ಕಂಪ್ಲಿ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ, ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಆಗಸ್ಟ್ 11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಾದಿಗ ಮುಖಂಡ ಕರಿಯಪ್ಪ ಗುಡಿಮನೆ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಈ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹಕ್ಕೆ ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿಯ ಸದಸ್ಯ ವಸಂತರಾಜ ಕಹಳೆ ಮತ್ತು ದಲಿತ ಮುಖಂಡ ಅಂಬಣ್ಣ ಆರೋಲಿ ಅವರು ಕೂಡ ಕರೆ ನೀಡಿದ್ದು, ಸುಮಾರು ಮೂವತ್ತು ವರ್ಷಗಳ ಹೋರಾಟ ಅಂತಿಮ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಒಳ ಮೀಸಲಾತಿ ಹೋರಾಟ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೂವತ್ತು ವರ್ಷಗಳ ಹೋರಾಟದ ಫಲ, ಲಾಭ ಮತ್ತು ನಷ್ಟದ ಬಗ್ಗೆ ಚರ್ಚೆಗಳಿದ್ದು, ಭಾಗವಹಿಸಬೇಕು ಎಂದರು
ನಾಗಮೋಹನ್‌ದಾಸ್ ವರದಿ ಅನುಷ್ಠಾನಕ್ಕೆ ಒತ್ತಾಯ
ಒಳಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಅಂಬಣ್ಣ ಆರೋಲಿ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ಸರ್ಕಾರಗಳು ಈ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿಲ್ಲ. ಒಳಮೀಸಲಾತಿ ವಿಚಾರದಲ್ಲಿ ಹಲವು ಸಂಘಟನೆಗಳ ಗೊಂದಲಗಳಿದ್ದರೂ, ನಾಗಮೋಹನ್‌ದಾಸ್ ವರದಿ ಸ್ಪಷ್ಟ ಮತ್ತು ನಿಖರವಾಗಿದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಒಳಮೀಸಲಾತಿ ಹೋರಾಟ ಇನ್ನೂ ಜೀವಂತವಾಗಿದೆ ಎಂದು ಅಂಬಣ್ಣ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾಗಿದ್ದರೂ, ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆಯಿಂದ ಈ ಹೋರಾಟ ನನೆಗುದಿಗೆ ಬಿದ್ದಿದೆ ಎಂದು ಅಂಬಣ್ಣ ಆರೋಲಿ ದೂರಿದ್ದಾರೆ. ಈವರೆಗೂ ಯಾವುದೇ ರಾಜಕೀಯ ಪಕ್ಷಗಳು ಅಥವಾ ಮುಖಂಡರು ಈ ಹೋರಾಟಕ್ಕೆ ಬೆಂಬಲ ನೀಡಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಸರ್ಕಾರ ಈ ವಿಷಯವನ್ನು ಮೊದಲು ಸುಪ್ರೀಂ ಕೋರ್ಟ್‌ಗೆ ಒಯ್ದಿತ್ತು. ಅದರ ನಂತರ ಕರ್ನಾಟಕದಿಂದ ನಾವು ಸಹ ಸುಪ್ರೀಂ ಕೋರ್ಟ್‌ಗೆ ಹೋಗಿದ್ದು, ನ್ಯಾಯಾಲಯದ ಆದೇಶದಿಂದಾಗಿ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಅವರು ವಿವರಿಸಿದರು. ಕಳೆದ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೆ ಭರವಸೆ ನೀಡಿದ್ದವು. ಹಾಗಾಗಿ, ಜುಲೈ 30ರೊಳಗೆ ವರದಿಯನ್ನು ಪಡೆಯಬೇಕು ಮತ್ತು ಅಧಿವೇಶನದಲ್ಲಿ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಈ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಕರಿಯಪ್ಪ ಗುಡಿಮನೆ, ಹನುಮಂತಪ್ಪ ಮ್ಯಾಗಳಮನಿ, ಯಲ್ಲಪ್ಪ, ಮಲ್ಲಿಕಾರ್ಜುನ ಪುಜಾರ್, ಪ್ರಕಾಶ ಎಚ್. ಹೊಳೆಯಪ್ಪನವರ್, ದೇವರಾಜ್ ನಡುವಲಮನಿ, ಲಿಂಗಪ್ಪ ಮೈನಳ್ಳಿ, ಮುದಕಪ್ಪ ಹೊಸಮನಿ, ದೇವರಾಜ್ ಕಿನ್ನಾಳ, ಗುರುಮೂರ್ತಿ ನೆರೆಗಲ್, ಶಂಕರ ನೆರೆಗಲ್ ಮತ್ತು ನಾಗರಾಜ ನೆರೆಗಲ್ ಭಾಗವಹಿಸಿದ್ದರು.


