ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ವಯಂ ಗಡಿಪಾರು ಆಗುವಂತೆ ಅಮೆರಿಕದ ವಿದೇಶಾಂಗ ಇಲಾಖೆ (ಡಿಒಎಸ್) ಈ-ಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ.
ಪ್ಯಾಲೆಸ್ತೀನ್ ಪರ ಪೋಸ್ಟ್ ಹಾಕಿದವರು ಮತ್ತು ಅದಕ್ಕೆ ಬೆಂಬಲ ವ್ಯಕ್ತಪಡಿಸಿದವರಿಗೂ ‘ರಾಷ್ಟ್ರವಿರೋಧಿ’ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ಗಡಿಪಾರು ಆಗುವಂತೆ ಈ-ಮೇಲ್ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕದಲ್ಲಿ 1.5 ಮಿಲಿಯನ್ ವಿದ್ಯಾರ್ಥಿ ವೀಸಾ ಹೊಂದಿರುವವರಿದ್ದಾರೆ. ಅದರಲ್ಲಿ 3.31 ಲಕ್ಷ ಭಾರತೀಯ ಮತ್ತು 2.77 ಚೀನಾದವರು ಒಳಗೊಂಡಿದ್ದಾರೆ.
ಡಿಒಎಸ್ ನಡೆಸಿ ಪರಿಶೀಲನೆ ಆಧರಿಸಿ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಇನ್ನುಮುಂದೆ ಎಫ್ (ಶೈಕ್ಷಣಿಕ ಅಧ್ಯಯನ ವೀಸಾ), ಎಂ (ವೃತ್ತಿಪರ ಅಧ್ಯಯನ ವೀಸಾ) ಅಥವಾ ಜೆ (ವಿನಿಮಯ ವೀಸಾ) ಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ, ಅವರ ಸಾಮಾಜಿಕ ಮಾಧ್ಯಮ ಖಾತೆಗಳು ಡಿಒಎಸ್ ಪರಿಶೀಲನೆಗೆ ಒಳಪಡಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಮೆರಿಕದ ನ್ಯಾಯ ಮತ್ತು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ, ಆಕ್ಸಿಯೋಸ್ ಮಾಡಿರುವ ವರದಿ ಪ್ರಕಾರ, ಟ್ರಂಪ್ ಆಡಳಿತವು ಕೆಲವು ಕಾಲೇಜುಗಳನ್ನು ‘ಹಮಾಸ್ ಪರ’ ಎಂದು ನಿರ್ಧರಿಸಿದೆ. ಯಾವುದೇ ವಿದೇಶಿ ವಿದ್ಯಾರ್ಥಿಗಳನ್ನು ಆ ಕಾಲೇಜುಗಳು ಸೇರಿಸಿಕೊಳ್ಳದಂತೆ ತಡೆಯಲು ಪ್ರಯತ್ನಿಸುವ ಯೋಜನೆಗಳ ಬಗ್ಗೆ ಚರ್ಚಿಸುತ್ತಿದೆ.
ಟ್ರಂಪ್ ಆಡಳಿತಕ್ಕೆ ಈ ಯೋಚನೆಯು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ “ಕ್ಯಾಚ್ ಅಂಡ್ ರಿವೋಕ್” ಕಾರ್ಯಕ್ರಮದಿಂದ ಬಂದಿದೆ. ಕ್ಯಾಚ್ ಅಂಡ್ ರಿವೋಕ್ ಕಾರ್ಯಕ್ರಮವು ಗಾಝಾದ ಯುದ್ಧದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಆಕ್ಸಿಯೋಸ್ ವರದಿ ತಿಳಿಸಿದೆ.
“ಕ್ಯಾಚ್ ಅಂಡ್ ರಿವೋಕ್” ಜಾರಿಯಾದ ಮೂರು ವಾರಗಳಲ್ಲಿ 300ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಟ್ರಂಪ್ ಆಡಳಿತ ವಾಕ್ ಸ್ವಾತಂತ್ರ್ಯ ಮತ್ತು ನ್ಯಾಯಯುತ ಪ್ರಕ್ರಿಯೆಯನ್ನು ಕಿತ್ತುಕೊಂಡಿದೆ. ಗಾಝಾದಲ್ಲಿ ಆಕ್ರಮಣಕ್ಕೆ ಒಳಗಾದ ಜನರ ಪರ ಧ್ವನಿ ಎತ್ತಿದವರಿಗೆ ಅನ್ಯಾಯವಾಗಿ ಹಮಾಸ್ ನಂಟು ಕಲ್ಪಿಸಿದೆ ಎಂದು ವಿಮರ್ಶಕರು ಆಕ್ಷೇಪಿಸಿದ್ದಾರೆ.
ಹಮಾಸ್ ಪರ ಯಾರಿದ್ದಾರೆ ಎಂಬುದರ ಆಧಾರದ ಮೇಲೆ ಇಡೀ ವಿಶ್ವವಿದ್ಯಾಲಯಗಳನ್ನು ಪ್ರಮಾಣೀಕರಿಸುವ ಪರಿಕಲ್ಪನೆಯು ಆತಂಕಕಾರಿ ಎಂದು ಪಕ್ಷಾತೀತ ವಾಕ್ ಸ್ವಾತಂತ್ರ್ಯ ಗುಂಪಾದ ಫೌಂಡೇಶನ್ ಫಾರ್ ಇಂಡಿವಿಜುವಲ್ ರೈಟ್ಸ್ ಅಂಡ್ ಎಕ್ಸ್‌ಪ್ರೆಶನ್ (FIRE) ಹೇಳಿದೆ.
ಗಡಿಪಾರಾದ ಕೊಲಂಬಿಯಾ ವಿವಿ ಭಾರತೀಯ ವಿದ್ಯಾರ್ಥಿನಿ
‘ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುತ್ತಿದ್ದಾರೆ’ ಮತ್ತು ಹಮಾಸ್ ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತವು ವೀಸಾ ರದ್ದುಗೊಳಿಸಿದ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಸ್ವಯಂ ಗಡೀಪಾರು ಮಾಡಿ ದೇಶ ತೊರೆದಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಗರ ಯೋಜನೆಯಲ್ಲಿ ಪಿಹೆಚ್‌ಡಿ ವಿದ್ಯಾರ್ಥಿಯಾಗಿದ್ದ ಭಾರತೀಯ ಪ್ರಜೆ ರಂಜನಿ ಶ್ರೀನಿವಾಸನ್ ಅವರು ಎಫ್-1 ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕ ಪ್ರವೇಶಿಸಿದ್ದರು ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ (ಡಿಹೆಚ್‌ಎಸ್) ಶುಕ್ರವಾರ (ಮಾ.14) ಹೇಳಿಕೆಯಲ್ಲಿ ತಿಳಿಸಿತ್ತು.
ರಂಜನಿ ಶ್ರೀನಿವಾಸನ್ ಅವರು ಗಾಝಾದ ಹಮಾಸ್ ಗುಂಪನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಮೆರಿಕ ವಿದೇಶಾಂಗ ಇಲಾಖೆ ಮಾರ್ಚ್ 5ರಂದು ಅವರ ವೀಸಾವನ್ನು ರದ್ದುಗೊಳಿಸಿತ್ತು. ಮಾರ್ಚ್ 11 ರಂದು ರಂಜನಿ ಅವರು ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಹೋಮ್ ಆ್ಯಪ್ ಬಳಸಿ ಸ್ವಯಂ-ಗಡೀಪಾರು ಮಾಡಿಕೊಂಡಿರುವುದಾಗಿ ಇಲಾಖೆ ತಿಳಿಸಿದೆ.
ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪ: 700ಕ್ಕೂ ಅಧಿಕ ಸಾವು, ಸಾವಿರಾರು ಜನರಿಗೆ ಗಾಯ


