ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾನೂನನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನವು ದೀರ್ಘ ಕಾಲದವರೆಗೆ ಮುಂದುವರೆಯುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಶನಿವಾರ ಹೇಳಿದ್ದಾರೆ.
ಕಳೆದ ವರ್ಷ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವು ಏಳನೆ ತಿಂಗಳಿಗೆ ಕಾಲಿಟ್ಟಿದೆ. ಆಂದೋಲನ ನಿರತ ರೈತರು ತಮ್ಮ ಹೋರಾಟಕ್ಕೆ ಆರು ತಿಂಗಳು ತುಂಬಿರುವ ಹಿನ್ನಲೆಯಲ್ಲಿ ಬುಧವಾರದಂದು ಕರಾಳ ದಿನವನ್ನು ಆಚರಿಸಲು ದೇಶಕ್ಕೆ ಕರೆ ನೀಡಿದ್ದರು. ಅದರಂತೆ ದೇಶದಾದ್ಯಂತ ಭಾರಿ ಬೆಂಬಲ ಕೂಡಾ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರವು ಕೃಷಿ ಕಾನೂನನ್ನು ವಾಪಾಸು ಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಈ ಮೂಲಕ ಸೂಚಿಸಿದ್ದರು.
ಇದನ್ನೂ ಓದಿ: ರೈತರ ಕರಾಳ ದಿನ ಆಚರಣೆಗೆ ಭಾರಿ ಬೆಂಬಲ- ಎಲ್ಲೆಡೆ ಕಪ್ಪು ಧ್ವಜಗಳ ಹಾರಾಟ
ಇಂದು ಟ್ವೀಟ್ ಮಾಡಿರುವ ರಾಕೇಶ್ ಟಿಕಾಯತ್, “ಆಂದೋಲನವು ದೀರ್ಘಕಾಲದವರೆಗೆ ಮುಂದುವರಿಯುತ್ತದೆ. ಕೊರೊನಾ ಕಾಲದಲ್ಲಿ ಕಾನೂನುಗಳನ್ನು ಮಾಡಬಹುದಾದರೆ, ಅದನ್ನು ಯಾಕೆ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಪ್ರಶ್ನಿಸಿದ್ದಾರೆ.
आंदोलन लंबा चलेगा, कोरोना काल में कानून बन सकते हैं तो रद्द क्यों नहीं हो सकतें ।
— Rakesh Tikait (@RakeshTikaitBKU) May 29, 2021
ಇದೀಗ ಕೊರೊನಾ ಎರಡನೆ ಅಲೆಯು ದೇಶದಾದ್ಯಂತ ಹರಡುತ್ತಿದ್ದು, ರೈತ ಹೋರಟದಿಂದ ಕೊರೊನಾ ಇನ್ನಷ್ಟು ಹರಡುತ್ತದೆ ಎಂದು ಆರೋಪಿಸಲಾಗುತ್ತಿದೆ. ಜೊತೆಗೆ ಕೊರೊನಾ ಕಾಲವಾದ್ದರಿಂದ ರೈತರು ಸರ್ಕಾರದೊಂದಿಗೆ ಸಹಕರಿಸಬೇಕು ಎಂಬ ವಾದವನ್ನು ಕೂಡಾ ಹರಿಬಿಡಲಾಗುತ್ತಿದೆ. ಇದಕ್ಕೆ ರೈತ ಮುಖಂಡ ರಾಕೇಶ್ ಟಿಕಾಯತ್ ತೀಕ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ವಾಪಸ್ ಪಡೆದು, ಪ್ರತಿಭಟನೆಯಲ್ಲಿ ಮಡಿದ ರೈತರನ್ನು ಹುತಾತ್ಮರೆಂದು ಘೋಷಿಸಿ- ಸಿದ್ದರಾಮಯ್ಯ


