೂರ್ಯನ ಹತ್ತಿರ ಬರುವುದು ಸಹಜ. ಆದರೆ, ಭೂಮಿಯು ಸೂರ್ಯನಿಂದ ದೂರವಿದ್ದಾಗಿನ ಅಂತರ ಮತ್ತು ಹತ್ತಿರವಿದ್ದಾಗಿನ ಅಂತರವನ್ನು ತೆಗೆದುಕೊಂಡು ಅದರ ವ್ಯತ್ಯಾಸ ನೋಡಿದರೆ, ಕೇವಲ ಶೇ.2ರಷ್ಟು ಮಾತ್ರ ಬದಲಾಗುತ್ತದೆ. ಅಂದರೆ, ಖಗೋಳ ವಿಜ್ಞಾನದ ಮಾಪನದಲ್ಲಿ ಶೇ.೨ರಷ್ಟು ವ್ಯತ್ಯಾಸ ಅತೀ ಕಡಿಮೆಯದ್ದು. ಇದು ಭೂಮಿಗೆ ಭೌತಿಕವಾಗಿ ಅಥವಾ ಭೂಮಿಯ ವಾತಾವರಣಕ್ಕೆ ಯಾವ ಬದಲಾವಣೆಯನ್ನು ತರುವುದಿಲ್ಲ. ಈ ಅಂತರವು ಭೂಮಿಯಲ್ಲಿ ಬೇಸಿಗೆ ಕಾಲ, ಚಳಿ ಕಾಲ ಮತ್ತು ಮಳೆ ಕಾಲ ಎಂಬ ಯಾವ ಋತು ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಹಾಗಾದರೆ, ಭೂಮಿಯ ಮೇಲೆ ಕಾಲಗಳು (seasons) ಹೇಗೆ ಉಂಟಾಗುತ್ತವೆ?
ಭೂಮಿಯ ಮೇಲೆ ವಿವಿಧ ಕಾಲಗಳು ಉಂಟಾಗಲು ಕಾರಣ ಭೂಮಿ ಸೂರ್ಯನಿಂದ ಹತ್ತಿರ ಮತ್ತು ದೂರ ಹೋಗುವುದರಿಂದಲ್ಲ ಬದಲಾಗಿ, ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಕಕ್ಷೆಯ ಲಂಭಕ್ಕೆ, ಭೂಮಿಯ ಅಕ್ಷವು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ ಮತ್ತು ಭೂಮಿ ಸೂರ್ಯನ ಸುತ್ತು ಸುತ್ತುತ್ತಿದ್ದರೂ ಈ ಕೋನವು ಒಂದೇ ದಿಕ್ಕನಲ್ಲಿ ಮುಖ ಮಾಡಿರುತ್ತದೆ. ಈ ಕೋನದಿಂಲೇ, ಭೂಮಿಯ ಮೇಲೆ ಕಾಲಗಳು (seasons) ಬದಲಾಗುವುದು.
ಮತ್ತೊಂದು ವಿಸ್ಮಯದ ವಿಚಾರವೇಂದರೆ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ ಇರುವಾಗ ಅಂದರೆ ನಮಗೆ ಬೇಸಿಗೆ ಕಾಲ ಇರುವಾಗ, ಭೂಮಿಯು ಸೂರ್ಯನಿಂದ ದೂರದಲ್ಲಿರುತ್ತಾನೆ! ಆದರೂ ನಮಗೆ ಬೇಸಿಗೆ ಕಾಲವಿರುತ್ತದೆ. ಏಕೆಂದರೆ, ಈ 23.5 ಡಿಗ್ರಿ ಕೋನವು ಆ ಸ್ಥಾನದಲ್ಲಿ ಸೂರ್ಯವಿರುವ ದಿಕ್ಕೆಗೆ ಬಾಗಿದ್ದು, ಉತ್ತರ ಗೋಳದಲ್ಲಿ ಸೂರ್ಯನ ಕಿರಣ ನೇರವಾಗಿ ಬೀಳುತ್ತಿರುತ್ತದೆ, ದಕ್ಷಿಣ ಗೋಳದಲ್ಲಿ ನೇರವಾಗಿ ಬೀಳದೆ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಬಾಗಿರುತ್ತದೆ. ಆದುದರಿಂದ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ, ದಕ್ಷಿಣ ಗೋಳದಲ್ಲಿ ಚಳಿಗಾಲ! ಹಾಗಾಗಿ, ಯಾವುದೇ ಸಂದರ್ಭದಲ್ಲಿ, ಭೂಮಿಯ 23.5 ಡಿಗ್ರಿ ಭಾಗುವಿಕೆಯ ಕಾರಣದಿಂದಾಗಿ, ಭೂಮಿಯ ಉತ್ತರ ಗೋಳದಲ್ಲಿ ಯಾವ ಕಾಲವಿರುವುದೋ, ದಕ್ಷಿಣ ಗೋಳದಲ್ಲಿ ಅದರ ವಿರುದ್ಧ ಕಾಲವಿರುತ್ತದೆ.


