Homeಮುಖಪುಟಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂದಾಗಿಬಿಟ್ಟರೆ ಗಾಂಧೀವಾದಿಗಳನ್ನು ಜರಿಯಲೇ ಬೇಕಲ್ಲವೇ ??

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂದಾಗಿಬಿಟ್ಟರೆ ಗಾಂಧೀವಾದಿಗಳನ್ನು ಜರಿಯಲೇ ಬೇಕಲ್ಲವೇ ??

- Advertisement -
- Advertisement -

ಮತೀಯವಾದಿ, ಅವಕಾಶವಾದಿ, ಬ್ರಿಟಿಷರಲ್ಲಿ ಕ್ಷಮಾಪಣೆ ಪತ್ರ ಬರೆದು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಹಾಗೂ ಗಾಂಧಿ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾಗಿದ್ದ ಸಾವರ್ಕರರನ್ನು ವೀರನೆಂದು ಕರೆಯುವವರಿದ್ದಾರೆ. ಅವರನ್ನು ಸ್ವಾತಂತ್ರ‍್ಯ ಸೇನಾನಿ ಎಂದೂ ಹೇಳುವ ಮತ್ತು ನಂಬಿಸುವ ತಂಡದ ಪ್ರತಿನಿಧಿಯಾದ ಬಸನಗೌಡ ಪಾಟೀಲ ಯತ್ನಾಳ್ ಎಂಬ ಶಾಸಕ ಹೆಚ್.ಎಸ್.ದೊರೆಸ್ವಾಮಿಯವರನ್ನು ಸ್ವಾತಂತ್ರ‍್ಯ ಹೋರಾಟಗಾರ ಅಲ್ಲ ಎಂದು ಹೇಳುವುದರ ಬಗ್ಗೆ ಯಾವ ಆಶ್ಚರ್ಯವೂ ಇಲ್ಲ.

ಹೀಗೆ ಮಾಡುವುದು ಸಂಘ ಪರಿವಾರದವರ ಪಾರಂಪರಿಕ ತಂತ್ರ. ಈಗಾಗಲೇ ಈ ತಂತ್ರವನ್ನು ಗಾಂಧೀಜಿ ಮತ್ತು ನೆಹರುರವರ ಮೇಲೂ ಅವರು ಪ್ರಯೋಗಿಸಿ ಅವರ ಸಂಘಟನೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಸಂಘದ ಸದಸ್ಯರು ಮತ್ತು ಅವರ ಪರಿವಾರದ ಸಂಘಗಳ ಸದಸ್ಯರು ತಾವು ನಂಬಿದ ಅಥವಾ ನಂಬಲು ಆಸೆಪಡುವ ಇಂತಹ ವಿಷಯಗಳನ್ನು ಸಮಸ್ತ ಜನಮಾನಸದಲ್ಲಿ ಬಿತ್ತಬೇಕೆಂಬ ಸಂಕಲ್ಪವನ್ನು ತೊಟ್ಟಿರುತ್ತಾರೆ. ಅವುಗಳನ್ನು ಹಿಂದೆ ಮೌಖಿಕವಾಗಿ ಮತ್ತು ಸಾಹಿತ್ಯಕವಾಗಿ ಮಾಡುತ್ತಿದ್ದರು. ಈಗ ಅವುಗಳ ಜೊತೆ ಸಾಮಾಜಿಕ ಜಾಲತಾಣಗಳೂ ಕೂಡಾ ಸೇರಿವೆ.

ಹತ್ಯೆಗಳ ಸಂಚಿನ ರೂವಾರಿ ಸಾವರ್ಕರ್:
ದಿನಾಂಕ 27, ಫೆಬ್ರವರಿ 1948ರಂದು ಆಗಿನ ಗೃಹಮಂತ್ರಿಗಳಾಗಿದ್ದ ಸರದಾರ್ ವಲ್ಲಭಭಾಯಿ ಪಟೇಲರು ವಿ.ಡಿ.ಸಾವರ್ಕರ್ ಕುರಿತಾಗಿ ಪ್ರಧಾನ ಮಂತ್ರಿ ನೆಹರೂರವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. “ಹಿಂದೂ ಮಹಾಸಭಾದ ಮತೀಯ ಅಂಗವು ಆಪಾದಿತನಾದ ಸಾವರ್ಕರ್ ಮುಂದಾಳತ್ವದಲ್ಲಿ ಗಾಂಧೀಜಿಯವರನ್ನು ಹತ್ಯೆ ಮಾಡಲು ಸಂಚನ್ನು ಹೂಡಿರುವುದು ಸ್ಪಷ್ಟವಾಗಿ ನನಗೆ ತೋರುತ್ತಿದೆ.”
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದ ಜೆ.ಎಲ್.ಕಪೂರ್‌ರವರು ಚೇರ್ಮನ್ ಆಗಿದ್ದ ವಿಚಾರಣಾ ಸಮಿತಿಯು ಸತತ ವಿಚಾರಣೆಗಳಿಂದ ಕಂಡುಕೊಂಡಿದ್ದ ಸತ್ಯವೇನೆಂದರೆ, ಮಹಾತ್ಮ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಭಾಗಿಯಾದವರೆಲ್ಲಾ ಪದೇಪದೇ ವಿ.ಡಿ.ಸಾವರ್ಕರನ್ನು ಅವರ ಸಾವರ್ಕರ್ ಸದನದಲ್ಲಿ ಭೇಟಿಯಾಗುತ್ತಿದ್ದರು ಮತ್ತು ದೀರ್ಘಕಾಲದ ಚರ್ಚೆಗಳನ್ನು ನಡೆಸುತ್ತಿದ್ದರು ಎಂಬುದು.
ಕಪೂರ್‌ರವರ ವಿಚಾರಣೆಗಳಲ್ಲಿ ಸ್ಪಷ್ಟಪಡಿಸಿದಂತೆ ಸಾವರ್ಕರ್ ಕೂಡಾ ಗಾಂಧೀಜಿಯವರನ್ನು ಕೊಲೆ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಸಾವರ್ಕರ್‌ರ ಖಾಸಾ ಸೆಕ್ರೆಟರಿ ಗಜಾನನ್ ವಿಷ್ಣು ದಾಮ್ಲೆ ಮತ್ತು ಅವರ ಅಂಗರಕ್ಷಕ ಅಪ್ಪಾ ಕಾಸರ್ ವಿಚಾರಣಾ ಸಮಿತಿಯ ಮುಂದೆ ಈ ಸತ್ಯವನ್ನು ಒಪ್ಪಿಕೊಂಡಿದ್ದರು. 1969ರಲ್ಲಿ ಸಮಿತಿಯು ವರದಿಯನ್ನು ಅಂತಿಮಗೊಳಿಸುತ್ತಾ ಹೇಳಿದ್ದೇನೆಂದರೆ, ಈ ಎಲ್ಲಾ ಪುರಾವೆಗಳನ್ನು ಆಧರಿಸಿ ಸಮನ್ವಯಗೊಳಿಸಿದ್ದೇನೆಂದರೆ, “ಗಾಂಧೀಜಿಯವರನ್ನು ಕೊಲ್ಲುವ ಸಂಚನ್ನು ಹೂಡಿರುವುದು ಈ ಸಾವರ್ಕರ್ ಮತ್ತು ಅವರ ತಂಡ” ಎಂದು. ಆದರೆ ಈ ವರದಿ ಬರುವುದಕ್ಕೆ ಬಹಳ ತಡವಾಗಿಬಿಟ್ಟಿತ್ತು. ಏಕೆಂದರೆ ಸಾವರ್ಕರ್ 1966ರ ಫೆಬ್ರವರಿ 26ರಂದೇ ತನ್ನ 83ನೆಯ ವಯಸ್ಸಿನಲ್ಲಿ ಮರಣಸಿಯಾಗಿತ್ತು.

ಸಾವರ್ಕರ್ ಮೂವರು ಬ್ರಿಟಿಷ್ ಅಧಿಕಾರಿಗಳ ರಾಜಕೀಯ ಕೊಲೆಗಳ ಸಂಚಿನ ಭಾಗವಾಗಿದ್ದ ಕಾರಣದಿಂದ ಹಿಂದೂ ರಾಷ್ಟ್ಟೀಯವಾದಿಗಳು ಆತನನ್ನು ವೀರನೆಂದು ಬಣ್ಣಿಸುತ್ತಾ ಕ್ರಾಂತಿಕಾರಿಯ ಪಟ್ಟಿಗೆ ಸೇರಿಸಿದ್ದಾರೆ. ಜೊತೆಗೆ ಗಾಂಧೀಜಿ ಹತ್ಯೆಯ ಸಂಚಿನ ಆರೋಪದಲ್ಲಿಯೂ ಷಾಮೀಲಾಗಿರುವುದೂ ಈ ವೀರನೆಂಬ ಕಲ್ಪನೆಯನ್ನು ಗಟ್ಟಿಗೊಳಿಸಿಕೊಳ್ಳಲು ಅವರಿಗೆ ಸಹಕಾರಿಯಾಯಿತು. ವಾಸ್ತವವಾಗಿ ತನ್ನನ್ನು ಆರಾಧಿಸುತ್ತಿದ್ದ ಅನುಯಾಯಿಗಳಿಗೆ ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲಲು ಪ್ರೇರೇಪಿಸಿದ್ದ ಸಾವರ್ಕರ್ ನೇರವಾಗಿ ಅಖಾಡಕ್ಕಿಳಿದಿರಲಿಲ್ಲ. ಅದೇ ರೀತಿ ನಾಥೂರಾಂ ಗೋಡ್ಸೆಯನ್ನೂ ಪ್ರೇರೇಪಿಸಿದ್ದು. ಹಾಗಾಗಿ ಮಹಾತ್ಮಾ ಗಾಂಧೀಜಿಯ ಹತ್ಯೆಯ ವಿಷಯದಲ್ಲಿ ಸಾವರ್ಕರ್ ಕುರಿತಾಗಿ ಸರಿಯಾದ ಸಾಕ್ಷಾಧಾರಗಳು ಸಿಗದೇ ಶಿಕ್ಷೆಗೆ ಒಳಗಾಗಲಿಲ್ಲ. ಆದರೆ ಆರೋಪ ಸಾಬೀತಾಗುವ ಹೊತ್ತಿಗೆ ಸಾವರ್ಕರ್ ಬದುಕಿರಲಿಲ್ಲ.
1909ರ ಜುಲೈ 1ರಲ್ಲಿ ಮದನ್ ಲಾಲ್ ಧಿಂಗ್ರಾ, ಸರ್ ವಿಲಿಯಂ ಕರ್ಜನ್ ವಿಲ್ಲಿಯನ್ನು ಲಂಡನಿನಲ್ಲಿ ಗುಂಡಿಟ್ಟು ಕೊಂದಿದ್ದ. ಧಿಂಗ್ರಾನ ವಿಚಾರಣೆ ನಡೆದು ವಿಲ್ಲಿಯನ್ನು ಕೊಂದದ್ದಕ್ಕೆ ಆತನನ್ನು ನೇಣ ಗೇರಿಸಿದರು. ಆಗ ಸಾವರ್ಕರರ ಮೇಲೆ ಅನುಮಾನ ಬಂದಿದ್ದರೂ ಸಾಕ್ಷಾಧಾರದ ಕೊರತೆ ಇತ್ತು. ಆದರೆ ಸಾವರ್ಕರ್ ಈ ಸಂಚಿನ ರೂವಾರಿ ಎಂಬುದು ಗೊತ್ತಾಗಿದ್ದು ಸಾವರ್ಕರ್ ಚರಿತ್ರೆಯನ್ನು ಬರೆದ ಧನಂಜಯ್ ಕೀರ್‌ನಿಂದಾಗಿ.

ವಿಲ್ಲಿಯ ಹತ್ಯೆಯ ಮುಂಜಾನೆ ಸಾವರ್ಕರ್ ಧಿಂಗ್ರಾನಿಗೆ ನಿಕ್ಕಲ್ ಲೇಪಿತ ರಿವಾಲ್ವರನ್ನು ಕೊಟ್ಟು ಹೇಳಿದ್ದೇನೆಂದರೆ, “ಈ ಬಾರಿ ವಿಫಲನಾದರೆ ನಿನ್ನ ಮುಖವನ್ನು ನನಗೆ ತೋರಿಸಬೇಡ” ಎಂದು. ಏಕೆಂದರೆ ಧಿಂಗ್ರಾ ಬಂಗಾಲದ ವೈಸರಾಯ್ ಆಗಿದ್ದ ಲಾರ್ಡ್ ಕರ್ಜನ್ ಮತ್ತು ಫುಲ್ಲರ್ ಈ ಇಬ್ಬರನ್ನೂ ಕೊಲ್ಲಬೇಕಾಗಿದ್ದು, ಸಭೆ ನಡೆಯುವ ಜಾಗಕ್ಕೆ ತಡವಾಗಿ ಹೋಗಿದ್ದ. ಅಷ್ಟರಲ್ಲಿ ಅವರು ಅಲ್ಲಿಂದ ಹೊರಟುಹೋಗಿದ್ದರು. ಈ ಹತ್ಯೆಯನ್ನು ಮಾಡುವುದಕ್ಕಾಗಿಯೇ ಧಿಂಗ್ರಾನಿಗೆ ಹಲವು ತಿಂಗಳುಗಳ ತರಬೇತಿಯನ್ನೂ ಕೂಡಾ ಸಾವರ್ಕರ್ ಕೊಟ್ಟಿದ್ದುಂಟು.
ಈ ಸಾವರ್ಕರ್ ಅಭಿನವ ಭಾರತ ಎಂಬ ರಹಸ್ಯ ಸಭೆಯ ಸದಸ್ಯ. ಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರನ್ನು ಹೊರದೂಡಬೇಕೆಂಬದ ಸಿದ್ಧಾಂತದ ಸಂಘವದು. ಸಾವರ್ಕರ್‌ನ ಅಣ್ಣ ಗಣೇಶ್ ಅಲಿಯಾಸ್ ಬಾಬೂರಾವ್ ಕೂಡಾ ಅದರ ಸದಸ್ಯನಾಗಿದ್ದು, ಬಾಂಬುಗಳ ಸಂಗ್ರಹಣೆ ಮತ್ತು ಸಾಕಾಣಿಕೆಯ ಆರೋಪದ ಮೇಲೆ ಜೂನ್ 8, 1909ರಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು. ಆತನ ಸಂಗಾತಿಗಳು ಇದರ ಪ್ರತೀಕಾರವಾಗಿ ಅನಂತ್ ಕನ್ಹೆರೆ 29ನೇ ಡಿಸೆಂಬರ್ 1909 ನಾಸಿಕ್‌ನ ಡಿಸ್ಟಿಕ್ ಮ್ಯಾಜಿಸ್ಟ್ರೇಟರಾಗಿದ್ದ ಜಾಕ್ಸನನ್ನು ಗುಂಡಿಕ್ಕಿ ಕೊಂದ. ಕನ್ಹೆರೆಯ ಬೆನ್ನತ್ತಿದ್ದಾಗ ಸಾವರ್ಕರನ ಪತ್ರಗಳು ಸಿಕ್ಕಿದ್ದವು. ಸಾವರ್ಕರ್ 20 ಶಸ್ತ್ರಗಳನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಕಳುಹಿಸಿದ್ದಕ್ಕೆ ಟೆಲಿಗ್ರಾಫಿಕ್ ವಾರಂಟ್ ಕಳುಹಿದ್ದರು. ಸಾವರ್ಕರ್ ಪೋಲಿಸರಿಗೆ ಮಾರ್ಚ್ 13, 1910ರಂದು ಶರಣಾದ ಮೇಲೆ ಭಾರತಕ್ಕೆ ಬಂಧಿಸಿ ತರಲಾಯಿತು.

ಅಂಡಮಾನಿನ ಅಂಜುಕುಳಿ:
ವಿಚಾರಣೆ ನಡೆಯಲಾಗಿ ಸಾವರ್ಕರ್‌ಗೆ ಎರಡು ಟರ್ಮಿನ ಶಿಕ್ಷೆಯಾಯ್ತು. ಒಂದೊಂದು ಟರ್ಮಿಗೆ 50-50 ವರ್ಷಗಳು. ಅದನ್ನು ಅನುಭವಿಸಲೆಂದೇ ಅಂಡಮಾನಿಗೆ ಕಳುಹಿಸಿದ್ದು. ಅಲ್ಲಿ ಎಣ್ಣೆ ಮಿಲ್ಲಿಗೆ ದಬ್ಬಲಾಯಿತು. 1911ರಲ್ಲೇ ಕ್ಷಮಾದಾನಕ್ಕೆ ಸಾವರ್ಕರಿಂದ ಅರ್ಜಿ ಬರೆಯಲ್ಪಟ್ಟು ಅದು ಪುರಸ್ಕರಿಸಲ್ಪಡಲಿಲ್ಲ. 14, ನವೆಂಬರ್ 1913ರಲ್ಲಿ ಮತ್ತಷ್ಟು ದಯನೀಯವಾಗಿ ಗೋಗರೆಯುತ್ತಾ ಅಂಡಮಾನಿನಿಂದ ಭಾರತದ ಜೈಲಿಗೆ ಕಳುಹಿಸಲು ಕೋರಿ ಬರೆದಿದ್ದು ಹೀಗೆ:“ಸಮರ್ಥರೇ ದಯಾಮಯಿಯಾಗಿರಲು ಸಾಧ್ಯ, ದಾರಿ ತಪ್ಪಿರುವ ಮಗನನ್ನು ಪಾಲಿಸುವಂತಹ ಸರ್ಕಾರದ ಬಾಗಿಲುಗಳಲ್ಲದೇ ಇನ್ನಾರು ಮರಳಿ ಸ್ವೀಕರಿಸಲು ಸಾಧ್ಯ?” ಅದಕ್ಕೆ ಪ್ರತಿಯಾಗಿ ತನಗೆ ತನ್ನ ಹಿಂಸಾತ್ಮಕ ಮಾರ್ಗ ತಪ್ಪು ಎಂಬ ತಿಳುವಳಿಕೆ ಬಂದಿದೆ. ತಾನು ಬ್ರಿಟಿಷ್ ಸರ್ಕಾರದ ಅಣತಿಗೆ ಬದ್ಧನಾಗಿರುತ್ತೇನೆ, ಇತ್ಯಾದಿಗಳ ಕತೆ ಈಗ ಎಲ್ಲರಿಗೂ ತಿಳಿದಿರುವುದೇ ಆಗಿದೆ.

ಆದರೆ ವಿಷಯವೇನೆಂದರೆ, ಕಂಡವರ ಮಕ್ಕಳ ಬಾವಿಗೆ ತಳ್ಳಿ ಆಳ ನೋಡುತ್ತಿದ್ದ ಸಾವರ್ಕರ್, ಸಿಕ್ಕಿ ಹಾಕಿಕೊಂಡಾಗ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕ್ಷಮಾಪಣೆಯ ಪತ್ರ ಬರೆದುಕೊಂಡು ತಲೆ ಕಾಯ್ದುಕೊಂಡು ಮುಂದೆ ವೀರ ಸಾವರ್ಕರ್ ಎಂದು ಸಂಘಿಗಳಿಂದ ಕರೆಯಿಸಿಕೊಂಡದ್ದು. ಹೇಡಿಯನ್ನು ವೀರನೆಂದೂ, ಸ್ವಾತಂತ್ರ್ಯ ಹೋರಾಟಗಾರನೆಂದೂ ಕರೆಯುವಾಗ, ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಇರಿಸಲಾಗದು. ಹಾಗಾಗಿಯೇ ಅವರಿಗೆ ಜರಿಯಲು, ದ್ವೇಷಿಸಲು ಗಾಂಧೀಜಿ ಬೇಕು, ನೆಹರು ಬೇಕು. ಈಗ ಹೆಚ್.ಎಸ್.ದೊರೆಸ್ವಾಮಿಯವರು ಸಿಕ್ಕಿದ್ದಾರೆ.

ಗಾಂಧಿ ಧರ್ಮದ್ರೋಹಿ – ದೇಶದ್ರೋಹಿ:
ನಾಥೂರಾಂ ಗೋಡ್ಸೆಯ ಜನ್ಮ ಶತಾಬ್ದಿ ವರ್ಷ (1910-2010) ಸ್ಮರಣೆಯಲ್ಲಿ ಆಂಧ್ರಪ್ರದೇಶದ ಗುಂಟೂರಿನ ಡಾ.ಕೆ.ವಿ.ಸೀತಾರಾಮಯ್ಯ “ಗಾಂಧಿ ಧರ್ಮದ್ರೋಹಿ ಮತ್ತು ದೇಶದ್ರೋಹಿ – ಧರ್ಮದೇವತೆಯ ತೀರ್ಪು” ಎಂಬ ಪುಸ್ತಕವನ್ನು ರಚಿಸಿದರು. ಈ ಪುಸ್ತಕ ಇಂಗ್ಲೀಷ್ ಮತ್ತು ಭಾರತದ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿವೆ. ಅದರಲ್ಲಿ ಗಾಂಧೀಜಿ ಓರ್ವ ನೀತಿಗೆಟ್ಟ, ಕೆಳಮಟ್ಟಕ್ಕಿಳಿದ ಮತ್ತು ವಕ್ರಬುದ್ಧಿಯ ಹಿಂದೂವಿನ ಸಾಂಕೇತಿಕ ಪ್ರತಿನಿಧಿಯಾಗಿದ್ದರು ಎಂದು ಪ್ರಾರಂಭಿಸುತ್ತಾರೆ. ಗಾಂಧೀಜಿ ಹೇಡಿ ಮತ್ತು ಇಂಗ್ಲಿಷ್ ಶಿಕ್ಷಣದ ಮೋಹಿ ಎಂದು ಸಾಧಿಸಲಾಗುತ್ತದೆ. ಅಲ್ಲದೇ ಉಪನಿಷತ್ತು, ವೇದ, ಗೀತೆ ಏನೂ ತಿಳಿಯದೇ ಬರೀ ಮುಸಲ್ಮಾನರಿಗೆ ಪ್ರಿಯವಾಗಿರಲು ಬಯಸಿದ್ದರು ಎಂದು ವಾದಿಸಲಾಗುತ್ತದೆ. ಹಿಂದೂ ರಾಷ್ಟ್ರಕ್ಕೆ ಗಾಂಧಿ ಒಂದು ಶಾಪ, ಹಿಂದೂಗಳಿಗೆ ಮೋಸ ಮಾಡಿ ತಮ್ಮ ಶಿಶು ಪಾಕಿಸ್ತಾನಕ್ಕೆ ಜನ್ಮಕೊಟ್ಟರು. ಹಿಂದೂ ರಕ್ತಮಾಂಸಗಳಿಂದ ಆ ಶಿಶುವಿಗೆ ಉಣ್ಣಿಸಿ ರಕ್ಷಿಸಿದರು. ಈಶ್ವರ ಅಲ್ಲ ತೇರಾನಾಮ್ ಎಂದು ಲಕ್ಷಾಂತರ ಹಿಂದೂ ಪುರುಷ ಮತ್ತು ಸ್ತ್ರೀಯರ ವಿನಾಶಕ್ಕೆಡೆಯಾದರು. ಆಗ ರಾಮನೇ ನಾಥುರಾಮ್ ಗೋಡ್ಸೆ ರೂಪದಲ್ಲಿ ಬಂದು ಹಾಡು ಹಗಲಿನ ಬೆಳಕಿನಲ್ಲೇ ಗಾಂಧಿಯ ಜೀವವನ್ನು ಅಂತ್ಯಗೊಳಿಸಿದನು ಎಂದೆಲ್ಲಾ ಹೇಳಲಾಗುತ್ತದೆ.

“ರಾಮ ರಾವಣನನ್ನು ಕೊಂದನು, ಕೃಷ್ಣ ಕಂಸನನ್ನು ಕೊಂದನು, ಗೋಡ್ಸೆ ಗಾಂಧಿಯನ್ನು ಕೊಂದನು.” ಇದು ಅವರು ನಂಬಿಸಲಿಕ್ಕೆ ಹೊರಟಿರುವ ಚಿತ್ರಣ. ಅವರು ಹಾಗೇ ಮುಂದುವರೆದು, “ಗಾಂಧಿಯವರ ನಿಜ ಚಿತ್ರ ಹಿಂದೂಗಳಿಗೆ ಗೊತ್ತಾದರೆ ಮುಂಬರುವ ತಲೆಮಾರುಗಳು ರಾಜಕೀಯವಾಗಿ ಮತ್ತು ಸರಿಯಾಗಿ ಅವರನ್ನು ತೂಗಿ ನೋಡುವರು” ಎಂದೂ ತಮ್ಮ ಶ್ರದ್ಧೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವರು. ಅವರ ಆಸಕ್ತಿ ಪ್ರಸ್ತುತ ಮಾತ್ರವಲ್ಲದೇ ಮುಂದಿನ ತಲೆಮಾರೂ ಆಗಿರುತ್ತದೆ. ತಾವು ತಿರುಚಿರುವ ಇತಿಹಾಸದ ಭಾಗವನ್ನು, ಹೊಸದೊಂದು ಮಿಥ್ ಅನ್ನು, ತಾವು ಮೂಡಿಸಬೇಕೆಂದಿರುವ ಜನಾಭಿಪ್ರಾಯವನ್ನು, ಪರಿಕಲ್ಪನೆಯನ್ನು ಹುಟ್ಟಿಸಿದ ನಂತರ ಅದನ್ನು ಮುಟ್ಟಿಸುತ್ತಿದ್ದದ್ದು, ಮೊದಲು ಪೂರ್ವಾಧ್ಯಯನ ಇಲ್ಲದ ಅಥವಾ ಮಾನಸಿಕವಾಗಿ ಚಂಚಲ ಹಾಗೂ ದುರ್ಬಲವಾಗಿರುವ ಕಿಶೋರರಿಗೆ ಮತ್ತು ಯುವಕರಿಗೆ. ಅವರು ಆಗ ಅದನ್ನು ನಂಬಿಕೊಂಡು, ಗಟ್ಟಿಗೊಳಿಸಿಕೊಳ್ಳುತ್ತಾ ಬಂದು ತಾವು ವಯಸ್ಕರಾಗುವ ಹೊತ್ತಿಗೆ ತಮ್ಮ ಕುಟುಂಬ ಮತ್ತು ವ್ಯವಹಾರದ ವಲಯದಲ್ಲಿ ಸಮರ್ಥವಾಗಿ ಮಂಡಿಸುವ ಮಟ್ಟಿಗೆ ಆಗಿರುತ್ತಿದ್ದರು. ವಯಸ್ಕರಾಗಿರುವ ಆ ಪ್ರೇರಿತವಾದ ವಯೋಮಾನದವರೇ ರಾಜಕೀಯವಾಗಿ, ವ್ಯಾವಹಾರಿಕವಾಗಿ, ಧಾರ್ಮಿಕವಾಗಿ ನಿರ್ಣಾಯಕವಾದಂತಹ ನಡೆಗಳನ್ನು ನಿರ್ಧರಿಸುವವರು.

ಅರವತ್ತು, ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಈ ರೀತಿಯ ಪ್ರಚೋದನೆ ಅಥವಾ ಬ್ರೈನ್‌ವಾಶ್ ಆದವರು ಇವತ್ತು ನಿರ್ಣಾಯಕ ನಡೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳೂ ನೇರವಾಗಿ ಬಳಕೆಗೆ ದಕ್ಕುವುದರಿಂದ ಯುವಕರೂ ತಮಗೆ ದಕ್ಕುತ್ತಿರುವುದನ್ನು ಕಕ್ಕುವುದಕ್ಕೆ ಅವಕಾಶಗಳಿವೆ. ಎಲ್ಲವೂ ಢಾಳಾಗಿ ಕಾಣುತ್ತಿವೆ. ಯೇತಿ ಎಂದರೆ ಪ್ರೇತಿ ಎನ್ನುವ ಬಂಡಾಯದ ಮನೋಭಾವ ಸಾಮಾನ್ಯವಾಗಿರುವ ಕಿಶೋರ ಮತ್ತು ಯುವಕ ಸಮೂಹವು ತಮ್ಮ ಮನೋಭಾವಕ್ಕೆ ಸರಿಯಾಗಿ ನಕಾರಾತ್ಮಕವಾಗಿ ಪ್ರೇತಿ ಎನ್ನುವ ಪ್ರೇರಣೆಗಳನ್ನು ತಮ್ಮದೆಂಬಂತೆಯೇ ಸ್ವೀಕರಿಸುತ್ತಾರೆ. ಅದು ಇತ್ತೀಚಿನ ದೆಹಲಿ ಗಲಭೆ ಮಾಡಿದಂತಹ ಯುವಕರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕೊನೆಗೆ ಮಾನಸಿಕವಾಗಿಯೂ ವ್ಯಕ್ತಿಯನ್ನು ತಮ್ಮ ಮಿಥ್ ಮೂಲಕ ಸಂಮೋಹನಗೊಳಿಸುವ ಬಗೆ ಇದಾಗಿದೆ.

ನ್ಯಾಯಾಂಗವನ್ನೇ ವಶಪಡಿಸಿಕೊಂಡಾಗ:
ಕೆ.ವಿ.ಸೀತಾರಾಮಯ್ಯ ‘ಗಾಂಧಿಯ ನಗ್ನ ಸತ್ಯಗಳನ್ನು’ ಹೊರತಂದೆ ಎಂದು ‘ಗಾಂಧಿ, ದ ಮರ್ಡರರ್ ಆಫ್ ಗಾಂಧಿ’ ಎಂಬ ಪುಸ್ತಕವನ್ನು ಬರೆದರು. 1997ರಲ್ಲಿ ಏಪ್ರಿಲ್ 19ರಂದು ಅದನ್ನು ಮುಂಬಯಿಯಲ್ಲಿ ಬಿಡುಗಡೆ ಮಾಡಿದ್ದು ನಾಥೂರಾಂ ಗೋಡ್ಸೆಯ ಸೋದರ ಗೋಪಾಲ್ ಗೋಡ್ಸೆ. ಇದೇ ಕೆ.ವಿ.ಸೀತಾರಾಮಯ್ಯ ಎಂಬಿಬಿಎಸ್ ಪದವೀದರ ವೈದ್ಯ. 1999ರ ಏಪ್ರಿಲ್ 19ರಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಗಾಂಧಿಯವರ ಇತಿಹಾಸಕ್ಕೆ ಸವಾಲು ಹಾಕಿದ್ದರು. ಆದರೆ ನ್ಯಾಯಾಲಯ ರಿಟ್ ಮನವಿ ಸಾರ್ವಜನಿಕ ಹಿತಾಸಕ್ತಿಯ ದಾವೆಯಡಿ (ಪಿಐಎಲ್) ಬರುವುದಿಲ್ಲ ಎಂದು ವಜಾ ಮಾಡಿದರು. ಇವರು ಬಿಡದೇ ಸುಪ್ರೀಂ ಕೋರ್ಟಿಗೆ ಒಯ್ದಾಗ ಅಲ್ಲಿಯೂ ಅದನ್ನು ವಜಾ ಮಾಡಿದರು. ಇದರಿಂದ ಕೆರಳಿದ ಸೀತಾರಾಮಯ್ಯ ಕೊನೆಗೆ “ಶ್ರೇಷ್ಟಳಾದ ಧರ್ಮ ದೇವತೆಗೆ ತೀರ್ಪು ನೀಡಲು ತಮ್ಮ ಮನವಿಯನ್ನು ಸಲ್ಲಿಸಿದರು” ಅದರ ಪರಿಣಾಮವೇ ಧರ್ಮ ದೇವತೆಯ ಸ್ವಯಂ ನಿಯೋಜಿತ ಪ್ರತಿನಿಧಿಗಳು ಇಂದು ಆಕೆಯ ಅಣತಿಯನ್ನು ಪಾಲಿಸುತ್ತಿದ್ದೇವೆಂದು ಈ ದೊಂಬಿ, ಹತ್ಯೆಗಳು, ದಾಳಿಗಳು, ಇತಿಹಾಸದ ನಿರಾಕರಣೆಗಳು, ಹೊಸ ಮಿಥ್‌ಗಳ ಸೃಷ್ಟಿಗಳು ಇತ್ಯಾದಿ. ಈಗ ನ್ಯಾಯಾಂಗವನ್ನೇ ವಶಪಡಿಸಿಕೊಳ್ಳುವ ಯತ್ನಗಳೂ ಕೂಡಾ ಢಾಳಾಗಿ ಕಾಣುತ್ತಿವೆ. ನ್ಯಾಯಾಂಗವನ್ನು ಸಂವಿಧಾನಕ್ಕೆ ಬದ್ಧವಾಗಿಸದೆ ಧರ್ಮದೇವತೆಯ ಅಧೀನವಾಗಿಸುವ ಅವರ ತವಕ ಕಾಣುತ್ತಿದೆ.

ಸೀತಾರಾಮಯ್ಯ ತಮ್ಮ ಮನವಿಯಲ್ಲಿ ‘ಪಠ್ಯಗಳಿಂದ ಗಾಂಧಿಯ ಬಗ್ಗೆ ಹೇಳುವ ವಿಷಯಗಳನ್ನು ತೆಗೆಯಬೇಕು ಎಂಬುದರಿಂದ ಹಿಡಿದು, ಈಗಾಗಲೇ ರಸ್ತೆಗಳಿಗೆ, ನಗರಗಳಿಗೆ ಇಟ್ಟಿರುವ ಗಾಂಧೀಜಿಯ ಹೆಸರುಗಳನ್ನು, ಸ್ಥಾಪಿಸಿರುವ ಪ್ರತಿಮೆಗಳನ್ನು ತೆಗೆಯಬೇಕು’ ಎನ್ನುವುದರವರೆಗೂ ಹೋಗುತ್ತದೆ. ಅವರಿಗೆ ಇದು ಹಿಂದೂ ರಾಷ್ಟ್ರವಾಗಬೇಕು ಅಷ್ಟೇ. ಅದಕ್ಕೆ ಯರ‍್ಯಾರು ಸಮ್ಮತಿಸುವುದಿಲ್ಲವೋ ಅಥವಾ ದುಡಿದಿಲ್ಲವೋ ಅವರೆಲ್ಲರೂ ರಾಷ್ಟ್ರದ್ರೋಹಿಗಳೇ, ಧರ್ಮದ್ರೋಹಿಗಳೇ. ಇದಕ್ಕೆ ಗಾಂಧೀಜಿ, ನೆಹರುರವರಿಂದ ಹಿಡಿದು, ಹೆಚ್.ಎಸ್.ದೊರೆಸ್ವಾಮಿಯವರೆಗೂ ಜೊತೆಗೆ ಜಾತ್ಯಾತೀತ, ಧರ್ಮನಿರಪೇಕ್ಷತೆಯ ದೃಷ್ಟಿ ಮತ್ತು ಆಶಯಗಳುಳ್ಳ ಯಾರಾದರೂ ರಾಷ್ಟ್ರದ್ರೋಹಿ, ಧರ್ಮದ್ರೋಹಿಗಳೇ ಆಗುತ್ತಾರೆ. ಆಗ ಆರ್‌ಎಸ್‌ಎಸ್‌ನ ಮುಖವಾಣಿಯಾಗಿದ್ದ ದಿನಪತ್ರಿಕೆ ಹೊಸದಿಗಂತ, ವಾರಪತ್ರಿಕೆ ವಿಕ್ರಮ, ಮಾಸಪತ್ರಿಕೆ ಉತ್ಥಾನಗಳು ಕೆಲಸ ಮಾಡುತ್ತಿದ್ದಂತೆ ಈಗಿನ ಯತ್ನಾಳ್, ಬಿ.ಸಿ.ಪಾಟಿಲ್‌ರಂತಹ ದೇಶಭಕ್ತರ ಮತ್ತು ಧರ್ಮ ರಕ್ಷಕರನ್ನು ಕಾಣುತ್ತಿದ್ದೇವೆ. ಆದರೆ ಈಗ ಮುಖ್ಯವಾಹಿನಿಯಲ್ಲಿರುವಂತಹ ದಿನಪತ್ರಿಕೆಗಳು, ಸುದ್ಧಿವಾಹಿನಿಗಳು, ಅಂತರ್ಜಾಲದ ಮಾದ್ಯಮಗಳೆಲ್ಲಾ ವ್ಯಾಪಕವಾಗಿ ಕೆಲಸ ಮಾಡುವಾಗ ಇನ್ನೆಷ್ಟರ ಮಟ್ಟಿಗೆ ಅವು ಹಸಿಗೋಡೆಗಳ ಮೇಲೆ ಹರಳು ನೆಡುತ್ತವೆ, ಖಾಲಿಸ್ಲೇಟುಗಳ ಮೇಲೆ ಬರೆಯುತ್ತವೆ! ಅದನ್ನು ಗಂಭೀರವಾಗಿ ಗಮನಿಸಲೇ ಬೇಕು.

ವೈದಿಕರ ರಾಜಕೀಯವನ್ನು ದಮನಿಸಿದ ಜನಾನುರಾಗಿ ಬಲಿ ಚಕ್ರವರ್ತಿಯನ್ನು ಕೆಟ್ಟ ರಾಕ್ಷಸನನ್ನಾಗಿ ಮಾಡಿ ಪಾತಾಳಕ್ಕೆ ತಳ್ಳಿಸಿದಂತಹ ಕತೆಗಳು ಇಂದು ಅರಣ್ಯಕರಾದ ರಾಕ್ಷಸರೆಂದರೆ ದುಷ್ಟರು ಕ್ರೂರಿಗಳು ಎಂದು ವ್ಯಾಪಕವಾಗಿ ಬಿಂಬಿಸಲಾಗಿದೆ. ಬರೀ ಪುರಾಣಿಕರೇ ದೇವಸ್ಥಾನದ ಕಟ್ಟೆಗಳ ಮೇಲೆ, ಕೀರ್ತನಕಾರರು ಹರಿಕತೆಗಳಲ್ಲಿ ಹೇಳುತ್ತಾ ಬಂದಿರುವುದರ ಪರಿಣಾಮವೇ ಇಷ್ಟಿದೆ. ಇನ್ನು ಈಗ? ಇವರ ಹುನ್ನಾರಗಳನ್ನು ತಿಳಿದಿರುವವರ ಜವಾಬ್ದಾರಿ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇನ್ನೆಷ್ಟು ಹೆಚ್ಚಿರಬೇಡ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...