ತಮಗೆ ಬೆದರಿಕೆ ಕರೆಗಳು ಬಂದಿವೆ, ಇದರ ಹಿಂದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ಧೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
“ನನಗೂ ಬೆದರಿಕೆ ಕರೆಗಳು ಬರುತ್ತಿವೆ, ಏನು ಮಾಡಬೇಕು? ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಬೆದರಿಕೆ ಕರೆಗಳನ್ನು ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೇಳಿದ್ದೇವೆ” ಎಂದು ಸ್ಪೀಕರ್ ಯು ಟಿ ಖಾದರ್ ಅವರಿಗೆ ಬೆದರಿಕೆ ಕರೆ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಂಗಳೂರಿನಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
“ಶೆಟ್ಟಿ ಹತ್ಯೆಗೆ ಕಾರಣ ಇನ್ನೂ ತಿಳಿದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಮೃತ ವ್ಯಕ್ತಿ ಕೂಡ ರೌಡಿ ಶೀಟರ್ ಎಂದು ಹೇಳಲಾಗಿದೆ. ಅದನ್ನು ಪರಿಶೀಲಿಸಬೇಕಾಗಿದೆ. ಕೊಲೆಯ ನಂತರ, ನಾನು ನಿನ್ನೆ ಪೊಲೀಸರೊಂದಿಗೆ ಮಾತನಾಡಿದೆ, ನಾವು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರನ್ನು ಮಂಗಳೂರಿಗೆ ಕಳುಹಿಸಿದ್ದೇವೆ. ಇದು ಪೂರ್ವನಿಯೋಜಿತವಾಗಿದೆಯೋ ಇಲ್ಲವೋ ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ಪೂರ್ಣಗೊಂಡ ನಂತರ ಅದು ತಿಳಿಯುತ್ತದೆ. ಬಿಜೆಪಿ ಯಾವಾಗಲೂ ಸಾವಿನ ಮೇಲೆ ರಾಜಕೀಯ ಮಾಡಲು ಇಂತಹ ಘಟನೆಗಳನ್ನು ಹುಡುಕುತ್ತಲೇ ಇರುತ್ತದೆ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
26 ಜನರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸಿದ ಅವರು, “ಇದು ಭದ್ರತಾ ಲೋಪವಲ್ಲವೇ?” ಎಂದು ಪ್ರಶ್ನಿಸಿದರು. “ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲಿ ಒಬ್ಬನೇ ಒಬ್ಬ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ನನಗೆ ತಿಳಿಸಲಾಯಿತು. ಯಾವುದೇ ಭದ್ರತೆ ಇಲ್ಲದಿದ್ದರೆ, ಅದರ ಅರ್ಥವೇನು? ನೂರಾರು ಪ್ರವಾಸಿಗರು ಅಲ್ಲಿಗೆ ಹೋಗುತ್ತಾರೆ, ಅಂತಹ ಸ್ಥಳದಲ್ಲಿ ಪೊಲೀಸರು ಇರಬೇಕಲ್ಲವೇ” ಎಂದು ಅವರು ಕೇಳಿದರು.
ಯತ್ನಾಳ್ ಸವಾಲು ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್; ಶಾಸಕ ಸ್ಥಾನಕ್ಕೆ ರಾಜೀನಾಮೆ


