ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು ತ್ರಿಭಾಷಾ ನೀತಿಗಳನ್ನು ಬೆಂಬಲಿಸುವ ಮೂಲಕ ರಾಜ್ಯಸಭಾ ಸಂಸದೆ ಸುಧಾಮೂರ್ತಿ, ಪ್ರಸ್ತುತ ಇವುಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಎಂಟ್ರಿ ಕೊಟ್ಟಿದ್ದಾರೆ.
ತನ್ನ ಸ್ವಂತ ವಿಷಯವನ್ನು ಉಲ್ಲೇಖಿಸಿದ ಸುಧಾಮೂರ್ತಿ “ನನಗೆ ಏಳೆಂಟು ಭಾಷೆಗಳು ಗೊತ್ತು. ಭಾಷೆಗಳು ಕಲಿಯುವುದನ್ನು ನಾನು ಆನಂದಿಸುತ್ತೇನೆ. ಮಕ್ಕಳೂ ಹೆಚ್ಚಿನ ಭಾಷೆಗಳನ್ನು ಕಲಿಯಬಹುದು. ಒಬ್ಬರು ವ್ಯಕ್ತಿ ಬಹು ಭಾಷೆಗಳನ್ನು ಕಲಿಯಬಹುದು ಎಂದು ನಾನು ನಂಬಿದ್ದೇನೆ” ಎಂದಿದ್ದಾರೆ.
ತ್ರಿಭಾಷಾ ನೀತಿಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಜಟಾಪಟಿ ನಡೆಯುತ್ತಿರುವ ನಡುವೆ, ಕೇಂದ್ರದ ನೀತಿಗಳನ್ನು ಬೆಂಬಲಿಸಿ ಸುದ್ದಿ ಸಂಸ್ಥೆ ಎಎನ್‌ಐಗೆ ಸುಧಾಮೂರ್ತಿ ಈ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಸಂಸತ್‌ನಲ್ಲಿ ಮಾತನಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸುಧಾಮೂರ್ತಿ ಅವರೊಂದಿಗೆ ಚರ್ಚೆ ನಡೆಸಿದ್ದನ್ನು ಉಲ್ಲೇಖಿಸಿದ್ದರು. “ಯಾರೂ ಯಾರ ಮೇಲೂ ಏನನ್ನೂ ಹೇರಿಕೆ ಮಾಡುತ್ತಿದ್ದ” ಎಂದಿದ್ದರು.
“ನಾನು ಸುಧಾ ಮೂರ್ತಿ ಅವರೊಂದಿಗೆ ನಿಮಗೆ ಎಷ್ಟು ಭಾಷೆಗಳು ಗೊತ್ತು ಎಂದು ಕೇಳಿದೆ? ಅದಕ್ಕೆ ಅವರು ಹುಟ್ಟಿನಿಂದ ಕನ್ನಡತಿ, ವೃತ್ತಿಯಿಂದ ಇಂಗ್ಲಿಷ್ ಕಲಿತೆ, ಅಭ್ಯಾಸದಿಂದ ಸಂಸ್ಕೃತ, ಹಿಂದಿ, ಒಡಿಯಾ, ತೆಲುಗು ಮತ್ತು ಮರಾಠಿ ಭಾಷೆಗಳನ್ನು ಕಲಿತೆ ಎಂದು ಹೇಳಿದರು. ಅದರಲ್ಲಿ ತಪ್ಪೇನು? ಸುಧಾ ಮೂರ್ತಿ ಅವರ ಮೇಲೆ ಈ ಭಾಷೆಗಳನ್ನು ಕಲಿಯುವಂತೆ ಹೇರಿಕೆ ಮಾಡಿದ್ದು ಯಾರು? ಯಾರೂ ಯಾರ ಮೇಲೂ ಏನನ್ನೂ ಹೇರುತ್ತಿಲ್ಲ. ಇದು ಪ್ರಜಾಪ್ರಭುತ್ವ ಸಮಾಜ. ಕೆಲವೊಮ್ಮೆ ನೀವು ಬಹುಭಾಷಿಕರಾಗಿರಬೇಕು” ಎಂದು ಪ್ರಧಾನ್ ಹೇಳಿದ್ದರು.
‘ಸಮಗ್ರ ಶಿಕ್ಷಣ ಅಭಿಯಾನ’ದಡಿ ಹಣ ಬಿಡುಗಡೆ ಮಾಡಲು ತ್ರಿಭಾಷಾ ನೀತಿ ಅಳವಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಷರತ್ತು ವಿಧಿಸಿದೆ ಎಂದು ಆರೋಪಿಸಲಾಗಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ಡಿಎಂಕೆ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರ, “ಇದು ಹಿಂದಿ ಹೇರಿಕೆಯ ಪ್ರಯತ್ನ” ಎಂದಿದೆ.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರದ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದಾರೆ. “ತಮಿಳುನಾಡು ಪ್ರಸ್ತುತ ಜಾರಿಯಲ್ಲಿರುವ ದ್ವಿಭಾಷಾ ಸೂತ್ರವಾದ ಇಂಗ್ಲಿಷ್ ಮತ್ತು ತಮಿಳು ಮೂಲಕ ಮಕ್ಕಳಿಗೆ ಸಮರ್ಪಕವಾಗಿ ಶಿಕ್ಷಣ ನೀಡುತ್ತಿದೆ. ಮೂರನೇ ಭಾಷೆಯ ಆಯ್ಕೆಯಾಗಬೇಕೆ ಹೊರತು, ಹೇರಿಕೆಯಾಗಬಾರದು” ಎಂದಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಭಾಷಾ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದಿರುವ ಕಾಂಗ್ರೆಸ್ ಸಂಸದ ಜೆಬಿ ಮಾಥರ್, “ಭಾಷೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಇದು ಅತ್ಯಂತ ಸೂಕ್ಷ್ಮ ವಿಷಯ” ಎಂದು ಹೇಳಿದ್ದಾರೆ.
“ಭಾಷೆಯು ಸೂಕ್ಷ್ಮವಾದ ಭಾವನಾತ್ಮಕ ವಿಷಯ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಜನರ ಭಾವನೆಗಳಿಗೆ ನೋವುಂಟು ಮಾಡುವ ಯಾವುದನ್ನೂ ಪ್ರಚಾರ ಮಾಡಬಾರದು. ಧರ್ಮೇಂದ್ರ ಪ್ರಧಾನ್ ಅನಗತ್ಯವಾಗಿ ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡುತ್ತಿದ್ದಾರೆ. ಬಿಜೆಪಿಗೆ ಎನ್‌ಇಪಿ ಒಂದು ಕಾರ್ಯಸೂಚಿ” ಎಂದು ಮಾಥರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಸರ್ಕಾರದ ನಿಲುವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಮರ್ಥಿಸಿಕೊಂಡಿದ್ದು, ವಿಭಜಕ ಉದ್ದೇಶದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಭಾಷಾ ವೈವಿಧ್ಯತೆಗೆ ಧಕ್ಕೆಯಾಗದಂತೆ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಎನ್‌ಇಪಿ ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಾಜವನ್ನು ವಿಭಜಿಸಲು ಭಾಷೆಯನ್ನು ಎಂದಿಗೂ ಬಳಸುವುದಿಲ್ಲ” ಎಂದಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರು ಸಂಸತ್ತಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದರನ್ನು “ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಾಗರಿಕರು” ಎಂದು ಕರೆದಿದ್ದು ಇತ್ತೀಚೆಗೆ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಪ್ರಧಾನ್ ಹೇಳಿಕೆಗಳು ತಮಿಳುನಾಡಿಗೆ ಮಾಡಿದ ಅವಮಾನ ಎಂದು ರಾಜ್ಯದ ಸಂಸದರು ಕಿಡಿಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಧರ್ಮೇಂದ್ರ ಕ್ಷಮೆಯಾಚಿಸಿ, ತನ್ನ ಹೇಳಿಕೆಯನ್ನು ಹಿಂಪಡೆದಿದ್ದಾರೆ. ತಮಿಳುನಾಡು ಸರ್ಕಾರ ಎನ್‌ಇಪಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
‘ಶಮ್ಲತ್ ದೇಹ್’ ಭೂಮಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸುವ ಕುರಿತು ಸರ್ಕಾರ ತನಿಖೆ ನಡೆಸಲಿದೆ: ಹರಿಯಾಣ ಮುಖ್ಯಮಂತ್ರಿ


