ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ಅತ್ಯಂತ ಶ್ರೇಷ್ಠ ಹಾಗೂ ಪ್ರತಿಷ್ಠಿತ ಪ್ರಶಸ್ತಿ ಎಂದರೆ ನೋಬೆಲ್ ಪ್ರಶಸ್ತಿ. 2018 ಮತ್ತು 2019ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿಗೆ ಪೊಲೀಶ್ ಬರಹಗಾರ್ತಿ ಒಲ್ಗಾ ಟೋಕಾರ್ಕ್ ಜುಕ್ ಹಾಗೂ ಆಸ್ಟ್ರೇಲಿಯಾ ಲೇಖಕ ಪೀಟರ್ ಹಂಡ್ಕೆ ಭಾಜನರಾಗಿದ್ದಾರೆ. ಸ್ವಿಡೀಶ್ ಅಕಾಡೆಮಿ ಸಾಹಿತ್ಯ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ನೀಡಿರುವ ಬಗ್ಗೆ ಹೇಳಿದೆ.
ವಿಶ್ವಕೋಶ ಜೀವನದ ಒಂದು ರೂಪವಾಗಿ ಕಲ್ಪನಾತೀತವಾಗಿ ಹೇಗೆ ಜೀವನದ ಗಡಿ ದಾಟಿಸುತ್ತದೆ ಎಂಬ ಬಗ್ಗೆ ತೋರಿಸಿಕೊಟ್ಟ ಸಾಧನೆಗೆ ಓಲ್ಗಾ ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪೀಟರ್ ಅವರು, ಭಾಷಾ ಜಾಣ್ಮೆ, ಹಾಗೂ ಅದರ ಪರಿಧಿ ಮತ್ತು ಮಾನವ ಅನುಭವದ ನಿರ್ದಿಷ್ಟತೆಯನ್ನು ಅನ್ವೇಷಿಸಿದ ಪ್ರಭಾವಶಾಲಿ ಕೆಲಸಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.
1901 ರಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿಗ್ಗಜರಿಗೆ ನೋಬೆಲ್ ಪ್ರದಾನ ಮಾಡಲಾಗುತ್ತಿದೆ. ಇಲ್ಲಿಯವರೆಗೆ 114 ಲೇಖಕರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದರಲ್ಲಿ 14 ಮಹಿಳಾ ಬರಹಗಾರರು ಇದುವರೆಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದ ಹಾಗೆ 70 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಪ್ರದಾನ ಮಾಡುವುದನ್ನು ಮುಂದೂಡಲಾಗಿತ್ತು. ಕಳೆದ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ನೋಬೆಲ್ ಪ್ರಶಸ್ತಿಯನ್ನು ಲೈಂಗಿಕ ದೌರ್ಜನ್ಯ ಹಗರಣ, ಮೀ ಟೂ (Me Too) ಆಂದೋಲನ ನಡೆಯುತ್ತಿದ್ದ ಕಾರಣದಿಂದ ಮುಂದೂಡಲಾಗಿತ್ತು.
ನವೆಂಬರ್ 2017ರಲ್ಲಿ ಲೈಂಗಿಕ ದೌರ್ಜನ್ಯ ಹಗರಣದ ವಿರುದ್ಧ ಸ್ವಿಡೀಶ್ ಕವಯತ್ರಿ ಕತಾರಿನಾ ಫ್ರೋಸ್ಟೆನ್ಸನ್ 18 ಅಕಾಡೆಮಿ ಸದಸ್ಯರಲ್ಲಿ ಜೀನ್ ಕ್ಲೌಡ್ ಅರ್ನಾಲ್ಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ರಾಜೀನಾಮೆ ನೀಡಿದ್ದರು. ನಂತರ ಅಕಾಡೆಮಿಯ ಮಹಿಳೆಯರು ಕತಾರಿನಾಗೆ ಬೆಂಬಲ ಸೂಚಿಸಿದ್ದರು. ಅತ್ಯಾಚಾರ ಆರೋಪದಡಿ ಜೀನ್ ಕ್ಲೌಡ್ ಅರ್ನಾಲ್ಟ್ ಗೆ ಎರಡು ವರ್ಷ ಜೈಲುಶಿಕ್ಷೆ ನಿಗಧಿಯಾಗಿದೆ.


