ಹೊಸಪೇಟೆ: ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ಹಣಕಾಸು ನಿರ್ವಹಣೆ ವಿಚಾರಣೆಯಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದೆ, ನನ್ನ ಮಾತನ್ನು ತಿರಸ್ಕರಿಸಿ, ಯಡಿಯೂರಪ್ಪನವರು ಜೈಲಿಗೆ ಹೋಗುವಂತಾಯಿತು. ನನ್ನ ಮಾತು ಕೇಳಿದ್ದರೆ ನನ್ನ ತಾಯಾಣೆಗೂ ಯಡಿಯೂರಪ್ಪನವರು ಜೈಲಿಗೆ ಹೋಗುತ್ತಿರಲಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ನವೆಂಬರ್ 1ರಂದು ಹೊಸಪೇಟೆಯಲ್ಲಿ ನಡೆದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡಿದ ಅವರು, ಹಣಕಾಸು ನಿರ್ವಹಣೆ ಸುಲಭದ ಮಾತಲ್ಲ. ಜೊತೆಗೆ ಯಡಿಯೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿದ್ದವರು. ಅವರಿಗೆ ಹಣಕಾಸಿನ ನಿರ್ವಹಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯುವಂತೆ ಸೂಚಿಸಿದ್ದೆ. ನಾನು ಆಗ ಜನತಾಪಕ್ಷದಲ್ಲಿದ್ದೆ, ಸಿದ್ದರಾಮಯ್ಯ ಅದಾಗಲೇ 10 ಬಾರಿ ಬಜೆಟ್ ಮಂಡಿಸಿದ್ದರು. ಅವರ ಹಣಕಾಸು ನಿರ್ವಹಣೆಯ ಅನುಭವ ದೊಡ್ಡದು. ರಾಜ್ಯದ ಹಿತ ದೃಷ್ಠಿಯಿಂದ ಹಣಕಾಸು ನಿರ್ವಹಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯಬಹುದಿತ್ತು, ಆದರೆ ಯಡಿಯೂರಪ್ಪ ಅವರು ನನ್ನ ಮಾತನ್ನು ತಿರಸ್ಕರಿಸಿದರು. ಅದರಿಂದಲೇ ಅವರಿಗೆ ಹಣಕಾಸು ನಿರ್ವಹಣೆ ಸಾಧ್ಯವಾಗಲಿಲ್ಲ. ಕೊನೆಗೆ ಜೈಲಿಗೆ ಹೋಗುವ ಸ್ಥಿತಿಯೂ ಬಂತು ಎಂದು ಜಮೀರ್ ಅಹಮದ್ ಖಾನ್ ಹೇಳಿದರು.
ಇದೇ ವೇಳೆ ‘ಈಗಿನ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟ ಬಳಿಕ ಯಶಸ್ವಿಯಾಗಿ ಅಭಿವೃದ್ಧಿ ಕೆಲಸಗಳನ್ನೂ ನಡೆಸುತ್ತಾ ಬಂದಿದೆ. ಪ್ರತಿ ತಿಂಗಳು ಗ್ಯಾರಂಟಿ ರೂಪದಲ್ಲಿ ಒಂದು ಕುಟುಂಬಕ್ಕೆ ₹6,500 ದುಡ್ಡಿನ ಉಳಿತಾಯವಾಗುತ್ತಿದೆ. ಹಣಕಾಸು ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ ಅನುಭವದಿಂದಾಗಿಯೇ ಇದೆಲ್ಲವೂ ಸಾಧ್ಯವಾಗಿದೆ’ ಎಂದರು.


