ಆಹಾರ ಸರಬರಾಜು ಕಂಪನಿ ಜೊಮ್ಯಾಟೊದ ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್‌ರವರಿರುವ ಹೊಸ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಜೊಮ್ಯಾಟೊ ಪ್ರತಿಕ್ರಿಯಿಸಿದ್ದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಜೊಮ್ಯಾಟೊ ಇತ್ತೀಚೆಗೆ ಎರಡು ಜಾಹೀರಾತುಗಳನ್ನು ಯುಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಿತ್ತು. ಒಂದರಲ್ಲಿ ಜೊಮ್ಯಾಟೋ ಡೆಲಿವೆರಿ ಪಾರ್ಟ್ನರ್ ಮನೆಯೊಂದರ ಕಾಲಿಂಗ್ ಬೆಲ್ ಒತ್ತಿದಾಗ ಆಶ್ಚರ್ಯ ಕಾದಿರುತ್ತೆ. ಏಕೆಂದರೆ ಬಾಗಿಲು ತೆಗೆದವರು ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಆಗಿರುತ್ತಾರೆ. ಡೆಲಿವೆರಿ ಪಾರ್ಟ್ನರ್ ಸರ್ ನೀವು ಎಂದರೆ, ಹೃತಿಕ್ ‘ಹಾಯ್ ಜಾದೂ’ ಎಂದು ಕರೆಯುತ್ತಾರೆ. ಎಂಥದ್ದೆ ಸಂದರ್ಭದಲ್ಲಿಯೂ ಸಮಯಕ್ಕೆ ಸರಿಯಾಗಿ ಊಟ ತಲುಪಿಸುವ ನೀವು ಯಾವ ಜಾದೂಗಿಂತ ಕಡಿಮೆ ಇಲ್ಲ. ನಿಮ್ಮೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು. ಒಂದು ಗಳಿಗೆ ಬಂದೆ ಇರಿ ಎಂದು ಫೋನ್ ತರಲು ಹೃತಿಕ್ ಮನೆಯೊಳಕ್ಕೆ ಹೋಗುತ್ತಾರೆ. ಇತ್ತ ಡೆಲಿವೆರಿ ಪಾರ್ಟ್ನರ್ ಬಹಳ ಖುಷಿಯಿಂದ ಹೆಲ್ಮೆಟ್ ತೆಗೆದು ತಲೆಗೂದಲೂ ಸರಿಮಾಡಿಕೊಳ್ಳುತ್ತಿರಬೇಕಾದರೆ ಮತ್ತೊಂದು ಆರ್ಡರ್‌ನ ನೋಟಿಫಿಕೇಶನ್ ಸೌಂಡ್ ಕೇಳಿಸುತ್ತೆ.. ಸೆಲ್ಫಿಗಿಂತ ಆರ್ಡರ್ ಅನ್ನು ಸರಿಯಾದ ಸಮಯಕ್ಕೆ ತಲುಪಿಸುವುದೇ ಮುಖ್ಯ, ಎಲ್ಲಾ ಗ್ರಾಹಕರು ಸೂಪರ್ ಸ್ಟಾರ್ ಎಂದು ಸುರಿಯುತ್ತಿರುವ ಮಳೆಯಲ್ಲಿ ಹೆಲ್ಮೆಟ್ ಹಾಕಿಕೊಂಡು ಡೆಲಿವೆರಿ ಪಾರ್ಟ್ನರ್ ಹೊರಡುತ್ತಾರೆ. ಹೃತಿಕ್ ಮನೆ ಹೊರಗೆ ಬಂದು ಹುಡುಕಿದರೆ ಯಾರೂ ಇರುವುದಿಲ್ಲ.
ಮತ್ತೊಂದು ಜಾಹೀರಾತಿನಲ್ಲಿ ಬೆಲ್ ರಿಂಗಾದಾಗ ಬಾಗಿಲು ತೆಗೆದೆವರು ಕತ್ರಿನಾ ಕೈಫ್ ಆಗಿರುತ್ತಾರೆ. ನನ್ನ ಜನ್ಮದಿನದಂದು ನೀನು ಸರಿಯಾದ ಸಮಯಕ್ಕೆ ಬಂದಿದ್ದೀಯ ಥ್ಯಾಂಕ್ಯೂ. ನಿನಗೊಂದು ಕೇಕ್ ಕೊಡುತ್ತೇನೆ, ನಿಮಿಷ ತಾಳು ಎಂದು ಕತ್ರಿನಾ ಒಳಹೋಗುತ್ತಾರೆ. ಅಷ್ಟರಲ್ಲಿ ಡೆಲಿವರ್ ಪಾರ್ಟ್ನರ್‌ನ ಮತ್ತೊಂದು ಆರ್ಡರ್‌ನ ನೋಟಿಫಿಕೇಶನ್ ಸೌಂಡ್ ಕೇಳಿಸುತ್ತೆ.. ಯಥಾ ಪ್ರಕಾರ ಗ್ರಾಹಕರು ಮುಖ್ಯ ಎಂದು ಕೇಕ್‌ಗೆ ಕಾಯದೆ ಆತ ಹೊರಡುತ್ತಾನೆ.
ಈ ಜಾಹೀರಾತು ಹೊರಬರುತ್ತಿದ್ದಂತೆ ಎರಡು ಆರ್ಡರ್‌ಗಳ ಮಧ್ಯೆ ಡೆಲಿವೆರಿ ಪಾರ್ಟ್ನರ್‌ಗಳಿಗೆ ಒಂದು ನಿಮಿಷದ ಬಿಡುವು ಸಹ ಇಲ್ಲವೇ? ಅಂದರೆ ಅವರನ್ನು ಕಂಪನಿ ಹೇಗೆ ನಡೆಸಿಕೊಳ್ಳುತ್ತಿದೆ? ಇಂತಹ ಜಾಹೀರಾತುಗಳಲ್ಲಿ ನಟಿಸಿರುವ ಹೃತಿಕ್, ಕತ್ರಿನಾರಂತಹ ನಟ-ನಟಿಯರಿಗೆ ಕೋಟ್ಯಾಂತರ ಸಂಭಾವನೆ ನೀಡುವುದನ್ನು ಬಿಟ್ಟು ಅದೇ ಹಣವನ್ನು ಡೆಲಿವೆರಿ ಪಾರ್ಟ್ನರ್‌ಗಳ ಕಲ್ಯಾಣಕ್ಕಾಗಿ ಬಳಸಿ ಎಂಬ ಟೀಕೆಗಳು ವ್ಯಕ್ತವಾಗಿವೆ.
ಟೀಕೆಗೆ ಪ್ರತಿಕ್ರಿಯಿಸಿದ ಜೊಮಾಟೊ, ಜಾಹೀರಾತುಗಳನ್ನು ಆರು ತಿಂಗಳ ಹಿಂದೆ ಪರಿಕಲ್ಪಿಸಲಾಗಿದೆ. ಈ ಜಾಹೀರಾತುಗಳ ಗುರಿಯು ಡೆಲಿವರಿ ಪಾರ್ಟ್ನರ್‌ಗಳನ್ನು ಜಾಹೀರಾತುಗಳ ನಾಯಕನನ್ನಾಗಿಸುವುದು, ನಾವು ಡೆಲಿವರಿ ಪಾಲುದಾರರೊಂದಿಗೆ ಗೌರವಯುತವಾಗಿ ಮಾತನಾಡಬೇಕು, ಡೆಲಿವರಿ ಪಾಲುದಾರನ ಕೆಲಸಕ್ಕೆ ಸಂಬಂಧಿಸಿದ ಘನತೆಯ ಮಟ್ಟವನ್ನು ಹೆಚ್ಚಿಸಬೇಕು ಮತ್ತು ಪ್ರತಿಯೊಬ್ಬ ಗ್ರಾಹಕರು ಸ್ಟಾರ್ ಎಂದು ಪುನರುಚ್ಚರಿಸಬೇಕು ಎಂದು ಕಂಪನಿ ಹೇಳಿದೆ.
“ನಮ್ಮ ಜಾಹೀರಾತುಗಳು ಒಳ್ಳೆಯ ಉದ್ದೇಶವನ್ನು ಹೊಂದಿವೆ ಎಂದು ನಾವು ನಂಬುತ್ತೇವೆ, ಆದರೆ ದುರದೃಷ್ಟವಶಾತ್ ಕೆಲವು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ವೇತನ ತಾರತಮ್ಯ, ಕೆಲಸದ ಅವಧಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ನಾವು ಕೆಲ ತಿಂಗಳ ಹಿಂದೆಯೇ ಈಡೇರಿಸಿದ್ದೇವೆ. ಅವರ ಕಲ್ಯಾಣಕ್ಕಾಗಿ ಕ್ರಮ ತೆಗೆದುಕೊಂಡಿದ್ದೇವೆ ಎಂದು ಜೊಮ್ಯಾಟೊ ಪ್ರತಿಕ್ರಿಯಿಸಿದೆ.
ಇದನ್ನೂ ಓದಿ: ಕೊಡಗು: ಪಕ್ಕದ ಮನೆಯವರ ಕೃತ್ಯಕ್ಕೆ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಯರವ ಸಮುದಾಯದ ಕುಟುಂಬ


