”ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ? ಮೋದಿ ನೋಡಿ ವೋಟ್ ಹಾಕಲಿಲ್ಲ ಎಂದು ದ್ವೇಷ ತೀರಿಸಿ ಕೊಳ್ತಿದ್ದೀರಾ?” ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ನಿರಾಕರಣೆ ಮಾಡಿದ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಎನ್‌ಡಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
”ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ? ನಾವೇನು ಪುಕ್ಸಟ್ಟೆಯಾಗಿ ಅಕ್ಕಿ ಕೇಳಿದ್ವಾ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸದೇ ಇದ್ದಲ್ಲಿ, ಕೇಂದ್ರದ ಆಶಿರ್ವಾದ ಸಿಗೋದಿಲ್ಲ ಎಂದು ಧಮಕಿ ಹಾಕಿದ್ದರು. ಈಗ ಅದನ್ನು ಅನುಷ್ಠಾನಕ್ಕೆ ತರುತ್ತೀರಾ? ಎಂದು ಕೇಳಿದರು.
”ಬಿಜೆಪಿಗೆ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ಮರೆತುಹೋಗಿದೆ. ಅವರ ಆಡಳಿತ ನೋಡಿಯೇ ಜನರು ಅವರನ್ನು ಪ್ರತಿಪಕ್ಷ ಸ್ಥಾನದಲ್ಲಿ ಇಟ್ಟಿದ್ದಾರೆ. ಬೇರೆ ಕಡೆಯಿಂದ ಅಕ್ಕಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಯಾವುದೇ ರಾಜ್ಯ ಸರ್ಕಾರವಾದರೂ ಕೇಂದ್ರದಿಂದಲೇ ಅಕ್ಕಿ ತರಿಸಿಕೊಳ್ಳುವುದು ಸಹಜ. ಅದು ಕೇಂದ್ರದಿಂದಲೇ ಖರೀದಿ ಮಾಡಬೇಕು ಅಂತ ಇದೆ” ಎಂದರು.
ಇದನ್ನೂ ಓದಿ: ಕರ್ನಾಟಕದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಮುಂದಾದ ಪಂಜಾಬ್ ಸಿಎಂ ಭಗವಂತ್ ಮಾನ್
”ಕೇಂದ್ರದ ವಿರುದ್ಧ ನಾಳೆ ಪ್ರತಿಭಟನೆಗೆ ರಾಜ್ಯ ಬಿಜೆಪಿಗೂ ಆಹ್ವಾನ ಇದೆ. ನೀವು ಬನ್ನಿ, 25 ಸಂಸದರು ಇದ್ದಾರೆ, ಈಗಲಾದರೂ ಬನ್ನಿ. ಧಮ್ಮು ತಾಕತ್ತು ಅಂತೀರಲ್ಲ, ಅದನ್ನ ಈಗ ಬಂದು ತೋರಿಸಿ” ಎಂದು ಸವಾಲು ಹಾಕಿದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ:
ಉಚಿತ ಪ್ರಯಾಣದ ಕುರಿತು ಮಾತನಾಡಿ, ”ಈ ಯೋಜನೆಗೆ ಸಾವಿರಾರು ಕೋಟಿ ಆಗುತ್ತೆ ಅಂತ ಲೆಕ್ಕ ಹಾಕಿದ್ದೇವೆ. BMTC, KSRTC, NERTC, KKRTC ಯಾವುದೇ ಇರಬಹುದು. ಮಾತು ಕೊಟ್ಟಿದ್ದೇವೆ, ಅದರಂತೆ ನಡೆದುಕೊಳ್ತಿದ್ದೇವೆ” ಎಂದರು.
”ಬಿಜೆಪಿಯವರು ದೇವಸ್ಥಾನಕ್ಕೆ ಹೋಗಿ ಎಂದು ಹೇಳಿದರೂ ಯಾರೂ ಹೋಗುತ್ತಿರಲಿಲ್ಲ. ನಾವು ಯೋಜನೆ ತಂದ ಬಳಿಕ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಬಿಜೆಪಿಯವರು ಇದನ್ನು ವಿರೋಧಿಸುತ್ತಿದ್ದಾರೆ.


