ಸೆಪ್ಟೆಂಬರ್ 9 ರ ಗುರುವಾರದಂದು ಹೈದರಾಬಾದ್‌ನ ಸೈದಾಬಾದ್‌ನಲ್ಲಿ 6 ವರ್ಷದ ಬಾಲಕಿಯನ್ನು ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಗುರುವಾರ ಸಂಜೆಯಿಂದ ಕಾಣೆಯಾಗಿದ್ದ ಬಾಲಕಿಯನ್ನು, ಪೋಷಕರು ರಾತ್ರಿವರೆಗೂ ಹುಡುಕಾಡಿದರೂ ಪತ್ತೆಯಾಗದೆ ಇದ್ದದ್ದರಿಂದ ಸೈದಾಬಾದ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪೊಲೀಸರಿಗೆ ದೂರು ನೀಡಿದ ನಂತರ, ನೆರೆ ಮನೆಯ ವ್ಯಕ್ತಿ ಕೂಡಾ ಕಾಣೆಯಾಗಿದ್ದು ಅನುಮಾನ ಬಂದಿದ್ದರಿಂದ, ಪೊಲೀಸರೊಂದಿಗೆ ಹೋಗಿ ಅಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಬಾಲಕಿಯ ಮೃತದೇಹ ಬೆಡ್‌ಶೀಟ್‌ನಲ್ಲಿ ಸುತ್ತಿರುವುದನ್ನು ಕಂಡುಬಂದಿದೆ. ಪೊಲೀಸರು ಆರೋಪಿಯ ವಿರುದ್ದ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೂ ಆರೋಪಿಯ ಬಂಧನ ನಡೆದಿಲ್ಲ.
ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ – ಸಂಪೂರ್ಣ ವಿವರ
ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ನಡೆದ ಶವಪರೀಕ್ಷೆಯಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿಪಟ್ಟಿದೆ. ಜೊತೆಗೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಈ ಘಟನೆಯ ನಂತರ, ಭಾರೀ ಪ್ರತಿಭಟನೆಗಳು ಭುಗಿಲೆದ್ದು, ಕಲ್ಲು ತೂರಾಟವೂ ನಡೆದಿತ್ತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆರೋಪಿಯು ಕೃತ್ಯವನ್ನು ಎಸಗಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅಪರಾಧ ನಡೆದ ಐದು ದಿನಗಳು ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ ಮಹೇಂದರ್ ರೆಡ್ಡಿ ಅವರು ಹೈದರಾಬಾದ್, ರಾಚಕೊಂಡ ಮತ್ತು ಸೈಬರಾಬಾದ್‌ನ ಎಲ್ಲಾ ಹಿತಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.
ಆರೋಪಿಯ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು 10 ಲಕ್ಷ ಬಹುಮಾನ ಘೋಷಿಸಿದ್ದಾರೆ. ಆರೋಪಿಯ ಪತ್ತೆಗೆ ಮೂರು ಪೊಲೀಸ್ ಕಮಿಷನರೇಟ್‌ಗಳಾದ್ಯಂತ ಸಾವಿರಾರು ಪೊಲೀಸರು ತೀವ್ರ ಅನ್ವೇಷಣೆಯಲ್ಲಿದ್ದಾರೆ.
ಇದನ್ನೂ ಓದಿ: ನಮ್ಮ ಆಡಳಿತದಲ್ಲಿ ‘ಎಮ್ಮೆ-ಗೂಳಿ-ಮಹಿಳೆ’ ಸುರಕ್ಷಿತ: ಆದಿತ್ಯನಾಥ್
“ಆರೋಪಿ ವೈನ್ ಶಾಪ್‌ನಲ್ಲಿ ಮದ್ಯ ಸೇವಿಸಿದ್ದಾನೆ ಎಂದು ತಿಳಿದ ನಂತರ, ಸೋಮವಾರದಿಂದ ಹೈದರಾಬಾದ್, ರಾಚಕೊಂಡ, ಸೈಬರಾಬಾದ್ ಮತ್ತು ಸುತ್ತಮುತ್ತಲಿನ ಎಲ್ಲಾ ಮದ್ಯದಂಗಡಿಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಅಂತೆಯೇ, ಎಲ್ಲಾ ಬಸ್ ನಿಲ್ದಾಣಗಳು ಮತ್ತು ಬಸ್ ತಂಗುದಾಣಗಳಲ್ಲಿ ರಾತ್ರಿ ಸಮಯದಲ್ಲಿ ನಿರಂತರವಾಗಿ ಶೋಧಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಯಶಸ್ಸು ಸಿಕ್ಕಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆಮದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶೋಧ ಕಾರ್ಯಾಚರಣೆಯನ್ನು ಸಂಘಟಿಸಲು ಹೈದರಾಬಾದ್ ಪೊಲೀಸರ ಬಳಿ ತನ್ನ ವಿಶೇಷ ಕಾರ್ಯಾಚರಣೆ ತಂಡವನ್ನು (ಎಸ್‌ಒಟಿ) ಸಂಪೂರ್ಣವಾಗಿ ಇರಿಸುವಂತೆ ಡಿಜಿಪಿ ಎಂ ಮಹೇಂದರ್ ರೆಡ್ಡಿ ಅವರು ರಾಚಕೊಂಡ ಆಯುಕ್ತ ಮಹೇಶ್ ಭಾಗವತ್ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ, ಸೈಬರಾಬಾದ್ ಪೊಲೀಸರು ಮತ್ತು ಐದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಜಾಗರೂಕರಾಗಿರಬೇಕು, ತಲೆಮರೆಸಿಕೊಂಡಿರುವ ಶಂಕಿತನ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದ್ದಾರೆ.

ಆರೋಪಿಯ ಛಾಯಾಚಿತ್ರವನ್ನು ಎಲ್ಲಾ ಪೊಲೀಸರಿಗೆ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆರೋಪಿಯ ಎರಡು ಕೈಗಳಲ್ಲಿ ‘ಮೌನಿಕಾ’ ಎಂಬ ಹೆಸರಿನ ಟ್ಯಾಟೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ಐದರಿಂದ ಆರು ಅಡಿ ಎತ್ತರವಿರುವ ವ್ಯಕ್ತಿಯೂ ಉದ್ದ ಕೂದಲನ್ನು ಬಿಟ್ಟಿದ್ದು, ಅದನ್ನು ರಬ್ಬರ್ ಬ್ಯಾಂಡ್ ಅಲ್ಲಿ ಕಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ – ದಲಿತ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ; 4 ಮಂದಿ ಬಂಧನ


