ಹಿಂದುತ್ವವಾದಿ ವಿ.ಡಿ ಸಾವರ್ಕರ್ ಹೆಸರಿನಲ್ಲಿ ಪ್ರಶಸ್ತಿ ಘೋಷಣೆಯಾದ ಬಗ್ಗೆ ನನಗೆ ಗೊತ್ತೂ ಇಲ್ಲ, ಅಂತಹ ಪ್ರಶಸ್ತಿ ಸ್ವೀಕರಿಸುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಬುಧವಾರ (ಡಿಸೆಂಬರ್ 10) ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳ ಹಿನ್ನೆಲೆ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, “ಮಾಧ್ಯಮ ವರದಿಗಳಿಂದ ನನಗೆ ‘ವೀರ ಸಾವರ್ಕರ್ ಪ್ರಶಸ್ತಿ’ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅದನ್ನು ಇಂದು ದೆಹಲಿಯಲ್ಲಿ ಪ್ರಧಾನ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
“ಈ ಪ್ರಶಸ್ತಿ ಘೋಷಣೆಯ ಬಗ್ಗೆ ನನಗೆ ನಿನ್ನೆ ಕೇರಳದಲ್ಲಿರುವಾಗ ಗೊತ್ತಾಯಿತು. ಅಲ್ಲಿ ನಾನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಚಲಾಯಿಸಲು ಹೋಗಿದ್ದೆ. ತಿರುವನಂತಪುರಂನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನನಗೆ ಅಂತಹ ಪ್ರಶಸ್ತಿಯ ಬಗ್ಗೆ ತಿಳಿದಿಲ್ಲ. ನಾನು ಅದನ್ನು ಸ್ವೀಕರಿಸಲು ಒಪ್ಪದೆ ನನ್ನ ಹೆಸರನ್ನು ಘೋಷಿಸುವುದು ಆಯೋಜಕರ ಬೇಜವಾಬ್ದಾರಿಯಾಗಿದೆ ಎಂದಿದ್ದೆ”
“ಅದರ ಹೊರತಾಗಿಯೂ, ಇಂದು ದೆಹಲಿಯಲ್ಲಿ, ಕೆಲವು ಮಾಧ್ಯಮಗಳು ಅದೇ ಪ್ರಶ್ನೆಯನ್ನು ಕೇಳುತ್ತಲೇ ಇವೆ. ಆದ್ದರಿಂದ, ಈ ವಿಷಯವನ್ನು ಸ್ಪಷ್ಟವಾಗಿ ಸ್ಪಷ್ಟಪಡಿಸಲು ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ” ಎಂದಿದ್ದಾರೆ.
“ಪ್ರಶಸ್ತಿಯ ಸ್ವರೂಪ, ಅದನ್ನು ನೀಡುವ ಸಂಸ್ಥೆ ಅಥವಾ ಯಾವುದೇ ಇತರ ಸಂದರ್ಭೋಚಿತ ವಿವರಗಳ ಬಗ್ಗೆ ಗೊತ್ತಿಲ್ಲದಿರುವಾಗ, ನಾನು ಇಂದು ಕಾರ್ಯಕ್ರಮಕ್ಕೆ ಹಾಜರಾಗುವ ಅಥವಾ ಪ್ರಶಸ್ತಿಯನ್ನು ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹೈರೇಂಜ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ಹೆಚ್‌ಆರ್‌ಡಿಎಸ್) ಎಂಬ ಸರ್ಕಾರೇತರ ಸಂಸ್ಥೆ ಶಶಿ ತರೂರ್ ಅವರಿಗೆ ‘ವೀರ್ ಸಾವರ್ಕರ್ ಇಂಟರ್ನ್ಯಾಷನಲ್ ಇಂಪ್ಯಾಕ್ಟ್ ಅವಾರ್ಡ್ 2025’ ನೀಡಲು ಮುಂದಾಗಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬುಧವಾರ ನವದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಹಾಲ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿ, ಸಾಮಾಜಿಕ ಸುಧಾರಣೆ ಮತ್ತು ಮಾನವೀಯ ಸಂಪರ್ಕದಲ್ಲಿ ಬದಲಾವಣೆಗಾಗಿ ಶ್ರಮಿಸಿದ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತದೆ ಎಂದು ವರದಿ ಹೇಳಿದೆ.
ತರೂರ್‌ಗೆ ಮಾಹಿತಿ ನೀಡಿದ್ದೆವು
ಹೆಚ್‌ಆರ್‌ಡಿಎಸ್ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯದರ್ಶಿ ಅಜಿ ಕೃಷ್ಣನ್, ‘ರಾಷ್ಟ್ರ ನಿರ್ಮಾಣಕ್ಕಾಗಿ ಮಾಡಿದ ಕೆಲಸ’ ಪರಿಗಣಿಸಿ ತರೂರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತರೂರ್ ಅವರಿಗೆ ಪ್ರಶಸ್ತಿ ನೀಡುವ ಬಗ್ಗೆ ಒಂದು ತಿಂಗಳ ಹಿಂದೆಯೇ ತಿಳಿಸಲಾಗಿತ್ತು. ನಾವು ತರೂರ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಪ್ರಶಸ್ತಿಯ ಬಗ್ಗೆ ತಿಳಿಸಿದ್ದೆವು ಮತ್ತು ಸಮಾರಂಭಕ್ಕೆ ಅವರನ್ನು ಆಹ್ವಾನಿಸಿದ್ದೆವು. ಇದಲ್ಲದೆ ಎರಡು ವಾರಗಳ ಹಿಂದೆ ನಮ್ಮ ತೀರ್ಪುಗಾರರ ಉಸ್ತುವಾರಿ ರವಿಕಾಂತ್ ಅವರು ತರೂರ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದರು. ಯಾವುದೇ ಸಮಸ್ಯೆ ಇಲ್ಲದೆ ತರೂರ್ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ಪ್ರಶಸ್ತಿ ಸ್ವೀಕರಿಸಲು ಒಪ್ಪಿಕೊಂಡಿದ್ದರು. ಈಗ ಕಾಂಗ್ರೆಸ್‌ನ ಒತ್ತಡದಿಂದ ಅವರು ಅಲ್ಲಗಳೆಯುತ್ತಿರಬಹುದು ಎಂದು ಅಜಿ ಕೃಷ್ಣನ್ ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ.
ತರೂರ್ ಮತ್ತು ಕಾಂಗ್ರೆಸ್
ಬುಧವಾರ ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್, ತರೂರ್ ಸೇರಿದಂತೆ ಪಕ್ಷದ ಯಾವುದೇ ಸದಸ್ಯರು ಸಾವರ್ಕರ್ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಬಾರದು. ಏಕೆಂದರೆ ಆತ ಬ್ರಿಟಿಷರ ಮುಂದೆ ತಲೆಬಾಗಿದವರು ಎಂದು ಹೇಳಿದ್ದರು.
ತರೂರ್ ಆ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಆ ಪ್ರಶಸ್ತಿ ಸ್ವೀಕರಿಸುವುದು ಕಾಂಗ್ರೆಸ್‌ಗೆ ಅವಮಾನ ಮತ್ತು ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತದೆ ಎಂದು ಮುರಳೀಧರನ್ ತಿಳಿಸಿದ್ದರು.


