• “ನಾನು ವಿಜ್ಞಾನದ ಬರಹಗಾರ ಆಗಬೇಕೆಂದುಕೊಂಡಿದ್ದೆ, ವಿಜ್ಞಾನ ಲೇಖಕ ಕಾರ್ಲ್ ಸಗಾನನ ಹಾಗೆ. ಆದರೆ ಕೊನೆಗೆ, ಇದೊಂದು ಪತ್ರವನ್ನಷ್ಟೇ ಬರೆಯಲು ನನ್ನಿಂದಾದದ್ದು” ಎಂದು ಆತ್ಮಹತ್ಯೆ ಪತ್ರ ಬರೆದು ಜನವರಿ 16, 2016ರಂದು ಅಂದರೆ ನಾಲ್ಕು ವರ್ಷಗಳ ಹಿಂದೆ ನಮ್ಮನ್ನಗಲಿದ ವಿದ್ಯಾರ್ಥಿ ಹೋರಾಟದ ಧೃವತಾರೆ ರೋಹಿತ್ ವೇಮುಲಾ ಇಂದು ಬದುಕಿದ್ದರೆ ಹೇಗಿರುತ್ತಿದ್ದ? ಏನು ಮಾಡುತ್ತಿದ್ದ?

ಆತನದು ಆತ್ಮಹತ್ಯೆಯಲ್ಲ ಬದಲಿಗೆ ಪ್ರಭುತ್ವ ಮುಂದೆ ನಿಂತು ಮಾಡಿದ ಕೊಲೆ. ಅಂದು ರೋಹಿತ್ ವೇಮುಲನೆಂಬ ಭಾರತದ ಪ್ರತಿಭಾನ್ವಿತ ಭವಿಷ್ಯವನ್ನು ಬಲಿತೆಗೆದುಕೊಂಡ ಪ್ರಭುತ್ವದ ದಾಹ ಇನ್ನು ತೀರಿಲ್ಲ. ಅದಕ್ಕಾಗಿ ಸಿಎಎ, ಎನ್ಆರ್ಸಿ, ಎನ್ಪಿಆರ್ ಎಂಬ ಕರಾಳ ನೀತಿಗಳ ಮೂಲಕ, ಶುಲ್ಕ ಹೆಚ್ಚಿಸಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿಸಿ ಕೇಸು ಹಾಕುವ ಮೂಲಕ, ಪ್ರಜಾಪ್ರಭುತ್ವದ ಪರ ದನಿ ಎತ್ತುತ್ತಿರುವವ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ತಳ್ಳುವ ಮೂಲಕ ತಳಸಮುದಾಯಗಳನ್ನು ದಿಕ್ಕುತಪ್ಪಿಸುವ ಹುನ್ನಾರ ನಡೆಸುತ್ತಿದೆ. ರೋಹಿತ್ ವೇಮುಲಾ ಇಂದು ಬದುಕಿದ್ದರೆ ಹೇಗಿರುತ್ತಿದ್ದ? ಏನು ಮಾಡುತ್ತಿದ್ದ?

“ವಿಜ್ಞಾನ, ನಕ್ಷತ್ರ, ಪ್ರಕೃತಿಯಿಂದ ಮನುಷ್ಯರು ವಿಚ್ಚೇದನ ಪಡೆದು ಬಹಳ ದಿನಗಳಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ” ಎಂದು ರೋಹಿತ್ ವೇಮುಲ ಬರೆದಿದ್ದ. ಇಂದು ಇಡೀ ಭೂಮಂಡಲವನ್ನು ಕಬಳಿಸಲು ಕ್ರೋನಿ ಬಂಡವಾಳಶಾಹಿಗಳು ಬಾಯಿತೆರೆದಿದ್ದಾರೆ. ಆಳುವ ಸರ್ಕಾರಗಳು ಅವರ ಬೂಟು ನೆಕ್ಕುತ್ತಿವೆ. ರೈತರು ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ದಲಿತ, ಮಹಿಳೆಯರ ಮೇಲೆ ದಿನನಿತ್ಯ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿದೆ. ರೋಹಿತ್ ವೇಮುಲಾ ಇಂದು ಬದುಕಿದ್ದರೆ ಹೇಗಿರುತ್ತಿದ್ದ? ಏನು ಮಾಡುತ್ತಿದ್ದ?

ಅಂದು ರೋಹಿತ್ ವೇಮುಲಾ ಯಾರೆಂದು ಪ್ರಪಂಚಕ್ಕೆ ಗೊತ್ತಾಗುವ ಮೊದಲೇ ಆತ ಕಾಶ್ಮೀರದ ಪ್ರಜೆಗಳ ಮೇಲಿನ ಹಲ್ಲೆಯನ್ನು ವಿರೋಧಿಸಿದ್ದ.. “ಕೆಲವರಿಗೆ ಬದುಕೇ ಶಾಪ. ನನಗೆ, ನನ್ನ ಹುಟ್ಟೇ ಮಾರಣಾಂತಿಕ ಆಘಾತ” ಎಂದು ಬರೆದುಕೊಂಡಿದ್ದ ರೋಹಿತ್ ವೇಮುಲಾ ಜಾತಿಯನ್ನು ಕಿತ್ತುಹಾಕಲು ಬಯಸಿದ್ದ. ಏಕೆಂದರೆ ಹುಟ್ಟಿನಿಂದಲೇ ಅವನ್ನನ್ನು ತೀವ್ರವಾಗಿ ಅದು ಕಾಡಿತ್ತು. ಜಾತಿವಿರುದ್ಧ ದನಿಯೆತ್ತಿದಾಗ ಆತನೊಂದಿಗೆ ಇದ್ದದ್ದು ಸಾವಿತ್ರಿಬಾಯಿ ಫುಲೆ ಮತ್ತು ಬಾಬಾಸಾಹೇಬರ ಚಿತ್ರ ಮಾತ್ರ..

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಸೃಷ್ಟಿಸಿದ್ದ ಕೋಮು ದಳ್ಳುರಿಯಲ್ಲಿ ಬೆಂದು ಹೋದ ಮುಸ್ಲಿಮರ ಕುರಿತು ಆತನಿಗೆ ನೋವಿತ್ತು. ಆ ಸತ್ಯವನ್ನು ತಿಳಿಸಲೆಂದೇ ಹೈದರಾಬಾದಿನ ಕೇಂದ್ರೀಯ ವಿ.ವಿಯಲ್ಲಿ ‘ಮುಝಾಫರ್ ನಗರ್ ಅಭೀ ಬಾಕಿ ಹೈ’ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿ ಸಂವಾದ ನಡೆಸಿದ್ದ. ಆಗ ಅದಕ್ಕೆ ಅಲ್ಲಿನ ABVP ತಕರಾರು ತೆಗೆದಿತ್ತು ಮಾತ್ರವಲ್ಲ ರೋಹಿತ್ ಜೊತೆ ವಾಗ್ವಾದ ಮಾಡಿತ್ತು.

“ಒಬ್ಬ ಅಂಬೇಡ್ಕರ್‌ವಾದಿಯಾಗಿ, ಪಂಜಾಬ್ ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 7 ಭಾರತೀಯ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಮತ್ತು ಮಣಿಪುರ ಭೂಕಂಪದಲ್ಲಿ ಮೃತಪಟ್ಟ 6 ಜನರಿಗೆ ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ” ಎಂದು ತನ್ನ ಫೇಸ್ ಬುಕ್ ನಲ್ಲಿ ಜನವರಿ 06, 2016ರಂದು ಅಂದು ರೋಹಿತ್ ಬರೆದುಕೊಂಡಿದ್ದ. ಇಂತಹ ಅಪ್ಪಟ ದೇಶಪ್ರೇಮಿ ಅಂದರೆ ದೇಶದ ಜನರನ್ನು ಪ್ರೀತಿಸುವ ರೋಹಿತ್ ಮೇಲೆ ಹಗೆ ಸಾಧಿಸಿದರು ನಕಲಿ ದೇಶಪ್ರೇಮಿಗಳಾದ abvp ಗೂಂಡಾಗಳು..

ಕಂದಮಾಲ್ ನಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಕಟುವಾಗಿ ವಿರೋಧಿಸಿದ್ದ ರೋಹಿತ್, ಅಚ್ಚೆ ದಿನದ ಹೆಸರಿನಲ್ಲಿ ಜನರ ಶೋಷಣೆಯನ್ನು ಬಯಲುಗೊಳಿಸಿದ್ದರು.
ಅಂದರೆ ತನ್ನ ಕ್ಯಾಂಪಸ್ನಲ್ಲಿ ಡೆಮಾಕ್ರಸಿಯನ್ನಷ್ಟೇ ಬಯಸದ ರೋಹಿತ್ ಇಡೀ ಸಮಾಜದಲ್ಲಿ ಡೆಮಾಕ್ರಸಿಯನ್ನು ಹಂಬಲಿಸಿದ್ದರು. ಅದಕ್ಕಾಗಿಯೇ “ಆಕ್ಟಿವಿಸಂ ಈ ಗ್ರಹದ ಮೇಲೆ ವಾಸಿಸಲು ನಾನು ನೀಡುವ ಬಾಡಿಗೆ” ಎಂಬ ಆಲಿಸ್ ವಾಕರ್ರವರ ನುಡಿಗಳನ್ನು ತನ್ನ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಸಫ್ದಾರ್ ಹಶ್ಮಿ ಅವರು 1989 ರ ಜನವರಿ 2 ರಂದು ನಾಟಕವನ್ನು ಪ್ರದರ್ಶಿಸುತ್ತಿದ್ದಾಗಲೇ ಅಸಷ್ಣುತೆಯ ಪ್ರತಿಪಾದಕರಿಂದ ಕೊಲ್ಲಲ್ಪಟ್ಟರು. “ಅಸಹಿಷ್ಣುತೆಯ ಕೋರೆಹಲ್ಲುಗಳಿಗೆ ನಾವು ಸುಂದರ ಕಲಾವಿದ ಮತ್ತು ಧೈರ್ಯಶಾಲಿ ಆತ್ಮವನ್ನು ಕಳೆದುಕೊಂಡಿದ್ದೇವೆ” ಎಂದು ಬರೆದುಕೊಂಡಿದ್ದ ರೋಹಿತ್ ವೇಮುಲಾ ಇಂದಿನ ಸರ್ಕಾರದ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದ?

ನಾನು ಖಂಡಿತವಾಗಿ ಹೇಳಬಲ್ಲೆ, ರೋಹಿತ್ ಇಂದು ಬದುಕಿದ್ದರೆ ನಮಗೆಲ್ಲಾ ನಾಯಕನಾಗಿರುತ್ತಿದ್ದ. ಧರ್ಮದ ಆಧಾರದಲ್ಲಿ ದೇಶ ಒಡೆಯುವವರ ವಿರುದ್ಧ ಪ್ರೀತಿಯಿಂದ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿ ಹೋರಾಟ ಮುಂದುವರೆಸುತ್ತಿದ್ದ. ಜಾತೀಯತೆಯನ್ನು ಕಿತ್ತೊಗೆಯುವ ಕರೆ ನೀಡುತ್ತಿದ್ದ. ಭಾರತದ ಜಾತ್ಯತೀತ ಪರಿಕಲ್ಪನೆಯನ್ನು ಎತ್ತಿಹಿಡಿಯುತ್ತಿದ್ದ. ಧರ್ಮದ ಮೌಢ್ಯಗಳನ್ನು ಕಿತ್ತೆಸೆದು ಕಾರ್ಲ್ ಸಗಾನ್ ರೀತಿ ವಿಜ್ಞಾನವನ್ನು ಪ್ರಚಾರ ಮಾಡುತ್ತಿದ್ದ…..

ಅಂದು ರೋಹಿತ್ ವೇಮುಲಾನನ್ನು ಜಾತಿ ತೀವ್ರವಾಗಿ ಕಾಡಿತ್ತು. ಆತ ಪಿಎಚ್‌ಡಿ ಮಾಡುತ್ತಿದ್ದಾಗ ಎಬಿವಿಪಿ ಗೂಂಡಾಗಳು ಕಾಡಿದರು. ಬ್ರಾಹ್ಮಣವಾದಿ ವಿವಿಯ ಆಡಳಿತ ಮಂಡಳಿ 7 ತಿಂಗಳು ಆತನಿಗೆ ಫೆಲೋಶಿಪ್ ತಡೆ ಹಿಡಿದಿದ್ದಲ್ಲದೇ ಆತನನ್ನು ಕಾಲೇಜು ಮತ್ತು ಹಾಸ್ಟೆಲ್ನಿಂದ ಹೊರಹಾಕಿತ್ತು. ಆತ ಆತ ಅಂಬೇಡ್ಕರ್, ಸಾವಿತ್ರಿ ಬಾಫುಲೆ ಫೋಟೊ ಹಿಡಿದು ಕ್ಯಾಂಪಸ್ಸಿನ ’ವೆಲಿವಾಡ’ದಲ್ಲಿ ಹೋರಾಟ ಆರಂಭಿಸಿದ್ದ. ಆಗ ನಾವ್ಯಾರು ಆತನ ಬೆಂಬಲಕ್ಕೆ ನಿಲ್ಲಲಿಲ್ಲ. ಕಾರಣ ಏನೇ ಇರಬಹುದು ಆತ ಒಂಟಿಯಾದ. ಪ್ರಭುತ್ವ ಬಲಿ ತೆಗೆದುಕೊಂಡಿತು.

ಇಂದು ಹೀಗೆ ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಒಂಟಿಯಾಗಿಸಿ ಬಲಿಯಾಗಿಸುವ ಹುನ್ನಾರ ನಮ್ಮ ಕಣ್ಣೆದುರು ನಡೆಯುತ್ತಿದೆ. ರೋಹಿತ್ ವೇಮುಲಾ‌ ಇಂದು ಬದುಕಿದ್ದಿದ್ದರೆ ಇದನ್ನು ನೋಡುತ್ತಾ ಸುಮ್ಮನಿರುತ್ತಿದ್ದನೆ?

ಸ್ನೇಹಿತರೆ, ನಾವೆಲ್ಲರೂ ರೋಹಿತ್ ವೇಮುಲಾನ ಸಾವಿಗೆ ನ್ಯಾಯ ದಕ್ಕಿಸಿಕೊಳ್ಳವುದೇ ಆಗಿದ್ದರೆ, ಅವನ ಸ್ಥಾನದಲ್ಲಿ ನಿಂತು ಹೋರಾಟ ಮುಂದುವರೆಸಬೇಕಿದೆ. ದೇಶದಲ್ಲಿ ಉದ್ಯೋಗಕ್ಕಾಗಿ, ರೈತರಿಗೆ ವೈಜ್ಞಾನಿಕ ಬೆಲೆಗಾಗಿ, ಗುತ್ತಿಗೆ ನೌಕರರಿಗೆ ನ್ಯಾಯಯುತ ಸಂಬಳಕ್ಕಾಗಿ, ಶೋಷಿತರ ಗೌರವಯುತ ಬದುಕಿಗಾಗಿ ಬೀದಿಯಲ್ಲಿ ಹೋರಾಟನಿರತರೊಂದಿಗೆ ನಾವು ಜೊತೆಗೂಡಬೇಕಿದೆ. ತುರ್ತು ಆದ್ಯತೆಯಲ್ಲಿ ಸಿಎಎ ಎನ್ಆರ್ಸಿ ವಿರುದ್ಧ ಹೋರಾಡುತ್ತಿರುವವರಿಗೆ ಬೆಂಬಲ ನೀಡಬೇಕಿದೆ. ಈ ಕಾಯ್ದೆಗಳು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೇ ದೇಶದ ಎಲ್ಲಾ ತಳಸಮುದಾಯಗಳನ್ನು ಅವರ ಪ್ರಜಾತಾಂತ್ರಿಕ ಹಕ್ಕುಗಳಿಂದ ವಂಚಿಸುವ ಕುತಂತ್ರವಾಗಿದೆ. ಇದರ ವಿರುದ್ಧ
ಪ್ರತಿಭಟನೆಗಳಲ್ಲಿ ಭಾಗವಹಿಸುವುದಲ್ಲದೇ ನೇರ ಹಳ್ಳಿಗಳಿಗೆ, ಬೀದಿಗಳಿಗೆ, ಸ್ಲಂಗಳಿಗೆ, ಆದಿವಾಸಿ ಪ್ರದೇಶಗಳಿಗೆ ನಾವೆಲ್ಲರೂ ತೆರಳಿ ಜನರೊಟ್ಟಿಗೆ ಮಾತನಾಡಬೇಕಿದೆ. ಇವುಗಳ ಅಪಾಯವನ್ನು ಚರ್ಚಿಸಬೇಕಾಗಿದೆ.

ರೋಹಿತ್ ವೇಮುಲಾ ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಆತನ ಚೈತನ್ಯವನ್ನು ನಾವು ಉಸಿರಾಡುತ್ತಿದ್ದೇವೆ ಎಂಬುದನ್ನು ಮರೆಯಬಾರದು.
ಸಾವಿರಾರು ರೋಹಿತ್ ವೇಮಲಾಗಳು ಇಂದು ದನಿಯೆತ್ತಬೇಕಿದೆ. ಅಂಚಿಗೊತ್ತಲ್ಪಟ್ಟ ಎಲ್ಲರ ಪರವಾಗಿ ನಾವು ಹೋರಾಟಕ್ಕಿಳಿಯದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸುವುದೇ? ರೋಹಿತ್ ವೇಮುಲನ ವಾರಸುದಾರರು ನಾವಾಗಲು ಸಾಧ್ಯವೆ? ಬನ್ನಿ, ಇದೇ 17ರಂದು ರೋಹಿತ್ ವೇಮುಲನ ಬಲಿದಾನದ ದಿನದಂದು ಆತನ ನೆನಪಿನಲ್ಲಿ ವಿದ್ಯಾರ್ಥಿಗಳ ಐಕ್ಯತೆಯನ್ನು ಸಾರೋಣ.

LEAVE A REPLY

Please enter your comment!
Please enter your name here