ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮತ್ತೊಮ್ಮೆ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ತಮ್ಮ ಆಡಳಿತದ ಅಧಿಕಾರಿಗಳಿಗೆ ಆ ದೇಶಗಳೊಂದಿಗಿನ ಎಲ್ಲಾ ಒಪ್ಪಂದಗಳನ್ನು ರದ್ದುಪಡಿಸಿ ಎಂದು ಬೆದರಿಕೆ ಹಾಕಿದ ನಂತರವೇ ಎರಡೂ ದೇಶಗಳು ಯುದ್ಧವನ್ನು ನಿಲ್ಲಿಸಲು ಒಪ್ಪಿದವು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಯುಎಸ್ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳ ಕುರಿತು ಪ್ರಸ್ತಾಪಿಸಿದರು. “ನಾವು ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುಶಃ ಅಣು ಯುದ್ಧ ನಡೆಯಬಹುದಿತ್ತು. ನಾವು ಅದನ್ನು ನಿಲ್ಲಿಸಿದೆವು. ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಇಷ್ಟು ಹೆಚ್ಚು ಕೆಲಸ ಮಾಡಿದ ಅಧ್ಯಕ್ಷರು ಯಾರಾದರೂ ಇದ್ದಾರೆಯೇ ಎಂದು ನನಗೆ ಗೊತ್ತಿಲ್ಲ,” ಎಂದು ಅವರು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಆ ಯುದ್ಧ ಅಣು ಸಮರಕ್ಕೆ ತಿರುಗಬಹುದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಂಘರ್ಷವನ್ನು ಕೊನೆಗೊಳಿಸದಿದ್ದರೆ ಅಮೆರಿಕವು ಭಾರತ ಮತ್ತು ಪಾಕಿಸ್ತಾನದೊಂದಿಗೆ “ವ್ಯಾಪಾರ” ಮಾಡುವುದಿಲ್ಲ ಎಂದು ಈ ದೇಶಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.
“ಸರ್ಬಿಯಾ ಮತ್ತು ಕೊಸೊವೊ ದೇಶಗಳು ಯುದ್ಧ ಮಾಡಲು ಹೊರಟಿದ್ದವು, ಅದು ದೊಡ್ಡ ಯುದ್ಧವಾಗುತ್ತಿತ್ತು. ನಾನು ಅವರಿಗೆ, ‘ನೀವು ಯುದ್ಧಕ್ಕೆ ಮುಂದಾದರೆ, ಅಮೆರಿಕದೊಂದಿಗೆ ನಿಮಗೆ ಯಾವುದೇ ವ್ಯಾಪಾರ ಇರುವುದಿಲ್ಲ…’ ಎಂದು ಹೇಳಿದೆ. ಇದೇ ರೀತಿ ಭಾರತ ಮತ್ತು ಪಾಕಿಸ್ತಾನದ ವಿಷಯದಲ್ಲೂ ಆಯಿತು. ನಾನು ಭಾರತ ಮತ್ತು ಪಾಕ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ನಮ್ಮ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಮತ್ತು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರಿಗೆ, ಭಾರತ ಮತ್ತು ಪಾಕಿಸ್ತಾನದೊಂದಿಗಿನ ಎಲ್ಲಾ ಒಪ್ಪಂದಗಳನ್ನು ರದ್ದುಗೊಳಿಸಿ. ಅವರು ಯುದ್ಧದಲ್ಲಿ ತೊಡಗಿರುವ ಕಾರಣ ನಮ್ಮೊಂದಿಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದಾಗಿ ಟ್ರಂಪ್ ವಿವರಿಸಿದರು.
ಎರಡೂ ದೇಶಗಳು ನಮಗೆ ಕರೆ ಮಾಡಿ, ‘ನಾವು ಏನು ಮಾಡಬೇಕು?’ ಎಂದು ಕೇಳಿದವು. ಆಗ ನಾನು, ‘ನೋಡಿ, ನೀವು ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಬಯಸುವುದು ತುಂಬಾ ಒಳ್ಳೆಯದು. ಆದರೆ, ನೀವು ಪರಸ್ಪರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಹೊರಟರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಉತ್ತರಿಸಿದೆ. ಇದಕ್ಕೆ ಅವರು ಒಪ್ಪಿದರು. ಭಾರತ ಮತ್ತು ಪಾಕಿಸ್ತಾನ ಎರಡೂ ಮಹಾನ್ ನಾಯಕರನ್ನು ಹೊಂದಿದ್ದು, ಪರಮಾಣು ಅಸ್ತ್ರಗಳನ್ನು ಬಳಸದಿರಲು ಸಮ್ಮತಿಸಿದವು. ಹೀಗೆ ನಾವು ಸಾಕಷ್ಟು ಕೆಲಸ ಮಾಡಿದೆವು” ಎಂದು ಟ್ರಂಪ್ ತಿಳಿಸಿದರು.
ಭಾರತದಂತಹ ಕೆಲವು ದೊಡ್ಡ ದೇಶಗಳೊಂದಿಗೆ ನಾವು ವ್ಯಾಪಾರ ಮಾಡುವ ಹಕ್ಕನ್ನು ಒಳಗೊಂಡ ಒಪ್ಪಂದವನ್ನು ಮಾಡಿಕೊಳ್ಳಬಹುದೆಂದು ನಾನು ಭಾವಿಸುತ್ತೇನೆ. ಸದ್ಯಕ್ಕೆ ಇದು ನಿರ್ಬಂಧಗಳೊಂದಿಗೆ ಕೂಡಿದೆ. ಅಲ್ಲಿಗೆ ಹೋಗಿ ವ್ಯಾಪಾರ ಮಾಡುವುದನ್ನು ಯೋಚಿಸಲೂ ಸಾಧ್ಯವಿಲ್ಲ. ನಾವು ಸಂಪೂರ್ಣ ವ್ಯಾಪಾರ ತಡೆಗೋಡೆಗಳನ್ನು ತೆಗೆದುಹಾಕಲು ಶ್ರಮಿಸುತ್ತಿದ್ದೇವೆ. ಇದು ಅಸಾಧ್ಯವೆಂದು ಕಾಣುತ್ತದೆ ಮತ್ತು ಇದು ವಾಸ್ತವವಾಗಿ ನಡೆಯುತ್ತದೆಯೇ ಎಂದು ನನಗೆ ಖಚಿತವಿಲ್ಲ. ಆದರೆ, ಸದ್ಯಕ್ಕೆ ನಾವು ಭಾರತದಲ್ಲಿ ವ್ಯಾಪಾರ ಮಾಡಲು ಒಪ್ಪಿಕೊಂಡಿದ್ದೇವೆ ಎಂದು ಟ್ರಂಪ್ ಹೇಳಿದರು.
ನಾವು ಚೀನಾದಲ್ಲಿ ವ್ಯಾಪಾರ ಆರಂಭಿಸಲಿದ್ದೇವೆ. ಅದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ನಾವು ಖಂಡಿತವಾಗಿಯೂ ಚೀನಾದೊಂದಿಗೆ ವ್ಯಾಪಾರ ಮಾಡುತ್ತೇವೆ. ನಮ್ಮ ನಡುವೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಮತ್ತು ನಾವು ಹಲವು ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಅದೂ ಹಣದುಬ್ಬರಕ್ಕೆ ಕಾರಣವಾಗದೆ, ನಾವು ಈಗಾಗಲೇ ನೂರಾರು ಶತಕೋಟಿ ಡಾಲರ್‌ಗಳನ್ನು ಸುಂಕದ ರೂಪದಲ್ಲಿ ಸಂಗ್ರಹಿಸಿದ್ದೇವೆ. ಕೆಲವರು ಸುಂಕವನ್ನು ಪಾವತಿಸಬೇಕಾಗುತ್ತದೆಂದು ನಿರಾಶೆಗೊಳ್ಳುತ್ತಾರೆ ಎಂದು ನಮಗೆ ಅನಿಸುತ್ತದೆ ಎಂದು ಟ್ರಂಪ್ ಹೇಳಿದರು.
ನಾಲ್ಕು ದಿನಗಳ ತೀವ್ರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ ನಂತರ, ಭಾರತ ಮತ್ತು ಪಾಕಿಸ್ತಾನವು ಮೇ 10 ರಂದು ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದವು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ ಎಂದು ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದೊಂದಿಗಿನ ಕದನವಿರಾಮವು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ನೇರ ಮಾತುಕತೆಗಳ ನಂತರವೇ ಸಾಧ್ಯವಾಯಿತು ಎಂದು ಭಾರತವು ಸತತವಾಗಿ ಹೇಳುತ್ತಿದೆ.
ಕಳೆದ ವಾರ ಟ್ರಂಪ್ ಅವರೊಂದಿಗಿನ ಸುಮಾರು 35 ನಿಮಿಷಗಳ ಫೋನ್ ಕರೆಯಲ್ಲಿ, ಭಾರತ-ಪಾಕ್ ನಡುವಿನ ಕದನವಿರಾಮದ ಮಧ್ಯಸ್ಥಿಕೆಯನ್ನು ಇನ್ಯಾವುದೋ ದೇಶ ವಹಿಸಿತು ಎಂದು ಹೇಳಿಕೊಳ್ಳುವುದನ್ನು ಭಾರತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಮೋದಿ ಸ್ಪಷ್ಟವಾಗಿ ಹೇಳಿದ್ದರು. ಹಾಗೆಯೇ, ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸುವ ಕುರಿತು ಭಾರತೀಯ ಮತ್ತು ಪಾಕಿಸ್ತಾನಿ ಸೇನೆಗಳ ನಡುವಿನ ಚರ್ಚೆಗಳು ಪಾಕಿಸ್ತಾನದ ವಿನಂತಿಯ ಮೇರೆಗೆ ಪ್ರಾರಂಭವಾಗಿವೆ ಎಂದೂ ಪ್ರಧಾನಿ ಮೋದಿ ತಿಳಿಸಿದ್ದರು.


