ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಕೈಗೊಂಡಿರುವ ಕ್ರಮಗಳ ಕುರಿತು ಕೇರಳ ಸರ್ಕಾರ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.
ಕೇರಳದಲ್ಲಿರುವ ಕನ್ನಡಿಗರ ಹಿತಾಸಕ್ತಿ ಮತ್ತು ರಕ್ಷಣೆಗೆ ಕುರಿತಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ ಅವರು ಕೆಲವು ದಿನಗಳ ಹಿಂದೆ ಕೇರಳ ಸರ್ಕಾರಕ್ಕೆ ಬರೆದ ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಪ್ರತಿಕ್ರಿಯಿಸಿ ಕೇರಳ ಸರ್ಕಾರವು ಮರುಪತ್ರ ಬರೆದಿದೆ.
“ಕೇರಳ ಸರ್ಕಾರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಕೇರಳ ಸರ್ಕಾರಕ್ಕೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಉತ್ತರಿಸಿರುವ ಪ್ರತಿಯನ್ನೂ ನಮಗೆ ಕಳುಹಿಸಿದೆ. ಇದು ನಮ್ಮ ಪ್ರಯತ್ನಕ್ಕೆ ಸಂದ ಜಯ’ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕನ್ನಡ ಭಾಷೆಯನ್ನು ನಿಭಾಯಿಸಲು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ಕನ್ನಡ ಮತ್ತು ಮಲಯಾಳಂ ಬಲ್ಲ ಗುಮಾಸ್ತರನ್ನು ನೇಮಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಕುಂದುಕೊರತೆಗಳನ್ನು ಹೆಚ್ಚುವರಿ ಎಸ್ಪಿ ಹರಿಶ್ಚಂದ್ರ ನಾಯ್ಕ್ ಮೂಲಕ ಪರಿಹರಿಸಲಾಗುವುದು ಎಂದು ಕೇರಳ ಸರ್ಕಾರ ಪತ್ರದಲ್ಲಿ ತಿಳಿಸಿದೆ.
ಕನ್ನಡ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ ಕನ್ನಡ ಮಾತನಾಡುವ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ ಮತ್ತು ಕನ್ನಡ ಭಾಷೆಯಲ್ಲಿ ಬರುವ ದೂರುಗಳನ್ನು ಪರಿಹರಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಠಾಣೆಗಳ ಸೂಚನಾ ಫಲಕಗಳು, ಠಾಣೆಗಳ ಹೆಸರುಗಳನ್ನು ಕನ್ನಡದಲ್ಲಿ ಬರೆಯಲಾಗಿದೆ ಮತ್ತು ಕಾಸರಗೋಡು ಮತ್ತು ಮಂಜೇಶ್ವರಂ ತಾಲೂಕು ವ್ಯಾಪ್ತಿಯ ಎಲ್ಲಾ ಅಕ್ಷಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ದರ ಪಟ್ಟಿಯನ್ನು ಕನ್ನಡದಲ್ಲಿ ಪ್ರದರ್ಶಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಇ-ಡಿಸ್ಟ್ರಿಕ್ಟ್ ಪೋರ್ಟಲ್‌ನಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ಬಗ್ಗೆ ರಾಜ್ಯ ಐಟಿ ಮಿಷನ್ ನಿರ್ದೇಶಕರಿಗೂ ತಿಳಿಸಲಾಗುವುದು ಎಂದು ಕೇರಳ ಸರ್ಕಾರ ಭರವಸೆ ನೀಡಿದೆ.
ಕರ್ನಾಟಕದ ಗಡಿ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷಾ ಪ್ರವೀಣ ಶಿಕ್ಷಕರ ಕೊರತೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಂತಹ ಕಡೆಗಳಲ್ಲಿ ಕನ್ನಡ ಬಾರದ ಶಿಕ್ಷಕರ ನೇಮಕವನ್ನು ಕಟ್ಟುನಿಟ್ಟಾಗಿ ತಪ್ಪಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಫೋಟೋ ತೆರವು: ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ದೇವನೂರು ನಿರ್ಧಾರ



Pls send the order copy