ಇಂದು ಕೂಡ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದ್ದು, ಆ ಮೂಲಕ ಕಳೆದ 5 ದಿನಗಳಲ್ಲಿ 4 ಬಾರಿ ಬೆಲೆ ಏರಿಕೆ ಕಂಡಿದೆ. ಮಂಗಳವಾರ ಅಡುಗೆ ಅನಿಲದ ಬೆಲೆ ಸಹ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. 14.2 ಕೆಜಿಯ ಸಬ್ಸಿಡಿ ರಹಿತ LPG ಸಿಲಿಂಡರ್ ಈಗ ದೆಹಲಿಯಲ್ಲಿ 949.50 ರೂ.ಗೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.93 ರೂ ಇದ್ದರೆ, ಡೀಸೆಲ್ ಬೆಲೆ 88.14 ರೂ ಆಗಿದೆ.
ಚುನಾವಣೆಗಳ ಕಾರಣಕ್ಕಾಗಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಸರ್ಕಾರ ಈ ಚುನಾವಣೆಗಳು ಮುಗಿದ ನಂತರ ಬೆಲೆ ಏರಿಕೆಗೆ ಮುಂದಾಗಿದೆ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಸಮರ್ಥನೆ ನೀಡುತ್ತಿದೆ.
2021ರ ನವೆಂಬರ್ 4 ರಿಂದ 2022ರ ಮಾರ್ಚ್ 22ರವರೆಗೂ ಪೆಟ್ರೋಲ್ ದರ ಲೀಟರ್‌ಗೆ 100.58 ರೂ ಇತ್ತು. ಆದರೆ ಚುನಾವಣೆ ಮುಗಿದ 15 ದಿನದ ನಂತರ ಬೆಲೆ ಏರಿಕೆ ಆರಂಭವಾಗಿದೆ. 2021ರ ನವೆಂಬರ್ 3 ರಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 112 ರೂ ವರೆಗೆ ತಲುಪಿತ್ತು. ಈಗ ಪ್ರತಿ ದಿನ ಹೆಚ್ಚಳವಾಗುವುದು ನೋಡಿದರೆ ಕೆಲವೇ ತಿಂಗಳಲ್ಲಿ ಮತ್ತೆ ಅದು 120 ರೂಗಳ ಗಡಿ ದಾಟುವಂತೆ ಕಾಣುತ್ತಿದೆ.
ಇಂಧನ ಬೆಲೆ ಏರಿಕೆಯಿಂದಾಗುವ ದುಷ್ಪರಿಣಾಮಗಳು
ಕರ್ನಾಟಕದಲ್ಲಿ 2 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿವೆ. ಇವುಗಳ ಮಾಲೀಕರು ನೇರವಾಗಿ ಪೆಟ್ರೋಲ್ ಬೆಲೆ ಏರಿಕೆಯಿಂದ ಬಾಧಿತರಾದರೆ ಕರ್ನಾಟಕದ ಉಳಿದ 5 ಕೋಟಿ ಜನರು ಸಹ ಪೆಟ್ರೋಲ್ ಬೆಲೆ ಏರಿಕೆಯ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗಿದೆ.
ಇನ್ನು ಇಂಧನ ಬೆಲೆ ಏರಿಕೆಯಿಂದಾಗಿ ಬಸ್, ರೈಲು, ಆಟೋ, ಟ್ಯಾಕ್ಸಿ ದರಗಳು ಹೆಚ್ಚಾಗುತ್ತವೆ. ಜನ ಸಾಮಾನ್ಯರ ಮೇಲೆ ಹೊರೆ ಉಂಟಾಗುತ್ತದೆ.
ಡೀಸೆಲ್ ಬೆಲೆಯಲ್ಲಿನ ಹೆಚ್ಚಳದಿಂದಾಗಿ ಎಲ್ಲಾ ಸಾಗಣೆ ವಾಹನಗಳು ಬಾಡಿಗೆ ಏರಿಸಬೇಕಾಗುತ್ತದೆ. ಇದರಿಂದ ಆಹಾರ, ತರಕಾರಿ, ದಿನಸಿ, ಹಣ್ಣು ಸೇರಿದಂತೆ ದಿನಬಳಕೆಯ ಪ್ರತಿಯೊಂದು ವಸ್ತುಗಳ ಬೆಲೆ ಏರುತ್ತದೆ.
ಟ್ರ್ಯಾಕ್ಟರ್, ಟಿಲ್ಲರ್, ಲಗೇಜ್ ವಾಹನಗಳಿಗೆ ಡೀಸೆಲ್ ಬೇಕಿರುವುದರಿಂದ ಕೃಷಿಯ ಮೇಲಿನ ಹೂಡಿಕೆ ಹೆಚ್ಚಾಗುತ್ತದೆ. ರೈತರಿಗೆ ಹೊರೆಯಾಗುತ್ತದೆ.
ಇಂಧನ ಬೆಲೆ ಇಳಿಸಲು ಇರುವ ಮಾರ್ಗಗಳು
ಮೂಲ ಇಂಧನದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ಹೆಚ್ಚಿನ ತೆರಿಗೆಯೇ ಬೆಲೆ ಹೆಚ್ಚಳಕ್ಕೆ ಮೊದಲ ಕಾರಣವಾಗಿದೆ. ಇನ್ನು ಇತ್ತೀಚೆಗೆ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವುದು ಎರಡನೇ ಕಾರಣವಾಗಿದೆ. ಆದರೆ ನರೇಂದ್ರ ಮೋದಿಯವರ ಅಧಿಕಾರಕ್ಕೆ ಬಂದ ಈ ಎಂಟು ವರ್ಷಗಳಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಸಹ ತೆರಿಗೆ ಹೆಚ್ಚು ಮಾಡಿ ಸುಮಾರು 15 ಲಕ್ಷ ಕೋಟಿ ರೂಗಳಷ್ಟ ಲಾಭ ಗಳಿಸಿದೆ. ಹಾಗಾಗಿ ಈಗ ಕೋವಿಡ್ ಕಾರಣದಿಂದ ಜನ ಹೈರಣಾಗಿರುವ ಸಂದರ್ಭದಲ್ಲಿ ಇಂಧನಗಳ ಮೇಲಿನ ದುಬಾರಿ ತೆರಿಗೆಯನ್ನು ಅರ್ಧ ಕಡಿಮೆ ಮಾಡಿದರೂ ಜನ ನಿಟ್ಟುಸಿರು ಬಿಡಲಿದ್ದಾರೆ.
ಇದನ್ನೂ ಓದಿ: ಗೃಹಬಳಕೆಯ ಅಡುಗೆ ಅನಿಲ (LPG) ದರ 50 ರೂ. ಏರಿಕೆ; ಸಿಲಿಂಡರ್‌ಗೆ 950 ರೂ


