ಜೀವನ ಕಲೆಗಳು: ಅಂಕಣ -21
ಕೆಲವು ವರ್ಷಗಳ ಹಿಂದೆ ಪ್ರಧಾನಮಂತ್ರಿ ಮೋದಿಯವರು ರಸ್ತೆಯಲ್ಲಿ ಪಕೋಡ ಮಾರುವುವುದು ಸಹ ಒಂದು ಜೀವನೋಪಾಯ ಎಂದು ಹೇಳಿದ್ದಕ್ಕೆ ವಿಪಕ್ಷದವರು ದೊಡ್ಡ ಆಕ್ಷೇಪಣೆ ಎತ್ತಿದ್ದರು. ನಿಜ, ನೌಕರಿ ಅರಸುತ್ತಿರುವ ಯುವಕರಿಗೆ ಸರಕಾರ ಹೇಳುವ ಮಾತು ಇದಲ್ಲ, ಆದರೆ ಅವರು ಹೇಳಿದ ಮಾತಿನಲ್ಲಿ ಒಂದು ಸತ್ಯವಂತೂ ಅಡಗಿದೆ, ನಿಮ್ಮ ಉದ್ಯೋಗ ನೀವೇ ಏಕೆ ಪ್ರಾರಂಭಿಸಬಾರದು ಎಂಬುದು. ಇತ್ತೀಚೆಗೆ ಆಲಿಗಢದ ರಸ್ತೆ ಬದಿಯ ಕಚೋರಿ ಮಾರುವವನ ಮನೆ/ಅಂಗಡಿ ಮೇಲೆ ಆಯಕರ ವಿಭಾಗ ದಾಳಿನಡೆಸಿದಾಗ ಪತ್ತೆಯಾಗಿದ್ದು ಅವನೊಬ್ಬ ಕೋಟ್ಯಾಧಿಪತಿ ಮತ್ತು ವಾರ್ಷಿಕ ಆದಾಯ 60 ಲಕ್ಷಕ್ಕೂ ಮೀರಿತ್ತು ಎಂದು. ಹೋದ ವರ್ಷ ಪಂಜಾಬಿನ ಲುಧಿಯಾನಾದಲ್ಲಿ ಪಕೋಡ ಮಾರುವವನೊಬ್ಬನ ಆಸ್ತಿಯೂ 60ಲಕ್ಷ ಎಂದು ಅಂದಾಜು ಮಾಡಲಾಗಿತ್ತು. ಆದ್ದರಿಂದ ನೌಕರಿಗಾಗಿ ಎಲ್ಲರ ಬಾಗಿಲಿಗೆ ಅಲೆಯುವ ಬದಲು ನಿಮ್ಮ ನೌಕರಿ ನೀವೇ ಸೃಷ್ಟಿಸಿಕೊಳ್ಳುವಲ್ಲಿ ಯಾವ ಅವಮಾನ, ಸಂಕೋಚ ಬೇಕಿಲ್ಲ.
ನಿಮ್ಮ ಹತ್ತಿರ ಹಣ ಇಲ್ಲ, ಅನುಭವವಿಲ್ಲ, ನಿಜ. ಸೇವಾ ಮನೋಭಾವ, ಪ್ರಾಮಾಣಿಕತೆ ಇದ್ದರೆ ಸಾಕು. ಅವಕಾಶಗಳು ಬೇಕಾದಷ್ಟಿವೆ. ಭಾರತದಲ್ಲಿ ಅವಶ್ಯಕತೆಗಿಂತ ಜಾಸ್ತಿ ಇರುವುದು ಜನಸಂಖ್ಯೆ, ಅಂದರೆ ಕೆಲಸ ಮಾಡುವ/ಮಾಡಬಹುದಾದ ಕೈಗಳು ಅಪಾರ. ನೀವು ಮಾಡಬೇಕಾಗಿರುವುದು ಇಷ್ಟು:
· ನಿಮ್ಮ ಸ್ವಂತ ಶಕ್ತಿ, ಸಾಮರ್ಥ್ಯ, ದುರ್ಬಲತೆ ಇವುಗಳನ್ನು ಸರಿಯಾಗಿ ಅರಿಯಿರಿ. ದುರ್ಬಲತೆಯನ್ನು ನೀಗಿಸಿಕೊಳ್ಳಿ, ಶಕ್ತಿಗಳನ್ನು ವೃದ್ಧಿಸಿಕೊಳ್ಳಿ.
· ನಿಮ್ಮ ಆಸಕ್ತಿ/ಇಷ್ಟಗಳು ಏನು, ಜೀವನದಲ್ಲಿ ಏನು ಸಾಧಿಸಬೇಕು ಎಂದು ಅಂದುಕೊಂಡಿದ್ದೀರಿ ಅಂತಹ ಐವತ್ತು ಅಂಶಗಳ ಉದ್ದನೆಯ ಪಟ್ಟಿಮಾಡಿ. ಪಟ್ಟಿಯನ್ನು ಆದ್ಯತೆಯ ಮೇರೆಗೆ ಮರು ಕ್ರಮಾಂಕಗೊಳಿಸಿ. ಮೊದಲ ಹತ್ತು ಅಂಶಗಳನ್ನು ಸೇರಿಸಿಕೊಂಡು ಇನ್ನೊಂದು ಸಣ್ಣ-ಪಟ್ಟಿ ಮಾಡಿ.
· ಸಣ್ಣಪಟ್ಟಿಯಲ್ಲಿ ಇರುವ ಅಂಶಗಳನ್ನು ಶೋಧಿಸಿ ಅದರಲ್ಲಿ ಸೇವೆಯ ಅವಕಾಶ ಎಲ್ಲಿದೆ ಹುಡುಕಿ. ಇಲ್ಲಿ ನಿಮ್ಮ ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆ ಕೆಲಸಕ್ಕೆ ಬರುತ್ತದೆ. ಉದಾ: ನಿಮಗೆ ದೊಡ್ಡ ಎಲೆಕ್ಟ್ರಿಕ್ ಶೋ ರೂಂ ಮಾಲೀಕರಾಗಬೇಕೆಂದು ಆಸೆಯಿದ್ದಲ್ಲಿ, ಅಲ್ಲಿ ಯಾವ ಯಾವ ರೀತಿಯ ಕೆಲಸಗಳು ಉಪಲಬ್ಧವಿವೆ, ಉದಾ ಸೇಲ್ಸ್-ಮ್ಯಾನ್, ಮೆಕ್ಯಾನಿಕ್, ಕ್ಲರ್ಕ್, ಡೆಲಿವರಿ ಮ್ಯಾನ್, ಇತ್ಯಾದಿ. ಅದರ ಪಟ್ಟಿ ಮಾಡಿ.
· ಪಟ್ಟಿಯಲ್ಲಿ ಕಾಣಿಸಿದ ಕೆಲಸದಲ್ಲಿ ನಿಮಗೆ ಯಾವುದು ಸರಿಹೊಂದುತ್ತದೆ ಎಂದು ಇತ್ಯರ್ಥ ಮಾಡಿಕೊಳ್ಳಿ.
· ಆ ಕೆಲಸಕ್ಕೆ ಬೇಕಾದ ಅನುಭವ ನಿಮ್ಮಲ್ಲಿ ಇಲ್ಲದಿದ್ದರೆ, ಅದಕ್ಕೆ ಬೇಕಾದ ತರಬೇತಿ ಎಲ್ಲಿ ಸಿಗುತ್ತದೆ ಎಂದು ಹುಡುಕಿ. ಉದಾ: ಎಲೆಕ್ಟ್ರಿಷಿಯನ್ ಕೋರ್ಸ್ ಇರಬಹುದು, ಮಾತನಾಡುವ ಕಲೆ ಇರಬಹುದು, ಅಕೌಂಟಿಂಗ್ ಕೋರ್ಸ್, ಅಥವಾ ಡ್ರೈವಿಂಗ್ ಲೈಸೆನ್ಸ್ ಇರಬಹುದು. ಅಂತಹ ತರಬೇತಿ ಪಡೆದು ಪ್ರಮಾಣಪತ್ರ ಜೋಡಿಸಿಕೊಳ್ಳಿ.
· ನಿಮ್ಮ ಅರ್ಜಿ ಮತ್ತು ಪ್ರಮಾಣಪತ್ರಗಳನ್ನು ಹಿಡಿದುಕೊಂಡು, ದೊಡ್ಡ-ದೊಡ್ಡ ಶೋ-ರೂಂಗಳಿಗೆ ಭೇಟಿ ನೀಡಿ, ಇಂತಹ ಕೆಲಸ ಬೇಕು, ಅದಕ್ಕೆ ನನ್ನಲ್ಲಿ ಇಂತಹ ಅರ್ಹತೆ ಇದೆ ಎಂದು ಸಿದ್ದಪಡಿಸಿ. ನೌಕರಿ ಸಿಕ್ಕೇ ಸಿಗುತ್ತದೆ.
· ತದನಂತರ ಒಂದೆರಡು ವರ್ಷ ಪ್ರಾಮಾಣಿಕವಾಗಿ ದುಡಿಯಿರಿ, ಸಂಬಳ ಕಡಿಮೆ ಆಗಿದ್ದರೂ ಚಿಂತೆ ಇಲ್ಲ.
· ನಿಮ್ಮ ಮಳಿಗೆಯಲ್ಲಿ ಇರುವ ಎಲ್ಲರ ಕೆಲಸದ ಬಗ್ಗೆಯೂ ಕುತೂಹಲ ತೋರಿಸಿ, ಅವರಿಂದ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ. ನಿಮಗೆ ಮಾಡಲು ಕೆಲಸ ಕಡಿಮೆ ಇದ್ದಾಗ ಅಥವಾ ಅವಕಾಶ ಸಿಕ್ಕಾಗ ಇನ್ನೊಬ್ಬರ ಕೆಲಸದಲ್ಲಿ ಸಹಾಯ ಮಾಡಿ. ಅವರು ನಿಮ್ಮ ಸ್ನೇಹಿತರಾಗುತ್ತಾರೆ. ಬೇಕಾದ ಮಾಹಿತಿ ನೀಡುತ್ತಾರೆ.
· ಕೆಲಸದ ಅನುಭವ ಪಡೆದ ನಂತರ ಈಗ ಚಿಕ್ಕ ಅಂಗಡಿ ಹಾಕಿ.
ನಿಮಗೆ ಎಲ್ಲೂ ಕೆಲಸ ಮಾಡಬೇಕಿಲ್ಲ ಎಂದಿಟ್ಟುಕೊಳ್ಳಿ, ಆಗ ನಿಮ್ಮಲ್ಲಿ ಇರುವ ಸೇವಾ ಕಲೆ ಮತ್ತು ಮನೋಭಾವಕ್ಕೆ ಅನುಗುಣವಾಗುವ ಸೇವಾ ಅವಕಾಶ ಎಲ್ಲಿದೆ ಹುಡುಕಿ. ಅದು ಅಡುಗೆ-ತಿಂಡಿ ಮಾಡುವುದಾಗಿರಬಹುದು, ನಲ್ಲಿ ರಿಪೇರಿ, ಮನೆಯ ಎಲೆಕ್ಟ್ರಿಕ್ ಉಪಕರಣ ದುರಸ್ತಿ, ಒಲೆ – ಕುಕ್ಕರ್ ರಿಪೇರಿ, ಕೇಬಲ್ ಸರ್ವೀಸ್, ಬಡಿಗೆ ಕೆಲಸ (ಕಾರ್ಪೆಂಟರಿ), ಗಿಡ-ಬಳ್ಳಿ ಕತ್ತರಿಸುವ, ಸಂಪು-ಟ್ಯಾಂಕ್ ಸ್ವಚ್ಛಗೊಳಿಸುವ, ಮನೆಗೆ ಸುಣ್ಣ-ಬಣ್ಣದ ಕೆಲಸ, ಕಂಪ್ಯೂಟರ್ ರಿಪೇರಿ, ಮುಂತಾದ ಸಣ್ಣ-ಪುಟ್ಟ ಅವಕಾಶಗಳೇ ಇರಬಹುದು. ಅವುಗಳ ಪಟ್ಟಿ ಮಾಡಿ.
· ಪಟ್ಟಿ ಮಾಡಿದ ನಂತರ, ನಿಮ್ಮ ಮನೆಯ ಸುತ್ತ-ಮುತ್ತ ಇಂತಹ ಸೇವೆ ಸಲ್ಲಿಸುವವರು ಯಾರಾåರು ಕಾರ್ಯನಿರತರಾಗಿದ್ದಾರೆ ಎಂಬುದನ್ನು ಪಟ್ಟಿ ಮಾಡಿ.
· ಇವರು ನೀಡುತ್ತಿರುವ ಸೇವೆಗಳಲ್ಲಿ ಯಾವ ಯಾವ ನ್ಯೂನತೆ ಇದೆ, ಅದರಿಂದ ಅವರ ಗ್ರಾಹಕರು ಬೇಸತ್ತಿದ್ದಾರೆಯೇ ಎಂದು ನೋಡಿ. ಅಂತಹ ಮಾಹಿತಿ ನಿಮಗೆ ಸಿಕ್ಕಿದಲ್ಲಿ, ನಿಮ್ಮ ಸೇವೆಗೆ ಒಳ್ಳೆಯ ಅವಕಾಶ ಇದೆ. ಉದಾ: ರಿಪೇರಿಗೆ ಜನ ಕರೆದಾಗ ಸಮಯಕ್ಕೆ ಬರುವುದಿಲ್ಲ ಅಥವಾ ಅವರ ಕೆಲಸದ ಗುಣಮಟ್ಟ ಕಳಪೆ ಅಥವಾ ಅವರು ಶುದ್ಧ-ಹಸ್ತರಲ್ಲ ಇತ್ಯಾದಿ ದೂರುಗಳಿದ್ದರೆ, ನಿಮಗೆ ಖಂಡಿತಾ ಅವಕಾಶವಿದೆ.
· ಅಂತಹ ಮಾಹಿತಿ ಕಲೆಹಾಕಿ ಅದೇ ಬಡಾವಣೆಯಲ್ಲಿ ನಿಮ್ಮ ಸೇವೆಯ ಲಭ್ಯತೆ ಪ್ರಚಾರ ಶುರು ಮಾಡಿಕೊಳ್ಳಿ.
· ನಿಮ್ಮ ಬಡಾವಣೆಯಲ್ಲಿರುವ ವಯೋವೃದ್ಧರ, ಅಶಕ್ತರ ಪಟ್ಟಿಮಾಡಿ ಅವರಿಗೆ ಯಾವ-ಯಾವ ಸೇವೆಯ ಅವಶ್ಯಕತೆ ಇದೆ ಕೇಳಿ ತಿಳಿದುಕೊಳ್ಳಿ. ಉದಾ: ಅವರಿಗೆ ಊಟ-ತಿಂಡಿ ಮಾಡಿಕೊಳ್ಳಲು ಆಗುವುದಿಲ್ಲ ಆದ್ದರಿಂದ ಅದನ್ನು ಮನೆಗೆ ತಂದು ಕೊಡುವ ಸೇವೆ, ಅವರನ್ನು ತಿಂಗಳಿಗೊಮ್ಮೆ ಬ್ಯಾಂಕ್, ಸರಕಾರಿ ಕಚೇರಿಗೆ ಪೆನ್ಷನ್ ತೆಗೆದುಕೊಳ್ಳಲು, ನಿಯಮಿತವಾಗಿ ಆಸ್ಪತ್ರೆಗೋ, ವೈದ್ಯಕೀಯ ತಪಾಸಣೆಗೋ ಕರೆದುಕೊಂಡುಹೋಗುವ ಸೇವೆ, ಹೋಂ ನರ್ಸಿಂಗ್, ಇತ್ಯಾದಿ ಅನೇಕ ಸೇವೆಗಳಿಗೆ ಅವಕಾಶವಿರುತ್ತವೆ. ಎಲ್ಲ ಸೇವೆಯೂ ನೀವೇ ಮಾಡಬೇಕಿಲ್ಲ, ಅಂತಹ ಸೇವಾದಾರರಿಗೆ ನೀವು ಅವಶ್ಯಕತೆಯ ಮಾಹಿತಿ ಒದಗಿಸಿ ನಿಮ್ಮ ಕಮೀಷನ್ ಪಡೆದುಕೊಳ್ಳಬಹುದು. ಆದರೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ. ನೀವೂ ಸಹ ಅಶುದ್ಧ-ಹಸ್ತರ, ಅಪ್ರಾಮಾಣಿಕರ ಗುಂಪಿಗೆ ಸೇರಿಕೊಂಡಲ್ಲಿ, ನಿಮ್ಮ ಅವಕಾಶ ಇನ್ನೊಬ್ಬರಿಗೆ ಹೋಗುತ್ತದೆ.
ಈ ಎಲ್ಲಾ ಸೇವೆಗಳಲ್ಲಿ ಅವಕಾಶ ಇದ್ದ ಹಾಗೆಯೇ ಕೆಲವು ಭೀತಿಗಳೂ (ರಿಸ್ಕ್) ಇರುತ್ತವೆ. ಅವೇನು ಎಂದು ಸರಿಯಾಗಿ ಗುರುತಿಸಿಕೊಳ್ಳಿ. ಉದಾ: ಯಾರ ಮನೆಯಲ್ಲಿ ನೀವು ರಿಪೇರಿಗೆ ಹೋಗಿದ್ದಾಗ, ಇನ್ಯಾರೋ ಏನೋ ಕೆಟ್ಟ ಕೆಲಸ ಮಾಡಿದರೆ ಅದರ ಅಪವಾದ ನಿಮ್ಮ ಮೇಲೆ ಬರಬಹುದು. ರಸ್ತೆಬದಿ ವ್ಯಾಪಾರದಲ್ಲಿ ಪೋಲಿಸರ, ಮುನಿಸಿಪಲ್ ಕಾರ್ಪೋರೇಷನ್/ಆರೋಗ್ಯ ಇಲಾಖೆ/ ತೆರಿಗೆಅಧಿಕಾರಿಗಳ, ಗೂಂಡಾಗಳ ವಸೂಲಿಯ ಭೀತಿ ಇರಬಹುದು. ಅದಕ್ಕೆ ತಕ್ಕಂತೆ ನಿಮ್ಮ ರಕ್ಷಣೆಗೆ ಬೇಕಾದ ವ್ಯವಸ್ಥಾತ್ಮಕ ಕ್ರಮ ಕೈಗೊಳ್ಳಿ. ಈಗಿನ ಕಾಲದಲ್ಲಿ ಯಾರನ್ನಾದರೂ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ, ದೊಡ್ಡ ದೊಡ್ಡ ಕಂಪನಿಗಳೂ ಸಹ, ಪೋಲಿಸ್ ವೆರಿಫಿಕೇಷನ್ ಕೇಳುತ್ತಾರೆ. ನಿಮ್ಮ ಸರಿಯಾದ ಪರಿಚಯದ ದಾಖಲೆಗಳ ಪ್ರತಿ ಇಟ್ಟುಕೊಳ್ಳಿ. ಪ್ರಾಮಾಣಿಕವಾಗಿ ವ್ಯವಹಾರಮಾಡಿ. ನೋಡುತ್ತ, ನೋಡುತ್ತ, ನಿಮ್ಮ ಸಸಿ ಗಿಡವಾಗಿ, ಮರವಾಗಿ, ಬೆಳೆಯುವುದರಲ್ಲಿ ಸಂದೇಹವಿಲ್ಲ.


