ಜೈಲು ಶಿಕ್ಷೆ ಅನುಭವಿಸಿದ ನಂತರ ತನ್ನ ಗಡೀಪಾರು ಪ್ರಶ್ನಿಸಿ ಶ್ರೀಲಂಕಾದ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಭಾರತವು ಜಗತ್ತಿನಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡಬಹುದಾದ ‘ಧರ್ಮಶಾಲೆ’ ಅಲ್ಲ ಎಂದು ಪ್ರತಿಪಾದಿಸಿದೆ.
“ಭಾರತವು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು ಈಗಾಗಲೇ 140 ಕೋಟಿ ಜನಸಂಖ್ಯೆಯೊಂದಿಗೆ ಹೋರಾಡುತ್ತಿದ್ದೇವೆ. ಇದು ಎಲ್ಲೆಡೆಯಿಂದ ಬರುವ ವಿದೇಶಿ ಪ್ರಜೆಗಳಿಗೆ ನಾವು ಅವಕಾಶ ನೀಡಬಹುದಾದ ಧರ್ಮಶಾಲೆಯಲ್ಲ” ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಹೇಳಿದೆ.
ಶ್ರೀಲಂಕಾದ ತಮಿಳು ಪ್ರಜೆಯಾಗಿರುವ ಅರ್ಜಿದಾರರು ತಮ್ಮ ತಾಯ್ನಾಡಿಗೆ ಮರಳಿದರೆ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಉಲ್ಲೇಖಿಸಿ ಗಡೀಪಾರು ವಿರುದ್ಧ ರಕ್ಷಣೆ ಕೋರಿದ್ದರು. ಆದರೆ, ಪೀಠವು ಅವರ ಮನವಿಯನ್ನು ಒಪ್ಪಲಿಲ್ಲ. ‘ಬೇರೆ ದೇಶಕ್ಕೆ ಹೋಗಿ’ ಎಂದು ನ್ಯಾಯಾಧೀಶರು ಮನವಿಯನ್ನು ತಿರಸ್ಕರಿಸುತ್ತಾ ಪ್ರತಿಕ್ರಿಯಿಸಿದರು.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ಅರ್ಜಿದಾರರನ್ನು 7 ವರ್ಷಗಳ ಶಿಕ್ಷೆ ಪೂರ್ಣಗೊಳಿಸಿದ ತಕ್ಷಣ ಗಡೀಪಾರು ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ವಕೀಲರು ಶಿಕ್ಷೆಯ ನಂತರ ಸುಮಾರು ಮೂರು ವರ್ಷಗಳ ಕಾಲ ಅವರನ್ನು ಯಾವುದೇ ಗಡೀಪಾರು ಪ್ರಕ್ರಿಯೆಗಳಿಲ್ಲದೆ ಬಂಧನದಲ್ಲಿಡಲಾಗಿದೆ ಎಂದು ವಾದಿಸಿದರು. ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದ ಅರ್ಜಿದಾರರನ್ನು ಶ್ರೀಲಂಕಾಕ್ಕೆ ವಾಪಸ್ ಕಳುಹಿಸಿದರೆ ಅವರ ಜೀವಕ್ಕೆ ಗಂಭೀರ ಬೆದರಿಕೆ ಇದೆ ಎಂದು ಅವರು ಹೇಳಿದರು.
ಆದರೆ, ಪೀಠವು ಯಾವುದೇ ಇದಕ್ಕೆ ಸೊಪ್ಪು ಹಾಕಲಿಲ್ಲ. ನ್ಯಾಯಮೂರ್ತಿ ದತ್ತ ಮಾತನಾಡಿ, “ಇಲ್ಲಿ ನೆಲೆಸಲು ನಿಮ್ಮ ಹಕ್ಕು ಏನು?” ಎಂದು ವಕೀಲರು ಅರ್ಜಿದಾರರು ನಿರಾಶ್ರಿತರು, ಅವರ ಪತ್ನಿ ಮತ್ತು ಮಕ್ಕಳು ಈಗಾಗಲೇ ಭಾರತದಲ್ಲಿ ನೆಲೆಸಿದ್ದಾರೆ ಎಂದು ಉತ್ತರಿಸಿದರು.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ದತ್ತ, ಬಂಧನವು ಕಾನೂನಿಗೆ ಅನುಸಾರವಾಗಿರುವುದರಿಂದ ಆರ್ಟಿಕಲ್ 21 ಅನ್ನು ಉಲ್ಲಂಘಿಸಲಾಗಿಲ್ಲ ಎಂದು ಹೇಳಿದರು. ಆರ್ಟಿಕಲ್ 19 ರ ಅಡಿಯಲ್ಲಿ ಭಾರತದಲ್ಲಿ ನೆಲೆಸುವ ಮೂಲಭೂತ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
‘ಆಪರೇಷನ್ ಸಿಂಧೂರ’ ವಿವರ ಸೋರಿಕೆ ಆರೋಪ; ಇಬ್ಬರನ್ನು ಬಂಧಿಸಿದ ಪಂಜಾಬ್ ಪೊಲೀಸರು


