ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಅಕ್ಟೋಬರ್ 7ರಂದು ನಡೆದ ಇಸ್ರೇಲ್ ಮೇಲಿನ ದಾಳಿ ಮತ್ತು ನಂತರ ಗಾಝಾದಲ್ಲಿ ನಡೆದ ಯುದ್ಧದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಎರಡು ಕಡೆಯ ಪ್ರಮುಖರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಖಾನ್ ಆಗ್ರಹಿಸಿದ್ದಾರೆ.
ಇಸ್ರೇಲ್‌ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್, ಹಮಾಸ್‌ನ ಇಬ್ಬರು ಪ್ರಮುಖ ನಾಯಕರಾದ ಅಲ್ ಕ್ವಸೀಮ್ ಬ್ರಿಗೇಡ್ ನಾಯಕ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ (ಮೊಹಮ್ಮದ್ ದೆಯಿಫ್) ಮತ್ತು ಹಮಾಸ್‌ನ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನೂ ಯುದ್ಧಾಪರಾಧಕ್ಕೆ ಹೊಣೆಯಾಗಿಸಬೇಕು ಎಂದು ಕರೀಂ ಖಾನ್ ಹೇಳಿದ್ದಾರೆ.
ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್‌ನ ನಾಯಕರ ವಿರುದ್ದ ಇದೇ ಮೊದಲ ಬಾರಿಗೆ ಐಸಿಸಿ ಬಂಧನ ವಾರೆಂಟ್ ಜಾರಿಗೊಳಿಸಲು ಮುಂದಾಗಿದೆ. ಉಕ್ರೇನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ರಷ್ಯಾದ ನಾಯಕರ ವಿರುದ್ದವೂ ಇದೇ ರೀತಿಯ ಆದೇಶ ನೀಡಿತ್ತು. 2011ರಲ್ಲಿ ಜನರು ದಂಗೆಯೆದ್ದು ಲಿಬಿಯಾದ ಸರ್ವಾಧಿಕಾರಿ ಉಮರ್ ಗಡಾಫಿಯನ್ನು ಹತ್ಯೆಗೈದಿದ್ದರು. ಆ ಸಂದರ್ಭದಲ್ಲಿ ಗಡಾಫಿ ಕೂಡ ಐಸಿಸಿಯಿಂದ ಬಂಧನ ವಾರೆಂಟ್ ಎದುರಿಸುತ್ತಿದ್ದರು.
ಹಮಾಸ್ ಮತ್ತು ಇಸ್ರೇಲ್ ನಾಯಕರ ವಿರುದ್ದ ಒಂದೇ ರೀತಿಯ ಆರೋಪಗಳನ್ನು ಹೊರಿಸಿ ಬಂಧನ ವಾರೆಂಟ್ ಹೊರಡಿಸಲು ಮುಂದಾಗುವ ಮೂಲಕ ಐಸಿಸಿ, ಭಯೋತ್ಪಾದಕ ಸಂಘಟನೆ ಮತ್ತು ಚುನಾಯಿತ ಸರ್ಕಾರದ ನಾಯಕರನ್ನು ಒಂದೇ ತಕ್ಕಡಿಯಲ್ಲಿ ತೂಗಿದೆ, ಎಂಬ ಟೀಕೆಗೆ ಗುರಿಯಾಗಬಹುದು ಎಂದು ಸಿಎನ್ಎನ್ ಅಭಿಪ್ರಾಯಪಟ್ಟಿದೆ.
ಹಮಾಸ್ ನಾಯಕರಾದ ಸಿನ್ವಾರ್, ಹನಿಯೆಹ್ ಮತ್ತು ಅಲ್-ಮಸ್ರಿ ವಿರುದ್ಧದ ಸಾಮೂಹಿಕ ಹತ್ಯೆ, ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವುದು, ಅತ್ಯಾಚಾರ ಮತ್ತು ಬಂಧನದಲ್ಲಿ ಲೈಂಗಿಕ ದೌರ್ಜನ್ಯದಂತಹ ಆರೋಪಗಳಿವೆ ಎಂದು ಖಾನ್ ಹೇಳಿದ್ದಾರೆ.
ಇಸ್ರೇಲ್‌ಗೆ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಎಲ್ಲಾ ಹಕ್ಕುಗಳು ಇವೆ. ಆದರೆ, ಅವರು ಅದನ್ನು ಕಾನೂನನ್ನು ಪಾಲಿಸುವ ಮೂಲಕ ಮಾಡಬೇಕು ಎಂದಿದ್ದಾರೆ.
ಖಾನ್ ಅವರ ಹೇಳಿಕೆಯನ್ನು ಹಮಾಸ್ ಖಂಡಿಸಿದೆ. ಕಾನೂನಿನ ಆಧಾರವಿಲ್ಲದೆ ಪ್ಯಾಲೆಸ್ತೀನ್ ಪ್ರತಿರೋಧದ ನಾಯಕರ ವಿರುದ್ಧ ಬಂಧನ ವಾರಂಟ್ ಹೊರಡಿಸಲು ಮುಂದಾಗುವ ಮೂಲಕ ಐಸಿಸಿ ಪ್ರಾಸಿಕ್ಯೂಟರ್ ಬಲಿಪಶುಗಳನ್ನು ಆಕ್ರಮಣಕಾರರೊಂದಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದಾರೆ ಎಂದಿದೆ.
‘ಯಾರೂ ಕಾನೂನಿಗಿಂತ ಮೇಲಲ್ಲ’
ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ರಕ್ಷಣಾ ಸಚಿವ ಗ್ಯಾಲಂಟ್ ವಿರುದ್ಧ ಸಾಮೂಹಿಕ ಹತ್ಯೆ, ಹಸಿವಿನಿಂದ ಕೆಡವುದು, ಮಾನವೀಯ ಪರಿಹಾರ ಸರಬರಾಜುಗಳನ್ನು ನಿರಾಕರಿಸುವುದು, ಸಂಘರ್ಷದ ವೇಳೆ ಅಮಾಯಕ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದು ಸೇರಿದಂತೆ ಹಲವಾರು ಆರೋಪಗಳಿವೆ. ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಕರೀಂ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ : ಬನಾರಸ್ ಹಿಂದೂ ವಿವಿ ಕೋವಾಕ್ಸಿನ್ ಅಧ್ಯಯನ ವರದಿಯಿಂದ ಅಂತರ ಕಾಯ್ದುಕೊಂಡ ಐಸಿಎಂಆರ್


